Asianet Suvarna News Asianet Suvarna News

ಧಾರವಾಡದಲ್ಲಿ ಯುವ ಕಲರವ: ಮದುವಣಗಿತ್ತಿಯಂತೆ ಸಿಂಗಾರಗೊಂಡ ವಿದ್ಯಾಕಾಶಿ..!

ಜ.12ರಿಂದ ಐದು ದಿನಗಳ ಕಾಲ ನಡೆಯಲಿದೆ ರಾಷ್ಟ್ರೀಯ ಯುವಜನೋತ್ಸವ, ಪ್ರಧಾನಿ ಮೋದಿ ಅವರಿಂದ ಉದ್ಘಾಟನೆ, ನಟ ಅಕ್ಷಯ್‌ ಕುಮಾರ್‌ ಆಕರ್ಷಣೆ. 

Dharwad Prepared to National Youth Festival grg
Author
First Published Jan 11, 2023, 11:34 AM IST

ಧಾರವಾಡ(ಜ.11): ವಿದ್ಯಾಕಾಶಿ ಧಾರವಾಡದಲ್ಲಿ ಜ.12ರಿಂದ ಐದು ದಿನಗಳ ಕಾಲ ರಾಷ್ಟ್ರೀಯ ಯುವಜನೋತ್ಸವದ ಸಂಭ್ರಮ. ದೇಶದ ಮೂಲೆ ಮೂಲೆಗಳಿಂದ ಆಗಮಿಸುವ ಸಾವಿರಾರು ಯುವಪ್ರತಿಭೆಗಳು ಧಾರವಾಡದತ್ತ ಆಗಮಿಸುತ್ತಿದ್ದಾರೆ. ಈ ಯುವಜನೋತ್ಸವದ ಉದ್ಘಾಟನೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಧಾರವಾಡಕ್ಕೆ ಆಗಮಿಸಲಿದ್ದು, ಯುವಕರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ. ಈ ಯುವ ಉತ್ಸವಕ್ಕಾಗಿ ಈಗಾಗಲೇ ಧಾರವಾಡ ಸರ್ವರೀತಿಯಲ್ಲೂ ಸಿದ್ಧಗೊಂಡಿದ್ದು, ಯುವಜನರಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ.

ಏನಿದು ಯುವಜನೋತ್ಸವ?

ಸ್ವಾಮಿ ವಿವೇಕಾನಂದ ಅವರೆ ಯುವಕರ ಪಾಲಿನ ಸ್ಪೂರ್ತಿ. ಹೀಗಾಗಿ ಅವರ ಜನ್ಮದಿನವಾದ ಜ.12 ಅನ್ನು ಕೇಂದ್ರ ಸರ್ಕಾರ 1985ರಿಂದ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಿಕೊಂಡು ಬಂದಿದೆ. ಇದೇ ದಿನದಂದು ಕೇಂದ್ರ ಯುವಜನಸೇವೆ ಹಾಗೂ ಕ್ರೀಡಾ ಸಚಿವಾಲಯದಿಂದ ಪ್ರತಿವರ್ಷ ಒಂದೊಂದು ರಾಜ್ಯದಲ್ಲಿ ರಾಷ್ಟ್ರೀಯ ಯುವಜನೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಈ ಮೂಲಕ ದೇಶದ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ, ಅವರಲ್ಲಿರುವ ಸಾಮರ್ಥ್ಯಕ್ಕೆ ವೇದಿಕೆ ಒದಗಿಸುವ ಕೆಲಸ ಮಾಡಲಾಗುತ್ತಿದೆ. 2014ರ ವರೆಗೆ ಈ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗಿತ್ತು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದಾಗಿನಿಂದ ಪ್ರಧಾನಿ ಮೋದಿ ಅವರ ಮುತುವರ್ಜಿಯಿಂದಾಗಿ ಪ್ರತಿ ವರ್ಷ ಜ.12ರಿಂದ ಐದು ದಿನಗಳ ಕಾಲ ಹಬ್ಬದ ರೀತಿಯಲ್ಲಿ ಈ ಯುವಜನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. 2022ರಲ್ಲಿ 25ನೇ ಯುವಜನೋತ್ಸವ ಪುದುಚೇರಿಯಲ್ಲಿ ನಡೆದಿತ್ತು. ಆದರೆ ಆ ಸಮಯದಲ್ಲಿ ಕೋವಿಡ್‌ ಆತಂಕದಿಂದಾಗಿ ಈ ಉತ್ಸವವನ್ನು ಎರಡು ದಿನಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಆಗಲೂ ಯುವಜನೋತ್ಸವಕ್ಕೆ ಪ್ರಧಾನಿ ಮೋದಿ ಅವರೇ ಚಾಲನೆ ನೀಡಿದ್ದರು. ಈ ಬಾರಿ ಕರ್ನಾಟಕದ ಧಾರವಾಡದಲ್ಲಿ ಜ.12ರಿಂದ 16ರ ವರೆಗೆ ಐದು ದಿನಗಳ ಕಾಲ ಕಾರ್ಯಕ್ರಮ ನಡೆಯುತ್ತಿದೆ.

