*   ರಾಜ್ಯದ ಮೊದಲ ಎಲೆಕ್ಟ್ರಿಕ್‌ ಬಸ್‌ಗೆ ಸಿಎಂ ಬೊಮ್ಮಾಯಿ ಹಸಿರು ನಿಶಾನೆ*   ಪ್ರಯಾಣಿಕರ ಸಂಖ್ಯೆ ಏರಿಕೆ*   ಜ.1ರಿಂದ ಮಾಸಿಕ ಪಾಸ್‌ 

ಬೆಂಗಳೂರು(ಡಿ.25): ಕಳೆದ ಶುಕ್ರವಾರದಿಂದ ನಗರದಲ್ಲಿ ಮರುಚಾಲನೆ ದೊರೆತ ಬಿಎಂಟಿಸಿ(BMTC) ಹವಾ ನಿಯಂತ್ರಿತ(AC) ಬಸ್‌ಗಳಿಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಈ ಹಿಂದೆ ನಿಗದಿಯಾಗಿದ್ದ ಪ್ರಯಾಣ ದರದಲ್ಲಿ ಶೇ.34ರಷ್ಟು ಕಡಿತ ಮಾಡಿದ ಬಳಿಕ ಎಸಿ ಬಸ್‌ಗಳಿಗೆ ಹೆಚ್ಚಿನ ಸಂಖ್ಯೆಯ ಜನ ಸಂಚರಿಸಲು ಮುಂದಾಗುತ್ತಿದ್ದಾರೆ. ಕಳೆದ ಒಂದು ವಾರದಿಂದ ನಗರದ ವಿವಿಧ ಮಾರ್ಗಗಳಲ್ಲಿ ವೋಲ್ವೋ ಬಸ್‌(Volvo Bus) ಸಂಚರಿಸುತ್ತಿದ್ದು, ಹೆಚ್ಚಿನ ಸಂಖ್ಯೆಯ ಜನ ಈ ವಾಹನಗಳಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ. ಅಲ್ಲದೆ, ನಗರದ ವಿವಿಧ ಮಾರ್ಗಗಳಲ್ಲಿ ವೋಲ್ವೋ ಬಸ್‌ ಕಾರ್ಯಾಚರಣೆಯನ್ನು ಹೆಚ್ಚಳ ಮಾಡುವಂತೆ ಬೇಡಿಕೆಯೂ ಬರುತ್ತಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಸ್ತುತ 96 ಬಸ್‌ಗಳನ್ನು ಮಾತ್ರ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ದಿನ ಕಳೆದಂತೆ ಹೆಚ್ಚು ಜನ ಆಗಮಿಸುತ್ತಿದ್ದಾರೆ. ಮಾಸಿಕ ಪಾಸ್‌ಗಳನ್ನು ಬಿಡುಗಡೆ ಮಾಡುವಂತೆ ಕೋರುತ್ತಿದ್ದಾರೆ. ಜ.1ರಿಂದ ಎಸಿ ಬಸ್‌ಗಳ ಮಾಸಿಕ ಪಾಸ್‌ ಬಿಡುಗಡೆಯಾಗಲಿದ್ದು, ಮತ್ತಷ್ಟು ಪ್ರಯಾಣಿಕರಿಗೆ(Passengers) ನೆರವಾಗಲಿದೆ ಎಂದು ಅಧಿಕಾರಿಗಳು ವಿವರಿಸಿದರು.

BMTC Volvo Bus fare : ಪ್ರಯಾಣಿಕರ ಕೊರತೆ : ವೋಲ್ವೊ ಬಸ್‌ ದರ ಕಡಿತ

ನಷ್ಟ ಇಲ್ಲ:

ಕಳೆದ ಒಂದು ವಾರದಿಂದ ನಗರದಲ್ಲಿ 96 ಎಸಿ ಬಸ್‌ಗಳು(AC Bus) ಸಂಚರಿಸುತ್ತಿದ್ದು, ಈವರೆಗೂ ನಷ್ಟ ಉಂಟಾಗಿಲ್ಲ. ಇದೇ ರೀತಿಯಲ್ಲಿ ಮುಂದುವರೆದಲ್ಲಿ ಬಿಎಂಟಿಸಿ ಬಳಿಯಿರುವ 700ಕ್ಕೂ ಹೆಚ್ಚು ಎಸಿ ಬಸ್‌ಗಳನ್ನು ಹಂತ ಹಂತವಾಗಿ ರಸ್ತೆಗಿಳಿಸಲಾಗುವುದು ಎಂದು ಬಿಎಂಟಿಸಿಯ ಉಪಾಧ್ಯಕ್ಷ ಎಂ.ಆರ್‌.ವೆಂಕಟೇಶ್‌ ಮಾಹಿತಿ ನೀಡಿದ್ದಾರೆ.

