Asianet Suvarna News Asianet Suvarna News

ತುಂಗಭದ್ರಾ ಜಲಾಶಯಕ್ಕೆ ತಗ್ಗಿದ ಒಳಹರಿವು, ಹೆಚ್ಚಿದ ರೈತರ ಆತಂಕ..!

* ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡುವುದಕ್ಕೆ ಇಂದು ನಿರ್ಧಾರ
* ಹೂಳು ತುಂಬಿ ತುಂಗಭದ್ರಾ ಜಲಾಶಯ ಸಾಮರ್ಥ್ಯವೂ ಕುಸಿತ 
* ಹಿಂಗಾರು ಬೆಳೆಗೂ ನೀರಿನ ಅಭಾವ 
 

Farmers Anxiety For Decreased Inflow Water to Tungabhadra Dam grg
Author
Bengaluru, First Published Jul 12, 2021, 10:58 AM IST

ಸೋಮರಡ್ಡಿ ಅಳವಂಡಿ

ಕೊಪ್ಪಳ(ಜು.12): ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಯ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಗೆ ನೀರು ಬಿಡುವ ಕುರಿತು ಇನ್ನೂ ನಿರ್ಧಾರವಾಗಿಲ್ಲ. ಈ ನಡುವೆ ಮಳೆಗಾಲದಲ್ಲಿಯೂ ಒಳಹರಿವು ತಗ್ಗಿರುವುದು ಆತಂಕಕ್ಕೆ ಕಾರಣವಾಗಿದ್ದು, ನೀರು ಬಿಡುವ ನಿರ್ಧಾರ ಕೈಗೊಳ್ಳುವುದು ಸವಾಲಾಗಿ ಪರಿಣಮಿಸಿದೆ.

ಪ್ರಸಕ್ತ ವರ್ಷ ಜಲಾಶಯದಲ್ಲಿ ಈಗ 36 ಟಿಎಂಸಿ (ಜು. 11ಕ್ಕೆ) ನೀರು ಸಂಗ್ರಹವಿದೆ. ಆದರೆ, ಮುಂಗಾರು ಬೆಳೆಗೆ ಸರಾಸರಿ 75 ಟಿಎಂಸಿ ರಾಜ್ಯದ ವ್ಯಾಪ್ತಿಗೆ ಬೇಕಾಗುತ್ತದೆ. ಈಗ ಒಳಹರಿವು ನೆಚ್ಚಿಕೊಂಡು ನೀರು ಬಿಡುವ ಕುರಿತು ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಕಮ್ಮಿಯೇ ಇದೆ. ಪ್ರಸಕ್ತ ವರ್ಷ ಈಗ 2600 ಕ್ಯುಸೆಕ್‌ ಮಾತ್ರ ಇದೆ. ಲಕ್ಷಗಟ್ಟಲೇ ಇರಬೇಕಾದ ಸ್ಥಿತಿಯಲ್ಲಿ ಇಷ್ಟೊಂದು ಕಡಿಮೆ ಇರುವುದು ಆತಂಕ ಹುಟ್ಟಿಸಿದೆ.

ಮಹತ್ವ ಪಡೆದ ಸಭೆ:

ಸಾಮಾನ್ಯವಾಗಿ ಮುಂಗಾರು ಹಂಗಾಮಿಗೆ ನೀರು ಬಿಡುವ ಕುರಿತು ನಡೆಯುತ್ತಿದ್ದ ನೀರಾವರಿ ಸಲಹಾ ಸಮಿತಿ ಸಭೆ ಅಷ್ಟು ಮಹತ್ವ ಪಡೆದುಕೊಳ್ಳುತ್ತಿರಲಿಲ್ಲ. ಆದರೆ, ಈ ವರ್ಷ ನೀರಿನ ಸಂಗ್ರಹಕ್ಕಿಂತ ಒಳಹರಿವಿನ ಪ್ರಮಾಣ ಕಡಿಮೆ ಇರುವುದರಿಂದ ಸಮಸ್ಯೆಯಾಗಿದೆ. ಹೀಗಾಗಿ, ಈ ಬಾರಿ ಮುಂಗಾರು ಹಂಗಾಮು ನೀರಾವರಿ ಸಲಹಾ ಸಮಿತಿ ಸಭೆ ಮಹತ್ವ ಪಡೆದುಕೊಂಡಿದೆ. ಹಾಗೆ ನೋಡಿದರೆ ಪ್ರಸಕ್ತ ವರ್ಷ ಜೂನ್‌ ತಿಂಗಳಲ್ಲಿಯೇ ಒಳಹರಿವು ಹೆಚ್ಚಳವಾಗಿ ಸುಮಾರು 24 ಟಿಎಂಸಿ ನೀರು ಸಂಗ್ರಹವಾಗಿತ್ತು. ಆದರೆ, ಅದಾದ ಮೇಲೆ ತಗ್ಗಿದ ಒಳಹರಿವು ಹೆಚ್ಚುತ್ತಲೇ ಇಲ್ಲ. ಜುಲೈ ತಿಂಗಳಲ್ಲಿಯಂತೂ ಒಳಹರಿವು ಬೇಸಿಗೆ ಕಾಲದಲ್ಲಿರುವಂತೆ ಇರುವುದು ರೈತರನ್ನು ನಿದ್ದೆಗೆಡಿಸಿ ಆತಂಕಕ್ಕೀಡು ಮಾಡಿದೆ.

ಹೆಚ್ಚಿದ ಒಳಹರಿವು: 1605 ಅಡಿ ತಲುಪಿದ ತುಂಗಭದ್ರಾ ಜಲಾಶಯದ ನೀರಿನ ಮಟ್ಟ

ಕಳೆದ ವರ್ಷವೂ ಇದೇ ಗೋಳು:

ಕಳೆದ ವರ್ಷವೂ ಮುಂಗಾರು ಹಂಗಾಮಿನಲ್ಲಿ ನೀರು ಬಂದಿರಲಿಲ್ಲ. ಕಳೆದ ವರ್ಷದ ಈ ದಿನಾಂಕಕ್ಕೆ ಕೇವಲ 19 ಟಿಎಂಸಿ ನೀರು ಮಾತ್ರ ಸಂಗ್ರಹ ಇತ್ತು. ಆದರೆ, ಒಳಹರಿವು 25ರಿಂದ 30 ಸಾವಿರ ಕ್ಯುಸೆಕ್‌ ಇದ್ದಿದ್ದರಿಂದ ಧೈರ್ಯ ಮಾಡಿ, ಜು. 27ಕ್ಕೆ ಮುಂಗಾರು ಹಂಗಾಮಿಗೆ ನೀರು ಬಿಡಲಾಗಿತ್ತು. ಈ ವರ್ಷ ಜಲಾಶಯದಲ್ಲಿ 36 ಟಿಎಂಸಿ ನೀರು ಸಂಗ್ರಹವಾಗಿದ್ದರೂ ಒಳಹರಿವು ತಗ್ಗಿರುವುದರಿಂದ ನೀರು ಬಿಡುವ ನಿರ್ಧಾರದ ಕುರಿತು ನೀರಾವರಿ ಸಲಹಾ ಸಮಿತಿ ಸಭೆ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ.