ಹುಬ್ಬಳ್ಳಿಗೆ ನಾಳೆ ಪ್ರಧಾನಿ ಮೋದಿ: ಯುವಜನ ಉತ್ಸವಕ್ಕೆ ಚಾಲನೆ

10 ವರ್ಷದ ಬಳಿಕ

ಈ ಹಿಂದೆ ಕರ್ನಾಟಕದಲ್ಲಿ ರಾಷ್ಟ್ರೀಯ ಯುವಜನೋತ್ಸವ ನಡೆದಿದ್ದು 2012ರಲ್ಲಿ. ಮಂಗಳೂರಲ್ಲಿ ಅಂದು ಒಂದು ದಿನ ಯುವಜನೋತ್ಸವ ಆಚರಿಸಲಾಗಿತ್ತು. ಆ ಬಳಿಕ ಇದೀಗ ಕರ್ನಾಟಕಕ್ಕೆ 10 ವರ್ಷಗಳ ಬಳಿಕ ಮತ್ತೊಂದು ಬಾರಿ ಯುವಜನೋತ್ಸವದ ಆತಿಥ್ಯ ಒದಗಿಬಂದಿದೆ.

ಧಾರವಾಡದಲ್ಲೇ ಯಾಕೆ?

ಯುವಜನೋತ್ಸವದ ಆತಿಥ್ಯಕ್ಕಾಗಿ ದೇಶದ ವಿವಿಧ ರಾಜ್ಯಗಳು ಬೇಡಿಕೆ ಇಟ್ಟಿದ್ದವು. ಆದರೆ, ಧಾರವಾಡದ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ಪ್ರಯತ್ನದ ಫಲವಾಗಿ ಈ ಬಾರಿ ಕರ್ನಾಟಕದ ಧಾರವಾಡಕ್ಕೆ ಯುವಜನೋತ್ಸವದ ಆತಿಥ್ಯ ಒದಗಿಬಂದಿದೆ. ಒಟ್ಟು .20 ಕೋಟಿ ವೆಚ್ಚದಲ್ಲಿ ಈ ಉತ್ಸವ ನಡೆಸಲಾಗುತ್ತದೆ. ಧಾರವಾಡ ಸಾಂಸ್ಕೃತಿಕ ಹಾಗೂ ಶೈಕ್ಷಣಿಕವಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವುದು ಸಹ ಯುವಜನೋತ್ಸವದ ಆತಿಥ್ಯ ಸಿಗಲು ಪ್ರಮುಖ ಕಾರಣ ಎನ್ನಲಾಗಿದೆ.

ಈ ಉತ್ಸವದ ವಿಶೇಷತೆಗಳೇನು?

ಈ ಬಾರಿ ಧಾರವಾಡದಲ್ಲಿ ನಡೆಯುತ್ತಿರುವ ಯುವ ಯುವಜನೋತ್ಸವ ಸಂಪೂರ್ಣ ಪರಿಸರ ಸ್ನೇಹಿಯಾಗಿರಲಿದೆ. ತ್ಯಾಜ್ಯ ಅಥವಾ ಮಾಲಿನ್ಯಕಾರಕ ವಸ್ತುಗಳ ಬದಲು ಬಹುತೇಕ ಮರುಬಳಕೆಯ ವಸ್ತುಗಳನ್ನು ಬಳಕೆ ಮತ್ತು ಸಮೂಹ ಸಾರಿಗೆಗೆ ಆದ್ಯತೆ ನೀಡುತ್ತಿರುವುದು ವಿಶೇಷ. ಈ ಯುವಜನೋತ್ಸವದಲ್ಲಿ ಬಳಕೆ ಮಾಡುತ್ತಿರುವ ಲೇಖನ ಸಾಮಗ್ರಿ ಕೂಡ ಮರು ಬಳಕೆ ವಸ್ತುಗಳಿಂದ ಸಿದ್ಧಪಡಿಸಲಾಗಿದೆ.

