ವಿದ್ಯುತ್ ಖಾಸಗೀಕರಣಕ್ಕೆ ಅನ್ನದಾತರ ಆಕ್ರೋಶ
ಕೇಂದ್ರ ಸರ್ಕಾರ ವಿದ್ಯುತ್ ಖಾಸಗೀಕರಣಕ್ಕೆ ಮುಂದಾಗಿರುವುದನ್ನು ಖಂಡಿಸಿ, ಅಡಿಕೆ ಅಮದಿಗೆ ವಿರೋಧ ವ್ಯಕ್ತಪಡಿಸಿ, ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ನೇತೃತ್ವದಲ್ಲಿ ಬೆಸ್ಕಾಂ ಎಇಇ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ತುಮಕೂರು (ಅ.11): ಕೇಂದ್ರ ಸರ್ಕಾರ ವಿದ್ಯುತ್ ಖಾಸಗೀಕರಣಕ್ಕೆ ಮುಂದಾಗಿರುವುದನ್ನು ಖಂಡಿಸಿ, ಅಡಿಕೆ ಅಮದಿಗೆ ವಿರೋಧ ವ್ಯಕ್ತಪಡಿಸಿ, ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ನೇತೃತ್ವದಲ್ಲಿ ಬೆಸ್ಕಾಂ ಎಇಇ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ನಗರದ ಕರಿಬಸವೇಶ್ವರ ವೃತ್ತದಿಂದ ತುಮಕೂರು ತಾಲೂಕು ಎಇಇ (AEE) ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ರೈತ (Farmers) ಸಂಘದ ಕಾರ್ಯಕರ್ತರು, ಸರಕಾರ ವಿದ್ಯುತ್ (Electricity) ಇಲಾಖೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ಕ್ರಮವನ್ನು ವಿರೋಧಿಸಿ, ಘೋಷಣೆ ಕೂಗಿದರು.
ಎಇಇ ಕಚೇರಿ ಬಳಿ ಸಮಾವೇಶಗೊಂಡ ರೈತರನ್ನು (Farmers) ಉದ್ದೇಶಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ. ಗೋವಿಂದರಾಜು, ವಿದ್ಯುತ್ ಖಾಸಗೀಕರಣಕ್ಕೆ ಈಗಾಗಲೇ ಕೇಂದ್ರ ಸರಕಾರ ಸಂಸತ್ತಿನ ಉಪಸಮಿತಿಯ ಮುಂದೆ ಬಿಲ್ ಮಂಡಿಸಿದೆ. ವಿದ್ಯುತ್ ಖಾಸಗಿ ಬಿಲ್ ಜಾರಿಗೆ ಬಂದರೆ, ಇಡೀ ದೇಶದಲ್ಲಿ ಆಹಾರ ಸ್ವಾವಲಂಬನೆ ಹಾಳಾಗುವುದಲ್ಲದೆ, ರೈತರು, ಬಡವರು ವಿದ್ಯುತ್ ಬಿಲ್ ಭರಿಸಲಾಗದೆ ಬೀದಿಗೆ ಬೀಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದರು.
ಕೇಂದ್ರ ಸರಕಾರ ವಿದ್ಯುತ್ ಖಾಸಗೀಕರಣದ ಬಗ್ಗೆ ಈಗಾಗಲೇ ರಾಷ್ಟ್ರದಲ್ಲಿರುವ ರಾಜ್ಯಗಳ ಅಭಿಪ್ರಾಯ ಕೇಳಿದ್ದು, ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ರಾಜ್ಯಗಳು ಖಾಸಗೀಕರಣಕ್ಕೆ ವಿರೋಧ ವ್ಯಕ್ತಪಡಿಸಿವೆ. ಆದರೆ ಕರ್ನಾಟಕ ಮಾತ್ರ ಇದುವರೆಗೂ ತನ್ನ ಅಭಿಪ್ರಾಯ ತಿಳಿಸಿಲ್ಲ. ಕೂಡಲೇ ರಾಜ್ಯ ಸರ್ಕಾರ ಮೌನ ಮುರಿದು ತನ್ನ ಅಭಿಪ್ರಾಯ ತಿಳಿಸಬೇಕು. ಯಾವುದೇ ಕಾರಣಕ್ಕೂ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವುದಿಲ್ಲ ಎಂಬ ಘೋಷಣೆಯನ್ನು ಮಾಡಬೇಕೆಂಬುದು ರಾಜ್ಯದ ರೈತರ ಆಗ್ರಹವಾಗಿದೆ ಎಂದು ಏ.ಗೋವಿಂದರಾಜು ತಿಳಿಸಿದರು.
