*   ಕೆಎಸ್‌ಆರ್‌ಟಿಸಿಗೆ 50 ಎಲೆಕ್ಟ್ರಿಕ್‌ ಬಸ್‌ ಬಲ*  ಹೈದರಾಬಾದ್‌ ಮೂಲದ ಒಲೆಕ್ಟ್ರಾ ಗ್ರೀನ್‌ ಟೆಕ್‌ ಕಂಪನಿಗೆ ಗುತ್ತಿಗೆ*   ದಿನಕ್ಕೆ 500 ಕಿ.ಮೀ. ಸಂಚಾರ ಸಾಮರ್ಥ್ಯ

ಮೋಹನ ಹಂಡ್ರಂಗಿ

ಬೆಂಗಳೂರು(ಅ.18): ರಾಜಧಾನಿ ಬೆಂಗಳೂರು(Bengaluru) ನಗರದಿಂದ ರಾಜ್ಯದ ವಿವಿಧ ನಗರಗಳಿಗೆ (ಅಂತರ್‌ ನಗರ) ಪರಿಸರ ಸ್ನೇಹಿ ಹವಾನಿಯಂತ್ರಿತ ಎಲೆಕ್ಟ್ರಿಕ್‌ ಬಸ್‌ (ಇ-ಬಸ್‌) ಸೇವೆ(Electric Bus) ನೀಡುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿ(KSRTC) ಗುತ್ತಿಗೆ ಮಾದರಿಯಡಿ 50 ಇ-ಬಸ್‌(E-Bus) ಪಡೆಯಲು ಮೂರನೇ ಬಾರಿ ಕರೆದಿದ್ದ ಟೆಂಡರ್‌ ಅಂತಿಮಗೊಂಡಿದೆ.

ಹೈದರಾಬಾದ್‌(Hyderabad) ಮೂಲಕ ‘ಒಲೆಕ್ಟ್ರಾ ಗ್ರೀನ್‌ ಟೆಕ್‌’ (Olectra Greentech Limited) ಕಂಪನಿ ಟೆಂಡರ್‌ ಪಡೆದುಕೊಂಡಿದೆ. ದಿನಕ್ಕೆ 500 ಕಿ.ಮೀ. ಸಂಚರಿಸುವ ಸಾಮರ್ಥ್ಯದ ಇ-ಬಸ್‌ ಉತ್ಪಾದಿಸುತ್ತಿರುವ ದೇಶದ(India) ಏಕೈಕ ಕಂಪನಿ ಇದಾಗಿದೆ. ಟೆಂಡರ್‌ನಲ್ಲಿ(Tender) ಭಾಗವಹಿಸಿದ್ದ ಏಕೈಕ ಕಂಪನಿ ಇದಾಗಿದ್ದು, ಪ್ರತಿ ಕಿ.ಮೀ.ಗೆ 55 ಪಡೆದು ಬಸ್‌ ಸೇವೆ ನೀಡಲು ಒಪ್ಪಿಗೆ ಸೂಚಿಸಿದೆ. ಶೀಘ್ರದಲ್ಲೇ ನಡೆಯಲಿರುವ ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿ ಸಭೆಯಲ್ಲಿ ಟೆಂಡರ್‌ ಚರ್ಚೆಗೆ ಬರಲಿದೆ. ಸಭೆಯಲ್ಲಿ ಟೆಂಡರ್‌ಗೆ ಅನುಮೋದನೆ ಸಿಕ್ಕರೆ ಆರು ತಿಂಗಳೊಳಗೆ ಹವಾನಿಯಂತ್ರಿತ ಇ-ಬಸ್‌ಗಳು ಕೆಎಸ್‌ಆರ್‌ಟಿಸಿಗೆ ಸೇರ್ಪಡೆಯಾಗಲಿದೆ.

