Murugha Seer Case; ಒಡನಾಡಿ ಸಂಸ್ಥೆಗೆ ಬೆದರಿಕೆ ಹಾಕಿದವರ ವಿರುದ್ಧ ಕ್ರಮಕ್ಕೆ ಆಗ್ರಹ
ಒಡನಾಡಿ ಸಂಸ್ಥೆಗೆ ಬೆದರಿಕೆ ಹಾಕಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮೈಸೂರಿನಲ್ಲಿ ಫೆವಾರ್ಡ್ ಸಂಸ್ಥೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದ್ದಾರೆ. ಇನ್ನೊಂದೆಡೆ ಮುರುಘಾಶ್ರೀಗೆ ಕರೋನರಿ ಆಂಜಿಯೋಗ್ರಾಂ ಮಾಡಲು ಕೋರ್ಚ್ ಸೂಚಿಸಿದೆ.
ಮೈಸೂರು (ಸೆ.7): ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಕೇಳಿಬಂದಿರುವ ಫೋಕ್ಸೋ ಪ್ರಕರಣ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಅಪ್ರಾಪ್ತ ಬಾಲಕಿಯರಿಗೆ ನೆರವಾಗಿರುವ ಮೈಸೂರಿನ ಎನ್‌ಜಿಓ ಸಂಸ್ಥೆ ಒಡನಾಡಿಗೆ ಮತ್ತು ಅದರ ಮುಖ್ಯಸ್ಥರಿಗೆ ಹಲವು ಕಡೆಯಿಂದ ಬೆದರಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಹಿನ್ನೆಲೆಯಲ್ಲಿ ಸಂಸ್ಥೆ ಪೊಲೀಸ್ ಮೊರೆ ಹೋಗಿತ್ತು. ಇದೀಗ ಒಡನಾಡಿ ಸಂಸ್ಥೆಗೆ ಬೆದರಿಕೆ ಹಾಕುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಸಂಸ್ಥೆಯ ಮುಖಂಡರು ಮತ್ತು ಮಕ್ಕಳಿಗೆ ಹಗಲಿರುಳು ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಫೆವಾರ್ಡ್ ಪದಾಧಿಕಾರಿಗಳು ನಗರದ ಗಾಂಧಿ ಚೌಕದಲ್ಲಿ ಪ್ರತಿಭಟಿಸಿದರು. ಶಿವಮೂರ್ತಿ ಮುರುಘಾ ಶರಣರ ವಿರುದ್ಧ ನಡೆಯುತ್ತಿರುವ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸುವುದು, ಸ್ವತಂತ್ರ ಮತ್ತು ಸಂಪೂರ್ಣ ತನಿಖೆಯನ್ನು ಖಚಿತಪಡಿಸಬೇಕು ಮತ್ತು ಅಪರಾಧದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಗುರುತಿಸಬೇಕು, ಧಾರ್ಮಿಕ ಸಂಸ್ಥೆಗಳು ನಡೆಸುವ ಮಕ್ಕಳ ವಸತಿ ಗೃಹಗಳನ್ನು ಸರ್ಕಾರದ ಅಧಿಕಾರಿಗಳ ಅಥವಾ ಅನುಭವಿ ಸ್ವಯಂ ಸೇವಾ ಸಂಸ್ಥೆಗಳಿಗೆ ಅಥವಾ ಎಸ್‌ಸಿಪಿಆರ್‌ಸಿಗೆ ಉತ್ತರದಾಯಿತ್ವವನ್ನಾಗಿ ಮಾಡಬೇಕು. ಈ ಬಗ್ಗೆ ಆದಷ್ಟುಬೇಗ ಒಂದು ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಆಗ್ರಹಿಸಿದರು.
ಮಕ್ಕಳ ಸಂಸ್ಥೆಗಳನ್ನು ಸುಧಾರಿಸಲು ಹಾಗೂ ಅಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ಎಲ್ಲರನ್ನು ಭಾಗವಹಿಸುವಂತೆ ಮಾಡಲು ಕರ್ನಾಟಕ ಉನ್ನತ ಮಟ್ಟದ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಂಗ ಆಯೋಗ ಸ್ಥಾಪಿಸಬೇಕು, ಪ್ರತಿ ಮಕ್ಕಳಿಗೆ ಸುರಕ್ಷಿತ ಮತ್ತು ಮುಕ್ತ ವಾತಾವರಣ ಕಲ್ಪಿಸಬೇಕು, ಮಕ್ಕಳ ಸಂಸ್ಥೆ ನಡೆಸಲು, ನಿರ್ವಹಣೆ, ಮೇಲ್ವಿಚಾರಣೆ ಮತ್ತು ಅಭಿವೃದ್ಧಿಗೆ ಯುಎನ್ ಸಿಆರ್‌ಸಿ, ಯೂನಿಸೆಫ್ ಶಿಷ್ಟಾಚಾರದ ಆಧಾರದ ಮೇಲೆ ಅನುಭವಿ ಸ್ವಯಂ ಸೇವಾ ಸಂಸ್ಥೆಯನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಸ್ಥೆಯ ಮೈಸೂರು ವಿಭಾಗದ ಉಪಾಧ್ಯಕ್ಷೆ ಎ.ಎಸ್. ಪ್ರೇಮಾ, ಜಿಲ್ಲಾಧ್ಯಕ್ಷೆ ಕೆ. ಸರಸ್ವತಿ, ನಿಕಟಪೂರ್ವ ಉಪಾಧ್ಯಕ್ಷ ಡಾ.ಎಂ.ಪಿ. ವರ್ಷ ಮೊದಲಾದವರು ಇದ್ದರು.
