ಬೆಂಗಳೂರಿನಲ್ಲಿ, ಕೌಟುಂಬಿಕ ಕಲಹ, ಪ್ರೀತಿಯ ಕೊರತೆ ಮತ್ತು ಶೈಕ್ಷಣಿಕ ಹಿನ್ನಡೆಯಿಂದ ಮನನೊಂದು 17 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸಾವಿಗೂ ಮುನ್ನ ಬರೆದ ಡೆತ್ ನೋಟ್‌ನಲ್ಲಿ, ತನ್ನ ಸಾವಿಗೆ ತಾನೇ ಕಾರಣ ಮತ್ತು ತನಗೆ ಪೋಷಕರ ಪ್ರೀತಿ ಸಿಗುತ್ತಿಲ್ಲ ಎಂದು ಉಲ್ಲೇಖಿಸಿದ್ದಾಳೆ.

ಬೆಂಗಳೂರು: ತಂದೆ–ತಾಯಿಯ ನಡುವಿನ ಕೌಟುಂಬಿಕ ಕಲಹ, ಪ್ರೀತಿಯ ಕೊರತೆ ಹಾಗೂ ವಿದ್ಯಾಭ್ಯಾಸದಲ್ಲಿ ಎದುರಾದ ಹಿನ್ನಡೆಯಿಂದ ಮಾನಸಿಕವಾಗಿ ನೊಂದು 17 ವರ್ಷದ ಬಾಲಕಿ ಆತ್ಮ*ಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಹೊಸಕೆರೆಹಳ್ಳಿ ಬಳಿಯ ಮಂಜುನಾಥ್ ನಗರದಲ್ಲಿ ನಡೆದಿದೆ. ಲೇಖನಾ (17) ಎಂಬ ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಬಾಲಕಿಯಾಗಿದ್ದಾಳೆ.

ಲೇಖನಾ ನಿನ್ನೆ ಮಧ್ಯಾಹ್ನ ತಾಯಿ ಕೆಲಸಕ್ಕೆ ತೆರಳಿದ್ದ ವೇಳೆ ಮನೆಯೊಳಗೆ ನೇಣಿಗೆ ಶರಣಾಗಿದ್ದಾಳೆ. ಸಂಜೆ ಊಟಕ್ಕೆಂದು ತಾಯಿ ಮನೆಗೆ ಬಂದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಸ್ಥಳೀಯರ ನೆರವಿನಿಂದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಿ ಆಕೆ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಬಳಿಕ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.

ಪ್ರೀತಿಯ ಕೊರತೆ

ಮೃತ ಲೇಖನಾ ಇತ್ತೀಚೆಗೆ 10ನೇ ತರಗತಿಯಲ್ಲಿ ಅನುತ್ತೀರ್ಣಗೊಂಡಿದ್ದು, ಕಳೆದ ಕೆಲ ತಿಂಗಳಿಂದ ಮನೆಯಲ್ಲಿಯೇ ಇದ್ದಳು. ವಿದ್ಯಾಭ್ಯಾಸದಲ್ಲಿ ವಿಫಲತೆ ಆಕೆಯ ಮೇಲೆ ಮಾನಸಿಕ ಒತ್ತಡ ಹೆಚ್ಚಿಸಿದ್ದೆನ್ನಲಾಗಿದೆ. ಇದರ ಜೊತೆಗೆ ತಂದೆ–ತಾಯಿಯ ನಡುವಿನ ನಿರಂತರ ಜಗಳಗಳು ಹಾಗೂ ಕುಟುಂಬದ ಅಸ್ಥಿರತೆ ಆಕೆಯ ಮನಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದ್ದವು. ಪ್ರೀತಿ ಬಾಂದವ್ಯಕ್ಕೆ ಆ ಸಂಸಾರದಲ್ಲಿ ಅರ್ಥವೇ ಇರಲಿಲ್ಲ. ಅಪ್ಪ -ಅಮ್ಮನ ಪ್ರೀತಿ ಸಿಗದೆ ಕೊರಗಿನಲ್ಲಿ ಈ ನಿರ್ಧಾರ ಮಾಡಿದ್ದಾಳೆ ಎಂದು ತಿಳಿದುಬಂದಿದೆ.

ಲೇಖನಾಳ ತಂದೆ–ತಾಯಿ ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲದವರು. ಕೆಲಸದ ನಿಮಿತ್ತ ಅವರು ಬೆಂಗಳೂರಿಗೆ ಬಂದಿದ್ದರು. ಆದರೆ ಕಳೆದ ಎರಡು–ಮೂರು ವರ್ಷಗಳಿಂದ ದಂಪತಿಯ ನಡುವೆ ಹೊಂದಾಣಿಕೆ ಇಲ್ಲದೆ ನಿರಂತರ ಜಗಳಗಳು ನಡೆಯುತ್ತಿದ್ದು, ಪರಿಣಾಮವಾಗಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ತಂದೆ ಬೇರೆಡೆ ವಾಸವಾಗಿದ್ದರೆ, ಲೇಖನಾ ತಾಯಿ ಜೊತೆ ವಾಸವಾಗಿದ್ದಳು.

ತಾಯಿ ಖಾಸಗಿ ಸೂಪರ್ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದು, ತಾಯಿ–ಮಗಳು ಮೊದಲಿಗೆ ಶ್ರೀನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ, ಅಂದರೆ ಸುಮಾರು 15–20 ದಿನಗಳ ಹಿಂದಷ್ಟೇ ಹೊಸಕೆರೆಹಳ್ಳಿ ಮಂಜುನಾಥ್ ನಗರಕ್ಕೆ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದ್ದರು.

ಡೆತ್ ನೋಟಿನಲ್ಲಿ ಏನಿದೆ?

ಸಾವಿಗೂ ಮುನ್ನ ಲೇಖನಾ ಬರೆದಿದ್ದ ಡೆತ್ ನೋಟ್‌ನಲ್ಲಿ ನನಗೆ ತಂದೆ–ತಾಯಿಯ ಪ್ರೀತಿ ಸಿಗುತ್ತಿಲ್ಲ. ನಾನು ಒಂಟಿಯಾಗಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಎಂದು ಉಲ್ಲೇಖಿಸಿದ್ದಾಳೆ. ಈ ಸಾಲುಗಳು ಆಕೆಯೊಳಗಿನ ಒಂಟಿತನ ಮತ್ತು ಮಾನಸಿಕ ನೋವನ್ನು ಸ್ಪಷ್ಟವಾಗಿ ತೋರಿಸುತ್ತವೆ.

ಒಂದೆಡೆ ವಿದ್ಯಾಭ್ಯಾಸದಲ್ಲಿ ಉಂಟಾದ ಹಿನ್ನಡೆ, ಮತ್ತೊಂದೆಡೆ ತಂದೆ–ತಾಯಿಯ ನಡುವಿನ ಕೌಟುಂಬಿಕ ಕಲಹಗಳಿಂದ ಲೇಖನಾ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು ಎನ್ನಲಾಗಿದೆ. ಈ ಎಲ್ಲಾ ಕಾರಣಗಳು ಆಕೆಯ ದುಡುಕಿನ ನಿರ್ಧಾರಕ್ಕೆ ತಳ್ಳಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುತ್ತಿದ್ದಾರೆ.