ಈ ದೇಶಕ್ಕೆ ಬಿಜೆಪಿ ಕೊಡುಗೆಯಾದರೂ ಏನು?: ಸಿದ್ದರಾಮಯ್ಯ ಪ್ರಶ್ನೆ
ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ನಮ್ಮನ್ನೆಲ್ಲಾ ಸ್ವತಂತ್ರರನ್ನಾಗಿ ಮಾಡಿದೆ. ಆದರೆ, ಈ ದೇಶಕ್ಕೆ ಬಿಜೆಪಿಯಂತಹ ಭ್ರಷ್ಟಕೋಮುವಾದಿ ಪಕ್ಷದ ಕೊಡುಗೆ ಏನು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಮೈಸೂರು (ಆ.08): ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ನಮ್ಮನ್ನೆಲ್ಲಾ ಸ್ವತಂತ್ರರನ್ನಾಗಿ ಮಾಡಿದೆ. ಆದರೆ, ಈ ದೇಶಕ್ಕೆ ಬಿಜೆಪಿಯಂತಹ ಭ್ರಷ್ಟಕೋಮುವಾದಿ ಪಕ್ಷದ ಕೊಡುಗೆ ಏನು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು. ಮೈಸೂರು ತಾಲೂಕಿನ ಇಲವಾಲದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಇಲವಾಲ ಮತ್ತು ಜಯಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯು ಭಾನುವಾರ ಆಯೋಜಿಸಿದ್ದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪಾದಯಾತ್ರೆಗೆ ಅವರು ಚಾಲನೆ ನೀಡಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ.
ಬ್ರಿಟೀಷರು ಸುಮಾರು 200 ವರ್ಷಗಳ ಕಾಲ ಈ ದೇಶವನ್ನು ಆಳಿದ್ದಾರೆ. ಕಾಂಗ್ರೆಸ್ ಪಕ್ಷವನ್ನು 1885ರಲ್ಲಿ ಡಾ. ಹ್ಯೂಮನ್ ಪ್ರಾರಂಭಿಸಿದರು, ಅಂದಿನಿಂದ 1947 ರವರೆಗೆ 62 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ನಮ್ಮನ್ನು ಸ್ವತಂತ್ರರನ್ನಾಗಿ ಮಾಡಲು ಹೋರಾಟ ಮಾಡಿ ಸ್ವಾತಂತ್ರ್ಯ ಕೊಡಿಸಿದೆ ಎಂದರು. ಬಾಲಗಂಗಾಧರನಾಥ ತಿಲಕ್, ಗೋಪಾಲಕೃಷ್ಣ ಗೋಖಲೆ, ಗಾಂಧೀಜಿ, ನೆಹರು, ಸರ್ಧಾರ್ ವಲ್ಲಭಬಾಯಿ ಪಟೇಲ್, ಸುಭಾಷ್ ಚಂದ್ರಬೋಸ್ ಇನ್ನು ಹಲವಾರು ಜನ ಈ ದೇಶಕ್ಕಾಗಿ ಹೋರಾಟ ತ್ಯಾಗ ಬಲಿದಾನ ಮಾಡಿ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಇಂದು ನಾವೆಲ್ಲರು ಸ್ವತಂತ್ರವಾಗಿರಬೇಕಾದರೆ ಕಾಂಗ್ರೆಸ್ ಪಕ್ಷ ಕಾರಣ.
ಸಿದ್ದರಾಮೋತ್ಸವದಿಂದ ವಾಪಸ್ ಆಗುತ್ತಿದ್ದಾಗ ಮೃತಪಟ್ಟಿದ್ದ ಅಭಿಮಾನಿ ನಿವಾಸಕ್ಕೆ ಸಿದ್ದು ಭೇಟಿ
ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲಾ ಧರ್ಮದವರು ಹೋರಾಟ ಮಾಡಿದರು. ಆದರೆ ಬಿಜೆಪಿಯಾಗಲಿ, ಜೆಡಿಎಸ್ ಆಗಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ ಎಂದು ಅವರು ಕುಟುಕಿದರು. 1925ರಲ್ಲಿ ಆರ್‌ಎಸ್‌ಎಸ್ ಸ್ಥಾಪನೆಯಾಯಿತು. 1951ರಲ್ಲಿ ಜನಸಂಘ ಪ್ರಾರಂಭವಾಯಿತು. 1980ರಲ್ಲಿ ಬಿಜೆಪಿ ಸ್ಥಾಪನೆಯಾಯಿತು. ಇವರೆಲ್ಲಾ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರಾ? ರಾಷ್ಟ್ರಗೀತೆ, ಸಂವಿಧಾನ ರಚನೆಯಾಗಿದ್ದು, ಕಾಂಗ್ರೆಸ್‌ನಿಂದ ರಾಷ್ಟ್ರಧ್ವಜ ಎಂದರೆ ನಮಗೆ ಹೆಮ್ಮೆಯ ವಿಚಾರ. ಇದೇ ಧ್ವಜವನ್ನು ಸಾವರ್ಕರ್ ಗೋಲ್‌ವಾಲಕರ್ ವಿರೋಧಿಸಿದ್ದರು. ಯಾರಾದರು ಒಬ್ಬ ಬಿಜೆಪಿಯವರು ದೇಶಕ್ಕೆ ಸ್ವತಂತ್ರ ತರಲು ಸತ್ತಿದ್ದಾರಾ?