ಧೂಳು ತಿನ್ನುತ್ತಿದ್ದ ಎಸಿ ಬಸ್‌ಗಳು

ಕೊರೋನಾ(Coronavirus) ಲಾಕ್‌ಡೌನ್‌(Lockdown) ಬಳಿಕ ಬಿಎಂಟಿಸಿ ವೋಲ್ವೋ ಬಸ್‌ಗಳು ಕಾರ್ಯಾಚರಣೆಯಿಲ್ಲದೆ ಮೂಲೆ ಗುಂಪಾಗಿದ್ದವು. ಸಂಚಾರ ನಡೆಸದಿದ್ದರೂ ಅವುಗಳನ್ನು ನಿರ್ವಹಣೆಗೆ ಮಾಸಿಕ ಲಕ್ಷಾಂತರ ರು.ಗಳನ್ನು ವೆಚ್ಚ ಮಾಡಬೇಕಾಗಿತ್ತು. ಇದರಿಂದ ಬಿಎಂಟಿಸಿಗೆ ಆಗುತ್ತಿದ್ದ ನಷ್ಟದ ಪ್ರಮಾಣ ಹೆಚ್ಚಾಗುತ್ತಿತ್ತು. ಇದರಿಂದ ಸಾರ್ವಜನಿಕರಿಂದ ಆಕ್ಷೇಪಣೆಗಳು ಬಂದ ಹಿನ್ನೆಲೆಯಲ್ಲಿ ಪ್ರಯಾಣ ದರದಲ್ಲಿ ಶೇ.34ರಷ್ಟು ಕಡಿಮೆ ಮಾಡಿ ಡಿ.17ರಿಂದ ವೋಲ್ವೋ ಬಸ್‌ಗಳ ಕಾರ್ಯಾಚರಣೆಗೆ ಅವಕಾಶ ಮಾಡಿಕೊಡಲಾಗಿತ್ತು.

ನಾಡಿದ್ದಿನಿಂದ ರಸ್ತೆಗಿಳಿಯಲಿವೆ ಎಲೆಕ್ಟ್ರಿಕ್‌ ಬಸ್‌!

ಬೆಂಗಳೂರು: ರಾಜ್ಯದಲ್ಲಿ(Karnataka) ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್‌ ಬಸ್‌ಗಳನ್ನು(Electric Bus) ರಸ್ತೆಗಿಳಿಸಲು ಬಿಎಂಟಿಸಿಗೆ ಸಮಯ ಕೂಡಿಬಂದಿದ್ದು, ಡಿ.27ರಂದು ಚಾಲನೆ ದೊರೆಯಲಿದೆ.

ಕಳೆದ ಆರು ತಿಂಗಳಿನಿಂದ ವಿಳಂಬವಾಗುತ್ತಿದ್ದ ಚಾಲನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಸಮಯಾವಕಾಶ ನೀಡಿದ್ದಾರೆ. ಈ ವೇಳೆ 25 ಎಲೆಕ್ಟ್ರಿಕ್‌ ಬಸ್‌ಗಳು ಮತ್ತು 50 ಬಿಎಸ್‌-6 ಬಸ್‌ಗಳಿಗೆ ವಿಧಾನಸೌಧ ಮುಂದೆ ಮಖ್ಯಮಂತ್ರಿಗಳು(CM Basavaraj Bommai) ಹಸಿರು ನಿಶಾನೆ ತೋರಲಿದ್ದಾರೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುರಕ್ಷತೆಗೆ ಹೆಚ್ಚಿನ ಆದ್ಯತೆ:

ಗುತ್ತಿಗೆ ಮಾದರಿಯಡಿ ಬಿಎಂಟಿಸಿ ಪಡೆಯುತ್ತಿರುವ ಹವಾ ನಿಯಂತ್ರಣರಹಿತ ಎಲೆಕ್ಟ್ರಿಕ್‌ ಬಸ್‌ಗಳು ಹಲವು ವಿಶೇಷತೆಗಳಿಂದ ಕೂಡಿವೆ. ಆಕರ್ಷಕವಾಗಿರುವ ಈ ಎಲೆಕ್ಟ್ರಿಕ್‌ ಬಸ್‌ 9 ಮೀಟರ್‌ ಉದ್ದವಿದೆ. ‘1 ಪ್ಲಸ್‌ 1’ ಮಾದರಿಯಲ್ಲಿ 33 ಪ್ಲಸ್‌ 1 ಸೇರಿದಂತೆ ಒಟ್ಟು 34 ಆಸನಗಳಿವೆ. ಆಸನಗಳು ಪ್ರಯಾಣಿಕರಿಗೆ ಹಿತಾನುಭವ ನೀಡಲಿವೆ. ಬಸ್ಸಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಎರಡು ಸಿಸಿಟಿವಿ ಕ್ಯಾಮೆರಾಗಳಿವೆ(CC Camera). ಮುಂಭಾಗ ಮತ್ತು ಮಧ್ಯಭಾಗ ಎರಡು ಸ್ವಯಂಚಾಲಿತ ದ್ವಾರಗಳಿದ್ದು, ಪ್ರಯಾಣಿಕರು ಆರಾಮವಾಗಿ ಬಸ್‌ ಏರಲು ಮತ್ತು ಇಳಿಯಲು ವಿಶಾಲವಾದ ಸ್ಥಳಾವಕಾಶವಿದೆ.

