- Home
- News
- State
- ಮೂಡುಬಿದಿರೆ ಪೊಲೀಸಪ್ಪನ ಪೋಲಿ ಆಟ; ಗಂಡನ ಬಿಡುಗಡೆಗೆ 25 ಲಕ್ಷ ಕೊಡಿ, ಇಲ್ಲವೇ ನನ್ನೊಂದಿಗೆ ಮಲಗು ಎನ್ನುವ ಸಂದೇಶ!
ಮೂಡುಬಿದಿರೆ ಪೊಲೀಸಪ್ಪನ ಪೋಲಿ ಆಟ; ಗಂಡನ ಬಿಡುಗಡೆಗೆ 25 ಲಕ್ಷ ಕೊಡಿ, ಇಲ್ಲವೇ ನನ್ನೊಂದಿಗೆ ಮಲಗು ಎನ್ನುವ ಸಂದೇಶ!
ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್, ಪತಿಯನ್ನು ಬಿಡುಗಡೆ ಮಾಡಲು ಮಹಿಳೆಯೊಬ್ಬರಿಗೆ 25 ಲಕ್ಷ ರೂ. ಲಂಚ ಅಥವಾ ಲೈಂಗಿಕ ಸಂಪರ್ಕಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ತಾನು ಗೃಹ ಸಚಿವರಿಗೆ 50 ಲಕ್ಷ ಲಂಚ ನೀಡಿ ಪೋಸ್ಟಿಂಗ್ ಪಡೆದಿದ್ದಾಗಿ ಹೇಳಿದ್ದಾರೆ.

ದಕ್ಷಿಣ ಕನ್ನಡ (ಮಾ.16): ನಾನು ಗೃಹ ಸಚಿವರಿಗೆ 50 ಲಕ್ಷ ರೂ. ಹಣ ಕೊಟ್ಟು ಮೂಡುಬಿದಿರೆಗೆ ಪೋಸ್ಟಿಂಗ್ ಹಾಕಿಸಿಕೊಂಡು ಬಂದಿದ್ದೇನೆ. ನನ್ನ ಮೇಲೆ ದೂರು ಕೊಟ್ಟ ನಿನ್ನ ಗಂಡನನ್ನ ಅರೆಸ್ಟ್ ಮಾಡಿದ್ದೇನೆ. ಇದೀಗ ನಿನ್ನ ಗಂಡನನ್ನ ಬಿಡಬೇಕು ಎಂದರೆ 25 ಲಕ್ಷ ರೂ. ಹಣವನ್ನು ಕೊಡು ಅಥವಾ ನೀನು ನನ್ನೊಂದಿಗೆ ಬಂದು ಮಲಗು ಎಂದು ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಡಿಮ್ಯಾಂಡ್ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪ ಮಾಡಿ, ಪೊಲೀಸ್ ಕಮಿಷನರ್‌ಗೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಮಹಿಳೆಯೊಬ್ಬರು ಮಾಡಿರುವ ಆರೋಪಗಳು ಈಗ ಇಡೀ ರಾಜ್ಯ ಪೊಲೀಸ್ ಇಲಾಖೆಯನ್ನು ತಲೆತಗ್ಗಿಸುವಂತೆ ಮಾಡಿದೆ. ಹಣದ ದಾಹ ಹಾಗೂ ಕಾಮದ ಹಸಿವಿನಿಂದ ಇನ್ಸ್‌ಪೆಕ್ಟರ್ ಒಬ್ಬರು ಸಾರ್ವಜನಿಕರಿಗೆ ಹೇಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ವಿಚಾರ ಈಗ ಬೀದಿಗೆ ಬಂದಿದೆ.