ಫೇಮ್‌-2 ಯೋಜನೆಯ ಅನುದಾನ ಬಳಸಿಕೊಂಡು ಗುತ್ತಿಗೆ ಮಾದರಿಯಡಿ 50 ಹವಾನಿಯಂತ್ರಿತ(Air conditioned) ಇ-ಬಸ್‌ ಪಡೆಯುವ ಸಂಬಂಧ ಟೆಂಡರ್‌ ಕರೆದಾಗ ಇ-ಬಸ್‌ ಉತ್ಪಾದಿಸುವ ಕಂಪನಿಗಳು ಆಸಕ್ತಿ ವಹಿಸಲಿಲ್ಲ. ಏಕೆಂದರೆ, ಸದರಿ ಕಂಪನಿಗಳು ನಗರ ಕೇಂದ್ರಿತ ಇ-ಬಸ್‌ ಮಾತ್ರ ಉತ್ಪಾದಿಸುತ್ತಿವೆ. ಕೆಎಸ್‌ಆರ್‌ಟಿಸಿಗೆ ದಿನಕ್ಕೆ 500 ಕಿ.ಮೀ. ಸಂಚಾರ ಸಾಮರ್ಥ್ಯದ ಅಂತರ್‌ ನಗರ ಸೇವೆಗೆ ಪೂರಕವಾದ ಇ-ಬಸ್‌ ಅಗತ್ಯವಿತ್ತು. ಹೀಗಾಗಿ ಆ ಟೆಂಡರ್‌ ರದ್ದುಗೊಳಿಸಿ ಮೂರನೇ ಬಾರಿ ಟೆಂಡರ್‌ ಕರೆಯಲಾಗಿತ್ತು.

Bengaluru| 300 ಎಲೆಕ್ಟ್ರಿಕ್‌ ಬಸ್‌ ಖರೀದಿಗೆ BMTC ಹಸಿರು ನಿಶಾನೆ

ನಾಲ್ಕು ಬಾರಿ ಚೌಕಾಸಿ:

ಮೂರನೇ ಟೆಂಡರ್‌ನಲ್ಲಿ ಭಾಗವಹಿಸಿದ್ದ ಏಕೈಕ ಕಂಪನಿ ಒಲೆಕ್ಟ್ರಾ ಗ್ರೀನ್‌ ಟೆಕ್‌ ಆರಂಭದಲ್ಲಿ ಪ್ರತಿ ಕಿ.ಮೀ.ಗೆ 62.89 ರು.ಗೆ ಬಿಡ್‌ ಸಲ್ಲಿಸಿತ್ತು. ಬಳಿಕ ನಾಲ್ಕು ಬಾರಿ ಚೌಕಾಸಿ ನಡೆಸಿದ ಬಳಿಕ ಅಂತಿಮವಾಗಿ ಪ್ರತಿ ಕಿ.ಮೀ.ಗೆ 55 ರು.ಗೆ ಒಪ್ಪಿದೆ. ನಿಗಮದ ಆಡಳಿತ ಮಂಡಳಿ ಸಭೆಯಲ್ಲಿ ಈ ಟೆಂಡರ್‌ಗೆ ಒಪ್ಪಿಗೆ ದೊರೆತಲ್ಲಿ ಬಸ್‌ ಪೂರೈಸಲು ಕಂಪನಿಗೆ ಕಾರ್ಯಾದೇಶ ನೀಡುವುದಾಗಿ ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ(Kannada Prabha ತಿಳಿಸಿದರು.

6 ನಗರಗಳಿಗೆ ಇ-ಬಸ್‌:

ಕೆಎಸ್‌ಆರ್‌ಟಿಸಿ ಮೊದಲ ಹಂತದಲ್ಲಿ ಬೆಂಗಳೂರು ನಗರದಿಂದ ಮೈಸೂರು(Mysuru), ಮಡಿಕೇರಿ(Madikeri), ವಿರಾಜಪೇಟೆ(Virajpet), ಶಿವಮೊಗ್ಗ(Shivamogga), ಚಿಕ್ಕಮಗಳೂರು(Chikkamagalur) ಹಾಗೂ ದಾವಣಗೆರೆ(Davanagere) ಕಾರ್ಯಾಚರಿಸಲು ಯೋಜನೆ ರೂಪಿಸಿದೆ. ಪ್ರಯಾಣಿಕರ(Passenger) ಪ್ರತ್ರಿಕ್ರಿಯೆ ಹಾಗೂ ಬೇಡಿಕೆ ಆಧರಿಸಿ ರಾಜ್ಯದ ಇತರೆ ಸ್ಥಳಗಳಿಗೂ ಈ ಸೇವೆ ವಿಸ್ತರಿಸಲು ತೀರ್ಮಾನಿಸಿದೆ. 12 ಮೀಟರ್‌ ಉದ್ದ ಹಾಗೂ 43 ಆಸನ ಸಾಮರ್ಥ್ಯದ ಈ ಎಲೆಕ್ಟ್ರಿಕ್‌ ಬಸ್‌ಗಳಲ್ಲಿ ಹವಾನಿಯಂತ್ರಿತ ವ್ಯವಸ್ಥೆ, ಸಿಸಿಟಿವಿ ಕ್ಯಾಮರಾ, ಚಾರ್ಜಿಂಗ್‌ ಪಾಯಿಂಟ್‌(Charging Point) ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಇರಲಿವೆ.

