ಹುಲಿಗಳ ಸಂಖ್ಯೆ ಹೆಚ್ಚಳಕ್ಕೆ ಇದೇ ಕಾರಣ, ಪ್ರಕೃತಿ-ಆರ್ಥಿಕತೆ ನಡುವಿನ ಸಂಘರ್ಷದಲ್ಲಿ ನಮಗೆ ನಂಬಿಕೆ ಇಲ್ಲ, ಹುಲಿ ಗಣತಿ ವರದಿ ಬಿಡುಗಡೆ. 

ಮೈಸೂರು(ಏ.10): ಭಾರತವು ಪ್ರಕೃತಿ ಮತ್ತು ಆರ್ಥಿಕತೆ ನಡುವಿನ ಸಂಘರ್ಷದಲ್ಲಿ ನಂಬಿಕೆಯಿಟ್ಟಿಲ್ಲ. ಈ ಎರಡರ ನಡುವಿನ ಸಹಬಾಳ್ವೆಯಲ್ಲಿ ವಿಶ್ವಾಸ ಇರಿಸಿದೆ. ಪರಿಸರ ಸಂರಕ್ಷಣೆ ನಮ್ಮ ಸಂಸ್ಕೃತಿಯ ಭಾಗವಾಗಿದ್ದರಿಂದಲೇ ಭಾರತದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಭಾನುವಾರ ಅರಣ್ಯ ಸಚಿವಾಲಯ ಆಯೋಜಿಸಿದ್ದ ಹುಲಿ ಯೋಜನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ 2022ರ ಹುಲಿಗಣತಿ ಬಿಡುಗಡೆಗೊಳಿಸಿ ಮಾತನಾಡಿದರು.

ಭಾರತದಲ್ಲಿ 50 ವರ್ಷಗಳ ಹಿಂದೆ ಹುಲಿ ಯೋಜನೆ ಆರಂಭವಾಯಿತು. ಈಗ ಹುಲಿಗಳ ಸಂಖ್ಯೆ ಸಾಕಷ್ಟುಹೆಚ್ಚಳವಾಗಿದೆ. ಈ ಸಾಫಲ್ಯ ಭಾರತಕ್ಕೆ ಮಾತ್ರವಲ್ಲದೆ, ಇಡೀ ವಿಶ್ವಕ್ಕೆ ಸಲ್ಲುವ ಗೌರವ. ಭಾರತದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಲು ಇಲ್ಲಿನ ಪರಿಸರ ವ್ಯವಸ್ಥೆ ಉತ್ತಮವಾಗಿರುವುದೂ ಒಂದು ಕಾರಣ. ಸ್ವಾತಂತ್ರ್ಯದ ಅಮೃತ ಮಹೋತ್ಸವದ (75 ವರ್ಷ) ಸಂದರ್ಭದಲ್ಲಿ ವಿಶ್ವದ ಹುಲಿಗಳ ಪೈಕಿ ಶೇ.75ರಷ್ಟುಭಾರತದಲ್ಲಿದೆ. ಅಂತೆಯೇ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿ 75 ಸಾವಿರ ಕಿ.ಮೀ ನಷ್ಟಿದೆ. ಇದೊಂದು ಸುಯೋಗ ಎಂದರು.

ಸಫಾರಿ ಡ್ರೆಸ್‌ನಲ್ಲಿ ಮಿಂಚಿದ ಪ್ರಧಾನಿ ಮೋದಿ: ಹೀರೋ ಥರ ಕಾಣುತ್ತಿದ್ದಾರೆ ಎಂದ ನೆಟ್ಟಿಗರು

ವನ್ಯಜೀವಿ ಸಂರಕ್ಷಣೆ ಅನೇಕ ರಾಷ್ಟ್ರಗಳಿಗೆ ಸವಾಲು. ಈ ಸಂದರ್ಭದಲ್ಲಿ ಭಾರತದಲ್ಲಿ ಇದು ಹೇಗೆ ಸಾಧ್ಯವಾಯಿತು ಎಂದರೆ ಇಲ್ಲಿನ ಪರಂಪರೆ, ಸಂಸ್ಕೃತಿ ಮತ್ತು ಸಮಾಜ ಕಾರಣ. ಹುಲಿಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮಹಾರಾಷ್ಟ್ರ ಮುಂತಾದ ಕಡೆ ಇದರ ಬಗ್ಗೆ ಉಲ್ಲೇಖವಿದೆ. ಹುಲಿಯನ್ನು ದೇವರೆಂದು ಪೂಜಿಸುತ್ತಾರೆ. ಅನೇಕ ಸಮುದಾಯಗಳು ತಮ್ಮ ಬಂಧು ಎಂದು ತಿಳಿಯುತ್ತಾರೆ. ಹುಲಿಯನ್ನು ದುರ್ಗೆ ಮತ್ತು ಅಯ್ಯಪ್ಪನ ವಾಹನ ಎಂದೇ ನಂಬಿದ್ದಾರೆ ಎಂದು ಅವರು ಹೇಳಿದರು.

