Asianet Suvarna News Asianet Suvarna News

ತಾಳಗುಪ್ಪ-ಹುಬ್ಬಳ್ಳಿ ರೈಲು ಮಾರ್ಗಕ್ಕೆ ಗಡಿ ಗುರುತು, ಯಾವೆಲ್ಲ ಜಿಲ್ಲೆಯಲ್ಲಿ ಹಾದು ಹೋಗಲಿದೆ ಈ ಟ್ರೈನ್‌

ಜನರ ಬಹು ನಿರೀಕ್ಷಿತ ತಾಳಗುಪ್ಪ-ಹುಬ್ಬಳ್ಳಿ ರೈಲು ಮಾರ್ಗ ಯೋಜನೆಯ ಸರ್ವೇ ಕಾರ್ಯ ಚುರುಕುಗೊಂಡಿದ್ದು, ಈಗ ಅಲ್ಲಲ್ಲಿ ರೈಲು ಮಾರ್ಗದ ಗಡಿ ಗುರುತಿಸಿ ಕಲ್ಲು ನಿಲ್ಲಿಸಲಾಗಿದೆ. ರೈತರಲ್ಲಿ ಭೂಮಿ ಕಳೆದುಕೊಳ್ಳುವ ಆತಂಕ ಸೃಷ್ಟಿಸಿದೆ.

 Demarcation for Talguppa Hubballi railway project line via Tadas Mundgod Sirsi Siddapura gow
Author
First Published Oct 13, 2023, 11:17 AM IST

ಸಂತೋಷ ದೈವಜ್ಞ

ಮುಂಡಗೋಡ (ಅ.13): ಜನರ ಬಹು ನಿರೀಕ್ಷಿತ ತಾಳಗುಪ್ಪ-ಹುಬ್ಬಳ್ಳಿ ರೈಲು ಮಾರ್ಗ ಯೋಜನೆಯ ಸರ್ವೇ ಕಾರ್ಯ ಚುರುಕುಗೊಂಡಿದ್ದು, ಈಗ ಅಲ್ಲಲ್ಲಿ ರೈಲು ಮಾರ್ಗದ ಗಡಿ ಗುರುತಿಸಿ ಕಲ್ಲು ನಿಲ್ಲಿಸಲಾಗಿದೆ. ಇದು ಜನರಲ್ಲಿ ಹರ್ಷವನ್ನುಂಟು ಮಾಡಿದರೆ, ರೈತರಲ್ಲಿ ಭೂಮಿ ಕಳೆದುಕೊಳ್ಳುವ ಆತಂಕ ಸೃಷ್ಟಿಸಿದೆ.

ಹಲವು ವರ್ಷಗಳ ಬೇಡಿಕೆಯಾದ ತಾಳಗುಪ್ಪ(ಸಾಗರ)-ಸಿದ್ದಾಪುರ-ಶಿರಸಿ-ಮುಂಡಗೋಡ-ತಡಸ ಮಾರ್ಗವಾಗಿ ಹುಬ್ಬಳ್ಳಿಗೆ ಸಂಚರಿಸುವ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ರೈಲ್ವೆ ಇಲಾಖೆಯಿಂದ ಅನುಮೋದನೆ ದೊರೆತಿದ್ದು, ಸರ್ವೇ ಕೂಡ ಪ್ರಾರಂಭವಾಗಿದೆ. ಅದು ಈಗ ಮುಂಡಗೋಡ ತಾಲೂಕು ಪ್ರವೇಶಿಸಿದೆ. ಗಡಿ ಗುರುತಿಸಿ ಕಲ್ಲು ನಿಲ್ಲಿಸುವ ಕೆಲಸ ಬರದಿಂದ ಸಾಗಿದ್ದು ರೈಲು ಮಾರ್ಗದ ನಿರೀಕ್ಷೆಯಲ್ಲಿದ್ದ ಜನರಲ್ಲಿ ಆಶಾಭಾವನೆ ಮೂಡಿಸಿದೆ. ಸದ್ಯ ಮುಂಡಗೋಡ ತಾಲೂಕಿನ ಮಳಗಿ ಭಾಗದ ಕ್ಯಾಗದಿಕೊಪ್ಪ, ಕಲ್ಲಹಕ್ಕಲ, ಧರ್ಮಾ ಕಾಲನಿ, ಮಳಲಗಾಂವ, ಗೊಟಗೊಡಿಕೊಪ್ಪ ಮುಂತಾದ ಭಾಗದಲ್ಲಿ ಈಗಾಗಲೇ ರೈಲು ಮಾರ್ಗದ ಗಡಿ ಗುರುತಿಸಿ ಕಲ್ಲು ನಿಲ್ಲಿಸಲಾಗಿದೆ. ಪಾಳಾ-ಮುಂಡಗೋಡ ಮಾರ್ಗವಾಗಿ ಹುಬ್ಬಳ್ಳಿಗೆ ಹೋಗಲಿರುವ ರೈಲು ಮಾರ್ಗ ಇದಾಗಿದೆ. ಒಟ್ಟು ಮೂರು ಜಿಲ್ಲೆಗಳಲ್ಲಿ ಅಂದರೆ ಉತ್ತರ ಕನ್ನಡ , ಶಿವಮೊಗ್ಗ,  ಧಾರವಾಡ ಜಿಲ್ಲೆಗಳಲ್ಲಿ ಈ ರೈಲು ಹಾದುಹೋಗಲಿದೆ.

