ಶಿವಮೊಗ್ಗ:(ಸೆ.28) ಮಹಾನಗರ ಪಾಲಿಕೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಸೆ. 29ರಿಂದ ಅ. 8 ರವರೆಗೆ ಶಿವಮೊಗ್ಗ ದಸರಾ ಅಂಗವಾಗಿ ಅದ್ಧೂರಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಮೇಯರ್‌ ಲತಾ ಗಣೇಶ್‌ ಅವರು ತಿಳಿಸಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಾಡಿನ ಪರಂಪರೆಯ ಪ್ರತೀಕವಾಗಿರುವ ವೈಭವದ ಶಿವಮೊಗ್ಗ ದಸರಾ ಉತ್ಸವದ ಅಂಗವಾಗಿ ಒಂಬತ್ತು ದಿನಗಳ ಕಾಲ ಶಿವಮೊಗ್ಗ ನಗರದ ಹಲವು ಸಮಾನಾಂತರ ವೇದಿಕೆಗಳಲ್ಲಿ ನಾಡಿನ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಮುಂತಾದ ಸ್ಥಳೀಯ ಹಾಗೂ ರಾಜ್ಯಮಟ್ಟದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು. 

ಶಿವಮೊಗ್ಗದಲ್ಲಿ ಸೆ. 29 ರಿಂದ ಅದ್ದೂರಿ ದಸರಾ 

ಉಪಮಹಾಪೌರ ಎಸ್‌.ಎನ್‌. ಚನ್ನಬಸಪ್ಪ ಮಾತನಾಡಿ, ಶಿವಮೊಗ್ಗ ಉತ್ಸವದ ಅಂಗವಾಗಿ ನಡೆಯಲಿರುವ ಹಲವು ಕಾರ್ಯಕ್ರಮಗಳು ಸುಗಮವಾಗಿ ನಡೆಯುವಂತಾಗಲು ಮಹಾಪೌರರಾದ ಲತಾ ಗಣೇಶ್‌ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಹಲವು ಸಮಿತಿಗಳನ್ನು ರಚಿಸಿ, ಪಾಲಿಕೆಯ ಸದಸ್ಯರಿಗೆ ಅವುಗಳ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ ಎಂದರು.

ಸೆ.29 ರಂದು ಬೆಳಗ್ಗೆ 11 ಗಂಟೆಗೆ ಕೋಟೆ ರಸ್ತೆಯ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕವಿ ಬಿ.ಆರ್‌. ಲಕ್ಷ್ಮಣರಾವ್‌ ಶಿವಮೊಗ್ಗ ದಸರಾಕ್ಕೆ ಚಾಲನೆ ನೀಡುವರು. ಮೇಯರ್‌ ಲತಾ ಗಣೇಶ್‌ ಅಧ್ಯಕ್ಷತೆ ವಹಿಸುವರು. ಸಿಎಂ ಬಿ. ಎಸ್‌. ಯಡಿಯೂರಪ್ಪ, ಸಂಸದ ಬಿ. ವೈ.ರಾಘವೇಂದ್ರ, ಸಚಿವ ಕೆ. ಎಸ್‌. ಈಶ್ವರಪ್ಪ ಸೇರಿದಂತೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ದಸರಾ ಉತ್ಸವಕ್ಕೆ 2 ಕೋಟಿ ರು.

ದಸರಾ ಉತ್ಸವಕ್ಕೆಂದು ಸರ್ಕಾರ 2 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ. ಆ ಪೈಕಿ ಕಾರ್ಯಕ್ರಮ ನಡೆಯುವ ಹಳೆ ಜೈಲು ಆವರಣದ ಅಭಿವೃದ್ಧಿಗಾಗಿ ಒಂದು ಕೋಟಿ ಹಾಗೂ ಉಳಿದ ಒಂದು ಕೋಟಿ ರು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದ ಕೊನೆಯ ದಿನದಂದು ಅಂಬಾರಿ ಮೇಲೆ ದುರ್ಗಾದೇವಿ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಮೆರವಣಿಗೆಯಲ್ಲಿ 100 ಕ್ಕೂ ಹೆಚ್ಚಿನ ನಾಡಿನ ಹೆಸರಾಂತ ಜನಪದ ಕಲಾವಿದರು ಭಾಗವಹಿಸಲಿರುವುದು ವಿಶೇಷ ಎಂದರು.

ಶಿವಮೊಗ್ಗ ದಸರಾಕ್ಕೆ ಹಲವು ವಿಶೇಷತೆಗಳಿವೆ

ಮೈಸೂರು ಹೊರತುಪಡಿಸಿದರೆ ಶಿವಮೊಗ್ಗದಲ್ಲಿ ವಿಜೃಂಭಣೆಯಿಂದ ದಸರಾ ಆಚರಿಸಲಾಗುವುದು. ಮಹಿಳಾ ದಸರಾ, ದಸರಾ ಚಲನಚಿತ್ರ್ಯೋತ್ಸವ, ಸಾಂಸ್ಕೃತಿಕ ದಸರಾ, ರಂಗ ದಸರಾ, ಯುವ ದಸರಾ, ಯಕ್ಷ ದಸರಾ, ಪರಿಸರ ದಸರಾ, ರೈತ ದಸರಾ, ಕಲಾ ದಸರಾ, ಯೋಗ ದಸರಾ, ಆಹಾರ ದಸರಾ ಹೀಗೆ ನಾಡ ಹಬ್ಬವನ್ನು ವಿವಿಧ ರೀತಿಯಲ್ಲಿ ಆಚರಿಸಲಾಗುವುದು ಎಂದರು.]