ಭಾರತದಲ್ಲಿ ಪರಿಸರ ಸಂರಕ್ಷಣೆಯು ಸಂಸ್ಕೃತಿಯ ಒಂದು ಭಾಗ. ಇದು ವನ್ಯಜೀವಿ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ದೇಶದಲ್ಲಿ ವಿಶ್ವದಲ್ಲಿಯೇ ಅತಿ ದೊಡ್ಡ ಹುಲಿ ಸಂರಕ್ಷಿತ ಪ್ರದೇಶವಿದೆ. ಏಷ್ಯಾದಲ್ಲಿಯೇ ಅತಿ ಹೆಚ್ಚು ಆನೆ ಅಂದರೆ 30 ಸಾವಿರ ಆನೆಗಳನ್ನು ಭಾರತ ಹೊಂದಿದೆ.

ಚಿರತೆ ಪ್ರಮಾಣ ಶೇ.6ರಷ್ಟು ಹೆಚ್ಚು:

ನಾಲ್ಕು ವರ್ಷದಲ್ಲಿ ಚಿರತೆಯ ಪ್ರಮಾಣ ಶೇ.60ರಷ್ಟು ಹೆಚ್ಚಾಗಿದೆ. ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಣೆಯೂ ಆಗುತ್ತಿದೆ. ಗೀರ್‌ಗಳ ಸಂರಕ್ಷಣಾ ಕಾರ್ಯವೂ ನಡೆಯುತ್ತಿದೆ. ಇದಕ್ಕೆ ಸಾರ್ವಜನಿಕರ ಸಹಭಾಗಿತ್ವ ಉತ್ತಮವಾಗಿದೆ. ಅರಣ್ಯ ಇಲಾಖೆಯಲ್ಲಿ ಮಹಿಳಾ ಗಾರ್ಡ್‌ಗಳನ್ನು ನೇಮಿಸಿಕೊಂಡು ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಈ ಎಲ್ಲಾ ಕಾರಣದಿಂದ ಭಾರತದಲ್ಲಿ ಪ್ರವಾಸೋದ್ಯಮ ಹೆಚ್ಚಾಗಿದೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತದಲ್ಲಿ ಏಷ್ಯಾಟಿಕ್‌ ಸಿಂಹಗಳ ಪ್ರಮಾಣವೂ ಹೆಚ್ಚಾಗಿದೆ. 2020ರ ವೇಳೆಗೆ ಈ ಸಿಂಹಗಳ ಸಂಖ್ಯೆ 675 ಇತ್ತು. ಚೀತಾಗಳ ಸಂಖ್ಯೆ ಕುಸಿದಾಗ ದಕ್ಷಿಣ ಆಫ್ರಿಕಾದಿಂದ ತರಲಾಗಿದೆ. ಈಗ ಅವು 4 ಸುಂದರವಾದ ಮರಿಗಳಿಗೆ ಜನ್ಮ ನೀಡಿವೆ. ಇದೊಂದು ಹರ್ಷದಾಯಕ ಸಂಗತಿ. ವನ್ಯಜೀವಿ ಸಂರಕ್ಷಣೆಗೆ ಅಂತಾರಾಷ್ಟ್ರೀಯ ಸಹಕಾರ ಬಹಳ ಮುಖ್ಯ. ಏಕೆಂದರೆ ಇದೊಂದು ಜಾಗತಿಕ ಕಾರ್ಯಕ್ರಮ. ಈ ಹಿಂದೆ ಅಂತಾರಾಷ್ಟ್ರೀಯ ಬಿಗ್‌ ಕ್ಯಾಟಲ್‌ ಅಲೆಯನ್ಸ್‌ (ದೊಡ್ಡ ಬೆಕ್ಕಿನ ಜಾತಿ ಪ್ರಾಣಿಗಳ ಸಂರಕ್ಷಣಾ ಒಪ್ಪಂದ) ಪರಿಣಾಮ ಹಣಕಾಸು ಮತ್ತು ತಾಂತ್ರಿಕ ವಿನಿಮಯವೂ ನಡೆಯಿತು. ಇದು ಹುಲಿ, ಸಿಂಹ, ಜಾಗ್ವಾರ್‌, ಚೀತಾ, ಚಿರತೆ, ಹಿಮಚಿರತೆಗಳ ಸಂರಕ್ಷಣೆಯೂ ಒಳಗೊಂಡಿತ್ತು ಎಂದರು.

ಇದಕ್ಕೂ ಮುನ್ನ ಅವರು ‘ಅಮೃತ್‌ ಕಾಲ್‌ ಕಾ ಟೈಗರ್‌ ವಿಷನ್‌’ ಬುಕ್‌ಲೆಟ್‌, ಹುಲಿ ಯೋಜನೆ ಸುವರ್ಣ ಮಹೋತ್ಸವ ನಾಣ್ಯ ಬಿಡುಗಡೆಗೊಳಿಸಿದರು. ಮ್ಯಾನೇಜ್‌ಮೆಂಟ್‌ ಎಫೆಕ್ಟಿವ್‌ನೆಸ್‌ ಇವ್ಯಾಲ್ಯುವೇಷನ್‌ ಆಫ್‌ ಟೈಗರ್‌ ರಿಸವ್‌ರ್‍್ಸ ಇನ್‌ ಇಂಡಿಯಾ- 2022 ಇದರ 5ನೇ ಆವೃತ್ತಿಯನ್ನು ಲೋಕಾರ್ಪಣೆಗೊಳಿಸಿದರು. ರಿಮೋಟ್‌ನ ಗುಂಡಿ ಹೊತ್ತುವ ಮೂಲಕ ದೇಶದಲ್ಲಿನ ಹುಲಿ ಗಣತಿ ಪ್ರಸ್ತುತ ಪಡಿಸಿದರು. ಕಾರ್ಯಕ್ರಮದಲ್ಲಿ ಅರಣ್ಯ ಮತ್ತು ವನ್ಯಜೀವಿ ಖಾತೆ ಕೇಂದ್ರ ಸಚಿವ ಭೂಪೇಂದ್ರ ಯಾದವ್‌, ರಾಜ್ಯ ಸಚಿವ ಅಶ್ವಿನಿಕುಮಾರ್‌ ಇದ್ದರು.

ಜೆಡಿಎಸ್‌, ಬಿಜೆಪಿ ನಡುವೆ ಒಳ ಒಪ್ಪಂದವಾಗಿದೆ : ಮಹದೇವಪ್ಪ

ಜಿ-20 ನೇತೃತ್ವ ವಹಿಸಿರುವ ಈ ಸಂದರ್ಭದಲ್ಲಿ ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯವಾಗಿ ಯೋಚಿಸಬೇಕು. ಸಹ್ಯಾದ್ರಿಯ ಈ ಭಾಗ ಪಶ್ಚಿಮಘಟ್ಟಪ್ರದೇಶದಿಂದ ಕೂಡಿದ್ದು, ಬಹಳ ಸಮೃದ್ಧವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆದಿವಾಸಿಗಳ ಪರಂಪರೆ ಕಲಿಯಬೇಕು. ‘ದಿ ಎಲೆಫೆಂಟ್ಸ್‌ ವಿಸ್ಪರರ್ಸ್‌’ ಸಾಕ್ಷ್ಯಚಿತ್ರವು ವನ್ಯಜೀವಿಗಳನ್ನು ಆದಿವಾಸಿಗಳು ಹೇಗೆ ಪೂಜಿಸುತ್ತಾರೆ ಎಂಬುದು ತಿಳಿಯುತ್ತದೆ. ಅವರ ಪಂರಪರೆಗೆ ನಾವು ಆಭಾರಿ. ಅವರನ್ನು ಮುಖ್ಯವಾಹಿನಿಗೆ ಕರೆತರುವುದು ನಮ್ಮ ಕರ್ತವ್ಯ ಅಂತ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.