ನಿವೃತ್ತ ಪೊಲೀಸ್ ಅಧಿಕಾರಿ ಜ್ಯೋತಿ ಪ್ರಕಾಶ ಮಿರ್ಜಿ ಅವರಿಗೆ 120 ಎಕರೆ ಜಮೀನು ನೀಡಲಾಗಿದೆ ಎಂಬ ಎಂಎಲ್‌ಸಿ ಜಕ್ಕಪ್ಪನವರ ಆರೋಪದ ಬೆನ್ನಲ್ಲೇ, ಅಳ್ನಾವರ ತಾಲೂಕಿನಲ್ಲಿ ಆ ವಿವಾದಿತ ಭೂಮಿ ಪತ್ತೆಯಾಗಿದೆ. ರೈತರು ದಾಖಲೆ ಸಮೇತ ಜಮೀನು ತೋರಿಸಿದ್ದಾರೆ.

ಬಸವರಾಜ ಹಿರೇಮಠ

Add Asianetnews Kannada as a Preferred SourcegooglePreferred

ಧಾರವಾಡ: ನಿವೃತ್ತ ಪೊಲೀಸ್‌ ಅಧಿಕಾರಿ ಜ್ಯೋತಿ ಪ್ರಕಾಶ ಮಿರ್ಜಿ ಅವರಿಗೆ ಸರ್ಕಾರದಿಂದ 120 ಎಕರೆ ಪಟ್ಟಾ ಜಮೀನು ಕೊಡಲಾಗಿದೆ ಎಂಬ ವಿಧಾನ ಪರಿಷತ್‌ ಸದಸ್ಯ ಎಫ್‌.ಎಚ್‌. ಜಕ್ಕಪ್ಪನವರ ಆರೋಪಕ್ಕೆ ಪೂರಕವಾಗಿ ಅಳ್ನಾವರ ತಾಲೂಕಿನಲ್ಲಿ ಮಿರ್ಜಿ ಅವರಿಗೆ ಸೇರಿದೆ ಎನ್ನಲಾದ ಜಮೀನು ಇದೀಗ ಪತ್ತೆಯಾಗಿದೆ.

ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಮತ್ತು ಜಕ್ಕಪ್ಪನವರ ಮಧ್ಯೆ ತೀವ್ರ ಜಟಾಪಟಿಗೆ ಕಾರಣವಾಗಿದ್ದ ಈ ಜಮೀನು ಹುಡುಕುವಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ನಾಲ್ಕು ದಿನಗಳಿಂದ ಹೈರಾಣ ಆಗಿದ್ದರೂ ಈ ಭೂಮಿ ಎಲ್ಲಿದೆ ಎನ್ನುವುದು ಮಾತ್ರ ಪತ್ತೆಯಾಗಿರಲಿಲ್ಲ.

ಸರ್ವೇ 54ರಿಂದ 57ರಲ್ಲಿ ಸಿಕ್ಕಿದೆ ಭೂಮಿ

ಆದರೆ, ಅಳ್ನಾವರದ ರೈತರು ಶುಕ್ರವಾರ ಅಳ್ನಾವರ ತಾಲೂಕಿನ ಲಿಂಗನಕೊಪ್ಪ-ಮಡಿಕಿಕೊಪ್ಪ- ದುರ್ಗದಕೇರಿ ಗ್ರಾಮಗಳ ವ್ಯಾಪ್ತಿಯ ಸರ್ವೇ 54ರಿಂದ 57ರಲ್ಲಿ ಇರುವ ಮಿರ್ಜಿ ಅವರಿಗೆ ಸೇರಿದ್ದೆ ಎನ್ನಲಾದ ಭೂಮಿಯನ್ನು ದಾಖಲೆ ಸಮೇತ "ಕನ್ನಡಪ್ರಭ"ಕ್ಕೆ ತೋರಿಸಿದರು. ತೀವ್ರ ಹೈರಾಣ ಮತ್ತು ಹತಾಶರಾಗಿರುವ ಅಧಿಕಾರಿಗಳು ಮಾತ್ರ ತಮ್ಮದೇ ಇಲಾಖೆಯ ದಾಖಲೆಗಳನ್ನು ಇನ್ನೂ ಸಂಶಯದಿಂದ ನೋಡುತ್ತಿದ್ದಾರೆ.

ಪ್ರಕರಣದ ಹಿನ್ನಲೆ

ಕೆಡಿಪಿ ಸಭೆಯಲ್ಲಿ ಸಚಿವ ಲಾಡ್‌ ಜತೆಗಿನ ಮಾತಿನ ಚಕಮಕಿ ವೇಳೆ ಜಕ್ಕಪ್ಪನವರ, ಅರಣ್ಯ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳು ದನಿ ಇಲ್ಲದ ಬಡ ಗೌಳಿ ಸಮುದಾಯಕ್ಕೆ ಸಾಗುವಳಿ ಪತ್ರ ನೀಡುತ್ತಿಲ್ಲ. ಅದೇ ಪ್ರಭಾವಿ ವ್ಯಕ್ತಿಯಾಗಿರುವ ಜ್ಯೋತಿ ಪ್ರಕಾಶ ಮಿರ್ಜಿ ಅವರಿಗೆ 120 ಎಕರೆ ಪಟ್ಟಾ ಜಮೀನು ನೀಡಿದ್ದಾರೆ. ಅಲ್ಲದೇ, ಹತ್ತಾರು ವರ್ಷಗಳಿಂದ ಗೌಳಿ ಸಮುದಾಯ ಅಲ್ಲಿ ವಾಸಿಸುತ್ತಿದ್ದು, ಅವರ ಮನೆಗಳಿಗೂ ಹಕ್ಕುಪತ್ರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ, ಮಿರ್ಜಿ ಅವರಿಗೆ ನೀಡಿದ್ದಾರೆ ಎನ್ನಲಾದ ಜಮೀನು ಎಲ್ಲಿದೆ ಹಾಗೂ ಯಾವ ಸರ್ವೆ ನಂಬರ್‌ ಅಂತಹ ಮಾಹಿತಿಯನ್ನು ಅವರು ಸಭೆಗೆ ನೀಡಿರಲಿಲ್ಲ. ಹೀಗಾಗಿ ಸಭೆಯಲ್ಲಿಯೇ ಉಸ್ತುವಾರಿ ಸಚಿವರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ತೆಗೆದು ಪರಿಶೀಲಿಸಲು ಸೂಚನೆ ನೀಡಿದ್ದರು.

