Asianet Suvarna News Asianet Suvarna News

ಪ್ರತಿಯೊಬ್ಬರೂ ಹೃದಯ ಭಾಷೆಯಾಗಿ ಕನ್ನಡವನ್ನು ಆರಾಧಿಸಬೇಕು: ಸಚಿವ ಮಧು ಬಂಗಾರಪ್ಪ

ಎಲ್ಲ ಭಾಷೆಗಳಿಗಿಂತ ಸರಳ ಮತ್ತು ಸುಲಲಿತ ಕನ್ನಡ ಭಾಷೆಯನ್ನು ಪ್ರತಿಯೊಬ್ಬರೂ ಹೃದಯದ ಭಾಷೆಯಾಗಿ ಸ್ವೀಕರಿಸಿ ಆರಾಧಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. 

Everyone should worship Kannada as heart language Says Minister Madhu Bangarappa gvd
Author
First Published Feb 4, 2024, 12:48 PM IST

ಸೊರಬ (ಫೆ.04): ಎಲ್ಲ ಭಾಷೆಗಳಿಗಿಂತ ಸರಳ ಮತ್ತು ಸುಲಲಿತ ಕನ್ನಡ ಭಾಷೆಯನ್ನು ಪ್ರತಿಯೊಬ್ಬರೂ ಹೃದಯದ ಭಾಷೆಯಾಗಿ ಸ್ವೀಕರಿಸಿ ಆರಾಧಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. ಪಟ್ಟಣದ ಖಾಸಗಿ ಬಸ್ ನಿಲ್ದಾಣ ಆವರಣದಲ್ಲಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಕನ್ನಡ ನುಡಿಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ನಾಡಿನ ನೆಲ, ಜಲ, ಭಾಷೆಯ ಭಾವೈಕ್ಯತೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಸೈನಿಕರ ರೀತಿಯಲ್ಲಿ ಕಟಿಬದ್ಧರಾಗಿ ಹೋರಾಡುವ ಅಗತ್ಯವಿದೆ. ಎಲ್ಲೇ ಇದ್ದರೂ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು. ಇತರೆ ಭಾಷೆಗಳನ್ನು ವ್ಯಾವಹಾರಿಕವಾಗಿ ಬಳಸಬೇಕು ಎಂದರು.

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಕನ್ನಡ ನಾಡು, ನುಡಿ ಬಗ್ಗೆ ಅಪಾರವಾದ ಅಭಿಮಾನವನ್ನು ಹೊಂದಿದ್ದರು. ಕಾವೇರಿ ನದಿ ವಿಚಾರದಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳುವ ಮೂಲಕ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದರು. ನನ್ನ ಅಧಿಕಾರ ಅವಧಿಯಲ್ಲಿ ಕನ್ನಡಕ್ಕೆ ಒತ್ತು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು, ಮಕ್ಕಳು ದೇಶದ ಆಸ್ತಿ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಲು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡಬೇಕು. ಮುಂದಿನ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗೆ ಚಿಂತನೆ ನಡೆಸಿದ್ದು, ತಮ್ಮೆಲ್ಲರ ಆಶೀರ್ವಾದದ ಫಲವಾಗಿ ಇಂದು ಶಿಕ್ಷಣ ಸಚಿವನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಇದಕ್ಕೆ ತಾನೆಂದೂ ಚಿರಋಣಿ ಆಗಿದ್ದೇನೆ ಎಂದರು.

ಕನ್ನಡ ಉಳಿಯಲು ಆತ್ಮಾವಲೋಕನ ಅಗತ್ಯ: ಸಚಿವ ಈಶ್ವರ ಖಂಡ್ರೆ

ಇದಕ್ಕೂ ಮೊದಲು ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕರವೇ ತಾಲೂಕು ಘಟಕ ಅಧ್ಯಕ್ಷ ಬಲೀಂದ್ರಪ್ಪ ಚಿಕ್ಕಾವಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಂತರ ಭದ್ರಾವತಿಯ ವಿಷ್ಣು ಮೆಲೋಡಿ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಕಿರುತೆರೆ ನಟಿ ರಮಲಾ, ಜಿ.ಪಂ. ಮಾಜಿ ಸದಸ್ಯರಾದ ತಬಲಿ ಬಂಗಾರಪ್ಪ, ಎಚ್. ಗಣಪತಿ, ತಾ.ಪಂ. ಮಾಜಿ ಸದಸ್ಯ ನಾಗರಾಜ್ ಚಿಕ್ಕಸವಿ, ಕರಿಬಸವಯ್ಯ, ತಾಲೂಕು ನೌಕರರ ಸಂಘದ ಅಧ್ಯಕ್ಷ ಎಸ್.ಮಂಜುನಾಥ್ ಓಟೂರು, ಮುಖಂಡರಾದ ಎಂ.ಡಿ. ಶೇಖರ್, ಗಿರೀಶ್ ಬಾರ್ಕಿ, ಕೆ.ಪಿ. ರುದ್ರಗೌಡ, ಪುರಸಭೆ ಮುಖ್ಯಾಧಿಕಾರಿ ಟಿ.ಬಾಲಚಂದ್ರ, ತಾಲೂಕು ಕರವೇ ಪ್ರಮುಖರಾದ ಪ್ರಶಾಂತ್ ನಾಯ್ಕ್, ವಿಜಯ್‌ಕುಮಾರ್, ದಿನೇಶ್, ಯುವರಾಜ್, ವೇದಾ, ಪ್ರಭಾಕರ್ ಶಿಗ್ಗಾ, ನೆಹರು ಕೊಡಕಣಿ, ರವಿ ಬರಗಿ ಮೊದಲಾದವರು ಉಪಸ್ಥಿತರಿದ್ದರು.

Follow Us:
Download App:
  • android
  • ios