1 ಪ್ಲಸ್‌ 1 ಆಸನಕ್ಕೆ ಸೇಫ್ಟಿ ಬಟನ್‌ ಸೌಲಭ್ಯವಿದೆ. ಒಂದು ವೇಳೆ ಪ್ರಯಾಣದ ವೇಳೆ ಏನಾದರೂ ಅಹಿತಕರ ಘಟನೆಗಳು ಜರುಗಿದರೆ ಪ್ರಯಾಣಿಕರು ಈ ಬಟನ್‌ ಒತ್ತಿದ ತಕ್ಷಣ ಚಾಲಕನ ಬಳಿ ಅಲಾರಂ ಶಬ್ದವಾಗಲಿದೆ. ಇದರಿಂದ ಚಾಲಕ ತಕ್ಷಣ ಬಸ್‌ ನಿಲುಗಡೆ ಮಾಡಬಹುದಾಗಿದೆ.

ಬೆಂಗ್ಳೂರಿಂದ 6 ನಗರಕ್ಕೆ ಎಲೆಕ್ಟ್ರಿಕ್‌ ಬಸ್‌ ಸಂಚಾರ

ಆಟೋ ಗೇರ್‌:

ಬಸ್ಸಿನ ಮತ್ತೊಂದು ವಿಶೇಷವೆಂದರೆ, ಇದು ಆಟೋಮ್ಯಾಟಿಕ್‌ ಬಸ್‌(Automatic Bus) ಆಗಿದ್ದು, ಕ್ಲಚ್‌ ಹಾಗೂ ಗೇರ್‌ ಇಲ್ಲ. ಕೇವಲ ಆ್ಯಕ್ಸಲೇಟರ್‌ ಮೂಲಕ ಬಸ್‌ ಸಂಚಾರ ಮಾಡುತ್ತದೆ. ಒಮ್ಮೆಗೆ ಒಂದೂವರೆ ತಾಸು ಬಸ್ಸಿನ ಬ್ಯಾಟರಿ ಚಾರ್ಜ್‌ ಮಾಡಿದರೆ 120 ಕಿ.ಮೀ. ಸಂಚರಿಸಲಿದೆ. ಕ್ವಿಕ್‌ ಚಾರ್ಜರ್‌ಗೂ ಅವಕಾಶವಿದ್ದು, 45 ನಿಮಿಷ ಬ್ಯಾಟರಿ ಚಾರ್ಜ್‌ ಮಾಡಿದರೆ, 60 ಕಿ.ಮೀ. ಸಂಚರಿಸುವ ಹಾಗೂ ಪ್ರತಿ ಗಂಟೆಗೆ 70 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಈ ಬಸ್‌ ಹೊಂದಿದೆ.

ಪ್ರತಿ ಕಿ.ಮೀ.ಗೆ .57 ಪಾವತಿ:

ಎಂಟಿಸಿ ಎನ್‌ಟಿಪಿಸಿ-ಜೆಬಿಎಂ ಕಂಪನಿಯಿಂದ ಗುತ್ತಿಗೆ ಮಾದರಿಯಡಿ ಬಿಎಂಟಿಸಿ ಈ ಎಲೆಕ್ಟ್ರಿಕ್‌ ಬಸ್‌ ಪಡೆಯುತ್ತಿರುವುದರಿಂದ ಟೆಂಡರ್‌ ಷರತ್ತಿನ ಅನ್ವಯ 10 ವರ್ಷಗಳ ಕಾಲ ಕಂಪನಿಯೇ ಬಸ್‌ಗಳನ್ನು ನಿರ್ವಹಣೆ ಮಾಡಲಿದೆ. ಕಂಪನಿ ಚಾಲಕನನ್ನು ನಿಯೋಜಿಸಿದರೆ, ಬಿಎಂಟಿಸಿ ನಿರ್ವಾಹಕನನ್ನು ನಿಯೋಜಿಸಲಿದೆ. ಬಸ್‌ ಸಂಚಾರದ ಆಧಾರದ ಮೇಲೆ ಪ್ರತಿ ಕಿ.ಮೀ.ಗೆ 51.67 ರು. ಮೊತ್ತವನ್ನು ಕಂಪನಿಗೆ ಪಾವತಿಸಲಿದೆ.