ಸರ್ಕಾರದಿಂದ ಕೊಡಲಾಗಿದೆಯೇ ಅಥವಾ ಅವರೇ ಖರೀದಿಸಿದ್ದಾರೆಯೇ?

ಇದೀಗ ಮಿರ್ಜಿ ಅವರಿಗೆ ಸೇರಿದ ಜಮೀನು ಅಳ್ನಾವರ ತಾಲೂಕಿನ ಲಿಂಗನಕೊಪ್ಪ-ಮಡಿಕಿಕೊಪ್ಪ-ದುರ್ಗದಕೇರಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ಸರ್ವೇ ನಂಬರ್‌ 54ರಿಂದ 57ರಲ್ಲಿ ಪತ್ತೆಯಾಗಿದೆ. ರೈತರು ನೀಡಿದ ಮಾಹಿತಿ ಪ್ರಕಾರ ಪತ್ತೆಯಾಗಿರುವ ಜಮೀನನ್ನು, ಮಿರ್ಜಿ ಅವರಿಗೆ ಸರ್ಕಾರದಿಂದ ಕೊಡಲಾಗಿದೆಯೇ ಅಥವಾ ಅವರೇ ಖರೀದಿಸಿದ್ದಾರೆಯೇ? ಖರೀದಿಸಿದ್ದರೆ ಎಷ್ಟು ಎಕರೆ ಖರೀದಿಸಿದ್ದಾರೆ? ಖರೀದಿಸಿದ ಜಮೀನಿಗಿಂತ ಹೆಚ್ಚಿನ ಜಮೀನು ಉಳಿಮೆ ಮಾಡುತ್ತಿದ್ದಾರೆಯೇ? ಎಂಬೆಲ್ಲಾ ಸಂಶಯಗಳು ಹುಟ್ಟಿಕೊಂಡಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ತನಿಖೆ ಚುರುಕುಗೊಳಿಸಿ, ಸ್ಪಷ್ಟಪಡಿಸಬೇಕಿದೆ.

ಬರೀ ಜ್ಯೋತಿ ಪ್ರಕಾಶ ಮಿರ್ಜಿ ಮಾತ್ರವಲ್ಲ, ಇನ್ನೂ ಅನೇಕ ಅಧಿಕಾರಿಗಳ ಹೆಸರಿನಲ್ಲಿ ನೂರಾರು ಎಕರೆ ಇದೆ. ಕೆಲವಷ್ಟು ಪ್ರಭಾವಿಗಳು ಬೇನಾಮಿಯಾಗಿ ಇಲ್ಲಿನ ಸರ್ಕಾರಿ ಭೂಮಿಯನ್ನು ಸಾಗುವಳಿ ಮಾಡುತ್ತಿದ್ದಾರೆ ಎಂದು ವಿವರಿಸಿದ ಗ್ರಾಮಸ್ಥರು, ಬಡವರಾದ ನಾವು ನಾಲ್ಕಾರು ದಶಕಗಳಿಂದ ತಲಾ ಎರಡು, ಮೂರು ಎಕರೆ ಸಾಗುವಳಿ ಮಾಡುತ್ತ ಬಂದಿದ್ದರೂ ಇನ್ನು ಪಟ್ಟಾ ನೀಡಿಲ್ಲ. ಅದೇ ಅಧಿಕಾರಿಗಳಿಗೆ ಆಗಾಗ ಪಟ್ಟಾ ನೀಡುತ್ತ ಬಂದಿದ್ದಾರೆ ಎಂದು ಅಳಲು ತೋಡಿಕೊಂಡರು.

ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ಬಂದಿದ್ದು, ಜ್ಯೋತಿ ಪ್ರಕಾಶ ಮಿರ್ಜಿ ಅವರಿಗೆ ಸೇರಿದ ಎನ್ನಲಾದ ಜಮೀನು ದುರ್ಗದಕೇರಿ ಸರ್ವೆ ನಂಬರ್‌ 54ರಿಂದ 57ರಲ್ಲಿದೆ. ಆದರೆ, ಸುಮಾರು ಎರಡು ದಶಕಗಳ ಹಿಂದೆ ನಡೆದಿರುವ ಪ್ರಕ್ರಿಯೆ ಇದಾಗಿದ್ದು, ಈ ಬಗ್ಗೆ ಪರಿಶೀಲಿಸಿ ಸ್ಪಷ್ಟ ಮಾಹಿತಿ ತಿಳಿಸಲಾಗುವುದು ಎಂದು ಧಾರವಾಡದ ತಹಶೀಲ್ದಾರ್ ದೊಡ್ಡಪ್ಪ ಹೂಗಾರ ಹೇಳಿದ್ದಾರೆ.