ಆನ್ಲೈನ್ ಮೂಲಕ ದಸರಾ ಚಲನ ಚಿತ್ರೋತ್ಸವ ಪಾಸ್ ಲಭ್ಯತೆ

ದಸರಾ ಚಲನಚಿತ್ರೋತ್ಸವ ಉಪಸಮಿತಿ ವತಿಯಿಂದ ಅ. 16 ರಿಂದ 22 ರವರೆಗೆ ನಗರದ ಮಾಲ್ ಆಫ್ ಮೈಸೂರಿನ ಐನಾಕ್ಸ್ ಹಾಗೂ ಡಿಆರ್ಸಿ ಪರದೆಗಳಲ್ಲಿ   ಚಲನಚಿತ್ರೋತ್ಸವ ಪ್ರದರ್ಶನವಾಗಲಿದೆ

Dasara Motion Film Festival Pass available online snr

  ಮೈಸೂರು :  ದಸರಾ ಚಲನಚಿತ್ರೋತ್ಸವ ಉಪಸಮಿತಿ ವತಿಯಿಂದ ಅ. 16 ರಿಂದ 22 ರವರೆಗೆ ನಗರದ ಮಾಲ್ ಆಫ್ ಮೈಸೂರಿನ ಐನಾಕ್ಸ್ ಹಾಗೂ ಡಿಆರ್ಸಿ ಪರದೆಗಳಲ್ಲಿ ಹಮ್ಮಿಕೊಂಡಿರುವ ಚಲನಚಿತ್ರಗಳ ಪ್ರದರ್ಶನದ ವೀಕ್ಷಣೆಗಾಗಿ https://mysurudasarafilmfestival.in ಲಿಂಕ್ ಬಳಸಿ ಪಾಸ್ ಪಡೆಯಬಹುದಾಗಿದೆ. ಪಾಸ್ ನ ಸಾಮಾನ್ಯ ದರ 500 ಹಾಗೂ ವಿದ್ಯಾರ್ಥಿಗಳ ಪಾಸ್ ದರ 300 ರೂ. ಆಗಿರುತ್ತದೆ ಎಂದು ದಸರಾ ಚಲನಚಿತ್ರೋತ್ಸವ ಉಪಸಮಿತಿಯ ವಿಶೇಷಾಧಿಕಾರಿ ಎಂ ಕೆ ಸವಿತಾ ತಿಳಿಸಿದ್ದಾರೆ.

ಅ.16 ರಿಂದ 22 ರವರೆಗೆ ಚಲನಚಿತ್ರೋತ್ಸವ

 ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಚಲನಚಿತ್ರೋತ್ಸವ ಉಪ ಸಮಿತಿ ವತಿಯಿಂದ ಅ.16 ರಿಂದ 22 ರವರೆಗೆ ನಗರದ ಮಾಲ್ ಆಫ್ ಮೈಸೂರಿನ ಐನಾಕ್ಸ್ ಹಾಗೂ ಡಿಆರ್ ಸಿ ಪರದೆಗಳಲ್ಲಿ ಚಲನಚಿತ್ರಗಳ ಪ್ರದರ್ಶನ ಹಮ್ಮಿಕೊಂಡಿದ್ದು, ಈ ಸಂಬಂಧ ಅ.9ರ ಬೆಳಗ್ಗೆ 10.30 ರಿಂದ ಸಂಜೆ 4.30 ರವರೆಗೆ ನಗರದ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಸಿನಿಮಾ ಪ್ರಿಯರಿಗೆ ಚಲನಚಿತ್ರೋತ್ಸವ ಪ್ರದರ್ಶನದ ಪಾಸ್ ವಿತರಿಸಲಾಗುವುದು.

ಚಲನಚಿತ್ರೋತ್ಸವ ಪಾಸ್ ದರ ಸಾಮಾನ್ಯರಿಗೆ 500 ರೂ. ಗಳಾಗಿದ್ದು, ವಿದ್ಯಾರ್ಥಿಗಳಿಗೆ 300 ರೂ. ಆಗಿರುತ್ತವೆ. ಈ ಪಾಸ್ ಏಳು ದಿನಗಳವರೆಗೂ ಚಾಲ್ತಿಯಲ್ಲಿರುತ್ತದೆ. ಪಾಸ್ ಪಡೆದುಕೊಳ್ಳಲು ಆಧಾರ್ ಕಾರ್ಡ್ ಪ್ರತಿಯನ್ನು ತರತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಶ್ರೇಯಸ್ ಮೊ. 74115 64510 ಸಂಪರ್ಕಿಸಬಹುದು ಎಂದು ಚಲನಚಿತ್ರೋತ್ಸವ ಉಪ ಸಮಿತಿಯ ವಿಶೇಷಾಧಿಕಾರಿ ಎಂ.ಕೆ. ಸವಿತಾ ತಿಳಿಸಿದ್ದಾರೆ.

ಅ.15 ರಿಂದ 23 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ

  ಮೈಸೂರು :  ದಸರಾ ಅಂಗವಾಗಿ ಸಾಂಸ್ಕೃತಿಕ ಉಪ ಸಮಿತಿ ವತಿಯಿಂದ ಅ.15 ರಿಂದ 23 ರವರೆಗೆ ಅರಮನೆ ಮುಂಭಾಗದ ವೇದಿಕೆ ಸೇರಿದಂತೆ ನಗರದೆಲ್ಲೆಡೆ 10 ಹಾಗೂ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಪಂ ಸಿಇಒ ಕೆ.ಎಂ. ಗಾಯತ್ರಿ ತಿಳಿಸಿದರು.

