ಕಲಬುರಗಿ ರೈತನ ಬಾಳೆ ವಿದೇಶಕ್ಕೆ ರಫ್ತು, ನಾಲ್ಕು ಎಕರೆ ಜಮೀನಿನಲ್ಲಿ 20 ಲಕ್ಷ ರೂ ಲಾಭ

ರೈತರು ತಾವು ಬೆಳೆದ ಬೆಳೆಗಳಲ್ಲಿ ಗುಣಮಟ್ಟ ಕಾಯ್ದುಕೊಂಡರೆ ಮಾರುಕಟ್ಟೆ ಕಷ್ಟ ಅಲ್ಲ ಎನ್ನುವುದನ್ನು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಉತ್ಸಾಹಿ ರೈತ ಗುರುಶಾಂತಗೌಡ ಪಾಟೀಲ್ ನಿರೂಪಿಸಿದ್ದಾರೆ.

Kalaburagi farmers banana export abroad gow

ವರದಿ : ಶರಣಯ್ಯ ಹಿರೇಮಠ, ಏಷ್ಯಾನೇಟ್ ಸುವರ್ಣ ನ್ಯೂಸ್ ಕಲಬುರಗಿ

ಕಲಬುರಗಿ (ಅ.10): ಒಂದೆಡೆ ರೈತರು ತಾವು ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆ ಸಿಗುತ್ತಿಲ್ಲ ಎಂದು ಪರಿತಪಿಸುತ್ತಿದ್ದರೆ,ಇತ್ತ ಕಲಬುರಗಿ ಜಿಲ್ಲೆಯ ರೈತರೊಬ್ಬರು ಬೆಳೆದ ಬಾಳೆ ವಿದೇಶಕ್ಕೆ ರಫ್ತಾಗುತ್ತಿದೆ. ಹಾಗಾದ್ರೆ ಇವರ ಬಾಳೆ ಹೇಗಿದೆ ? ಇವರಿಗೆ ನಾಲ್ಕು ಎಕರೆಯಲ್ಲಿ ಸಿಕ್ಕಿರುವ ಲಾಭ ಎಷ್ಟು ಎನ್ನುವುದರ ಪೂರ್ಣ ಮಾಹಿತಿ ಇಲ್ಲಿದೆ. ರೈತರು ತಾವು ಬೆಳೆದ ಬೆಳೆಗಳಲ್ಲಿ ಗುಣಮಟ್ಟ ಕಾಯ್ದುಕೊಂಡರೆ ಮಾರುಕಟ್ಟೆ ಕಷ್ಟ ಅಲ್ಲ ಎನ್ನುವುದನ್ನು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಉತ್ಸಾಹಿ ರೈತ ಗುರುಶಾಂತಗೌಡ ಪಾಟೀಲ್ ನಿರೂಪಿಸಿದ್ದಾರೆ. ಇವರು ನಿಂಬಾಳ ಗ್ರಾಮದ ತಮ್ಮ ಜಮೀನಿನಲ್ಲಿ ಕೇವಲ ನಾಲ್ಕು ಎಕರೆ ಜಮೀನಿನಲ್ಲಿ ಬಾಳೆ ಬೆಳೆದು ಭಾರಿ ಲಾಭ ಮಾಡಿಕೊಂಡಿದ್ದಾರೆ. ನಿಂಬಾಳ ಗ್ರಾಮದ ರೈತ ಗುರುಶಾಂತಗೌಡ ಪಾಟೀಲ್ ಅವರು ನಾಲ್ಕು ಎಕರೆ ಜಮೀನಿನಲ್ಲಿ ಒಟ್ಟು 4500 ಬಾಳೆ ಸಸಿಗಳನ್ನು ನಾಟಿ ಮಾಡಿದ್ದಾರೆ. ಕಳೆದ ಜನೇವರಿಯಲ್ಲಿ ಬಾಳೆ ಸಸಿ ನಾಟಿ ಮಾಡಿರುವ ಇವರು, ಕೇವಲ 10 ತಿಂಗಳಲ್ಲಿ ನಾಲ್ಕೇ ನಾಲ್ಕು ಎಕರೆ ಜಮೀನಿನಲ್ಲಿ ಇಪ್ಪತ್ತು ಲಕ್ಷ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ. ನಿಂಬಾಳ ಗ್ರಾಮದ ರೈತ ಗುರುಶಾಂತಗೌಡ ಪಾಟೀಲ್ ಅವರು ಬೆಳೆದ ಬಾಳೆ ಅತ್ಯಂತ ಉತ್ಕೃಷ್ಟ ಗುಣಮಟ್ಟದಿಂದ ಕೂಡಿದ್ದೇ ಅವರಿಗೆ ವರವಾಗಿದೆ. ಗುಣಮಟ್ಟ ಕಾಯ್ದುಕೊಂಡ ಕಾರಣ ಇದನ್ನು ವಿದೇಶಕ್ಕೆ ರಫ್ತು ಮಾಡಲು ಸಾಧ್ಯವಾಗಿದೆ. ಇವರು ಒಟ್ಟು 25 ಟನ್ ಗಳಷ್ಟು ಬಾಳೆ ಹಣ್ಣು ಇರಾಕ್ ಗೆ ರಫ್ತು ಮಾಡಿದ್ದಾರೆ. ಇದರಿಂದ ಅವರಿಗೆ ಸುಮಾರು 20 ಲಕ್ಷ ರೂಪಾಯಿಯಷ್ಟು ಆದಾಯ ಬಂದಿದೆ. 