ಧಾರವಾಡ ಪೇಡ, ರಾಷ್ಟ್ರಧ್ವಜದ ಕಿಟ್‌!

ಯುವಜನೋತ್ಸವದಲ್ಲಿ ಭಾಗವಹಿಸುತ್ತಿರುವ ಯುವ ಪ್ರತಿನಿಧಿಗಳಿಗೆ ಧಾರವಾಡ ಜಿಲ್ಲಾಡಳಿತದಿಂದ ವಿಶೇಷ ಕಿಟ್‌ವೊಂದನ್ನು ನೀಡಲಾಗುತ್ತಿದೆ. ಗರಗ ಮತ್ತು ಬೆಂಗೇರಿ ಖಾದಿ ಕೇಂದ್ರಗಳಲ್ಲಿ ಸಿದ್ಧವಾದ ಧ್ವಜ, ಐಡಿ ಕಾರ್ಡ್‌, ಯೋಗಾ ಮ್ಯಾಟ್‌, ಟ್ರ್ಯಾಕ್‌ ಸ್ಯೂಟ್‌, ಇವೆಂಟ್‌ ಮೆನ್ಯೂ ಈ ಕಿಟ್‌ನಲ್ಲಿರುತ್ತದೆ. ಇದರ ಜತೆಗೆ ದಿನಬಳಕೆಯ ವಸ್ತುಗಳು, ರಾಜ್ಯದ ಪ್ರವಾಸಿ ತಾಣಗಳ ಮಾಹಿತಿ, ಯೂಥ್‌ ಆಫ್‌ ಇಂಡಿಯಾ ಕೃತಿ ಹಾಗೂ ಧಾರವಾಡದ ವಿಶೇಷವಾದ ಪೇಡಾದ ಪ್ಯಾಕೆಟ್‌ವೊಂದು ಈ ಕಿಟ್‌ನಲ್ಲಿರಲಿದೆ.

ಸಿರಿಧಾನ್ಯಕ್ಕೆ ಆದ್ಯತೆ

ಈ ಬಾರಿಯ ಯುವಜನೋತ್ಸವದಲ್ಲಿ ಸಿರಿಧಾನ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವುದು ಮತ್ತೊಂದು ವಿಶೇಷ. ಯುವ ಜನಾಂಗದ ಆರೋಗ್ಯ ರಕ್ಷಣೆಗಾಗಿ ಸಿರಿ ಧಾನ್ಯಗಳ ಮಹತ್ವದ ಕುರಿತು ಧಾರವಾಡದ ಉತ್ಸವದಲ್ಲಿ ಮಾಹಿತಿ ನೀಡಲಾಗುತ್ತದೆ. ಅಲ್ಲದೆ, ಸಿರಿಧಾನ್ಯಗಳ ಮೇಳವನ್ನೂ ಆಯೋಜಿಸಲಾಗಿದ್ದು, 20 ಸಿರಿಧಾನ್ಯಗಳ ಪ್ರದರ್ಶನ ಹಾಗೂ ಮಾರಾಟಕ್ಕೂ ಅವಕಾಶ ನೀಡಲಾಗುತಿತದೆ. ವಿವಿಧ ರಾಜ್ಯಗಳಿಂದ ಆಗಮಿಸುತ್ತಿರುವ ಪ್ರತಿನಿಧಿಗಳು, ಗಣ್ಯರಿಗೆ ಸಿರಿ ಧಾನ್ಯಗಳ ವಿಶೇಷತೆ ಪರಿಚಯಿಸಲಾಗುತ್ತದೆ.