ಸಂತ್ರಸ್ತ ಬಾಧಿತ ಮಹಿಳೆಯ ಪತಿ ಒಬ್ಬ ಸಾಮಾಜಿಕ ಕಾರ್ಯಕರ್ತರು. ಕಳೆದ ಜುಲೈ ತಿಂಗಳಲ್ಲಿ ಕೆಲವು ಮಹಿಳೆಯರು ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಕಿರುಕುಳದ ದೂರು ಹೊತ್ತು ಬಂದಾಗ, ಇವರು ಅವರಿಗೆ ಸಹಾಯ ಮಾಡಿದ್ದರು ಹಾಗೂ ಪೊಲೀಸ್ ಕಮಿಷನರ್‌ಗೆ ದೂರು ನೀಡಲು ಮಾರ್ಗದರ್ಶನ ನೀಡಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಇನ್ಸ್‌ಪೆಕ್ಟರ್ ಸಂದೇಶ್, ಈ ಸಾಮಾಜಿಕ ಕಾರ್ಯಕರ್ತನ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ದಾಂಧಲೆ ನಡೆಸಲು ಆರಂಭಿಸಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಮಹಿಳೆಯ ಪತಿಯನ್ನು ಬಂಧಿಸಲಾಗಿತ್ತು. ಪತಿಯ ಬಿಡುಗಡೆಗಾಗಿ ಪತ್ನಿ ಇನ್ಸ್‌ಪೆಕ್ಟರ್ ಬಳಿ ಹೋದಾಗ ಅವರು ನೀಡಿದ ಆಫರ್ ಕೇಳಿ ಇಡೀ ಸಮಾಜವೇ ಬೆಚ್ಚಿಬಿದ್ದಿದೆ. 'ನಿನ್ನ ಗಂಡನನ್ನು ಬಿಡಬೇಕೆಂದರೆ 25 ಲಕ್ಷ ರೂಪಾಯಿ ಹಣ ನೀಡು, ಇಲ್ಲವೇ ನನ್ನೊಂದಿಗೆ ನೀನು ಮಲಗಬೇಕು' ಎಂದು ಕಾರ್ ಪಾರ್ಕಿಂಗ್ ಬಳಿ ನಿಲ್ಲಿಸಿ ಅಸಭ್ಯವಾಗಿ ಬೇಡಿಕೆ ಇಟ್ಟಿದ್ದಾರೆ ಎಂಬುದು ಮಹಿಳೆಯ ಗಂಭೀರ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ, 'ನಾನು ಗೃಹ ಸಚಿವರಿಗೆ 50 ಲಕ್ಷ ರೂಪಾಯಿ ಹಣ ನೀಡಿ ಇಲ್ಲಿಗೆ ಪೋಸ್ಟಿಂಗ್ ಹಾಕಿಸಿಕೊಂಡಿದ್ದೇನೆ. ನಾನು ಕೇಳಿದ ಹಣ ಕೊಡದಿದ್ದರೆ ನಿನ್ನ ಪತಿಯ ಮೇಲೆ ರೌಡಿಶೀಟರ್ ತೆರೆಯುತ್ತೇನೆ' ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಹಣ ನೀಡಲು ಸಾಧ್ಯವಾಗದ ಮಹಿಳೆ, ಕೈಲಾದ 50 ಸಾವಿರ ರೂಪಾಯಿ ನೀಡಿ ಪತಿಯನ್ನು ಸ್ಟೇಷನ್ ಬೇಲ್ ಮೇಲೆ ಬಿಡಿಸಿಕೊಂಡಿದ್ದಾರೆ. ಆದರೆ ಇನ್ಸ್‌ಪೆಕ್ಟರ್ ಕಾಟ ಅಲ್ಲಿಗೆ ನಿಂತಿಲ್ಲ. ಪತಿ ಇವರ ಕಿರುಕುಳ ತಾಳಲಾರದೆ ಊರು ಬಿಟ್ಟು ಹೋಗಿದ್ದಾರೆ. ಈಗ ಪತಿಯನ್ನು ಹುಡುಕುವ ನೆಪದಲ್ಲಿ ತನ್ನನ್ನು ಸ್ಟೇಷನ್‌ಗೆ ಅಥವಾ ತಾನು ಹೇಳಿದ ಕಡೆಗೆ ಬರುವಂತೆ ಇನ್ಸ್‌ಪೆಕ್ಟರ್ ಪೀಡಿಸುತ್ತಿದ್ದಾರೆ ಎಂದು ಮಹಿಳೆ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.
ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ 3-4 ಮಹಿಳೆಯರಿಂದ ಇದೇ ರೀತಿಯ ದೂರು ನೀಡಿದ್ದಾರೆ. ಇನ್ನು ಇವರ ವ್ಯಾಪ್ತಿಯ ಪೊಲೀಸ್ ಠಾಣೆಗೆ ಗಂಡ-ಹೆಂಡತಿ ಜಗಳದ ಕೇಸ್ ಬಂದಾಗ ಮಹಿಳೆಯರ ದುರ್ಬಳಕೆಗೆ ಯತ್ನ ಮಾಡುತ್ತಾರೆ. ಇಂತಹ ಹಲವು ಪ್ರಕರಣಗಳಲ್ಲಿ ಮಹಿಳೆಯರಿ ನೊಂದಿದ್ದಾರೆ.
ಜೊತೆಗೆ, ಒಬ್ಬ ಮಹಿಳೆಯ ಗಂಡ ದುಬೈನಲ್ಲಿದ್ದು ಮಗುವಿನೊಂದಿಗೆ ಮಹಿಳೆ ಒಬ್ಬಂಟಿಯಾಗಿ ವಾಸವಾಗಿದ್ದಾರೆ. ಅಂತಹ ಮಹಿಳೆಗೆ ಬೆದರಿಕೆ ಹಾಕಿ, ರಾತ್ರೋ ರಾತ್ರಿ ಆ ಮಹಿಳೆ ಮನೆಯ ಕಾಂಪೌಂಡ್ ಹಾರಿ ಒಳಗೆ ನುಗ್ಗುತ್ತಾರೆ. ಈ ಕುರಿತ ಸಿಸಿಟಿವಿ ದೃಶ್ಯಾವಳಿಗಳು ಕೂಡ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿವೆ. ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂತ್ರಸ್ತ ಮಹಿಳೆ ಅಳಲು ತೋಡಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

