ಹೊಸ ವರ್ಷದ ಸಂಭ್ರಮದ ನಡುವೆ, ವಿಜಯನಗರ ಮತ್ತು ಹುಬ್ಬಳ್ಳಿಯಲ್ಲಿ ಕೌಟುಂಬಿಕ ಕಲಹದಿಂದ ಇಬ್ಬರು ಗೃಹಿಣಿಯರು ತಮ್ಮ ಪತಿಯರಿಂದಲೇ ಹತ್ಯೆಯಾಗಿದ್ದಾರೆ. ವಿಜಯನಗರದಲ್ಲಿ ಜಾನ್ಸಿ ಎಂಬುವವರನ್ನು ಪತಿ ಸೆಲ್ವಕುಮಾರ್ ಮತ್ತು ಹುಬ್ಬಳ್ಳಿಯಲ್ಲಿ ಅಂಜುಮ್ ಎಂಬುವವರನ್ನು ಪತಿ ಮೆಹಬೂಬ್ ಕೊಲೆ ಮಾಡಿದ್ದಾರೆ.

ವಿಜಯನಗರ/ಹುಬ್ಬಳ್ಳಿ (ಜ.01): 2026ರ ಹೊಸ ವರ್ಷದ ಸಂಭ್ರಮದ ನಡುವೆಯೇ ರಾಜ್ಯದ ವಿಜಯನಗರ ಮತ್ತು ಹುಬ್ಬಳ್ಳಿಯಲ್ಲಿ ಕೌಟುಂಬಿಕ ಕಲಹಕ್ಕೆ ಇಬ್ಬರು ಗೃಹಿಣಿಯರು ಬಲಿಯಾಗಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಪತ್ನಿಯರನ್ನು ಪತಿಯರೇ ಕೊಲೆ ಮಾಡಿರುವುದು ಸಾರ್ವಜನಿಕರಲ್ಲಿ ಆತಂಕ ಮತ್ತು ಆಕ್ರೋಶ ಮೂಡಿಸಿದೆ.

ಘಟನೆ 1-ಗಂಡನ ಕ್ರೌರ್ಯಕ್ಕೆ ಜಾನ್ಸಿ ಬಲಿ

ವಿಜಯನಗರದಲ್ಲಿ ಪತ್ನಿಯ ಕೊಲೆ, ಆರೋಪಿ ಬಂಧನ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ 76 ವೆಂಕಟಾಪುರ ಕ್ಯಾಂಪ್ ಗ್ರಾಮದಲ್ಲಿ ಬುಧವಾರ ರಾತ್ರಿ ಭೀಕರ ಕೊಲೆಯೊಂದು ಸಂಭವಿಸಿದೆ. ಹೊಸಪೇಟೆಯ ಅಮರಾವತಿ ನಿವಾಸಿ ಸೆಲ್ವಕುಮಾರ್ (39) ಎಂಬಾತ ತನ್ನ ಪತ್ನಿ ಜಾನ್ಸಿ ಎಂಬಾಕೆಯನ್ನು ಗಲಾಟೆಯ ನಡುವೆ ಹತ್ಯೆ ಮಾಡಿದ್ದಾನೆ. ಪತಿ-ಪತ್ನಿ ನಡುವೆ ನಡೆಯುತ್ತಿದ್ದ ಸತತ ಕಲಹವೇ ಈ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡ ಕಮಲಾಪುರ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ, ತಲೆಮರೆಸಿಕೊಂಡಿದ್ದ ಆರೋಪಿ ಸೆಲ್ವಕುಮಾರ್‌ನನ್ನು ಇಂದು (ಗುರುವಾರ) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ 2- ಅಂಜುಮ್ ಕತ್ತು ಹಿಸುಕಿದ ಗಂಡ

