ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಳ್ಳಾರಿ ಸೆಂಟ್ರಲ್ ಜೈಲು ಖೈದಿಗೆ ಫಸ್ಟ್ ಕ್ಲಾಸ್, ಶೇ.81 ಫಲಿತಾಂಶ ಪಡೆದು ಪಾಸ್ ಆಗಿದ್ದಾರೆ. ಕೊಲೆ ಆರೋಪದಡಿ ಕಳೆದ 7 ವರ್ಷದಿಂದ ಜೈಲು ಶಿಕ್ಷೆಯಲ್ಲಿರುವ ಖೈದಿ ಈ ಸಾಧನೆ ಮಾಡಿದ್ದಾರೆ.

ಬಳ್ಳಾರಿ (ಏ.09) ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಎಂದಿನಂತೆ ಮೊದಲೆರೆಡು ಸ್ಥಾನ ಹಂಚಿಕೊಂಡಿದೆ. ರಾಯಚೂರು, ಯಾದಗಿರಿ ಕೊನೆಯ ಎರಡು ಸ್ಥಾನ ಹಂಚಿಕೊಂಡಿದೆ. ರಾಜ್ಯಕ್ಕೆ ಪ್ರಥಮ ಸೇರಿದಂತೆ ಹಲವು ವಿದ್ಯಾರ್ಥಿಗಳು ಅಡತಡೆ ದಾಟಿ ಸಾಧನೆ ಮಾಡಿದ್ದಾರೆ. ಇದೇ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಳ್ಳಾರಿ ಸೆಂಟ್ರಲ್ ಜೈಲು ಖೀದಿ ಫಸ್ಟ್ ಕ್ಲಾಸ್ ಅಂಕ ಪಡೆದು ಪಾಸ್ ಆಗಿದ್ದಾರೆ. ಕಳೆದ 7 ವರ್ಷಗಳಿಂದ ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿರುವ ಆರೋಪಿ ಆಶೋಕ್ ಕುಮಾರ್ ಶೇಕಡಾ 81 ರಷ್ಟುಅಂಕ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ ಅಶೋಕ್ ಕುಮಾರ್

ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಶೋಕ್ ಕುಮಾರ್ ಕಳೆದ 7 ವರ್ಷಗಳಿಂದ ಬಳ್ಳಾರಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಜೈಲಿನಲ್ಲೇ ಇದ್ದುಕೊಂಡೇ ದ್ವಿತೀಯ ಪಿಯುಸಿ ಪರೀಕ್ಷೆ ತಯಾರಿ ಮಾಡಿದ ಅಶೋಕ್ ಕುಮಾರ್, ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆದು ಸಾಧನೆ ಮಾಡಿದ್ದಾರೆ.

600ಕ್ಕೆ 481 ಅಂಕ ಪಡೆಯುವ ಮೂಲಕ ಶೇಖಡಾ 81% ಫಲಿತಾಂಶ ಪಡೆದಿದ್ದಾರೆ. ಕನ್ನಡ 82, ಇಂಗ್ಲಿಷ್ 69, ಇತಿಹಾಸ 94, ಅರ್ತಶಾಸ್ತ್ರ 84, ಸಮಾಜಶಾಸ್ತ್ರ 77, ರಾಜ್ಯಶಾಸ್ತ್ರ75 ಅಂಕ ಪಡೆದಿದ್ದಾರೆ. ಜೈಲಿನ ಪ್ರತ್ಯೇಕ ಸೆಲ್ ನಲ್ಲಿಯೇ ಅಭ್ಯಾಸ ಮಾಡಿದ್ದ ಅಪರಾಧಿ ಅಶೋಕ್ ಕುಮಾರ್, ಇದೀಗ ಫಸ್ಟ್ ಕ್ಲಾಸ್ ಮಾರ್ಕ್ಸ್‌ನೊಂದಿಗೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಶೋಕ್ ಕುಮಾರ್ ಜೈಲಿನಲ್ಲಿ ಓದುವ ಅಭ್ಯಾಸ ಬೆಳೆಸಿಕೊಂಡಿದ್ದರು.

ಈ ಬಾರಿಯ ದ್ವಿತೀಯ ಪಿಯಿಸು ಪರೀಕ್ಷೆಯಲ್ಲಿ ರಾಜ್ಯದ ಶೇಕಡಾ 86ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 7,10,363 ವಿದ್ಯಾರ್ಥಿಗಳ ಪೈಕಿ 6.1 ಲಕ್ಷ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಪಿಯುಸಿ ಪರೀಕ್ಷೆ ಫಲಿತಾಂಶಧ ತೇರ್ಗಡೆಯಲ್ಲಿ ದಾಖಲೆಯ ಏರಿಕೆ ಕಂಡಿದೆ. ಈ ಬಾರಿ 35 ಇದಿದ್ದ ಪಾಸಿಂಗ್ ಅಂಕವನ್ನು 33ಕ್ಕೆ ಇಳಿಸಲಾಗಿತ್ತು. ಇದು ವಿದ್ಯಾರ್ಥಿಗಳ ತೇರ್ಗಡೆ ವಿಚಾರದಲ್ಲೂ ಮಹತ್ತರ ಬದಲಾವಣೆಗೆ ಕಾರಣವಾಗಿದೆ.

ಫಲಿತಾಂಶ ಬಿಡುಗಡೆ ಮಾಡಿದ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಇತಿಹಾಸ ಸೃಷ್ಟಿ ಮಾಡಿದ ಮಕ್ಕಳಿದೆ ಧನ್ಯವಾದ ಹೇಳಿದ್ದಾರೆ. ಇದೇ ವೇಳೆ ಪರೀಕ್ಷೆಯಲ್ಲಿ ತೇರ್ಗಡೆ ಆಗದ ಮಕ್ಕಳು ನಿರಾಶರಾಗಬೇಕಿಲ್ಲ. ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶವಿದೆ ಎಂದಿದ್ದಾರೆ. ಆತ್ಮವಿಶ್ವಾಸದಿಂದ ಮತ್ತೊಮ್ಮೆ ಪರೀಕ್ಷೆ ಬರೆಯುವ ಅವಕಾಶವಿದೆ. ಹೀಗಾಗಿ ಉತ್ತಮ ತಯಾರಿಯೊಂದಿಗೆ ಪರೀಕ್ಷೆ ಬರೆಯಲು ಮಧು ಬಂಗಾರಪ್ಪ ಹೇಳಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ 13.03 % ಫಲಿತಾಂಶ ಹೆಚ್ಚಳ ಆಗಿದೆ ಎಂದಿದ್ದಾರೆ.