ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಆ ರೀತಿ ಸ್ಪಷ್ಟನೆಗಳನ್ನು ಕೇಳುವುದು ಮಾಮೂಲಿ. ಅವುಗಳಿಗೆ ನಮ್ಮ ಬಳಿ ಪರಿಹಾರವಿದೆ. ಕೂಡಲೇ ಆ ಸ್ಪಷ್ಟನೆಗಳಿಗೆ ಸಮರ್ಥ ಉತ್ತರ ನೀಡಿ ಯೋಜನೆಗೆ ಸಂಬಂಧಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ: ಬಸವರಾಜ ಬೊಮ್ಮಾಯಿ 

ಹುಬ್ಬಳ್ಳಿ(ಜ.11): ಮಹದಾಯಿ ಯೋಜನೆಗೆ ಸಂಬಂಧಿಸಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ಕೆಲ ಸ್ಪಷ್ಟನೆ ಕೇಳಿದ್ದರಲ್ಲಿ ವಿಶೇಷವೇನೂ ಇಲ್ಲ. ಇಂಥ ಸ್ಪಷ್ಟನೆ ಕೇಳುವುದು ಸಾಮಾನ್ಯ. ಕೂಡಲೇ ಅದಕ್ಕೆ ಸಮರ್ಥವಾದ ಉತ್ತರವನ್ನು ನೀಡಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕೇಂದ್ರ ಸರ್ಕಾರವು ಕಳಸಾ-ಬಂಡೂರಿ ನಾಲಾ ಯೋಜನೆ ಪರಿಷ್ಕೃತ ಡಿಪಿಆರ್‌ಗೆ ಅನುಮೋದನೆ ನೀಡಿದ ಬೆನ್ನಲ್ಲೇ ಅರಣ್ಯನಾಶ ತಪ್ಪಿಸುವುದು ಮತ್ತು ಹೊಸದಾಗಿ ಅರಣ್ಯೀಕರಣ ವಿಚಾರವಾಗಿ ಒಂದಷ್ಟುಸ್ಪಷ್ಟನೆ ಕೋರಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ರಾಜ್ಯಕ್ಕೆ ಪತ್ರ ಬರೆದಿತ್ತು. 

ಮಹದಾಯಿ ಯೋಜನೆಗೆ ಭಾರಿ ಹಿನ್ನಡೆ: ಮತ್ತೆ ತಗಾದೆ ತೆಗೆದ ಕೇಂದ್ರ ಪರಿಸರ ಅರಣ್ಯ ಇಲಾಖೆ

ಈ ಸಂಬಂಧ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಆ ರೀತಿ ಸ್ಪಷ್ಟನೆಗಳನ್ನು ಕೇಳುವುದು ಮಾಮೂಲಿ. ಅವುಗಳಿಗೆ ನಮ್ಮ ಬಳಿ ಪರಿಹಾರವಿದೆ. ಕೂಡಲೇ ಆ ಸ್ಪಷ್ಟನೆಗಳಿಗೆ ಸಮರ್ಥ ಉತ್ತರ ನೀಡಿ ಯೋಜನೆಗೆ ಸಂಬಂಧಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಮಹದಾಯಿ ಕೆಲಸ ನಿಲ್ಲಿಸಿ: ರಾಜ್ಯಕ್ಕೆ ಗೋವಾ ನೋಟಿಸ್‌

ಪಣಜಿ: ಮಹದಾಯಿ ಯೋಜನೆಯ ಕಾಮಗಾರಿ ನಿಲ್ಲಿಸುವಂತೆ ಗೋವಾ ಸರ್ಕಾರದ ವನ್ಯಜೀವಿ ವಾರ್ಡನ್‌, ಕರ್ನಾಟಕ ಸರ್ಕಾರಕ್ಕೆ ನೋಟಿಸ್‌ (ಸ್ಟಾಪ್‌ ವರ್ಕ್ ನೋಟಿಸ್‌) ನೀಡಿದ್ದಾರೆ. ಇದೇ ವೇಳೆ, ಯೋಜನೆಯ ಡಿಪಿಆರ್‌ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಚ್‌ ಕದ ಬಡಿಯುವುದಾಗಿ ಗೋವಾ ಸರ್ಕಾರ ಮಹತ್ವದ ಘೋಷಣೆ ಮಾಡಿದೆ.

