ಹೊಸ ವರ್ಷದ ದಿನದಂದು ಧಾರವಾಡದ ಯುವಕನೊಬ್ಬ ಸ್ನೇಹಿತರೊಂದಿಗೆ ಕಲಕೇರಿ ವೀವ್ ಪಾಯಿಂಟ್‌ಗೆ ಫೋಟೋಶೂಟ್‌ಗೆ ತೆರಳಿದ್ದ. ಹಿಂತಿರುಗುವಾಗ ಬೈಕ್ ಸ್ಕಿಡ್ ಆಗಿ ಸಂಭವಿಸಿದ ಅಪಘಾತದಲ್ಲಿ ಆತ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದಾನೆ.
ಧಾರವಾಡ (ಜ.31): ಹೊಸ ವರ್ಷದ ಸಂಭ್ರಮಾಚರಣೆಯು ಧಾರವಾಡದ ಒಂದು ಕುಟುಂಬದಲ್ಲಿ ನೀರವ ಮೌನ ತಂದಿದೆ. ಪೋಟೋ ಶೂಟ್ ಮಾಡಲು ಹಾಗೂ ಪ್ರಕೃತಿಯ ಸೌಂದರ್ಯ ಸವಿಯಲು ಹೋಗಿದ್ದ ಯುವಕನೊಬ್ಬ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯ ವಿವರ
ಧಾರವಾಡದ ಜನ್ನತ್ ನಗರದ ನಿವಾಸಿ ಮನೀಶ್ ಗುಡಿಸಲಮನಿ (22) ಮೃತಪಟ್ಟ ದುರ್ದೈವಿ. ಹೊಸ ವರ್ಷದ ಮೊದಲ ದಿನವಾದ ಇಂದು (ಜನೆವರಿ 1) ಮನೀಶ್ ತನ್ನ ನಾಲ್ವರು ಸ್ನೇಹಿತರೊಂದಿಗೆ ಎರಡು ಬೈಕ್‌ಗಳಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾದ ಕಲಕೇರಿ ಗ್ರಾಮದ ಬಳಿಯ 'ವೀವ್ ಪಾಯಿಂಟ್' ವೀಕ್ಷಣೆಗೆ ತೆರಳಿದ್ದರು. ಬೆಟ್ಟದ ಸಾಲುಗಳು ಮತ್ತು ಪ್ರಕೃತಿಯ ಸೌಂದರ್ಯದ ನಡುವೆ ಫೋಟೋ ಶೂಟ್ ಮುಗಿಸಿಕೊಂಡು ಮರಳಿ ಬರುವಾಗ ಈ ಅವಘಡ ಸಂಭವಿಸಿದೆ.
ಬೈಕ್ ಸ್ಕಿಡ್ ಆಗಿ ಸಂಭವಿಸಿದ ದುರಂತ
ಕಲಕೇರಿ ವೀವ್ ಪಾಯಿಂಟ್‌ನಿಂದ ಮರಳಿ ಧಾರವಾಡಕ್ಕೆ ಬರುತ್ತಿದ್ದ ಹಾದಿಯಲ್ಲಿ ಬೈಕ್ ಹಠಾತ್ ಸ್ಕಿಡ್ ಆಗಿದೆ. ಈ ವೇಳೆ ಮನೀಶ್ ಬೈಕ್‌ನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್‌ನಲ್ಲಿದ್ದ ಇನ್ನೊಬ್ಬ ಯುವಕನಿಗೂ ತೀವ್ರ ಗಾಯಗಳಾಗಿದ್ದು, ಆತನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡ ಯುವಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಭೇಟಿ
ವಿಷಯ ತಿಳಿಯುತ್ತಿದ್ದಂತೆಯೇ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಹೊಸ ವರ್ಷದ ದಿನವೇ ಮಗನನ್ನು ಕಳೆದುಕೊಂಡ ಜನ್ನತ್ ನಗರದ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಬೈಕ್ ಚಲಾಯಿಸುವಾಗ ಜಾಗರೂಕತೆ ವಹಿಸದಿದ್ದರೆ ಇಂತಹ ಸಂಭ್ರಮದ ಕ್ಷಣಗಳು ಹೇಗೆ ಶೋಕವಾಗಿ ಬದಲಾಗುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.


