ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಬೆಲೆ ಏರಿಕೆ, ಬೇಟಿ ಬಚಾವೋ ಯೋಜನೆಯ ವೈಫಲ್ಯ ಮತ್ತು ನುಸುಳುಕೋರರ ವಿಚಾರದಲ್ಲಿ ಬಿಜೆಪಿಯ ದ್ವಂದ್ವ ನೀತಿಯನ್ನು ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿ (ಜ.20): ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಾಯಕತ್ವ ಬದಲಾವಣೆ ಚರ್ಚೆಯಿಂದ ಹಿಡಿದು ದೇಶದ ಆರ್ಥಿಕ ಪರಿಸ್ಥಿತಿಯವರೆಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಾಯಕತ್ವ ಬದಲಾವಣೆ ಕಾಂಗ್ರೆಸ್ ನಿರ್ಧಾರವಲ್ಲ
ಡಿಕೆ ಶಿವಕುಮಾರ್ ಅವರ ಹೇಳಿಕೆ ಹಾಗೂ ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲಾಡ್, ನಾಯಕತ್ವ ಬದಲಾವಣೆ ಬಗ್ಗೆ ಕ್ರಾಂತಿಯಾಗುತ್ತದೆ ಎಂಬ ಹೇಳಿಕೆ ಬಗ್ಗೆ ಅವರನ್ನೇ ಕೇಳಬೇಕು. ಕಾಂಗ್ರೆಸ್‌ನಲ್ಲಿ ಒಬ್ಬಿಬ್ಬರು ಮಾತನಾಡಿದರೆ ಅದು ಇಡೀ ಪಕ್ಷದ ಅಧಿಕೃತ ಹೇಳಿಕೆಯಾಗುವುದಿಲ್ಲ, ಎಂದು ಸ್ಪಷ್ಟಪಡಿಸಿದರು.
ಬ್ಯಾಲೆಟ್ ಪೇಪರ್ ಚುನಾವಣೆಗೆ ಒಲವು
ಚುನಾವಣಾ ಪದ್ಧತಿಯ ಬಗ್ಗೆ ಮಾತನಾಡಿದ ಸಚಿವರು, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವುದಾದರೆ ನಮ್ಮ ಸ್ವಾಗತವಿದೆ. ಈ ಹಿಂದೆ ಬ್ಯಾಲೆಟ್ ಪೇಪರ್ ಮೂಲಕ ನಡೆದ ಚುನಾವಣೆಗಳ ಫಲಿತಾಂಶವನ್ನೊಮ್ಮೆ ಗಮನಿಸಲಿ. ಎಸ್‌ಐಆರ್‌ನಲ್ಲಿ (SIR) ಸುಮಾರು ಮೂರೂವರೆ ಕೋಟಿ ವೋಟ್ ತೆಗೆದಿದ್ದಾರೆ ಎಂಬ ಮಾಹಿತಿಯಿದೆ. ಈ ಬಗ್ಗೆ ಚುನಾವಣಾ ಆಯೋಗ ಇಲ್ಲಿಯವರೆಗೆ ಒಂದೇ ಒಂದು ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಿಲ್ಲ. ಅವರ ಸಿನಿಮಾ ಅವರು ನಡೆಸುತ್ತಿದ್ದಾರೆ, ನಡೆಸಲಿ ಎಂದು ವ್ಯಂಗ್ಯವಾಡಿದರು.
ಬೆಲೆ ಏರಿಕೆ ಬಗ್ಗೆ ಮೌನವೇಕೆ?
ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಇಂದು ಬಂಗಾರದ ಬೆಲೆ ಒಂದುವರೆ ಲಕ್ಷ ದಾಟಿದೆ, ಬೆಳ್ಳಿ ಬೆಲೆ ಗಗನಕ್ಕೇರಿದೆ. ಈ ಹಿಂದೆ ಬಿಜೆಪಿಯವರು ಏನೇನೋ ಭರವಸೆಗಳನ್ನು ನೀಡಿದ್ದರು, ಆದರೆ ಈಗ ಬೆಲೆ ಏರಿಕೆ ಬಗ್ಗೆ ಒಬ್ಬರೂ ಮಾತನಾಡುತ್ತಿಲ್ಲ. ಅತ್ತ ಟ್ರಂಪ್ ಅವರು ಮೋದಿಯವರನ್ನು ಟೀಕಿಸುತ್ತಿದ್ದರೂ, ದೇಶದ ಒಬ್ಬನೇ ಒಬ್ಬ ಬಿಜೆಪಿ ನಾಯಕ ಆ ಬಗ್ಗೆ ಪ್ರತಿರೋಧ ತೋರುತ್ತಿಲ್ಲ, ಎಂದು ಆಕ್ರೋಶ ಹೊರಹಾಕಿದರು.
ನುಸುಳುಕೋರರ ವಿಚಾರದಲ್ಲಿ ಸುಳ್ಳು
ಬಾಂಗ್ಲಾ ನುಸುಳುಕೋರರ ವಿಚಾರವಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಲಾಡ್, ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಕನಿಷ್ಠ ಎರಡುವರೆ ಸಾವಿರ ನುಸುಳುಕೋರರನ್ನು ವಾಪಸ್ ಕಳುಹಿಸಿಲ್ಲ. ಆದರೆ ಯುಪಿಎ ಅವಧಿಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ನುಸುಳುಕೋರರನ್ನು ಗಡಿಪಾರು ಮಾಡಲಾಗಿತ್ತು. ಇನ್ನು ಎಥೆನಾಲ್ ಆಮದು ಮಾಡಿಕೊಂಡ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ಮುಚ್ಚಿಡುತ್ತಿದೆ, ಇದರಿಂದ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಬೇಟಿ ಬಚಾವೋ ಯೋಜನೆಯ ವೈಫಲ್ಯ
ಕೇಂದ್ರದ ಪ್ರಮುಖ ಯೋಜನೆಗಳ ಬಗ್ಗೆ ಅಂಕಿಅಂಶ ನೀಡಿದ ಸಚಿವರು, ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಜಾರಿಗೆ ತಂದ ನಂತರ 13 ಲಕ್ಷದ 50 ಸಾವಿರ ಬಾಲಕಿಯರು ನಾಪತ್ತೆಯಾಗಿದ್ದಾರೆ. ಸುಮಾರು 60 ಲಕ್ಷ ಬಾಲಕಿಯರು ಶಾಲೆಯಿಂದ ಹೊರಗುಳಿದಿದ್ದಾರೆ. ಅದರಲ್ಲೂ ಅತಿ ಹೆಚ್ಚು ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವುದು ಮೋದಿಯವರ ಸ್ವಂತ ರಾಜ್ಯ ಗುಜರಾತ್‌ನಲ್ಲಿಯೇ ಎಂದು ಅಂಕಿಅಂಶ ಬಿಡುಗಡೆ ಮಾಡಿದರು.
ಬಿಜೆಪಿ ನಾಯಕರ ದ್ವಂದ್ವ ನೀತಿ
ರಾಷ್ಟ್ರೀಯ ಭದ್ರತಾ ಸಲಹೆಗಾರರ ಕುಟುಂಬದ ವಿಚಾರ ಪ್ರಸ್ತಾಪಿಸಿದ ಅವರು, ಅಜಿತ್ ದೋವಲ್ ಅವರ ಮಕ್ಕಳು ಯಾವ ದೇಶದಲ್ಲಿದ್ದಾರೆ ಎಂಬುದು ಬಹಿರಂಗವಾಗಲಿ. ಇವರು ಕೇವಲ ಮುಸ್ಲಿಮರ ಬಗ್ಗೆ ಮಾತನಾಡುತ್ತಾ ರಾಜಕೀಯ ಮಾಡುತ್ತಾರೆ, ಆದರೆ ತಮ್ಮದೇ ನಾಯಕರ ಕುಟುಂಬಗಳ ಬಗ್ಗೆ ಉತ್ತರಿಸುವುದಿಲ್ಲ ಎಂದು ಕಿಡಿಕಾರಿದರು.