ಹುಬ್ಬಳ್ಳಿಯಲ್ಲಿ ಹೊಸ ವರ್ಷದಂದೇ ಹೆಂಡತಿಯ ಕತ್ತು ಹಿಸುಕಿ ಕೊಂದ ಪತಿ ವಾಣಿಜ್ಯ ನಗರಿ ಹುಬ್ಬಳ್ಳಿಯ ಆನಂದ ನಗರದಲ್ಲಿ ಹೊಸ ವರ್ಷದ ಮೊದಲ ದಿನವೇ ಹೆಣ ಬಿದ್ದಿದೆ. ಅಂಜುಮ್ ಎಂಬುವವರನ್ನು ಆಕೆಯ ಪತಿ ಮೆಹಬೂಬ್ ಫಲಿಬಂದ್ ಎಂಬಾತ ಕತ್ತು ಹಿಸುಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಮನೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ಹೋಗಿ, ಮೆಹಬೂಬ್ ತನ್ನ ಪತ್ನಿಯ ಪ್ರಾಣ ತೆಗೆದಿದ್ದಾನೆ. ಸ್ಥಳಕ್ಕೆ ಹಳೆ ಹುಬ್ಬಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಅಂಜುಮ್ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಪರಾರಿಯಾಗಲೆತ್ನಿಸಿದ ಗಂಡನ ಬಂಧನ

ಪತ್ನಿಯನ್ನು ಹತ್ಯೆಗೈದು ಪತಿ ಮೆಹಬೂಬ್ ಫಲಿಬಂದ್ ಎಸ್ಕೇಪ್ ಆಗಲು ಯತ್ನಿಸಿದ್ದು, ಹಳೆ ಹುಬ್ಬಳ್ಳಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮೊದಲ‌ ಪತಿಯನ್ನ ಬಿಟ್ಟು ಎರಡನೇ ಮದುವೆಯಾಗಿದ್ದ ಅಂಜುಮಾ. ಇದೀಗ ಅಂಜುಮಾಳ ಎರಡನೇ ಪತಿಯಿಂದ ನಡೆದ ಹತ್ಯೆಯಾಗಿದ್ದಾಳೆ. ಅಂಜುಮಾಗೆ 3 ಮಕ್ಕಳಿದ್ದು, ಮೊದಲ ಪತಿಯಿಂದ ಎರಡು ಹಾಗೂ ಎರಡನೇ ಪತ್ನಿಯಿಂದ ಒಂದು ಮಗುವಿದೆ. ಆದರೆ, ಮೆಹಬೂಬ್ ಮದುವೆಯಾದ ಕೆಲವು ದಿನಗಳ ನಂತರ ಮನೆಯಲ್ಲಿ ಪತಿ- ಪತ್ನಿ ಮಧ್ಯೆ ನಿರಂತರ ಕಲಹ ನಡೆಯುತ್ತಿತ್ತು. ಇಂದು ಬೆಳಗ್ಗೆ ಕತ್ತು ಹಿಸುಕಿ ಕೊಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದನು. ಸ್ಥಳೀಯರ ಸಹಾಯದಿಂದ ಹಳೆ ಹುಬ್ಬಳ್ಳಿ ಪೊಲೀಸರು ಆರೋಪಿಯನ್ನು ಹೆಡೆಮುರಿಕಟ್ಟಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ ನಿಡಿದ್ದಾರೆ.

ಈ ಎರಡೂ ಪ್ರಕರಣಗಳಲ್ಲಿ ಕೌಟುಂಬಿಕ ಕಲಹ ಮತ್ತು ಕೋಪದ ಭರದಲ್ಲಿ ಸಂಭವಿಸಿದ ಸಾವುಗಳು ಸಂಬಂಧಗಳ ನಡುವಿನ ಬಿರುಕನ್ನು ಎತ್ತಿ ತೋರಿಸುತ್ತಿವೆ. ಪೊಲೀಸರು ಎರಡೂ ಕಡೆ ಪ್ರಕರಣಗಳನ್ನು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.