ಕನ್ನಡ ಉಳಿಯಲು ಆತ್ಮಾವಲೋಕನ ಅಗತ್ಯ: ಸಚಿವ ಈಶ್ವರ ಖಂಡ್ರೆ
ದೇಶದಲ್ಲಿ ಹಲವಾರು ಭಾಷೆಗಳಿದ್ದು, ಮನುಷ್ಯನ ಎಲ್ಲಾ ರೀತಿಯ ಅಭಿವೃದ್ಧಿಗೆ ಭಾಷೆ ಮೂಲವಾಗಿದ್ದರಿಂದ ಮಾತೃಭಾಷೆ ಕನ್ನಡದ ಅಸ್ಮಿತೆ ಉಳಿಸಿ ಬೆಳೆಸಿಕೊಂಡು ಹೋಗುವತ್ತ ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಬೀದರ್ (ಫೆ.04): ದೇಶದಲ್ಲಿ ಹಲವಾರು ಭಾಷೆಗಳಿದ್ದು, ಮನುಷ್ಯನ ಎಲ್ಲಾ ರೀತಿಯ ಅಭಿವೃದ್ಧಿಗೆ ಭಾಷೆ ಮೂಲವಾಗಿದ್ದರಿಂದ ಮಾತೃಭಾಷೆ ಕನ್ನಡದ ಅಸ್ಮಿತೆ ಉಳಿಸಿ ಬೆಳೆಸಿಕೊಂಡು ಹೋಗುವತ್ತ ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕನ್ನಡ ಭವನ ಉದ್ಘಾಟನೆ ಕಾಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ರಾಮಾಯಣ, ಮಹಾಭಾರತದಲ್ಲಿ ಕನ್ನಡದ ಪ್ರಸ್ತಾಪವಿದೆ. ಕನ್ನಡದ 8 ಜನರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದೆ. ವಚನಕಾರರು ಮತ್ತು ದಾಸರು ಕನ್ನಡ ಸಾಹಿತ್ಯದ 2 ಕಣ್ಣುಗಳಿದಂತೆ ಎಂದರು.
ಬೀದರ್ ಜಿಲ್ಲೆಯಲ್ಲಿ ಕನ್ನಡ ಭವನದ ಬಹುದಿನಗಳ ಕನಸು ಇಂದು ನನಸಾಗಿದೆ. 2015ರಲ್ಲಿ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಅಂದಿನ ಜಿಲ್ಲಾಧಿಕಾರಿಗೆ ಸೂಚನೆ ನೀಡಿ ಜಾಗ ಕಲ್ಪಿಸಿಕೊಟ್ಟಿದ್ದೆ. ಈಗ ಮತ್ತೇ ನಾನು ಉಸ್ತುವಾರಿ ಸಚಿವನಾಗಿ ಈ ಭವನ ಉದ್ಘಾಟಿಸಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಜಿಲ್ಲೆಗೆ 400 ಕೋಟಿ ರು. ಹಣ ಬಂದಿದ್ದು, ಇದರಲ್ಲಿ 100 ಕೋಟಿ ರು. ಅಕ್ಷರ ಆವಿಷ್ಕಾರ ಶಿಕ್ಷಣಕ್ಕಾಗಿ ಬಿಡುಗಡೆ ಮಾಡಲಾಗಿದ್ದು ಇದರ ಉದ್ದೇಶ ಪ್ರಾಥಮಿಕ. ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಾಗಿದೆ ಎಂದರು.
ಅಡ್ವಾನಿಯವರಿಗೆ ಭಾರತ ರತ್ನ ಕೊಟ್ಟಿದ್ದರಲ್ಲಿ ತಪ್ಪಿಲ್ಲ: ಸಚಿವ ಆರ್.ಬಿ.ತಿಮ್ಮಾಪುರ
ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪೂರೆ ಮಾತನಾಡಿ, ಕನ್ನಡ ಭವನ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಬೇಕಿದೆ. ಆಂಗ್ಲ ವ್ಯಾಮೋಹದಿಂದ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಕನ್ನಡ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿ, ರಾಜ್ಯದಲ್ಲಿ 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು. ಬೀದರ್‌ನಲ್ಲಿ ಕಳೆದ 1970ರಲ್ಲಿ ಕಸಾಪ ಸ್ಥಾಪನೆಯಾಗಿ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಕನ್ನಡ ಭವನ ಇರಲಿಲ್ಲ. ಈಗ ಉದ್ಘಾಟನೆಗೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.
ಫೆಬ್ರವರಿ ಮಾಸಾಂತ್ಯಕ್ಕೆ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಇಲ್ಲಿಯವರೆಗೆ ಬೀದರ್ ಜಿಲ್ಲೆಯಲ್ಲಿ 20 ಜಿಲ್ಲಾ ಹಾಗೂ 40 ತಾಲೂಕು ಸಮ್ಮೇಳನಗಳು ನಡೆದಿವೆ. ಇದೇ ಫೆಬ್ರವರಿಯಲ್ಲಿ ಜಿಲ್ಲಾ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಎಲ್ಲರೂ ಸೇರಿ ಮಾಡೋಣ ಎಂದು ಹೇಳಿದರು. ಕನ್ನಡ, ಕನ್ನಡಿಗರು ಉಳಿದಾಗ ಮಾತ್ರ ರಾಜ್ಯ ಉಳಿಯಲು ಸಾಧ್ಯ: ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಕನ್ನಡ ಭವನದ ಬಹುದಿನಗಳ ಕನಸು ನನಸಾಗಿದೆ. ಇದಕ್ಕೆ ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರ ಅತ್ಯಮೂಲ್ಯವಾಗಿತ್ತು. ಇನ್ನು ಸುತ್ತುಗೋಡೆ ಹಾಗೂ ಇತರೆ ಹತ್ತು ಹಲವಾರು ಯೋಜನೆ ಜಾರಿ ಮಾಡಬೇಕಿದೆ. ತಾಲೂಕು ಮಟ್ಟದಲ್ಲಿಯೂ ಕನ್ನಡ ಭವನ ನಿರ್ಮಿಸಲು ಮುಂದಾಗುತ್ತೇವೆ.
ಮೆಡಿಕಲ್ ಕಾಲೇಜು, ಪರಿಷ್ಕೃತ ಅಂದಾಜಿಗೆ ಕ್ಯಾಬಿನೆಟ್ ಅಸ್ತು: ಸಚಿವ ಶಿವಾನಂದ ಪಾಟೀಲ್
ಈ ಭವನಕ್ಕೆ ಸಹಾಯ ಸಹಕಾರ ನೀಡಿದ ಜಿಲ್ಲೆಯ ಎಲ್ಲರಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕನ್ನಡ, ಕನ್ನಡಿಗರು ಉಳಿದಾಗ ಮಾತ್ರ ರಾಜ್ಯ ಉಳಿಯಲು ಸಾಧ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್, ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್, ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಹಂಗರಗಿ, ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಉಪಸ್ಥಿತರಿದ್ದರು. ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದ್ದರು. ಹುಲಸೂರಿನ ಶಿವಾನಂದ ಮಹಾಸ್ವಾಮಿಗಳು, ಭಾತಂಬ್ರಾದ ಶಿವಯೋಗೇಶ್ವರ ಮಹಾಸ್ವಾಮಿಗಳು, ಭಾಲ್ಕಿಯ ಗುರುಬಸವ ಪಟ್ಟದ್ದೇವರು, ಆಣದೂರ ಜ್ಞಾನಸಾಗರ ಭಂತೆ ಸಮ್ಮುಖ ವಹಿಸಿದ್ದರು.