-ರುದ್ರಪ್ಪ ಆಸಂಗಿ

ವಿಜಯಪುರ[ಆ.14]: ತಾತನ ಅಂತ್ಯಕ್ರಿಯೆಗೂ ತೆರಳದೆ ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಅವರು ಪ್ರವಾಹ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ, ತಮ್ಮ ನೋವನ್ನು ನುಂಗಿಕೊಂಡು ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ.

ಶುಕ್ರವಾರ ರಾತ್ರಿ ಜಿಲ್ಲಾಧಿಕಾರಿ ಪಾಟೀಲರ ಅಜ್ಜ (ತಾಯಿಯ ತಂದೆ) ಎಂ.ಎಚ್‌. ನಾಯ್ಕರ್‌ ನಿಧನರಾಗಿದ್ದು, ಶನಿವಾರ ಅವರ ಅಂತ್ಯಕ್ರಿಯೆ ನೆರವೇರಿದೆ. ಆದರೆ, ತಾತನ ಅಂತ್ಯಕ್ರಿಯೆಗೆ ತೆರಳದ ಪಾಟೀಲರು, ಪ್ರವಾಹ ಪೀಡಿತರ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳ ಕರ್ತವ್ಯ ಪ್ರಜ್ಞೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ತಮ್ಮ ಎತ್ತಾಡಿದ ಅಜ್ಜನ ಅಂತಿಮ ದರ್ಶನ ಪಡೆಯಲಿಲ್ಲ ಎಂಬ ನೋವು ಪಾಟೀಲರನ್ನು ಬಹುವಾಗಿ ಕಾಡುತ್ತಿದೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

ಕಾರ್ಮಿಕರನ್ನು ಸಂರಕ್ಷಿಸಿದ್ದರು:

2009ರಲ್ಲಿ ಭಾರಿ ಮಳೆಯಿಂದ ಡೋಣಿ ನದಿಯಲ್ಲಿ ಪ್ರವಾಹ ಉಂಟಾಗಿ, ವಿಜಯಪುರ ತಾಲೂಕಿನ ಸಾರವಾಡ ಗ್ರಾಮದಲ್ಲಿ 6 ಕಾರ್ಮಿಕರು ಪ್ರವಾಹದಲ್ಲಿ ಸಿಲುಕಿದ್ದರು. ಈ ವೇಳೆ ವಿಜಯಪುರದಲ್ಲಿ ಉಪ ವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ವೈ.ಎಸ್‌.ಪಾಟೀಲರು ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ತಾವೇ ನೀರಿಗಿಳಿದು, ಕಾರ್ಮಿಕರನ್ನು ರಕ್ಷಿಸಿದ್ದರು. ಈ ಘಟನೆ ಜಿಲ್ಲೆಯ ಜನತೆಯ ಮನದಲ್ಲಿ ಇಂದಿಗೂ ಹಸಿರಾಗಿ ಉಳಿದಿದೆ.