ಏನೇನು ಕಾರ್ಯಕ್ರಮಗಳು?:

ಜ.12ರಂದು ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಪ್ರಧಾನ ಮಂತ್ರಿ ಯುವಜನೋತ್ಸವ ಉದ್ಘಾಟಿಸಲಿದ್ದಾರೆ. ಧಾರವಾಡದ ವಿವಿಧ ವೇದಿಕೆಗಳಲ್ಲಿ ಜ.12ರಿಂದ 16ರ ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧೆ, ಯುವ ಸಮೂಹಕ್ಕೆ ಕಾರ್ಯಾಗಾರ, ಆಹಾರ ಮೇಳ, ಸ್ಕೂಬಾ ಡೈವಿಂಗ್‌ ತರಬೇತಿ, ವೈಮಾನಿಕ ತರಬೇತಿ, ಜಲಕ್ರೀಡೆಯಂಥ ಹತ್ತು ಹಲವು ಕ್ರೀಡೆ, ಸ್ಪರ್ಧೆ ಮತ್ತಿತರ ಕಾರ್ಯಕ್ರಮಗಳಿವೆ.

ಮಹದಾಯಿ ಬಗ್ಗೆ ಕೇಂದ್ರದ ಪ್ರಶ್ನೆಗೆ ಉತ್ತರ ನೀಡ್ತೇವೆ: ಸಿಎಂ ಬೊಮ್ಮಾಯಿ

ನಟ ಅಕ್ಷಯ್‌ ಕುಮಾರ್‌ ಆಕರ್ಷಣೆ

ಈ ಯುವಜನೋತ್ಸವದಲ್ಲಿ ದೇಶದ ಎಂಟು ಕೇಂದ್ರಾಡಳಿತ ಪ್ರದೇಶ ಹಾಗೂ 28 ರಾಜ್ಯಗಳಿಂದ 7500 ಯುವ ಕಲಾವಿದರು ಭಾಗವಹಿಸುತ್ತಿದ್ದಾರೆ. ಈಗಾಗಲೇ ವಿವಿಧ ರಾಜ್ಯಗಳ ತಂಡಗಳು ಧಾರವಾಡಕ್ಕೆ ಆಗಮಿಸಿವೆ. ಪ್ರಧಾನಿ ಮೋದಿ ಸೇರಿ ಯುವಜನೋತ್ಸವಕ್ಕೆ ಕೇಂದ್ರ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಅನುರಾಗ್‌ ಠಾಕೂರ್‌, ಖ್ಯಾತ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌, ಗಾಯಕ ಸೋನು ನಿಗಮ್‌, ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಕ್ರೀಡಾ ಸಚಿವ ನಾರಾಯಣಗೌಡ ಹಾಗೂ ಇತರರು ಭಾಗವಹಿಸಲಿದ್ದಾರೆ.

ಸಿಂಗಾರಗೊಂಡಿರುವ ವಿದ್ಯಾಕಾಶಿ

ಯುವಜನೋತ್ಸವ ಹಿನ್ನೆಲೆಯಲ್ಲಿ ವಿದ್ಯಾಕಾಶಿ ಧಾರವಾಡ ನಗರ ಸಂಪೂರ್ಣವಾಗಿ ಸಜ್ಜಾಗಿ ನಿಂತಿದೆ. ನಗರದ ಪ್ರಮುಖ ರಸ್ತೆಗಳನ್ನು ದೇಶದ ಮೂಲೆ ಮೂಲೆಗಳಿಂದ ಆಗಮಿಸುವ ಯುವಕರ ಸ್ವಾಗತಕ್ಕಾಗಿ ಸಿಂಗರಿಸಲಾಗಿದೆ. ಒಂದು ವಾರ ಇಡೀ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆದಿದೆ. ನಗರದ ಪ್ರಮುಖ ರಸ್ತೆಗಳನ್ನು ಈಗಾಗಲೇ ಸ್ವಚ್ಛಗೊಳಿಸಲಾಗಿದ್ದು, ಕೆರೆ, ಉದ್ಯಾನವನ, ಸಾಂಸ್ಕೃತಿಕ ಕೇಂದ್ರಗಳನ್ನು ಸಿಂಗರಿಸಲಾಗಿದೆ. ಲೈಟಿಂಗ್‌ ವ್ಯವಸ್ಥೆಯನ್ನೂ ಮಾಡಲಾಗಿದೆ.

Follow Us:
Download App:
  • android
  • ios