ಶಿವಮೊಗ್ಗ: ಅತಿವೃಷ್ಟಿ ಹಾನಿ ಎದುರಿಸಲು ಜಿಲ್ಲಾಡಳಿತದಿಂದ ಕಟ್ಟೆಚ್ಚರ, ಡಿಸಿ ಡಾ.ಸೆಲ್ವಮಣಿ

*  ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ
*  ವಾಡಿಕೆಗಿಂತ ಶೇ.88ರಷ್ಟು ಹೆಚ್ಚುವರಿ ಮಳೆ
*  ನೆರೆ ಸಂದರ್ಭದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಲು ಸುರಕ್ಷತಾ ಉಪಕರಣ ಸಜ್ಜು 

DC Dr Sevlamani Talks Over Rain in Shivamogga grg

ವರದಿ: ರಾಜೇಶ್ ಕಾಮತ್, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಶಿವಮೊಗ್ಗ

ಶಿವಮೊಗ್ಗ(ಜು.08):  ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಉಂಟಾಗಬಹುದಾದ ಹಾನಿಯನ್ನು ಎದುರಿಸಲು ಜಿಲ್ಲಾಡಳಿತ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ನೆರೆ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಅವರು ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಜಿಲ್ಲೆಯ ನೆರೆ ಪರಿಸ್ಥಿತಿ ಬಗ್ಗೆ ಮಾಹಿತಿಯನ್ನು ಒದಗಿಸಿದರು.

ಕಳೆದ ಒಂದು ವಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.88ರಷ್ಟು ಹೆಚ್ಚುವರಿ ಮಳೆಯಾಗಿದ್ದು, 12 ಕೆರೆಗಳು ಒಡೆದು ಹೋಗಿವೆ. ಜಲಾಶಯಗಳ ಮಟ್ಟದ ಮೇಲೆ ನಿರಂತರ ನಿಗಾ ಇರಿಸಲಾಗಿದ್ದು, ಎಲ್ಲಾ ತಾಲೂಕುಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ ಎಂದು ಹೇಳಿದರು.

ದಕ್ಷಿಣ ಭಾರತದ ಸಂಸದರ ನೇತೃತ್ವದಲ್ಲಿ ಅಡಿಕೆಗೆ ಉತ್ತಮ ಬೆಲೆ ಉಳಿಸುವ ಕಾರ್ಯ: ಬಿ.ವೈ. ರಾಘವೇಂದ್ರ

ಹಾನಿ ವಿವರ: 

ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 58 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 4ಮನೆಗಳಿಗೆ ಪೂರ್ಣ ಹಾನಿ ಸಂಭವಿಸಿದೆ. ಒಂದು ಜಾನುವಾರು ಸಾವಿಗೀಡಾಗಿದೆ. 265 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆಗೆ ಮತ್ತು 20 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳದ ಬೆಳೆಗೆ ಹಾನಿ ಅಂದಾಜಿಸಲಾಗಿದೆ. 12ರಸ್ತೆಗಳಿಗೆ ಮತ್ತು 6ಸೇತುವೆಗಳಿಗೆ ಹಾನಿ ಉಂಟಾಗಿದೆ. 210 ವಿದ್ಯುತ್ ಕಂಬಗಳು ಹಾಗೂ 44 ಟ್ರಾನ್ಸ್‍ಫಾರ್ಮರ್‌ಗಳಿಗೆ ಹಾನಿ ಉಂಟಾಗಿದ್ದು, ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ತುರ್ತು ಸಂದರ್ಭಗಳಲ್ಲಿ ನೆರವಾಗಲು ಗ್ರಾಮೀಣ ಪ್ರದೇಶದಲ್ಲಿ 73 ಹಾಗೂ ನಗರ ಪ್ರದೇಶಗಳಲ್ಲಿ 98ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದ್ದು, ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅತಿವೃಷ್ಟಿಗೆ ತುತ್ತಾಗಬಹುದಾದ 67 ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯ 163 ಗ್ರಾಮಗಳನ್ನು ಗುರುತಿಸಲಾಗಿದ್ದು, ಕಟ್ಟೆಚ್ಚರ ವಹಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.