ಕೇಂದ್ರ ಸರಕಾರ ಅಡಿಕೆಯನ್ನು ನೆರೆಯ ಭೂತಾನ್ ಮತ್ತಿತರ ದೇಶಗಳಿಂದ ಅಮದು ಮಾಡಿಕೊಳಲು ಮುಂದಾಗಿದೆ. ಇದರಿಂದ ದೇಶದ ಅಡಿಕೆ ಬೆಳೆಗಾರರ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಅಡಿಕೆ ಬೆಳೆಗಾರರು ನಷ್ಟಹೊಂದಿ, ಆತ್ಮಹತ್ಯೆಯ ಮಾರ್ಗ ಹಿಡಿಯಬೇಕಾಗುತ್ತದೆ. ಹಾಗಾಗಿ ಸರ್ಕಾರ ಎಚ್ಚೆತ್ತುಕೊಳ್ಳಬೇಕೆಂದು ರೈತರು ಆಗ್ರಹಿಸಿದರು.
ಈ ಸಂಬಂಧ ಮನವಿಯನ್ನು ಎಇಇ ಅವರಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತುಮಕೂರು ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವೀಶ್, ಪ್ರಧಾನ ಕಾರ್ಯದರ್ಶಿ ಟಿ.ಎಂ.ತಿಮ್ಮೇಗೌಡ, ಸಿ.ಎಸ್.ರಂಗಸ್ವಾಮಯ್ಯ, ಪುಟ್ಟಸ್ವಾಮಿ, ಈಶ್ವರಪ್ಪ, ಕೃಷ್ಣಪ್ಪ, ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಲಕ್ಷ್ಮಿಕುಮಾರ್ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.
ಖಾಸಗೀಕರಣ ಮೀಸಲಾತಿ ವಿರೋಧಿ
ಕೇಂದ್ರ ಸರ್ಕಾರದ ಖಾಸಗೀಕರಣ ನೀತಿಯಿಂದ ಒಂದೊಂದೇ ಕ್ಷೇತ್ರದಲ್ಲಿ ಮೀಸಲಾತಿ ಮರೆಯಾಗುತ್ತಿದೆ. ಭವಿಷ್ಯದಲ್ಲಿ ಮೀಸಲಾತಿಯು ಮಹತ್ವ ಕಳೆದುಕೊಳ್ಳಬಹುದು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು. ವಸಂತನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಏರ್ಪಡಿಸಿದ್ದ ‘ಹಾವನೂರು ಆಯೋಗ’ದ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಖಾಸಗೀಕರಣಕ್ಕೆ ಆದ್ಯತೆ ನೀಡುತ್ತಿದ್ದು ಇದರಿಂದಾಗಿ ಹಿಂದುಳಿದ ಜಾತಿಗಳಿಗೆ ಅವಕಾಶಗಳು ಕಡಿಮೆಯಾಗಲಿವೆ.
ಇದು ಹೀಗೆಯೇ ಮುಂದುವರೆದರೆ ಮೀಸಲಾತಿಯು ತನ್ನ ನೈಜ ಮಹತ್ವವನ್ನೇ ಕಳೆದುಕೊಳ್ಳಲಿದೆ. ಇನ್ನು, ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದವರಿಗೆ ಮೀಸಲಾತಿ ನೀಡಲು ರಚಿಸಿರುವ ನ್ಯಾ.ಭಕ್ತವತ್ಸಲ ಸಮಿತಿಯೂ ಸರಿಯಾಗಿ ಸಮೀಕ್ಷೆ ಮಾಡಿಲ್ಲ. ಸಮಿತಿಯಿಂದಲೂ ನ್ಯಾಯ ಸಿಗುವ ಸಾಧ್ಯತೆ ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಹಿರಿಯ ನ್ಯಾಯವಾದಿ ರವಿವರ್ಮ ಕುಮಾರ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್ ಮತ್ತಿತರರು ಹಾಜರಿದ್ದರು.
ಈ ದೇಶಕ್ಕೆ ಬಿಜೆಪಿ ಕೊಡುಗೆಯಾದರೂ ಏನು?: ಸಿದ್ದರಾಮಯ್ಯ ಪ್ರಶ್ನೆ
ನಮ್ಮವರಿಂದಲೇ ಅಧಿಕಾರಕ್ಕೆ ಮೋದಿಗೆ ಜೈಕಾರ!: ಕಾಂಗ್ರೆಸ್‌ನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದವರು ಮತ್ತು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟನಮ್ಮವರು ಬಿಜೆಪಿ ಸೇರ್ಪಡೆ ಆಗುತ್ತಿದ್ದಾರೆ. ಬಿಜೆಪಿಯವರು ಮೀಸಲಾತಿ ವಿರೋಧಿಗಳಾಗಿದ್ದರೂ ಪ್ರಧಾನಿ ನರೇಂದ್ರ ಮೋದಿಗೆ ಜೈಕಾರ ಕೂಗುತ್ತಾರೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.