ಕುಡಿದ ಮತ್ತಿನಲ್ಲಿ ಸಹಪ್ರಯಾಣಿಕ ವೃದ್ಧ ದಂಪತಿ ಮೇಲೆ ಯುವಕನಿಂದ ಮೂತ್ರ ವಿಸರ್ಜನೆ

ಬೆಂಗಳೂರ, ಮುಂಬೈ, ಮೈಸೂರು ಅಥವಾ ಮುಂತಾದ ಕಡೆಗೆ ತೆರಳಲು ರೈಲು ಹತ್ತಬೇಕಾದರೆ ಹುಬ್ಬಳ್ಳಿ ಅಥವಾ ಹಾವೇರಿಗೆ ಹೋಗಬೇಕಾದ ಪರಿಸ್ಥಿತಿ ಇರುವುದರಿಂದ ಇಲ್ಲಿಯ ಜನರಿಗೆ ರೈಲಿನ ಪರಿಚಯವೇ ಇಲ್ಲದಂತಾಗಿದೆ. ಹಾಗಾಗಿ ಈ ಭಾಗದ ಜನರು ಬಸ್ ಹಾಗೂ ಖಾಸಗಿ ವಾಹನ ಅವಲಂಬಿತರಾಗಿದ್ದಾರೆ. ಆದರೆ ಈಗ ಇಲ್ಲಿಯು ರೈಲು ಸಂಚಾರವಾಗಲಿದೆ ಎಂಬ ಕುರುಹುಗಳು ಸಿಗುತ್ತಿದ್ದಂತೆ ಹಲವು ದಿನಗಳ ಕನಸು ನನಸಾಗುವುದು ಸನ್ನಿಹಿತವಾದಂತೆ ಭಾಸವಾಗುತ್ತಿದೆ.

ಈ ಭಾಗದ ಜನತೆಯ ಬಹು ವರ್ಷಗಳ ಬೇಡಿಕೆಯಾದ ರೈಲ್ವೆ ಯೋಜನೆಗೆ ಪರಿಸರವಾದಿಗಳ ವಿರೋಧದಿಂದ ವಿಳಂಬವಾಗಿದ್ದು, ಹಿಂದಿನ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಈ ಯೋಜನೆ ಬಗ್ಗೆ ಇದ್ದ ಕಳಕಳಿ ಹಾಗೂ ಅವರ ಪ್ರಯತ್ನದ ಫಲವಾಗಿ ಕೇಂದ್ರ ಸರ್ಕಾರ ಈ ಯೋಜನೆಗೆ ಅನುಮೋದನೆ ನೀಡಿ ಹಣ ಮೀಸಲಿರಿಸಿ ಸರ್ವೇ ಕಾರ್ಯಕ್ಕೂ ಚಾಲನೆ ನೀಡಿದೆ.

ಲೈಂಗಿಕ ಕಿರುಕುಳಕ್ಕೆ ವಿರೋಧ: ಚಲಿಸುತ್ತಿರುವ ರೈಲಿನ ಬಳಿ ಬಾಲಕಿ ತಳ್ಳಿದ ಕಾಮುಕ; ಕೈ, ಕಾಲು ಕಟ್‌!

ರೈಲು ಮಾರ್ಗ ಸರ್ವೇ ಪ್ರಕಾರ ಬಹುತೇಕ ತೋಟ-ಗದ್ದೆಗಳಲ್ಲಿ ಹಾದು ಹೋಗಿದ್ದು ಗಡಿ ಗುರುತಿಸಿ ಕಲ್ಲು ನಿಲ್ಲಿಸಲಾಗಿದೆ. ಇದರಿಂದ ಭೂಮಿ ಕಳೆದುಕೊಳ್ಳುವ ಭೀತಿ ರೈತರಿಗೆ ಎದುರಾಗಿದೆ. ರೈತರ ಗಮನಕ್ಕೆ ತಾರದೆ ಗಡಿ ಕಲ್ಲು ಅಳವಡಿಸಿದ್ದರಿಂದ ತಮ್ಮ ಗದ್ದೆಯಲ್ಲಿ ಕಲ್ಲು ಹಾಕಲಾಗಿದೆ. ನಿಮ್ಮ ಗದ್ದೆಯಲ್ಲಿ ಕಲ್ಲು ನಿಲ್ಲಿಸಲಾಗಿದೆಯೇ ಎಂಬ ಚರ್ಚೆ ಪ್ರಾರಂಭವಾಗಿದೆ. ಮುಂದೆ ಹೇಗೊ? ಏನೋ ಎಂಬ ಚಿಂತೆ ರೈತರಲ್ಲಿ ಮನೆ ಮಾಡಿದೆ. ರೈಲ್ವೆ ಮಾರ್ಗ ಹಾದು ಹೋಗುವ ಭೂಮಿಯ ಮಾಲೀಕರಿಗೂ ಈ ಬಗ್ಗೆ ಮಾಹಿತಿ ನೀಡಿ ಸೂಕ್ತ ಪರಿಹಾರ ಒದಗಿಸುವ ಬಗ್ಗೆ ತಿಳಿಸಿ ಧೈರ್ಯ ತುಂಬುವ ಕೆಲಸವನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಬೇಕಿದೆ ಎಂಬುವುದು ಪ್ರಜ್ಞಾವಂತ ನಾಗರಿಕರ ಆಗ್ರಹ.

ಭೌಗೋಳಿಕ ಕ್ಷೇತವಾದ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಕ್ಕೆ ವಿಫುಲ ಅವಕಾಶವಿದೆ. ಮಲೆನಾಡು-ಬಯಲು ಸೀಮೆ ಸಂಪರ್ಕ ಕಲ್ಪಿಸುವ ಈ ರೈಲು ಮಾರ್ಗದಿಂದ ಅಡಕೆ, ತೆಂಗು, ಮಾವು, ಗೋವಿನ ಜೋಳ, ಶುಂಠಿ, ಭತ್ತ ಮುಂತಾದ ಬೆಳೆಗಾರರು ಸೇರಿದಂತೆ ಉದ್ಯಮಿ ವ್ಯಾಪಾರಸ್ಥರಿಗೆ ಅನುಕೂಲವಾಗಲಿದ್ದು, ಯುವಕರಿಗೆ ಉದ್ಯೋಗ ಕೂಡ ಸೃಷ್ಟಿಯಾಗಲಿದೆ. ಕೇಂದ್ರ ಹಾಗೂ ಸರ್ಕಾರಗಳು ಈ ಯೋಜನೆಗೆ ಮತ್ತಷ್ಟು ಒತ್ತು ನೀಡಿ ಶೀಘ್ರವಾಗಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾಧ್ಯಕ್ಷ ಮಹೇಶ ಹೊಸಕೊಪ್ಪ ಹೇಳಿದ್ದಾರೆ.

ರೈಲ್ವೆ ಯೋಜನೆಯಿಂದ ಘಟ್ಟದ ಮೇಲಿನ ತಾಲೂಕಿನ ಜನರಿಗೆ ತೀವ್ರ ಸಹಕಾರಿಯಾಗಲಿದೆ. ಆದರೆ ರೈಲು ಮಾರ್ಗಕ್ಕೆ ತೋಟ, ಗದ್ದೆಗಳಲ್ಲಿ ಗಡಿ ಗುರುತಿಸಿ ಕಲ್ಲು ನಿಲ್ಲಿಸಿದ್ದು ರೈತರು ಭಯಭೀತರಾಗಿದ್ದಾರೆ. ರೈತರಿಗೂ ಈ ಯೋಜನೆ ಬೇಕು. ಅದೇ ರೀತಿ ರೈತರಿಗೆ ಯಾವುದೇ ತೊಂದರೆ ಹಾಗೂ ನಷ್ಟವಾಗದ ರೀತಿಯಲ್ಲಿ ಯೋಜನೆ ಅನುಷ್ಠಾನಗೊಳಿಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಚೇತನ್ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios