ಧರ್ಮಸ್ಥಳ ಸೌಜನ್ಯ ಪ್ರಕರಣದಲ್ಲಿ 'ಅನನ್ಯಾ ಭಟ್' ಎಂಬ ಕಾಲ್ಪನಿಕ ಮಗಳ ಕಥೆ ಹೇಳಿ ಸದ್ದು ಮಾಡಿದ್ದ ಸುಜಾತಾ ಭಟ್, ಇದೀಗ ತಮ್ಮನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಅವರು ಹೇಳಿದ್ದೇನು?
ಕೆಲವು ತಿಂಗಳುಗಳಿಂದ ಇಡೀ ದೇಶಾದ್ಯಂತ ಹಲ್ಚಲ್ ಸೃಷ್ಟಿಸುತ್ತಿರೋ ಪ್ರಕರಣಗಳಲ್ಲಿ ಒಂದು ಧರ್ಮಸ್ಥಳದ ಪ್ರಕರಣ (Dharmasthala Case). ಬರ್ಬರವಾಗಿ ಸಾವಿಗೀಡಾದ ಸೌಜನ್ಯ ಎಂಬ ಹೆಣ್ಣುಮಗಳೊಬ್ಬಳಿಗೆ ನ್ಯಾಯ ಕೊಡಿಸುವುದಾಗಿ ಹೇಳಿ Justice for Soujanya ಎನ್ನುವ ಹೆಸರಿನಲ್ಲಿ ಆರಂಭವಾದ ಈ ಪ್ರಕರಣ, ಕೊನೆಗೆ ಮೂಲದ ದಿಕ್ಕನ್ನೇ ತಪ್ಪಿಸಿ ಯಾವ ರೀತಿಯಲ್ಲಿ ನಾಟಕೀಯದ ಹಾದಿ ಹಿಡಿಯಿತು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಸೌಜನ್ಯಳಿಗೆ ನ್ಯಾಯ ಕೊಡಿಸುವ ಬದಲು ರಾಜಕೀಯ ಪ್ರವೇಶಿಸಿ, ಧರ್ಮಸ್ಥಳದ ಹೆಸರನ್ನು ಹಾಳು ಮಾಡಲು ಇನ್ನಿಲ್ಲದ ಹುನ್ನಾರ ನಡೆಸಿರುವುದರಿಂದ ಹಿಡಿದು, ಎಐ ಮೂಲಕ ವಿಡಿಯೋ ಸೃಷ್ಟಿಸಿ ಸಿಕ್ಕಿಬಿದ್ದು ಈಗ ತನಿಖೆಯನ್ನು ಎದುರಿಸುತ್ತಿರುವವರೆಗೆ ಇಡೀ ಪ್ರಕರಣವೇ ಬುಡಮೇಲಾಗಿ ಹೋಗಿದೆ. ಮುಗ್ಧ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸಬೇಕಿದ್ದ ಪ್ರಕರಣ 'ಬುರುಡೆ ಗ್ಯಾಂಗ್' ಎನ್ನುವ ಮಟ್ಟಿಗೆ ಇಡೀ ಪ್ರಕರಣ ಬಂದು ನಿಂತಿದೆ!
ಸಿನಿಮೀಯ ರೀತಿಯಲ್ಲಿ ಸುಜಾತಾ ಭಟ್ ಪ್ರವೇಶ
ಈ ಎಲ್ಲಾ ಪ್ರಕರಣದ ನಡುವೆ ಸಿನಿಮೀಯ ರೀತಿಯಲ್ಲಿ ಪ್ರವೇಶ ಆದದ್ದೇ ಸುಜಾತಾ ಭಟ್ (Sujata Bhat). ತಮ್ಮ ಮಗಳ ಅನನ್ಯಾ ಭಟ್ (Ananya Bhat) ಕಾಣೆಯಾಗಿರುವುದಾಗಿ ಹೇಳಿ, ಆಕೆಯನ್ನು ಹುಡುಕಿಕೊಡುವಂತೆ ಹೇಳುವುದರಿಂದ ಹಿಡಿದು, ದಿನಕ್ಕೊಂದರಂತೆ ಮಾತು ಬದಲಿಸುತ್ತಾ ಎಲ್ಲರ ಹುಬ್ಬೇರಿಸಿದ ಗಟ್ಟಿಗಿತ್ತಿ ಈ ಸುಜಾತಾ ಭಟ್. ಮಾಧ್ಯಮಗಳ ಮುಂದೆ ಹಲವಾರು ವರ್ಷಗಳ ತಮ್ಮ ವೈಯಕ್ತಿಯ ಜೀವನ ಹಾಗೂ ಅನನ್ಯಾ ಭಟ್ಳ ಕಥೆಯನ್ನು ಸತ್ಯದ ತಲೆಯ ಮೇಲೆ ಹೊಡೆದಂತೆ ಪಟಪಟನೆ ಹೇಳುತ್ತಾ, ಕೇಳುಗರ ಕಣ್ಣಲ್ಲಿ ನೀರು ತರಿಸಿದ ವೃದ್ಧೆ ಈಕೆ. ಆದರೆ, ಸುಜಾತಾ ಭಟ್ ಯಾರು, ಈಕೆಯ ಹಿನ್ನೆಲೆ ಏನು? ಅಸ್ತಿತ್ವದಲ್ಲಿಯೇ ಇಲ್ಲದ ಅನನ್ಯಾ ಭಟ್ ಎಲ್ಲಿಂದ ಬಂದಳು ಎನ್ನುವ ಬಗ್ಗೆ ತನಿಖಾ ವರದಿ ಕೈಗೊಂಡು ಅದರ ಆಳಕ್ಕೆ ಹೋಗಿ, ಸತ್ಯವನ್ನು ಹೊರಗೆಡವಿದ್ದು ಏಷ್ಯಾನೆಟ್ ಸುವರ್ಣ ಟಿವಿ (Aisanet Suvarna).
ಅನನ್ಯಾ ಭಟ್ ಎನ್ನುವ ಪಾತ್ರ ಎಂಟ್ರಿ!
ಕೊನೆಗೆ ಸುಜಾತಾ ಭಟ್ ಅವರ ಅಸಲಿ ಮುಖ ಬಯಲಾಗುತ್ತಾ ಬಂತು. ಇವರನ್ನು ಮುಂದೆ ಇಟ್ಟುಕೊಂಡು ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲು ಹೊರಟಿದ್ದ ದೊಡ್ಡ ಗ್ಯಾಂಗ್ಗೆ ಹಿನ್ನಡೆಯಾಗುತ್ತಾ ಬಂತು. ಕೊನೆಗೆ ಸುಜಾತಾ ಭಟ್ ಅವರು, ಅನನ್ಯಾ ಭಟ್ ಎನ್ನುವ ಮಗಳು ಇಲ್ಲ ಎಂದು ತಪ್ಪು ಒಪ್ಪಿಕೊಂಡದ್ದೂ ಆಯ್ತು. ಸ್ವಲ್ಪ ದಿನ ಅವರು ಕಾಣೆಯಾಗಿದ್ದರು. ಇದೀಗ ಸುವರ್ಣ ಟಿವಿಗೆ ಸುಜಾತಾ ಭಟ್ ವಿಶೇಷ ಸಂದರ್ಶನ (Asianet Suvarna News- Sujata Bhat EXCLUSIVE Interview) ನೀಡಿದ್ದಾರೆ. ಇದರಲ್ಲಿ ತಾವು ಅನನ್ಯಾ ಭಟ್ ಬಗ್ಗೆ ದೂರು ನೀಡಿದ ಮುಂಚಿನ ಬದುಕು ಹಾಗೂ ಕೊನೆಯಲ್ಲಿ ಆದದ್ದೇನು ಎನ್ನುವ ಬಗ್ಗೆ ವಿವರಿಸಿದ್ದಾರೆ.
ಜುಲೈ 15ರ ಮೊದಲು ಹೇಗಿತ್ತು ಲೈಫ್?
ಜುಲೈ 15ಕ್ಕೆ ಸುಜಾತಾ ಭಟ್ ಅವರು ತಮ್ಮ ಮಗಳು ಅನನ್ಯಾ ಭಟ್ (Ananya Bhat) ಧರ್ಮಸ್ಥಳದಲ್ಲಿ ಕಾಣೆಯಾಗಿದ್ದು, ಆಕೆಯನ್ನು ಹುಡುಕಿ ಕೊಡುವಂತೆ ಗಳಗಳನೆ ಅಳುತ್ತಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆಗ ಜಸ್ಟೀಸ್ ಫಾರ್ ಸೌಜನ್ಯ ಕೇಸ್ಗೆ ಹೊಸ ತಿರುವು ಪಡೆದುಕೊಂಡಿತ್ತು. ಅದಕ್ಕೂ ಮುಂಚಿನ ಲೈಫ್ ಹೇಗಿತ್ತು ಎನ್ನುವ ಪ್ರಶ್ನೆಗೆ ಸುಜಾತಾ ಅವರು, ಆಗ ಲೈಫ್ ತುಂಬಾ ಚೆನ್ನಾಗಿತ್ತು. ನನ್ನ ಪಾಡಿಗೆ ನಾನು ಜೀವನ ನಡೆಸಿಕೊಂಡು ಹೋಗಿದ್ದೆ. ಆಗ ಬೈಕ್ ಒಂದು ಗುದ್ದಿ ಆ್ಯಕ್ಸಿಡೆಂಟ್ ಆಗಿತ್ತು. 12 ಸ್ಟಿಚ್ ಹಾಕಿದ್ರು. 1 ತಿಂಗಳು ಮನೆಯಲ್ಲಿ ಮಲಗಿಕೊಂಡಿದ್ದೆ. ಆ ಬಳಿಕ ಜುಲೈ 15ರಂದು ನಾನು ದೂರು ದಾಖಲು ಮಾಡಿದೆ. ಅಷ್ಟಕ್ಕೂ ಈಗೇನೂ ಬುರುಡೆ ಗ್ಯಾಂಗ್ ಎನ್ನುತ್ತಿದ್ದಾರೆ, ಅದಕ್ಕೂ ನನಗೂ ಸಂಬಂಧವೇ ಇಲ್ಲ. ನನ್ನ ಕೇಸೇ ಬೇರೆ, ಅವರದ್ದೇ ಬೇರೆ. ಆದರೆ ಎರಡಕ್ಕೂ ಲಿಂಕ್ ಮಾಡುತ್ತಿದ್ದಾರೆ. ಇದು ನನಗೆ ತುಂಬಾ ನೋವು ಕೊಡುತ್ತಿದೆ ಎಂದು ಕಣ್ಣೀರು ಹಾಕಿದ್ದಾರೆ.
