ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಹೊಸ ವರ್ಷದ ದಿನದಂದು ನವಾಜ್ ಎಂಬ 28 ವರ್ಷದ ಯುವಕನನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದ್ದು, ಗೋಣಿಕೊಪ್ಪ ಪೊಲೀಸರು ಮೂವರು ಆರೋಪಿಗಳಿಗಾಗಿ ತನಿಖೆ ನಡೆಸುತ್ತಿದ್ದಾರೆ.

ಕೊಡಗು: ಜಿಲ್ಲೆಯಲ್ಲಿ ಹೊಸ ವರ್ಷದ ದಿನವೇ ನಡೆದ ಮಾರಣಾಂತಿಕ ಹಲ್ಲೆಯೊಂದು ಯುವಕನ ಸಾವಿಗೆ ಕಾರಣವಾದ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ವಿರಾಜಪೇಟೆ ತಾಲ್ಲೂಕಿನ ಹರಿಶ್ಚಂದ್ರಪುರ ಗ್ರಾಮದ ನಿವಾಸಿ ನವಾಜ್ (28) ಎಂಬ ಯುವಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

ಮೃತ ನವಾಜ್ ಖಾಸಗಿ ಸಂಸ್ಥೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಿದ್ದು, ಉಳಿದ ಸಮಯದಲ್ಲಿ ಆಟೋ ಚಾಲಕರಾಗಿಯೂ ದುಡಿಯುತ್ತಿದ್ದನು. ಹೊಸ ವರ್ಷದ ರಾತ್ರಿ ನವಾಜ್ ಅವರನ್ನು ಹಾತೂರು–ಕುಂದಾ ರಸ್ತೆ ಮಾರ್ಗಕ್ಕೆ ಕರೆಸಿಕೊಂಡು ಮೂವರು ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಅನೈತಿಕ ಸಂಬಂಧ

ಪೊಲೀಸ್ ಮೂಲಗಳ ಪ್ರಕಾರ, ಅನೈತಿಕ ಸಂಬಂಧದ ಹಿನ್ನೆಲೆ ಈ ಹಲ್ಲೆ ನಡೆದಿದ್ದು, ಮಹಿಳೆಯನ್ನು ಭೇಟಿಯಾಗಲು ಬರುತ್ತಿದ್ದ ನವಾಜ್‌ನನ್ನು ಕಾರಿನಲ್ಲಿ ಬರುತ್ತಿದ್ದ ಸಂದರ್ಭದಲ್ಲೇ ದುಷ್ಕರ್ಮಿಗಳು ತಡೆದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಕಾರನ್ನು ತಡೆಯುವ ವೇಳೆ ನವಾಜ್ ವಾಹನದ ನಿಯಂತ್ರಣ ತಪ್ಪಿ ಕಾರು ಮಗುಚಿ ಬಿದ್ದಿದೆ.

ಕಾರು ಮಗುಚಿ ಬಿದ್ದ ಬಳಿಕ ನವಾಜ್ ಕಾರಿನಿಂದ ಇಳಿದು ಓಡಲು ಯತ್ನಿಸಿದಾಗ ಆರೋಪಿಗಳು ಆತನ ಮೇಲೆ ಮತ್ತೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ನವಾಜ್ ಬೆನ್ನಿನ ಭಾಗದಲ್ಲಿ ಗಂಭೀರ ಗಾಯಗಳ ಗುರುತುಗಳು ಪತ್ತೆಯಾಗಿದ್ದು, ತೀವ್ರ ರಕ್ತಸ್ರಾವ ಸಂಭವಿಸಿದೆ.

ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವು

ಗಂಭೀರವಾಗಿ ಗಾಯಗೊಂಡಿದ್ದ ನವಾಜ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ನವಾಜ್ ಮೃತಪಟ್ಟಿದ್ದಾನೆ. ಮೃತದೇಹವನ್ನು ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದ ಶವಾಗಾರಕ್ಕೆ ರವಾನೆ ಮಾಡಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗೋಣಿಕೊಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಬೆರಳಚ್ಚು ತಜ್ಞರ ತಂಡ ಹಾಗೂ ಶ್ವಾನ ದಳವನ್ನು ಕರೆಸಿ ಸಾಕ್ಷ್ಯ ಸಂಗ್ರಹ ಕಾರ್ಯ ಕೈಗೊಳ್ಳಲಾಗಿದೆ. ಪೊಲೀಸರು ಸ್ಥಳ ಮಹಜರ್ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆ ಕೊಡಗು ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಆರೋಪಿಗಳ ಪತ್ತೆಗಾಗಿ ಗೋಣಿಕೊಪ್ಪ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.