ಮಂಗಳವಾರ ಮಹದಾಯಿ ಬಚಾವೋ ಆಂದೋಲನದ ಸದಸ್ಯರು ಹಾಗೂ ಉನ್ನತ ಮಟ್ಟದ ಸರ್ಕಾರಿ ಅಧಿಕಾರಿಗಳ ಜತೆ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ಕರ್ನಾಟಕದ ಯೋಜನೆ ವಿರುದ್ಧ ರಣತಂತ್ರ ರೂಪಿಸಲು ಸಭೆ ನಡೆಸಿದರು. ಬಳಿಕ ಮಾತನಾಡಿದ ಸಾವಂತ್‌, ‘ವನ್ಯಜೀವಿ ವಾರ್ಡನ್‌ ಅವರು ಕರ್ನಾಟಕಕ್ಕೆ ಸ್ಟಾಪ್‌ ವರ್ಕ್ ನೋಟಿಸ್‌ ನೀಡಿದ್ದಾರೆ. ಮಹದಾಯಿ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ’ ಎಂದು ತಿಳಿಸಿದರು.

ಮಹದಾಯಿ ನೀರು ಬಿಡಲ್ಲ ಎನ್ನುವುದು ಅರಿಯಲ್ಲ: ಕೋನರಡ್ಡಿ

ಈ ನಡುವೆ, ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಡ್ವೊಕೇಟ್‌ ಜನರಲ… ದೇವಿದಾಸ್‌ ಪಂಗಂ, ಕರ್ನಾಟಕ ಸರ್ಕಾರದ ಡಿಪಿಆರ್‌ಗೆ ನೀಡಿರುವ ಅನುಮತಿಯನ್ನು ಪ್ರಶ್ನಿಸಿ ಗೋವಾ ಸರ್ಕಾರ ಸುಪ್ರೀಂ ಕೋರ್ಚ್‌ಗೆ ಅರ್ಜಿ ಸಲ್ಲಿಸಲಿದೆ. ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ 2019 ರಲ್ಲಿ ಅಂತರರಾಜ್ಯ ಜಲ ವಿವಾದ ನ್ಯಾಯಾಧಿಕರಣದ ಐತೀರ್ಪನ್ನು ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರಗಳು ಸುಪ್ರೀಂ ಕೋರ್ಚ್‌ನಲ್ಲಿ ಪ್ರಶ್ನಿಸಿದ್ದು, ಇದರ ಭಾಗವಾಗಿ ಅರ್ಜಿ ಸಲ್ಲಿಸಲಾಗುವುದು ಎಂದರು.

ಮಹದಾಯಿ ನೀರನ್ನು ತನ್ನತ್ತ ತಿರುವು ತೆಗೆದುಕೊಂಡು ಕಳಸಾ ಬಂಡೂರಿ ನಾಲೆಗಳ ಮೂಲಕ ನೀರು ಪಡೆಯಲು ಕರ್ನಾಟಕ ಸರ್ಕಾರ ಮಹದಾಯಿ ಯೋಜನೆ ರೂಪಿಸಿದೆ. ಈ ವಿಚಾರದಲ್ಲಿ ಕರ್ನಾಟಕ ಹಾಗೂ ಗೋವಾ ನಡುವೆ ಜಟಾಪಟಿ ನಡೆಯುತ್ತಿದೆ. ಇದರ ನಡುವೆ, ಕರ್ನಾಟಕ ಕರ್ನಾಟಕ ಸಲ್ಲಿಸಿದ್ದ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್‌) ಕೇಂದ್ರವು ಇತ್ತೀಚೆಗೆ ಅನುಮೋದನೆ ನೀಡಿತ್ತು.