ಧಾರವಾಡದಲ್ಲಿ 100ಕ್ಕೂ ಹೆಚ್ಚು ಗೋವುಗಳನ್ನು ಹತ್ಯೆ ಮಾಡಿ ಅಕ್ರಮವಾಗಿ ಮಾಂಸ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ, ಶಿವಮೊಗ್ಗದ ರಿಪ್ಪನ್‌ಪೇಟೆಯಲ್ಲಿ ಗೋವುಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಧಾರವಾಡ/ಶಿವಮೊಗ್ಗ (ಜು.19): ಸುಮಾರು 100ಕ್ಕೂ ಹೆಚ್ಚು ಗೋವುಗಳನ್ನು ಹತ್ಯೆ ಮಾಡಿ ಅವುಗಳ ಮಾಂಸವನ್ನು ಅಕ್ರಮವಾಗಿ ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ಪ್ರಕರಣವನ್ನು ಉಪ ನಗರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಕಾರ್ಯಕರ್ತರ ಸಹಾಯದಿಂದ ಉಪ ನಗರ ಪೊಲೀಸರು ಪ್ರಕರಣ ಬೆಳಕಿಗೆ ತಂದು ದೂರು ದಾಖಲಿಸಿದ್ದಾರೆ.

ಬೆಳಗಾವಿಯ ಆಟೋ ನಗರದಲ್ಲಿ ಅಮೂಲ್ ಫ್ಯಾಕ್ಟರಿಯಲ್ಲಿ ಈ ಹತ್ಯೆ ಮಾಡಿ ಮಾಂಸವನ್ನು ಬೆಂಗಳೂರಿನ ನೀಲಸಂದ್ರಕ್ಕೆ ಕಳುಹಿಸಲಾಗುತ್ತಿತ್ತು ಎಂಬ ಮಾಹಿತಿ ಇದೆ. ಕೆಲಗೇರಿ ಬೈಪಾಸ್‌ ಬಳಿ ಲಾರಿಯನ್ನು ನಿಲ್ಲಿಸಿ ಪರಿಶೀಲಿಸಿದಾಗ ಈ ವಿಷಯ ಗೊತ್ತಾಗಿದೆ. ಮಾಂಸ ಸಾಗಿಸುತ್ತಿದ್ದ ಲಾರಿ ಚಾಲಕ ಹಾಗೂ ಕ್ಲೀನರ್‌ನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಎಂದು ಉಪ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಜಾನುವಾರು ಕಳ್ಳತನದ ಆರೋಪಿಗಳ ಬಂಧನ

ರಿಪ್ಪನ್‌ಪೇಟೆ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೆಲವು ದಿನಗಳಿಂದ ಗೋವುಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು' ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಕೃತ್ಯಕ್ಕೆ ಬಳಸಿದ್ದ. ಇನ್ನೋವಾ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗ ಮೂಲದ ಸುಹೇಲ್, ಮಹಮ್ಮದ್ ಇಸ್ರಾರ್ ಖಾನ್ ಬಂಧಿತರು. ಜು.3ರಂದು ಸಾಗರ ರಸ್ತೆಯ ಪಕ್ಕದಲ್ಲಿ ಮಲಗಿದ್ದ ರಾಸುವನ್ನು ಬೆಳಗಿನ ಜಾವ ವಾಹನವೊಂದರಲ್ಲಿ ಹೊತ್ತೊಯ್ದಿದ್ದ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಹೊಸನಗರ ವೃತ್ತ ನಿರೀಕ್ಷಕ ಗೌಡಪ್ಪ ಗೌಡ‌ರ್, ಪಿಎಸ್‌ಐ ರಾಜುರೆಡ್ಡಿ, ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಗೋ ಕಳ್ಳತನ ಮಾಡುತ್ತಿದ್ದವರನ್ನು ಬಂಧಿಸಲಾಗಿದೆ