ನೆರೆ ಸಂದರ್ಭದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಲು ಸುರಕ್ಷತಾ ಉಪಕರಣಗಳನ್ನು ಸಜ್ಜುಗೊಳಿಸಲಾಗಿದೆ. ನೆರೆ ನೀರು ನುಗ್ಗಬಹುದಾದ ಪ್ರದೇಶಗಳಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು 5 ಬೋಟ್‍ಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ಪ್ರಸ್ತುತ ಎಸ್‍ಡಿಆರ್‍ಎಫ್ ಖಾತೆಯಲ್ಲಿ 19ಕೋಟಿ ರೂ. ಲಭ್ಯವಿದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಸೂಚನೆ: ಬಳಿಕ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಜಿಲ್ಲಾಧಿಕಾರಿ ಅವರು ಮಳೆ ಪರಿಸ್ಥಿತಿ ಬಗ್ಗೆ ಅವಲೋಕನ ನಡೆಸಿ, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ಸೂಚನೆಗಳನ್ನು ನೀಡಿದರು. 

ಶಿವಮೊಗ್ಗ: ತಾವರೆಕೊಪ್ಪದ ಟೈಗರ್ ಅಂಡ್ ಲಯನ್ ಸಫಾರಿಯ ಸಿಂಹ ಸಾವು

ಮರಗಳು ಉರುಳಿ ರಸ್ತೆ ತಡೆ ಉಂಟಾದ ಸಂದರ್ಭಗಳಲ್ಲಿ ತಕ್ಷಣ ಅದನ್ನು ತೆರವುಗೊಳಿಸಿ ರಸ್ತೆಯನ್ನು ಸಂಚಾರ ಮುಕ್ತಗೊಳಿಸಬೇಕು. ಮನೆ ಹಾನಿ, ಪ್ರಾಣ ಹಾನಿ ಸಂದರ್ಭಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ ತಕ್ಷಣ ಪರಿಹಾರವನ್ನು ಒದಗಿಸಬೇಕು. ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್‍ಫಾರ್ಮರ್‍ಗಳನ್ನು ಆದಷ್ಟು ಬೇಗನೆ ದುರಸ್ತಿ ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಬೆಳೆ ಹಾನಿಯನ್ನು ಸಮೀಕ್ಷೆ ನಡೆಸಿ ನಷ್ಟದ ಅಂದಾಜು ಸಲ್ಲಿಸಬೇಕು. ನಗರ ಪ್ರದೇಶದಲ್ಲಿ ನದಿ ತೀರದ ಜನರಿಗೆ ಹಾಗೂ ತಗ್ಗು ಪ್ರದೇಶದಲ್ಲಿರುವ ಜನರಿಗೆ ತುರ್ತು ಎಚ್ಚರಿಕೆ ನೀಡಬೇಕು. ಅಗತ್ಯ ಸಂದರ್ಭದಲ್ಲಿ ಅವರನ್ನು ಸ್ಥಳಾಂತರಿಸಲು ಎಲ್ಲಾ ವ್ಯವಸ್ಥೆಯನ್ನು ಸಜ್ಜುಗೊಳಿಸಬೇಕು. ಈಗಾಗಲೇ 24ಗಂಟೆ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ತೆರೆಯಲಾಗಿದ್ದು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಯಾವುದೇ ಅನಾಹುತಗಳು ಆಗದಂತೆ ಮುನ್ನೆಚ್ಚರಿಕೆ ನೀಡಬೇಕು. ಅಧಿಕಾರಿಗಳು ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನವನ್ನು ಬಿಡಬಾರದು ಎಂದು ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀಪ್ರಸಾದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಹೊನ್ನಳ್ಳಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
 

Latest Videos
Follow Us:
Download App:
  • android
  • ios