ಎತ್ತ ನೋಡಿದರೂ ನೀರು, ಕುಡಿಯೋಕೆ ಮಾತ್ರ ಹನಿ ನೀರಿಲ್ಲ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಬಂದರೂ ಕುಡಿಯೋಕೆ ಮಾತ್ರ ನೀರಿಲ್ಲ. ಎಲ್ಲಿ ನೋಡಿದರೂ ನೀರು ತುಂಬಿದೆ. ಆದ್ರೆ ಕುಡಿಯೋಕೆ ಮಾತ್ರ ಹನಿ ನೀರಿಲ್ಲ. ಬೇಸಿಗೆಯ ಬರಕ್ಕಿಂತ ಪ್ರವಾಹದ ನಂತರ ಉಂಟಾಗಿರುವ ನೀರಿನ ಸಮಸ್ಯೆ ಗಂಭೀರವಾಗಿ ಕಾಡುತ್ತಿದೆ.
ಉತ್ತರ ಕನ್ನಡ(ಆ.17): ಹತ್ತು ದಿನಗಳ ಹಿಂದೆ ಜಲಪ್ರವಾಹದಲ್ಲಿ ಮುಳುಗಿದ್ದಕಾರವಾರದ ಪ್ರದೇಶಗಳಲ್ಲೀಗ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಬಾವಿಗಳೆಲ್ಲ ರಾಡಿ ನೀರಿನಿಂದ ತುಂಬಿವೆ. ಸುತ್ತಮುತ್ತ ಎಲ್ಲೆಡೆ ನೀರು ತುಂಬಿಕೊಂಡಿದ್ದರೂ ಬಳಕೆಗೆ ಯೋಗ್ಯವಾಗಿಲ್ಲ.
ನೀರಿನ ನಡುವೆ ಇದ್ದರೂ ಗುಟುಕು ನೀರಿಗಾಗಿ ಪರದಾಡಬೇಕಾದ ವಿಪರ್ಯಾಸ ಉತ್ತರ ಕನ್ನಡ ಜಿಲ್ಲೆಯಲ್ಲಿ ಉಂಟಾಗಿದೆ. ಬಾವಿಗಳೆಲ್ಲ ಕೊಳಚೆ ನೀರಿನಿಂದ ತುಂಬಿಕೊಂಡಿದೆ. ನೀರಿಗೆ ಬದಲಿ ಮೂಲಗಳಿಲ್ಲದೆ ನಿರಾಶ್ರಿತರು ಕಂಡಕಂಡಲ್ಲಿ ಹುಡುಕಾಡುತ್ತಿದ್ದಾರೆ. ಬೇಸಿಗೆಯ ಬರಕ್ಕಿಂತ ಪ್ರವಾಹದ ನಂತರ ಉಂಟಾಗಿರುವ ನೀರಿನ ಸಮಸ್ಯೆ ಗಂಭೀರವಾಗಿ ಕಾಡುತ್ತಿದೆ.
ಅದರಲ್ಲೂ ಗಂಗಾವಳಿ ನದಿ ದ್ವೀಪಗಳಾದ ಉತ್ತರ ಕನ್ನಡ ಜಿಲ್ಲೆಯ ಕೂರ್ವೆ, ಜೂಗ್, ಮೋಟನಕುರ್ವೆ, ಕಾಳಿ ನದಿಯ ದ್ವೀಪ ಖಾರ್ಗೆಜೂಗ, ಉಂಬಳಿಜೂಗ, ಹಳಗೆಜೂಗ, ಅಘನಾಶಿನಿ ದ್ವೀಪ ಐಗಳಕೂರ್ವೆ ಮತ್ತಿತರ ಕಡೆಗಳಲ್ಲಿ ನೀರಿನ ಸಮಸ್ಯೆ ತೀರ ಗಂಭೀರವಾಗಿದೆ.
ಅಜ್ಜನ ಅಂತ್ಯಕ್ರಿಯೆಗೆ ಹೋಗದೆ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಿದ ಡಿಸಿ!
ಅಂಕೋಲಾದ ಡೋಂಗ್ರಿ ಪಂಚಾಯಿತಿ ವ್ಯಾಪ್ತಿಯ ಕಲ್ಲೇಶ್ವರ, ಹೆಗ್ಗಾರ, ಕೋನಾಳ, ವಾಸರಕುದ್ರಗಿ, ಕಾರವಾರದ ಕದ್ರಾ, ಕುರ್ನಿಪೇಟ ಮತ್ತಿತರ ಊರುಗಳಲ್ಲಿ ನೀರಿಗಾಗಿ ಜನತೆ ಅಲೆದಾಡುತ್ತಿದ್ದಾರೆ.
ಬಾವಿಗಳಲ್ಲಿ ಕೊಳಚೆ ನೀರು:
ಬಾವಿಗಳಿಂದ 5-6ಅಡಿ ಎತ್ತರದಲ್ಲಿ ರಾಶಿ ಮಿಶ್ರಿತ ಕೆಂಪು ನೀರು ನದಿಗಳಲ್ಲಿ ಪ್ರವಹಿಸುತ್ತಿತ್ತು. ಆ ನೀರು ಬಾವಿಗಳಲ್ಲಿ ತುಂಬಿಕೊಂಡಿದೆ. ಹಲವು ಬಾವಿಗಳಲ್ಲಿ ಅರ್ಧದಷ್ಟುಹೂಳು ತುಂಬಿಕೊಂಡಿವೆ. ನದಿಗಳಲ್ಲೂ ಕೆಸರಿನಿಂದ ಕೂಡಿದ ನೀರು ಹರಿಯುತ್ತಿದೆ. ಇದರಿಂದ ನೀರಿಗಾಗಿ ಹಾಹಾಕಾರ ಉಂಟಾಗಿದೆ.