ನನ್ನನ್ನು ಮಿಸ್ಯೂಸ್ ಮಾಡಿಕೊಂಡ್ರು
ನನ್ನನ್ನು ಮಿಸ್ಯೂಸ್ ಮಾಡಿಕೊಂಡರು. ಈಗ ಜೀವನಕ್ಕೆ ಏನೂ ಇಲ್ಲ. ಮೊದಲು ಪಾರ್ಕ್ನಲ್ಲಿ ಸೂಪ್ ಮಾರಿಕೊಂಡು ಜೀವನ ಮಾಡುತ್ತಿದ್ದೆ. ದಿನಕ್ಕೆ 500 ರಿಂದ 2 ಸಾವಿರ ರೂಪಾಯಿವರೆಗೆ ದುಡಿಯುತ್ತಿದೆ. ಈ ವರ್ಷದ ಜನವರಿವರೆಗೆ ರಂಗಪ್ರಸಾದ್ ಅವರ ಜೊತೆಗೆ ಇದ್ದೆ. ಆದರೆ ಅವರು ಕೆಲವು ವರ್ಷಗಳಿಂದ ಹಾಸಿಗೆ ಹಿಡಿದಿದ್ದರು. ಅವರ ಅಂತ್ಯದ ದಿನದವರೆಗೂ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡೆ. ಅವರಿಗಾಗಿ ಸಿಕ್ಕಾಪಟ್ಟೆ ದುಡಿದೆ. ಕೊನೆಯ ದಿನಗಳಲ್ಲಿ ಅವರಿಗೆ ಕಣ್ಣು ಕೂಡ ಸರಿಯಾಗಿ ಕಾಣಿಸ್ತಿರಲಿಲ್ಲ. ನೀನು ನನಗೆ ಎಷ್ಟು ಕಷ್ಟಪಡ್ತಾ ಇದ್ಯಾ ಎಂದು ಅವರು ಕೊನೆಯ ದಿನಗಳಲ್ಲಿಯೂ ಬೇಸರ ಪಟ್ಟುಕೊಂಡಿದ್ದರು. ಹಾರ್ಟ್ ಎಟ್ಯಾಕ್ ಆಗಿ ಹೋಗಬಿಟ್ಟರು. ಅವರ ಬಳಿಕ ನಾನು ಒಂಟಿಯಾದೆ. ಅವರು ಇದ್ದಾಗ ಕೂಡ ಯಾರೊಬ್ಬರ ಬಳಿ ಕೈಚಾಚಿದವಳಲ್ಲ. ಕಷ್ಟಪಟ್ಟು ದುಡಿದವಳು. ಅವರು ಇದ್ದಾಗ ಕೂಡ ದುಡಿಯಲು ಹೋಗುತ್ತಿದ್ದೆ, ಅವರ ಬಳಿ ಮಾತನಾಡಲು ಕೂಡ ನನಗೆ ಟೈಮ್ ಇರಲಿಲ್ಲ. ಈಗ ಟೈಂ ಇದೆ, ಅವರೇ ಇಲ್ಲ. ಆದರೆ ಅವರನ್ನು ಕೊನೆಯ ದಿನಗಳವರೆಗೂ ಚೆನ್ನಾಗಿ ನೋಡಿಕೊಂಡಿರುವ ಖುಷಿ ನನಗೆ ಇದೆ ಎಂದು ಸುಜಾತಾ ಭಟ್ ಅವರು ಕಣ್ಣೀರು ಹಾಕಿದ್ದಾರೆ.