ಹಿಂಗಾರಿಗೆ ಪೆಟ್ಟು:

ಮುಂಗಾರು ಹಂಗಾಮ ವಿಳಂಬವಾದಷ್ಟುಹಿಂಗಾರು ಬೆಳೆಗೆ ನೀರಿನ ಅಭಾವ ಎದುರಾಗುತ್ತದೆ. ಸಾಮಾನ್ಯವಾಗಿ ತುಂಗಭದ್ರಾ ಜಲಾಶಯ ಇತಿಹಾಸದಲ್ಲಿ ಮುಂಗಾರು ಹಂಗಾಮಿಗೆ ಜೂನ್‌ ಕೊನೆಯ ವಾರ ಅಥವಾ ಜುಲೈ ಮೊದಲ ವಾರದಲ್ಲಿ ನೀರು ಬಿಟ್ಟಾಗಲೆಲ್ಲಾ ಹಿಂಗಾರು ಹಂಗಾಮಿ ಬೆಳೆಗೆ ನೀರಿನ ಅಭಾವ ಆಗುವುದಿಲ್ಲ. ಜುಲೈ ತಿಂಗಳ ಅಂತ್ಯಕ್ಕೆ ನೀರು ಬಿಟ್ಟಾಗಲೆಲ್ಲಾ ಹಿಂಗಾರು ಬೆಳೆಗೂ ನೀರಿನ ಅಭಾವ ಎದುರಾಗುತ್ತಿದೆ.

ಕುಸಿದ ಸಾಮರ್ಥ್ಯ:

ಹೂಳು ತುಂಬಿ ತುಂಗಭದ್ರಾ ಜಲಾಶಯ ಸಾಮರ್ಥ್ಯವೂ ಕುಸಿದಿರುವುದರಿಂದ ಏಕಾಏಕಿ ನೀರು ಬಂದರೂ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇಲ್ಲ. ಸುಮಾರು 28 ಟಿಎಂಎಸಿ ಹೂಳು ತುಂಬಿರುವುದರಿಂದ ಇದುವೇ ದೊಡ್ಡ ಸವಾಲು ಆಗಿದೆ. ಜಲಾಶಯ ಸಾಮರ್ಥ್ಯ ಕುಸಿದಿರುವುದರಿಂದ ಮುಂಗಾರು ಕೊನೆಯ ಹಂತದಲ್ಲಿ ಸುರಿಯುವ ಭಾರಿ ಮಳೆಯ ವೇಳೆ ಜಲಾಶಯ ಭರ್ತಿಯಾಗಿರುತ್ತದೆಯಾದರೂ ಬರುವ ನೀರು ಹಿಡಿದಿಟ್ಟುಕೊಳ್ಳಲು ಆಗದೆ ಅದು ನದಿಯ ಮೂಲಕ ಆಂಧ್ರ ಹಾಗೂ ಸಮುದ್ರ ಸೇರುತ್ತದೆ. ಹೀಗೆ ಸರಾಸರಿ ವಾರ್ಷಿಕವಾಗಿ 90 ಟಿಎಂಸಿ ನೀರು ಹರಿದು ಹೋಗುತ್ತದೆ.

ಪ್ರಸಕ್ತ ವರ್ಷ ಮುಂಗಾರು ಹಂಗಾಮಿಗೆ ನೀರು ಬಿಡುವ ಕುರಿತು ನೀರಾವರಿ ಸಲಹಾ ಸಮಿತಿ ಸಭೆ ಜು. 12ರಂದು ನಡೆಯಲಿದೆ. ಆಗಮಿಸುವ ಶಾಸಕರು, ಸಚಿವರು ಹಾಗೂ ರೈತ ಮುಖಂಡರ ಅಭಿಪ್ರಾಯ ಪಡೆದು ಮುಂಗಾರು ಹಂಗಾಮಿಗೆ ನೀರು ಬಿಡುವ ಕುರಿತು ತೀರ್ಮಾನ ಮಾಡಲಾಗುತ್ತದೆ. ಒಳಹರಿವು ತಗ್ಗಿರುವುದರಿಂದ ಚಿಂತೆಯಾಗಿರುವುದು ನಿಜ ಎಂದು ತುಂಗಭದ್ರಾ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ತಿಳಿಸಿದ್ದಾರೆ. 
 

Follow Us:
Download App:
  • android
  • ios