ಮೈಸೂರು ದಸರಾ ವೇಳೆ ಮುಖ್ಯಮಂತ್ರಿಗಳ ಹಿಂದೆ ತೆರಳುತ್ತಿದ್ದ ಸಚಿವರನ್ನು ಎಸ್‌ಪಿ ರಿಷ್ಯಂತ್ ತಡೆದಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಕೆ.ಎಸ್. ಬಸವಂತಪ್ಪ, ಘಟನೆಯನ್ನು ಸಿಎಂ ಗಂಭೀರವಾಗಿ ಪರಿಗಣಿಸಿದ್ದು ತನಿಖೆಗೆ ಆದೇಶಿಸಿದ್ದಾರೆ ಎಂದಿದ್ದಾರೆ.

ದಾವಣಗೆರೆ (ಅ.22): ಮೈಸೂರು ದಸರಾ ವೇಳೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಿಂದೆ ತೆರಳುತ್ತಿದ್ದ ಸಚಿವರನ್ನು ಭದ್ರತಾ ಕಾರಣಗಳಿಗೆ ಎಸ್‌ಪಿ ರಿಷ್ಯಂತ್ ಅವರು ತಡೆದ ಬಗ್ಗೆ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದ್ದು, ಈ ಬಗ್ಗೆ ದಾವಣಗೆರೆಯಲ್ಲಿ ಸಚಿವ ಕೆಎಸ್ ಬಸವಂತಪ್ಪ ಮಹತ್ವದ ಹೇಳಿಕೆ ನೀಡಿದ್ದಾರೆ.

ನಮ್ಮನ್ನು ಯಾವ ಕಾರಣಕ್ಕೆ ತಡೆದಿದ್ದು?

ಮೈಸೂರು ದಸರಾ ವೇಳೆ ಎಸ್‌ಪಿ ರಿಷ್ಯಂತ್ ತಡೆದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ನಮ್ಮನ್ನು ತಡೆದ ವಿಚಾರ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ, ಅಲ್ಲದೆ ಈ ಬಗ್ಗೆ ತನಿಖೆ ಮಾಡಿ ವರದಿ ನೀಡುವಂತೆಯೂ ಸೂಚಿಸಿದ್ದಾರೆ ಎಂದು ತಿಳಿಸಿದರು.

ನಾವು ಸಚಿವರು, ನಮ್ಮನ್ನೇ ತಡೆಯುತ್ತಾರೆಂದರೆ ಏನರ್ಥ?

ಅಲ್ಲಿ ಮುಖ್ಯಮಂತ್ರಿಗಳು ಮಾತ್ರ ಪ್ರವೇಶಿಸಬೇಕು ಎಂಬ ಶಿಷ್ಟಾಚಾರವಿದ್ದಿದ್ದರೆ ನಮಗೆ ಮೊದಲೇ ಗೊತ್ತಾಗುತ್ತಿತ್ತು. ಶಿಷ್ಟಾಚಾರವಿದ್ದಾಗಲೂ ನಾವು ಏಕೆ ಸಿಎಂ ಹಿಂದೆ ಹೋಗುತ್ತಿದ್ದೆವು? ಆದರೆ ಆ ರೀತಿ ಯಾವುದೇ ಶಿಷ್ಟಾಚಾರ ಇರಲಿಲ್ಲ. ಯಾವ ಕಾರಣಕ್ಕಾಗಿ ನಮ್ಮನ್ನ ತಡೆದರು ಅನ್ನೋದು ಗೊತ್ತಾಗಬೇಕು. ಈ ಬಗ್ಗೆ ಪೊಲೀಸ್ ಅಧಿಕಾರಿ ವಿರುದ್ಧ ತನಿಖೆ ಆಗಬೇಕು. ನಾವು ಸರ್ಕಾರದಲ್ಲಿನ ಸಚಿವರು. ನಾವು ಸಚಿವರು ಎಂದು ಗೊತ್ತಿದ್ದರೂ ನಮ್ಮ ತಡೆಯುತ್ತಾರೆಂದರೆ ಏನರ್ಥ? ಇದು ಸರಿಯಾದ ಕ್ರಮ ಅಲ್ಲ. ಈ ರೀತಿ ಅಸಭ್ಯವಾಗಿ ವರ್ತಿಸುವ ಅಧಿಕಾರಿಗಳ ಮೇಲೆ ಮುಂದಿನ ದಿನಗಳಲ್ಲಿ ಕ್ರಮ ಆಗಲಿದೆ ಎಂದರು.

ಸದ್ಯ ಘಟನೆ ಸಂಬಂಧ ಸಿಎಂ ಗಮನಕ್ಕೆ ಬರುತ್ತಿದ್ದಂತೆ ತನಿಖೆಗೆ ಸೂಚಿಸಿದ್ದಾರೆ. ವರದಿ ಬಂದ ಬಳಿಕ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಆಗುತ್ತೆ ಎಂದರು.

ಕಾರಿನಲ್ಲಿ ಮೈಸೂರು ಅರಮನೆ ಬಳಿ ಬಂದ ಸಿಎಂ ಈ ವೇಳೆ ಸಿಎಂ ಜೊತೆಯಲ್ಲೇ ಸಚಿವ ಶಿವರಾಜ ತಂಗಡಗಿ ಸೇರಿ ಇತರೆ ಮುಖಂಡರು ಬಂದಿದ್ದರು. ಸಿಎಂ ಕಾರಿನಿಂದ ಇಳಿದು ಒಳಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿ ಪೊಲೀಸರು ಬಿಗಿಭದ್ರತೆ ಕೈಗೊಂಡಿದ್ದರು. ಈ ವೇಳೆ ಒಳಗೆ ಸಿಎಂ ಹೊರತುಪಡಿಸಿ ಸಚಿವ ತಂಗಡಗಿಯನ್ನ ತಡೆದು ನಿಲ್ಲಿಸಿದರು. ಇದರಿಂದ ತುಸು ಮುಜುಗರ ಅನುಭವಿಸಿದ ಸಚಿವ ತಂಗಡಗಿ ಪೊಲೀಸ್ ಅಧಿಕಾರಿಯ ವಿರುದ್ಧ ಗರಂ ಆದ ಘಟನೆಯೂ ವಿಡಿಯೋದಲ್ಲಿ ದಾಖಲಾಗಿದೆ.