ಏಳು ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ತೀರಿಕೊಂಡ ತಂದೆ. ಕೂಲಿ, ಬಟ್ಟೆ ಹೊಲಿದು ಮೂವರು ಮಕ್ಕಳನ್ನು ಸಾಕುತ್ತಿರುವ ತಾಯಿ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಆದರೂ ಅವಳಿಗೆ ಅಕ್ಷರ ಕಲಿಯಬೇಕೆಂಬ ಛಲ. ಇದೀಗ ಈ ಛಲವೇ ಅವಳಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 512  ಅಂಕ ಗಳಿಸಲು ಪ್ರೇರಣೆಯಾಗಿದೆ.

 ಶಶಿಕುಮಾರ ಪಂತಗಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಅಳ್ನಾವರ : ಏಳು ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ತೀರಿಕೊಂಡ ತಂದೆ. ಕೂಲಿ, ಬಟ್ಟೆ ಹೊಲಿದು ಮೂವರು ಮಕ್ಕಳನ್ನು ಸಾಕುತ್ತಿರುವ ತಾಯಿ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಆದರೂ ಅವಳಿಗೆ ಅಕ್ಷರ ಕಲಿಯಬೇಕೆಂಬ ಛಲ. ಇದೀಗ ಈ ಛಲವೇ ಅವಳಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 512 (ಶೇ. 85.33) ಅಂಕ ಗಳಿಸಲು ಪ್ರೇರಣೆಯಾಗಿದೆ.

ಸಮೀಪದ ಕುಂಬಾರಕೊಪ್ಪ ಗ್ರಾಮದ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿ ಪ್ರತಿಕ್ಷಾ ಮಾಟೋಳ್ಳಿ ಅವರ ಸಾಧನೆ. ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಇವಳು, ಬಿಡುವಿನ ವೇಳೆ ತಾಯಿ ನೀಲವ್ವಗೆ ಬಟ್ಟೆ ಹೊಲಿದು ಕೊಡಳು ನೆರವಾಗುತ್ತಾಳೆ. ಅದರೊಂದಿಗೆ ಮನೆಗೆಲಸ ಮುಗಿಸಿ ಸಿಕ್ಕ ಸಮಯದಲ್ಲಿಯೇ ಓದಿ ಕನ್ನಡ 90, ಇಂಗ್ಲಿಷ್‌ 58, ಇತಿಹಾಸ 86, ಅರ್ಥಶಾಸ್ತ್ರ 85, ಭೂಗೋಳಶಾಸ್ತ್ರ 97, ರಾಜ್ಯಶಾಸ್ತ್ರದಲ್ಲಿ 96 ಅಂಕ ಗಳಿಸಿದ್ದಾಳೆ. ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ಇದ್ದರೂ ತಾಯಿ ಮಾತ್ರ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ಕೊರತೆ ಮಾಡಿಲ್ಲ. ನಾವು ಬಡವರಾಗಿ ಹುಟ್ಟಿ ಬಡವರಾಗಿ ಸಾಯೋದ ಬೇಡವೆಂದು ಕೂಲಿ ಮಾಡಿಯೇ ಮಕ್ಕಳಿಗೂ ಶಿಕ್ಷಣ ಕೊಡಿಸುತ್ತಿದ್ದಾರೆ. ಪ್ರತಿಕ್ಷಾ ಸಾಧನೆ ಕಂಡು ಮುಗುಳ್ನಗೆ ಬೀರಿದ್ದಾರೆ.

 ಆರ್ಥಿಕ ಮುಗ್ಗಟ್ಟು: 

ನಿರಂತರ ಓದು ನನ್ನನ್ನು ಕೈ ಬಿಡಲಿಲ್ಲ, ನನಗೆ ಫಲಿತಾಂಶ ಖುಷಿ ತಂದಿದೆ. ಉನ್ನತ ಶಿಕ್ಷಣ ಮಾಡುವ ಆಸೆಯಿದೆ. ಆದರೆ, ಫೀ ಕಟ್ಟಲು ಹಣವಿಲ್ಲವೆಂದು ಮುಂದಿನ ವಿದ್ಯಾಭ್ಯಾಸ ಸ್ಥಗಿತಗೊಳಿಸಲು ಪ್ರತಿಕ್ಷಾ ನಿರ್ಧರಿಸಿದ್ದಾಳೆ. ನನ್ನ ತಾಯಿ ಬಿಸಿಲು, ಮಳೆ ಎನ್ನದೆ ದುಡಿದು ಈ ವರೆಗೆ ಕಲಿಸಿದ್ದಾಳೆ. ಅವಳಿಗೆ ಮತ್ತಷ್ಟು ಹೊರೆಯಾಗುವುದು ಬೇಡ. ಅವಳೊಂದಿಗೆ ಕೂಲಿ ಕೆಲಸ ಮಾಡುವ ಜತೆಗೆ ರಾತ್ರಿ ಬಟ್ಟೆ ಹೊಲಿಯಲು ನೆರವಾಗುತ್ತೇನೆ ಎಂದು ಹೇಳುವಾಗ ಅವಳ ಕಣ್ಣು ಒದ್ದೆಯಾಗಿತ್ತು.

ಸರ್ಕಾರಿ ಪಿಯು ಕಾಲೇಜಿಗೆ ಪ್ರತಿಕ್ಷಾ ಮಾಟೋಳ್ಳಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಅವಳ ಮುಂದಿನ ಓದಿನ ಸಂಪೂರ್ಣ ಖರ್ಚು ನಾನೇ ನೋಡಿಕೊಳ್ಳುತ್ತೇನೆ. ಅವಳ ಜತೆಗೆ ಸರ್ಕಾರಿ ಕಾಲೇಜಿನಲ್ಲಿ ಓದುವ ಬಡ ವಿದ್ಯಾರ್ಥಿಗಳಿಗೂ ನಮ್ಮ ಫೌಂಡೇಶನ್‌ ವತಿಯಿಂದ ನೆರವು ನೀಡಲಾಗುವುದು.

ಸಂತೋಷ ಲಾಡ್‌, ಕಾರ್ಮಿಕ ಸಚಿವ