ಆಸ್ತಿ ಕಳೆದುಕೊಂಡಿದ್ದಾರಾ? ದೇಶಭಕ್ತಿ ಪ್ರಾರಂಭವಾಗಿದ್ದೇ ಕಾಂಗ್ರೆಸ್ ಪಕ್ಷದಿಂದ ನಮಗೆ ಬಿಜೆಪಿಯವರು ದೇಶಭಕ್ತಿ ಹೇಳಲು ಬರ್ತಾರೆ ಎಂದು ಅವರು ವ್ಯಂಗ್ಯವಾಡಿದರು. ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಭಿನ್ನಾಭಿಪ್ರಾಯಗಳನ್ನು ಬಿಟ್ಟು ಬದ್ಧತೆಯಿಂದ ಕಾಂಗ್ರೆಸ್ ಪಕ್ಷದಲ್ಲೆ ಇರಬೇಕು. ನಾವು ಅಧಿಕಾರದಲ್ಲಿದ್ದಾಗ ಮಾಡಿದಂತಹ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಬೇಕು. ನಮ್ಮ ಸರ್ಕಾರಕ್ಕೆ ಇಂದಿನ ಶೇ.40 ಸರ್ಕಾರಕ್ಕೂ ಹೋಲಿಕೆ ಮಾಡಿ, ಈ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಶಪತ ಮಾಡಬೇಕು ಎಂದು ಅವರು ಕರೆ ನೀಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನರಾಯಣ್, ಸದಸ್ಯರಾದ ಕೆ. ಮರೀಗೌಡ, ನರಸೇಗೌಡ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್, ಮಾಜಿ ಮೇಯರ್ ಟಿ.ಬಿ. ಚಿಕ್ಕಣ್ಣ, ಜಿಪಂ ಮಾಜಿ ಸದಸ್ಯರಾದ ರಾಕೇಶ್ ಪಾಪಣ್ಣ, ಅರುಣ್‌ಕುಮಾರ್, ಜವರಪ್ಪ, ಮಹಾದೇವ್, ನಾರಾಯಣ, ಲೇಖಾ ವೆಂಕಟೇಶ್, ಕೋಟೆಹುಂಡಿ ಮಹಾದೇವ, ತಾಪಂ ಮಾಜಿ ಸದಸ್ಯರಾದ ಕೆಂಚಪ್ಪ, ಮಾರ್ಬಳ್ಳಿ ಕುಮಾರ್, ಕೆ.ಎಸ್. ಕರೀಗೌಡ, ಸಿ.ಎಂ. ಸಿದ್ದರಾಮೇಗೌಡ, ಯದುಕುಮಾರ್, ಜಿ.ಕೆ. ಬಸವಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಹೊಸಹುಂಡಿ ರಘು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ. ಗುರುಸ್ವಾಮಿ, ಜೆ. ಸತೀಶ್‌ಕುಮಾರ್, ಮುಖಂಡರಾದ ಜೇಸುದಾಸ್, ಗುರುಪಾದಸ್ವಾಮಿ, ಲಕ್ಷ್ಮಯ್ಯ ಮೊದಲಾದವರು ಇದ್ದರು.
ಬಲವಂತದ ಅಲಿಂಗನ ಹೆಚ್ಚು ದಿನ ಬಾಳುವುದಿಲ್ಲ, ಡಿಕೆಶಿ-ಸಿದ್ದುಗೆ ಸುನಿಲ್ ಕುಮಾರ್ ಟಾಂಗ್
ಜೆಡಿಎಸ್‌ನವರು ಯಾವುದಕ್ಕೂ ಹೋರಾಟ ಮಾಡಿಲ್ಲ. ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಶಕ್ತಿಯಿಲ್ಲ. ಬೇರೆಯವರ ಮನೆಯ ಬೆಂಕಿಯಲ್ಲಿ ಕೈ ಕಾಯಿಸಿಕೊಳ್ಳುವುದೇ ಅವರ ಕೆಲಸವಾಗಿದೆ. ನಾವು ಕಳೆದ ಚುನಾವಣೆಯಲ್ಲಿ 80 ಜನ ಗೆದ್ದು, ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದೆಂದು ಜೆಡಿಎಸ್‌ನವರಿಗೆ ಬೆಂಬಲ ನೀಡಿದ್ದೆವು. ಕುಮಾರಸ್ವಾಮಿ ವೆಸ್ಟೆಂಡ್ ಹೋಟೆಲ್‌ನಲ್ಲಿ ಕುಳಿತು ಸರಿಯಾಗಿ ಅಧಿಕಾರ ನಡೆಸದೆ ಅಧಿಕಾರ ಕಳೆದುಕೊಂಡರು.
- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