ವೈಜ್ಞಾನಿಕ ಪದ್ದತಿಯೇ ಗಯಣಮಟ್ಟದ ಇಳುವರಿಗೆ ಕಾರಣ: ರೈತ ಗುರುಶಾಂತಗೌಡ ಪಾಟೀಲ್ ಅವರು ಬೆಳೆದ ಬಾಳೆ ವಿದೇಶಕ್ಕೆ ರಫ್ತಾಗಲು ಕಾರಣ ಅವರ ಅಳವಡಿಸಿಕೊಂಡ ವೈಜ್ಞಾನಿಕ ಪದ್ದತಿ. ಮೊಟ್ಟ ಮೊದಲನೇಯದಾಗಿ ಇವರು ಬಾಳೆ ಸಸಿ ನಾಟಿ ಮಾಡುವ ಮೊದಲು ಹನಿ ನೀರಾವರಿ ಪದ್ದತಿ ಅಳವಡಿಸಿಕೊಂಡಿದ್ದಾರೆ. ಇದರಿಂದ ಶೇ 40 ರಷ್ಟು ನೀರು ಉಳಿಸಲು ಸಾಧ್ಯವಾಗಿದೆ. ಅಲ್ಲದೇ ಕಳೆ ನಿಯಂತ್ರಣಕ್ಕೂ ಇದು ಸಹಕಾರಿಯಾಗಿದೆ. ಮತ್ತು ರಸಗೊಬ್ಬರ ಸಹ ಡ್ರಿಪ್ ಮೂಲಕ ಬಿಡಲು ಸಾಧ್ಯವಾಗಿದ್ದು ಎಲ್ಲಾ ಬೆಳೆಗಳಿಗೂ ಸಮಾಂತರವಾಗಿ ನೀರು ಗೊಬ್ಬರ ಪೂರೈಕೆ ಇದರಿಂದ ಸಾಧ್ಯವಾಗಿದೆ. 

ಬೀಜ ಆಯ್ಕೆ ಪಾತ್ರ ಮುಖ್ಯ: ನಂತರ ಬೀಜ ಆಯ್ಕೆ ಬಹು ಪ್ರಮುಖ ಪಾತ್ರ ವಹಿಸುತ್ತದೆ. ಇವರು ಅಟ್ಲಾಂಟಿಕ್ ಕಂಪೆನಿಯ ಜಿ 9 ತಳಿಯ ಬಾಳೆ ಸಸಿಗಳನ್ನು ಹೈದ್ರಾಬಾದನಿಂದ ತಂದು ನಾಟಿ ಮಾಡಿದ್ದಾರೆ. ಗುಣಮಟ್ಟದ ಮತ್ತು ರೋಗ ನಿರೋಧಕ ಶಕ್ತಿ ಹೊಂದಿರುವ ಬಾಳೆ ಸಸಿ ನಾಟಿ ಮಾಡುವುದು ಅತ್ಯಂತ ಮಹತ್ವದ್ದಾಗಿದೆ. 

ಇದಾದ ನಂತರ ಇವರು ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಆಯಾ ಕಾಲ ಕಾಲಕ್ಕೆ ಏನೇನು ರಸಗೊಬ್ಬರ ನೀಡಬೇಕು ಎನ್ನುವುದನ್ನು ಕೇಳಿ ಮಾಹಿತಿ ಪಡೆದು ಅದನ್ನು ಬೆಳೆಗೆ ಪೂರೈಸಿದ್ದಾರೆ. ಇದರ ಪರಿಣಾಮ ಇವರ ಬಾಳೆ ಅತ್ಯಂತ ಗುಣಮಟ್ಟದಲ್ಲಿ ಬೆಳೆದು ಬಂದಿದೆ. 

ಪ್ರತಿ ಗಿಡಕ್ಕೆ 500 ರೂಪಾಯಿ: ಇವರು ಒಟ್ಟು 4500 ಬಾಳೆ ಸಸಿಗಳನ್ನು ನಾಟಿ ಮಾಡಿದ್ದು, ಪ್ರತಿ ಗಿಡಕ್ಕೆ ಐದು ನೂರು ರೂಪಾಯಿಯಂತೆ ಆದಾಯ ಬರುತ್ತಿದೆ. ಒಟ್ಟಾರೆ ಕೇವಲ 4 ಎಕರೆ ಜಮೀನಿನಲ್ಲಿ ಇವರು 20 ಲಕ್ಷ ರೂಪಾಯಿ ಆದಾಯ ಪಡೆದು ರೈತ ಸಮುದಾಯಕ್ಕೆ ಮಾದರಿಯಾಗಿದ್ದಾರೆ. 