ಜೈಲು ಸೇರಿದ ಮುರುಘಾ ಶರಣರ ವಿರುದ್ಧ ಮತ್ತೊಂದು ಬಾಂಬ್, ವಿಡಿಯೋ ಇದೆ ಎಂದ ಒಡನಾಡಿ!
ಮುರುಘಾಶ್ರೀಗಳಿಗೆ ಆಂಜಿಯೋಗ್ರಾಂಗೆ ಕೋರ್ಚ್ ಸಮ್ಮತಿ
ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾಶರಣರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ. ಮುರುಘಾಶರಣರ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದಾಗ ನ್ಯಾಯಾಧೀಶರು ಗುರುವಾರ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಿ ಅಭಿಯೋಜಕರಿಗೆ ಸೂಚಿಸಿದ್ದರಿಂದ ವಿಚಾರಣೆ ಮುಂದೂಡಲಾಯಿತು. ಈ ನಡುವೆ ಮುರುಘಾಶ್ರೀಗೆ ಕರೋನರಿ ಆಂಜಿಯೋಗ್ರಾಂ ಮಾಡಲು ಕೋರ್ಚ್ ಸೂಚಿಸಿದೆ.
Murugha Mutt Row: ಇದು ಕ್ರಿಶ್ಚಿಯನ್ ಮಿಷನರಿಗಳ ಷಡ್ಯಂತ್ರ: ಮುರುಘಾ ಮಠದ ಆಪ್ತ ಜಿತೇಂದ್ರ ಆರೋಪ
ಮಠದ ವಕೀಲ ಉಮೇಶ್ ಮಾಡಿಕೊಂಡ ಮನವಿಗೆ ನ್ಯಾಯಾಲಯ ಸ್ಪಂದಿಸಿ, ಈ ಸೂಚನೆ ನೀಡಿದೆ. ಮುರುಘಾಶ್ರೀಗಳಿಗೆ ಸೆ.2 ರಂದು ಎದೆ ನೋವು ಕಾಣಿಸಿಕೊಂಡಿದ್ದು ತಪಾಸಣೆಗೆ ಅವಕಾಶ ಮಾಡಿಕೊಡುವಂತೆ ಉಮೇಶ್ ನ್ಯಾಯಾಲಯಕ್ಕೆ ಮನವಿ ಮಾಡ್ದಿದರು. ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ, ಚಿಕಿತ್ಸೆಗೆ ನ್ಯಾಯಾಲಯ ಸೂಚಿಸಿದೆ. ಇನ್ನು ಪ್ರಕರಣದ ಮೂರನೇ ಆರೋಪಿ ಮರಿಸ್ವಾಮಿ, ನಾಲ್ಕನೇ ಆರೋಪಿ ಮಠದ ಕಾರ್ಯದರ್ಶಿ ಪರಮಶಿವಯ್ಯ ಹಾಗೂ ಆರೋಪಿ ವಕೀಲ ಗಂಗಾಧರಯ್ಯ ಅವರ ನಿರೀಕ್ಷಣಾ ಅರ್ಜಿ ವಿಚಾರಣೆ ಕೂಡಾ ಮುಂದಾಡಲಾಗಿದ್ದು ಆಕ್ಷೇಪಣೆ ಸಲ್ಲಿಸಲು ಕೋರ್ಚ್ ಸೂಚಿಸಿದೆ. ಸದ್ಯ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಶ್ರೀ ಚಿತ್ರದುರ್ಗದ ಜಿಲ್ಲಾ ಕಾರಾಗೃಹದಲ್ಲಿದ್ದಾರೆ. ಎಫ್ಐಆರ್ ದಾಖಲಾದ ಬರೋಬ್ಬರಿ ಏಳು ದಿನಗಳ ಬಳಿಕ ಶ್ರೀಗಳ ಬಂಧನವಾಗಿತ್ತು.