ಜೆಡಿಎಸ್, ಬಿಜೆಪಿ ನಡುವೆ ಒಳ ಒಪ್ಪಂದವಾಗಿದೆ : ಮಹದೇವಪ್ಪ
ಕಾಂಗ್ರೆಸ್ ಸರ್ಕಾರ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಜೆಡಿಎಸ್, ಬಿಜೆಪಿ ನಡುವೆ ಒಳ ಒಪ್ಪಂದವಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಆರೋಪಿಸಿದರು.
ಟಿ. ನರಸೀಪುರ : ಕಾಂಗ್ರೆಸ್ ಸರ್ಕಾರ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಜೆಡಿಎಸ್, ಬಿಜೆಪಿ ನಡುವೆ ಒಳ ಒಪ್ಪಂದವಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಆರೋಪಿಸಿದರು.
ತಾಲೂಕಿನ ಸೋಸಲೆ ಗ್ರಾಮದಲ್ಲಿ ಶನಿವಾರ ನಡೆದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಬಿಜೆಪಿ ಮುಖಂಡರಾದ ಪಿಎಸಿಸಿಎಸ್ ಅಧ್ಯಕ್ಷ ಎಂ. ಪರಶಿವಮೂರ್ತಿ, ಜೆಡಿಎಸ್ ಮುಖಂಡ ಸೋಮಣ್ಣ, ಪುರಸಭೆ ನಾಮಕರಣ ಸದಸ್ಯ ಕೆ. ನಂಜುಂಡಸ್ವಾಮಿ ಸೇರಿದಂತೆ ಹಲವು ಮುಖಂಡರು ಹಾಗೂ ನೂರಾರು ಯುವಕರು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು.
ಕಾಂಗ್ರೆಸ್‌ನ್ನು ಸೋಲಿಸಲು ಕೈ ಅಭ್ಯರ್ಥಿಗಳು ಪ್ರಾಬಲ್ಯವಿರುವೆಡೆ ಪರಸ್ಪರ ಬೆಂಬಲಿಸಿಕೊಳ್ಳಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಈಗಾಗಲೇ ಮಾತುಕತೆ ನಡೆಸಿದ್ದಾರೆ ಎಂದು ದೂರಿದರು.
ಸಮ್ಮಿಶ್ರ ಸರ್ಕಾರದ ರಾಜಕಾರಣವೇ ಸಂವಿಧಾನವನ್ನ ದುರ್ಬಲ ಗೊಳಿಸುವುದು. ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆಯನ್ನು ತರುವುದರಿಂದ ಬಿಜೆಪಿಯ ಹುನ್ನಾರವನ್ನು ಜನರು ಅರಿತು ಕೋಮುವಾದದ ಸವಾರಿಗೆ ಕಡಿವಾಣ ಹಾಕಬೇಕು ಎಂದರು.
ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ನೇರ ಸ್ಪರ್ಧೆಯಿದ್ದು, ಬಿಜೆಪಿ ಸ್ಪರ್ಧಿಸಿದರೂ ಯಾವುದೇ ಪರಿಣಾಮವಾಗಲ್ಲ. ಹಿಂದಿನ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಶಾಮಿಲಾಗಿದ್ದರಿಂದ ನಮಗೆ ಸೋಲಾಯಿತು ಎಂದರು
ಜಿಪಂ ಮಾಜಿ ಸದಸ್ಯೆ ಎಂ. ಸುಧಾ ಮಹದೇವಯ್ಯ, ತಾಪಂ ಮಾಜಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನಸ್ವಾಮಿ, ಮೈಸೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ. ಮಹದೇವಸ್ವಾಮಿ, ಕೆಪಿಸಿಸಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಬಸವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚನ್ನಕೇಶವ, ಮಹಿಳಾ ಅಧ್ಯಕ್ಷೆ ವೀಣಾ ಶಿವಕುಮಾರ್, ಎಸ್ಸಿ, ಎಸ್ಟಿಹಿತರಕ್ಷಣಾ ಸಮಿತಿಯ ಸದಸ್ಯ ಮಹದೇವಸ್ವಾಮಿ ಇದ್ದರು.