ಬಾಳೆ ನೋಡಲು ಮುಗಿ ಬೀಳುವ ಜನ: ನಿಂಬಾಳದ ರೈತ ಗುರುಶಾಂತಗೌಡ ಪಾಟೀಲ ಅವರು ಬಾಳೆ ಬೆಳೆದು ಇರಾಕ್ ಗೆ ರಫ್ತು ಮಾಡುತ್ತಿರುವ ವಿಚಾರ ಗೊತ್ತಾಗಿ ಸುತ್ತಮುತ್ತಲಿನ ಗ್ರಾಮಗಳ ರೈತರ ದಂಡು ಇವರ ಹೊಲಕ್ಕೆ ಬಂದು ಬಾಳೆ ಪರಿಶೀಲಿಸುತ್ತಿದೆ. ಇಷ್ಟೇ ಅಲ್ಲ, ಕೃಷಿ , ತೋಟಗಾರಿಕಾ ಇಲಾಖೆ ಅಧಿಕಾರಿಗಳೂ ಸಹ ಈ ಹೊಲಕ್ಕೆ ಬಂದು ಕ್ಷೇತ್ರ ವೀಕ್ಷಿಸಿ ರೈತನಿಗೆ ಶಹಾಬ್ಬಾಶಗಿರಿ ನೀಡುತ್ತಿದ್ದಾರೆ.

ಅಕಾಲಿಕ ಮಳೆಯಿಂದ ಭತ್ತಕ್ಕೆ ಹಾನಿ; ಆತಂಕದಲ್ಲಿ ರೈತ

ರೈತರಿಗೆ ಸಲಹೆ: ರೈತರು ಏನೆ ಬೆಳೆಯಲಿ ಗುಣಮಟ್ಟ ಕಾಯ್ದುಕೊಂಡರೇ ಮಾರುಕಟ್ಟೆ ಕಷ್ಟವಲ್ಲ. ಇತ್ತಿಚಿಗೆ ಜಗತ್ತೇ ಅಂಗೈಯಲ್ಲಿ ಬಂದು ನಿಂತಿದೆ. ಹಾಗಾಗಿ ಗುಣಮಟ್ಟ ಇಳುವರಿ ತೆಗೆದರೆ ವಿದೇಶಕ್ಕೆ ರಫ್ತು ಕಷ್ಟವಲ್ಲ. ವಿದೇಶಕ್ಕೆ ರಫ್ತು ಮಾಡಿ ಸಾಕಷ್ಟು ಲಾಭ ಮಾಡಿಕೊಳ್ಳಬಹುದು ಎನ್ನುತ್ತಾರೆ ರೈತ ಗುರುಶಾಂತಗೌಡ ಪಾಟೀಲ್.  ಏನೇ ಆಗಲಿ ಕಲಬುರಗಿ ಜಿಲ್ಲೆಯ ನಿಂಬಾಳದಲ್ಲಿ ಬೆಳೆದ ಬಾಳೆ ಇರಾಕ್ ಗೆ ರಫ್ತಾಗುತ್ತಿರುವುದು ಆ ರೈತನಿಗೆ ಮಾತ್ರವಲ್ಲ ಇಡೀ ಜಿಲ್ಲೆಗೇ ಅಭಿಮಾನದ ಸಂಗತಿ. 

 

Chikkamagaluru; ಅಡಕೆಎಲೆ ಚುಕ್ಕಿ ರೋಗಕ್ಕೆ ರೈತನ ಮೊದಲ ಬಲಿ!

ನೇರ ಮಾರಾಟದ ಶಕ್ತಿ ಬೇಕಾಗಿದೆ: ರೈತ ಗುರುಶಾಂತಗೌಡ ಪಾಟೀಲ್ ಅವರು ಬೆಳೆದ ಬಾಳೆ ಎಜೆಂಟರ ಮೂಲಕ ವಿದೇಶಕ್ಕೆ ರಫ್ತಾಗುತ್ತಿದೆ. ನೇರವಾಗಿ ರೈತರೇ ಮಾರಾಟ ಮಾಡುವಷ್ಟು ಬಾಳೆ ಪ್ರಮಾಣ ಸಿಗುತ್ತಿಲ್ಲ. ಇದಕ್ಕೆ ಬೇಕಾದ ತಾಂತ್ರಿಕತೆ ಮತ್ತು ಲೈಸನ್ಸ ಇತರ ವ್ಯವಸ್ಥೆ ರೈತರೇ ಅಳವಡಿಸಿಕೊಳ್ಳಬೇಕಾಗಿದೆ. ಇದಕ್ಕೆ ಬೇಕಾದ ನೆರವು ಸರಕಾರ ಕಲ್ಪಿಸಿಕೊಟ್ಟರೆ ರೈತ ನೇರವಾಗಿ ವಿದೇಶಕ್ಕೆ ಮಾರಾಟ ಮಾಡಿ ಇನ್ನಷ್ಟು ಲಾಭ ಮಾಡಿಕೊಳ್ಳಬಹುದು.

Latest Videos
Follow Us:
Download App:
  • android
  • ios