ಮೈಸೂರುನ ಅರಮನೆ ಮಂಡಳಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.15ರ ಸಂಜೆ 6ಕ್ಕೆ ಅರಮನೆ ಮುಂಭಾಗದ ವೇದಿಕೆಯಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಹೇಳಿದರು.

ಅರಮನೆ ವೇದಿಕೆ ಕಾರ್ಯಕ್ರಮದ ಕಲಾವಿದರನ್ನು ಆಯ್ಕೆ ಮಾಡಲಾಗಿದ್ದು, ಈ ಬಾರಿ ಸಾಕಷ್ಟು ಅರ್ಜಿಗಳು ಬಂದಿರುವ ಕಾರಣ ಉತ್ತಮ ತಂಡಗಳನ್ನು ಆಯ್ಕೆ ಮಾಡಿ ಎರಡು ದಿನಗಳಲ್ಲಿ ಉಳಿದ ವೇದಿಕೆ ಕಾರ್ಯಕ್ರಮಗಳ ಕಲಾವಿದರ ಆಯ್ಕೆ ನಡೆಯಲಿದೆ ಎಂದರು.

ನಾಟಕಕ್ಕೆ 468, ಸಂಗೀತ 920, ಜನಪದ 340, ನೃತ್ಯ 692, ಹರಿಕಥೆ 18, ಸೋಬಾನೆ ಪದ 37, ವಾದ್ಯಸಂಗೀತ 265, ತೊಗಲುಗೊಂಬೆ 10, ಜಾದೂ 5, ನಿರೂಪಣೆ 48 ಸೇರಿದಂತೆ ಒಟ್ಟು 2803 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅವರು ತಿಳಿಸಿದರು.

252 ಕಲಾತಂಡಗಳಿಗೆ ಅವಕಾಶ

ನವರಾತ್ರಿಯವಲ್ಲಿ 9 ದಿನ ಜಗನ್ಮೋಹನ ಅರಮನೆ, ಕಲಾಮಂದಿರ, ಗಾನಭಾರತಿ, ನಾದಬ್ರಹ್ಮಸಂಗೀತ ಸಭಾ, ಚಿಕ್ಕಗಡಿಯಾರ ಮತ್ತು ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ಆವರಣದಲ್ಲಿ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ, ನೃತ್ಯರೂಪಕ, ಭರತನಾಟ್ಯ, ಸುಗಮ ಸಂಗೀತ, ನಾದಸ್ವರ, ಸ್ಯಾಕ್ಸೋಫೋನ್, ವೀಣಾವಾದನ, ಸೋಬಾನೆ ಪದಗಳು, ಭಕ್ತಿಗೀತೆಗಳು, ಸಾಂಪ್ರದಾಯಿಕ ಗೀತೆಗಳು, ತತ್ತ್ವ ಪದಗಳು, ಹರಿಕಥೆ, ಜನಪದ ಗಾಯನ, ವಾದ್ಯ, ಸೂತ್ರ ಸಲಾಕೆ, ಗೊಂಬೆಯಾಟ, ಯಕ್ಷಗಾನ, ಗೊಂದಳಿ ಪದ, ಡೊಳ್ಳಿನ ಹಾಡು, ಕೋಲಾಟ, ಜಡೆ ಕೋಲಾಟ, ಚಿಟ್ಟಿಮೇಳ, ಕೊಡಗಿನ ಸುಗ್ಗಿ ಕುಣಿತ ಹಾಗೂ ಇತರೆ ಕಾರ್ಯಕ್ರಮಗಳು ಜರುಗಲಿವೆ. ಒಟ್ಟು 252 ಕಲಾತಂಡಗಳ ಸುಮಾರು 4000 ಹೆಚ್ಚು ಕಲಾವಿದರಿಗೆ ಅವಕಾಶ ದೊರೆಯಲಿದೆ ಎಂದು ಅವರು ವಿವರಿಸಿದರು.

ನಾಟಕಗಳ ಪ್ರದರ್ಶನ

ಪುರಭವನ, ಕಿರುರಂಗಮಂದಿರ, ನಟನ ರಂಗಮಂದಿರ ಮತ್ತು ರಮಾಗೋವಿಂದ ರಂಗಮಂದಿರದಲ್ಲಿ ಅ.15 ರಿಂದ 23 ರವೆರೆಗೆ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹಾಗೂ ರಂಗಗೀತೆಗಳ ಕಾರ್ಯಕ್ರಮಗಳು, ಆಧುನಿಕ ನಾಟಕಗಳು, ವೃತ್ತಿ ರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿ ಕಲಾವಿದರಿಂದ ನಾಟಕ ಪ್ರದರ್ಶನವಿದೆ ಎಂದರು.

ಅ.21ರ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅರಮನೆ ವೇದಿಕೆಯಲ್ಲಿ ನಾದಸ್ವರ ಕಾರ್ಯಕ್ರಮದಿಂದ ಆರಂಭವಾಗಿ ಸ್ಯಾಕ್ಸೋಪೋನ್ ವಾದನ, ವಯೋಲಿನ್ ವಾದನ, ಒಡೆಯರ್ ಕೃತಿಗಳ ಕುರಿತ ನೃತ್ಯರೂಪಕ, ಭರತನಾಟ್ಯ, ಗಾನ ಲಹರಿ ಹಾಗೂ ನಾದ ಲಹರಿ ಸಂಗೀತ ಕಾರ್ಯಕ್ರಮ, ರಂಗಗೀತೆಗಳು, ಜನಪದ ಗಾಯನ, ಸುಗಮ ಸಂಗೀತ, ವಾದ್ಯ ಸಂಗೀತ ಸೇರಿದಂತೆ ಹಲವಾರು ವಿವಿಧ ಕಲಾಪ್ರಕಾರಗಳ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

Latest Videos
Follow Us:
Download App:
  • android
  • ios