ಕಂಪನಿಗೆ ನಿರ್ವಹಣೆ ಹೊಣೆ:

ಟೆಂಡರ್‌ ಷರತ್ತುಗಳ ಅನ್ವಯ ಗುತ್ತಿಗೆ ಅವಧಿ 10 ವರ್ಷ ನಿಗದಿಗೊಳಿಸಲಾಗಿದೆ. ಬಸ್‌ ಪೂರೈಸುವ ಕಂಪನಿಯೇ ಈ ಬಸ್‌ಗಳಿಗೆ ಚಾಲಕರನ್ನು ನಿಯೋಜಿಸಬೇಕು. ಇದರೊಂದಿಗೆ ಬಸ್‌ಗಳ ನಿರ್ವಹಣೆ, ವಿದ್ಯುತ್‌ ಶುಲ್ಕ, ವಾಹನ ಅಪಘಾತ ವಿಮೆ, ಪ್ರಯಾಣಿಕರ ಅಪಘಾತ ವಿಮೆ ಎಲ್ಲವನ್ನೂ ನೋಡಿಕೊಳ್ಳಬೇಕು. ಕೆಎಸ್‌ಆರ್‌ಟಿಸಿ ಈ ಬಸ್‌ಗಳಿಗೆ ನಿರ್ವಾಹಕರನ್ನು ಮಾತ್ರ ನಿಯೋಜಿಸಲಿದ್ದು, ಪ್ರತಿ ಕಿ.ಮೀ.ಗೆ 55 ರು.ನಂತೆ ಕಂಪನಿಗೆ ಭರಿಸಲಿದೆ.

ಅನುದಾನ ಗಡುವು ವಿಸ್ತರಣೆಗೆ ಪತ್ರ

ಎಲೆಕ್ಟ್ರಿಕ್‌ ವಾಹನಗಳ ಬಳಕೆ ಉತ್ತೇಜಿಸಲು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವಾಲಯ ಫೇಮ್‌ ಯೋಜನೆ ರೂಪಿಸಿದೆ. ಪ್ರಸ್ತುತ ಈ ಯೋಜನೆಯ 2ನೇ ಹಂತದಲ್ಲಿ ಗುತ್ತಿಗೆ ಮಾದರಿಯಡಿ ಪಡೆಯುವ ಪ್ರತಿ ಎಲೆಕ್ಟ್ರಿಕ್‌ ಬಸ್‌ಗೆ .55 ಲಕ್ಷ ಸಬ್ಸಿಡಿ ನೀಡುತ್ತಿದೆ. ಸಾರಿಗೆ ನಿಗಮಗಳಿಗೆ ಅನುದಾನ ಪಡೆದುಕೊಳ್ಳಲು 2021ರ ಮಾರ್ಚ್‌ ಅಂತ್ಯದ ವರೆಗೆ ಸಮಯ ನೀಡಲಾಗಿತ್ತು. ಆದರೆ, ಕೊರೋನಾ(Coronavirus) ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿಯ ಟೆಂಡರ್‌ ಪ್ರಕ್ರಿಯೆ ವಿಳಂಬವಾದ್ದರಿಂದ ಗಡುವು ಮೀರಿದೆ. ಹೀಗಾಗಿ ಗಡುವು ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದೆ.