ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತಕ ಬುದ್ಧಿಮತ್ತೆ (AI) ಮೂಲಕ ಸುಳ್ಳು ವಿಡಿಯೋ ಮಾಡಿ ಒಂದಷ್ಟು ಅಭಿಮಾನಿಗಳನ್ನು ಪಡೆದಿದ್ದ ಯುಟ್ಯೂಬರ್​ ಸಮೀರ್​ ಎಂಡಿ ಬಂಧನದ ಭೀತಿಯಿಂದ ನಾಪತ್ತೆಯಾಗಿದ್ದಾರೆ. ಇದರ ಬೆನ್ನಲ್ಲೇ ಇವರ ಇತಿಹಾಸ ಬಯಲಾಗಿದೆ. 

ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತಕ ಬುದ್ಧಿಮತ್ತೆ (AI) ಮೂಲಕ ಸುಳ್ಳು ವಿಡಿಯೋ ಮಾಡಿ, ಒಂದಿಷ್ಟು ವರ್ಗವನ್ನು ಖುಷಿಪಡಿಸಿದ್ದ, ತನ್ನ ಅಭಿಮಾನಿಗಳು ಜೈ ಜೈ ಎನ್ನುವಂತೆ ಮಾಡಿದ್ದ ಯುಟ್ಯೂಬರ್​ ಸಮೀರ್​ ಎಂ.ಡಿ. (Youtuber Sameer MD) ಈಗ ತಲೆಮರೆಸಿಕೊಂಡಿದ್ದಾರೆ. ಇದಾಗಲೇ ಇವರ ಮೇಲೆ ಹಲವು ಕೇಸ್​ಗಳು ದಾಖಲಾಗಿವೆ. ಸುಜಾತಾ ಭಟ್​ ಅವರ ನಕಲಿ ಮಗಳು ಅನನ್ಯಾ ಭಟ್​ ಸುಳ್ಳಿನ ಕಂತೆಯ ಹಿಂದೆಯೂ ಇವರದ್ದೇ ಕೈವಾಡ ಇದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣ ಇಡೀ ದೇಶದ ಗಮನ ಸೆಳೆದಿರುವ ನಡುವೆಯೇ, ಹಸಿಹಸಿ ಸುಳ್ಳು ಹೇಳಿಸಿ, ಧರ್ಮಸ್ಥಳದ ಹೆಸರನ್ನು ಕೆಡಿಸುವ ಪ್ರಯತ್ನ ಮಾಡಲಾಗುತ್ತಿದೆ, ಬರ್ಬರವಾಗಿ ಹತ್ಯೆಗೆ ಒಳಗಾಗಿರುವ ಸೌಜನ್ಯಾಳಿಗೆ ನ್ಯಾಯ ಕೊಡಿಸುವ ನೆಪದಲ್ಲಿ ಬೇರೆಯದ್ದೇ ಉದ್ದೇಶ ಇಟ್ಟುಕೊಂಡು ದೊಡ್ಡ ಮಟ್ಟದ ಸ್ಕೆಚ್​ ನಡೆಸಲಾಗುತ್ತಿದೆ ಎಂಬೆಲ್ಲಾ ಆರೋಪಗಳು ಸಮೀರ್​ ಮೇಲೆ ಇರುವ ಹಿನ್ನೆಲೆಯಲ್ಲಿ, ಇದೀಗ ಅವರನ್ನು ಬಂಧಿಸುವ ಸಾಧ್ಯತೆ ಇದೆ. ಆದ್ದರಿಂದ ಯುಟ್ಯೂಬರ್​ ಸಮೀರ್​ ಪರಾರಿಯಾಗಿದ್ದು, ಅವರನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ. ಆದ್ದರಿಂದ ತಮ್ಮನ್ನು ಬಂಧಿಸದಂತೆ ಕೋರಿ ನಿರೀಕ್ಷಣಾ ಜಾಮೀನನ್ನು ಕೂಡ ಸಮೀರ್​ ಹಾಕಿರುವುದಾಗಿ ತಿಳಿದುಬಂದಿದೆ.

ಹಾಗಿದ್ದರೆ ಯಾರೀ ಸಮೀರ್​? ಕೆಲ ವರ್ಷಗಳಿಂದ ಯುಟ್ಯೂಬ್​ ಮಾಡುತ್ತಿದ್ದ ಸಮೀರ್​ ಸೌಜನ್ಯಾ ಕೇಸ್​ನಲ್ಲಿ ಆಕೆಗೆ ನ್ಯಾಯ ಕೊಡಿಸುವುದಾಗಿ ಹೇಳಿ, ಬೇರೆಯದ್ದೇ ಉದ್ದೇಶ ಇಟ್ಟುಕೊಂಡು ಇಷ್ಟು ದಿನ ತಮ್ಮ ಮಾತುಗಳಿಂದ ಮರುಳು ಮಾಡಿದ್ದು ಹೇಗೆ? ಅವರಿಗೆ ಫಂಡಿಂಗ್​ ಆಗ್ತಿತ್ತಾ ಎಂಬಿತ್ಯಾದ ವಿಷಯಗಳ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆ ಆಗುತ್ತಿದೆ. ಅವರು ತಲೆ ಮರೆಸಿಕೊಂಡಿರೋ ಬೆನ್ನಲ್ಲೇ ಸಮೀರ್​ ಇತಿಹಾಸದ ಬಗ್ಗೆ ಸಾಕಷ್ಟು ಮಾಹಿತಿ ತಿಳಿದಿದೆ. ಅಷ್ಟಕ್ಕೂ ಸಮೀರ್ ಬೆಂಗಳೂರು ಮೂಲದವರಲ್ಲ. ಬಳ್ಳಾರಿಯವರು. ಇಲ್ಲಿಯ ಕೌಲಬಜಾರನ ಅಜಾದ್ ನಗರ ನಿವಾಸಿ. 2012ರಲ್ಲಿಯೇ ಹುಟ್ಟೂರು ಬಿಟ್ಟು ಬೆಂಗಳೂರಿಗೆ ಬಂದಿದ್ದಾರೆ. ಬಳ್ಳಾರಿಯಲ್ಲಿ ಅಕ್ಕ ಮತ್ತು ಅಮ್ಮನ ಜೊತೆ ನೆಲೆಸಿದ್ದ ಇವರು, ಹೈಸ್ಕೂಲ್​ ಓದುವ ಸಮಯದಲ್ಲಿಯೇ ಬೆಂಗಳೂರಿಗೆ ಬಂದಿರುವುದಾಗಿ ಹೇಳಲಾಗುತ್ತಿದೆ.

ಓದಿನಲ್ಲಿಯೂ ಚುರುಕಾಗಿರುವುದಕ್ಕೋ ಏನೋ, ಬೆಂಗಳೂರಿನಲ್ಲಿಯೇ ಇವರು BCA ಕೂಡ ಮುಗಿಸಿದ್ದಾರೆ. ಅದರಲ್ಲಿಯೇ ಮುಂದುವರೆದಿದ್ದರೆ ಒಳ್ಳೆಯ ಉದ್ಯೋಗದಲ್ಲಿ ಇರುತ್ತಿದ್ದರೇನೋ. ಆದರೆ ಅಲ್ಲಿಂದಲೇ ಯುಟ್ಯೂಬ್​ ಪ್ರಪಂಚದ ಮೋಹಕ್ಕೆ ಒಳಗಾದರು. ಅದಾಗಲೇ ಕೃತಕ ಬುದ್ಧಿಮತ್ತೆ ಪ್ರಯೋಗದಲ್ಲಿಯೂ ಸಾಕಷ್ಟು ಪಳಗಿ ಯುಟ್ಯೂಬ್​ನಲ್ಲಿ ತಮ್ಮದೇ ಆದ ಹವಾ ಸೃಷ್ಟಿಸಿದರು. ಭೂತದ ಕಥೆಯ ಜೊತೆಗೆ ಅಷ್ಟಿಷ್ಟು ವಿಡಿಯೋಗಳನ್ನು ಮಾಡಿ ತಮ್ಮ ಅಭಿಮಾನಿ ಬಳಗ ಕಟ್ಟಿಕೊಂಡಿದ್ದರು. ಆದರೆ ಯಾವಾಗ ಸೌಜನ್ಯ ಕೇಸ್​ ವಿಡಿಯೋ ಮಾಡಿದರೋ, ಇವರು ನಿಜವಾಗಿಯೂ ಸೌಜನ್ಯಳಿಗೆ ನ್ಯಾಯ ಒದಗಿಸುತ್ತಾರೆ, ಅದರಲ್ಲಿ ಭಾಗಿಯಾದವರಿಗೆ ಗತಿ ಕಾಣಿಸುತ್ತಾರೆ, ಅವರು ಯಾರೇ ಆಗಿದ್ದರೂ ಅಂಥವರನ್ನು ಕಂಡುಹಿಡಿಯುತ್ತಾರೆ ಎಂದುಕೊಂಡವರೇ ಹೆಚ್ಚು. ಇದೇ ಕಾರಣಕ್ಕೆ ಬಹುತೇಕ ಎಲ್ಲಾ ವರ್ಗದವರೂ ಸಮೀರ್​ ಫ್ಯಾನ್​ ಆಗಿಬಿಟ್ಟಿರು.

ಅಷ್ಟಕ್ಕೂ ಮಾತಿನಿಂದಲೇ ಮನೆ ಕಟ್ಟುವ, ಮರುಳು ಮಾಡುವ, ಮಾತಿನಿಂದಲೇ ಮೋಡಿ ಮಾಡುವವರಿಗೆ ಸಾಮಾನ್ಯವಾಗಿ ಅಭಿಮಾನಿಗಳು ಹೆಚ್ಚೇ ಇರುತ್ತಾರೆ. ಏಕೆಂದರೆ ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎನ್ನುವ ಮಾತಿದೆಯಲ್ಲ, ಇದು ಕೂಡ ಹಾಗೆಯೇ. ಸೌಜನ್ಯಳಿಗೆ ನ್ಯಾಯ ಸಿಗುತ್ತೆ ಎಂದು ಇವರ ಪರವಾಗಿ ನಿಂತವರು ಅದೆಷ್ಟೋ ಮಂದಿ. ಯಾವಾಗ ರಾತ್ರೋರಾತ್ರಿ ಫೇಮಸ್​ ಆಗಿ ತನ್ನ ಮಾತುಗಳನ್ನೆಲ್ಲಾ ಜನ ನಂಬುತ್ತಿದ್ದಾರೆ ಎನ್ನುವುದು ಸಮೀರ್​ಗೆ ತಿಳಿಯಿತೋ ಆಗಲೇ ಅಸಲಿ ಗುಣ ಹೊರಕ್ಕೆ ಬಂತು. ಸುಳ್ಳಿನ ಕಂತೆಗಳ ಸರಮಾಲೆಯನ್ನೇ ಹರಿಬಿಟ್ಟು ಕೊನೆಗೆ ಎಐ ಮೂಲಕವೇ ನಕಲಿ ವಿಡಿಯೋ ಮಾಡಿ, ಅದನ್ನೇ ಒಂದಿಷ್ಟು ಮಂದಿ ನಂಬುವ ಹಾಗೆ ಮಾಡಿ ಕೇಸು ದಾಖಲಿಸಿಕೊಂಡವರು ಸಮೀರ್​.

ಅಲ್ಲಿಂದಲೇ ಪೊಲೀಸರಿಗೆ ಇವರ ಮೇಲೆ ಕಣ್ಣು ಇತ್ತು. ಸೂಕ್ತ ಕಾರಣ, ಸಾಕ್ಷಿಗಾಗಿ ಕಾದು ಕುಳಿತಿದ್ದರು. ಆ ಕಾಲವೂ ಬಂದೇ ಬಿಟ್ಟಿದೆ. ಅತ್ತ ಸುಜಾತಾ ಭಟ್​, ಅನನ್ಯಾ ಭಟ್​ ನನ್ನ ಮಗಳೇ ನನ್ನ ಮಗಳೇ ಎಂದು ಈಗಲೂ ಸುಳ್ಳನ್ನೇ ಹೇಳುತ್ತಾ ಸಾಗಿದ್ದರೂ, ಆಕೆಯನ್ನು ಅಷ್ಟರಮಟ್ಟಿಗೆ ರೆಡಿ ಮಾಡಿದ್ದು ಕೂಡ ಇದೇ ಸಮೀರ್​ ಎಂದು ಹೇಳಲಾಗುತ್ತಿದೆ. ಇದರ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕಿದೆ. ಸಾಲದು ಎನ್ನುವುದಕ್ಕೆ, ಈ ಕೇಸ್​ನಲ್ಲಿ ಸಿಲುಕಿರುವ ಮಹೇಶ್ ಶೆಟ್ಟಿ ತಿಮ್ಮರೋಡಿ, ಗಿರೀಶ್ ಮಟ್ಟಣ್ಣನವರ್ ಜೊತೆಗೂ ಇವರು ಕಾಣಿಸಿಕೊಂಡಿದ್ದಾರೆ. ತಾನೇ ಹೆಣ ಹೂಳಿರುವುದಾಗಿ ಹೇಳಿರೋ ಮಾಸ್ಕ್ ಮ್ಯಾನ್​ ಹಿಂದೆಯೂ ಇವರದ್ದೇ ಕೈವಾಡ ಇದೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇವೆಲ್ಲವೂ ಈಗ ಸಮೀರ್​ ಬುಡಕ್ಕೆ ಬೆಂಕಿ ಇಟ್ಟಿದೆ.

ಹಿಂದೂಗಳ ಧರ್ಮಕ್ಷೇತ್ರವಾಗಿರುವ ಧರ್ಮಸ್ಥಳದ (Dharmasthala) ಬಗ್ಗೆ ಅವಹೇಳನ ಮಾಡಲು, ಸೌಜನ್ಯಳ ಸಾವನ್ನೇ ಬಂಡವಾಳ ಮಾಡಿಕೊಂಡ ಸಮೀರ್​ಗೆ ಯಾರಾದರೂ ಫಂಡಿಂಗ್​ ಮಾಡ್ತಿದ್ದಾರಾ ಎನ್ನುವ ಬಗ್ಗೆ ತನಿಖೆಗೆ ತೀವ್ರ ಒತ್ತಾಯ ಕೇಳಿಬರುತ್ತಿದೆ. ಧರ್ಮಸ್ಥಳದ ಬಗ್ಗೆ ಮೊದಲ ವಿಡಿಯೋ ಮಾಡಿದಾಗಲೇ ಬಳ್ಳಾರಿಯ ಕೌಲಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಆಗಲೇ ಅಲ್ಲಿಂದ ಎಸ್ಕೇಪ್​ ಆಗಿ ಬೆಂಗಳೂರಿಗೆ ಅವರು ಬಂದಿದ್ದರು. ಈಗ ಇವರ ವಿರುದ್ಧ ಸಾಕಷ್ಟು ದೂರುಗಳು ಅದರಲ್ಲಿಯೂ ಗಂಭೀರ ಸ್ವರೂಪದ ದೂರುಗಳು ಇರುವ ಹಿನ್ನೆಲೆಯಲ್ಲಿ, ಮುಂದೆ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಒಂದು ವೇಳೆ ಕೋರ್ಟ್​ ನಿರೀಕ್ಷಣಾ ಜಾಮೀನು ನೀಡದೇ ಹೋದರೆ, ಸರೆಂಡರ್​ ಆಗಲೇಬೇಕು, ಇಲ್ಲದಿದ್ದರೆ ಪೊಲೀಸರು ತಮ್ಮದೇ ಆದ ರೀತಿಯಲ್ಲಿ ಅರೆಸ್ಟ್​ ಮಾಡಿ ಬಾಯಿ ಬಿಡಿಸುತ್ತಾರೆ.