ಮಹಿಳಾ ದಸರಾ

ಸೆ. 30ರ ಸಂಜೆ 4.30 ಗಂಟೆ​ಗೆ ಕುವೆಂಪು ರಂಗಮಂದಿರದಲ್ಲಿ ಮಹಿಳಾ ದಸರಾವನ್ನು ಕಿರುತೆರೆ ನಟಿ ಸುಪ್ರಿಯಾ ಸುರೇಶ್‌ರಾವ್‌ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಕೆ. ಎಸ್‌. ಈಶ್ವರಪ್ಪ, ಸಂಸದ ಬಿ. ವೈ. ರಾಘವೇಂದ್ರ, ಶಾಸಕ ಆರ್‌. ಪ್ರಸನ್ನಕುಮಾರ್‌, ಜಿ.ಪಂ. ಸಿಇಒ ವೈಶಾಲಿ, ಅಪರ ಜಿಲ್ಲಾಧಿಕಾರಿ ಅನುರಾಧ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ರಂಗ ದಸರಾ

ರಂಗ ದಸರಾ ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆಯಲಿದೆ. ಪ್ರತಿದಿನ ಸಂಜೆ 7 ಗಂಟೆ​ಗೆ ನಾಟಕ ಪ್ರದರ್ಶನವಿರುತ್ತದೆ. ಅ. 2 ರಂದು ಜಲಗಾರ, ಅ. 3 ಸಂಕ್ರಾಂತಿ, ಅ. 4 ಹೂವು, ಅ.5 ತಮಸೋಮ, ಅ.6 ಅದ್ರೇಶಿ ಪರ್ದೇಶಿಯಾದ, ಅ. 7 ರಂದು ಸಂದೇಹ ಸಾಮ್ರಾಜ್ಯ ಪ್ರದರ್ಶನಗೊಳ್ಳಲಿವೆ ಎಂದು ಹೇಳಿದರು. 

ಯುವ ದಸರಾ ಕಾರ್ಯಕ್ರಮ ಸೆ.29ರಿಂದ ಅ.5ರವರೆಗೆ ನಡೆಯಲಿದೆ. ಅ.6 ರ ಬೆಳಗ್ಗೆ 10 ಗಂಟೆಯಿಂದ 10ನೇ ತರಗತಿಯೊಳಗಿನ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕವಾಗಿ ಏಕಪಾತ್ರಾಭಿನಯ ಹಾಗೂ ರಂಗಗೀತೆ ಸ್ಪರ್ಧೆ ನಡೆಸಲಾಗುವುದು ಎಂದರು. 

ಸೆ. 29 ರಿಂದ ಅ. 5 ರವರೆಗೆ ಸಂಜೆ 4 ಗಂಟೆಗೆ ಅಂಬೇಡ್ಕರ್‌ ಭವನದಲ್ಲಿ ಯುವ ದಸರಾ ಕಾರ್ಯಕ್ರಮ ನಡೆಯಲಿವೆ. ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆಗೆ ಆಡಿಷನ್‌ ಕಾರ್ಯಕ್ರಮ ನಡೆಯಲಿದ್ದು, ಸೆ. 29 ರ ಸಂಜೆ 4 ಗಂಟೆಗೆ ಜಿ.ಪಂ. ಸಿಇಒ ಎಂ.ಎಲ್‌. ವೈಶಾಲಿ ಉದ್ಘಾಟಿಸುವರು. ಸೆ. 30 ರ ಸಂಜೆ 6 ಗಂಟೆಗೆ ಸಿಟಿ ಸೆಂಟರ್‌ ಮಾಲ್‌ನಲ್ಲಿ ಟ್ಯಾಲೆಂಟ್‌ ಹಂಟ್‌ ನಡೆಯಲಿದೆ. ಅ.2 ಬೆಳಗ್ಗೆ 11 ಗಂಟೆಗೆ ನೆಹರೂ ಕ್ರೀಡಾಂಗಣದಲ್ಲಿ ಸ್ಲೋ ಬೈಕ್‌ ಪಂದ್ಯಾವಳಿ, ಹಗ್ಗ ಜಗ್ಗಾಟ ಪಂದ್ಯಾವಳಿ ನಡೆಯಲಿದೆ.

ಅ. 2 ಮತ್ತು 3 ರ ಮಧ್ಯಾಹ್ನ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ಭಾರತ ತಂಡದ ಕಬಡ್ಡಿ ಮ್ಯಾನೇಜರ್‌ ಶ್ರೀಕಾಂತ್‌ ಉದ್ಘಾಟನೆ ನೆರವೇರಿಸಲಿದ್ದಾರೆ. ಅ. 4 ರ ಸಂಜೆ 5 ಗಂಟೆಗೆ ನೆಹರೂ ಕ್ರೀಡಾಂಗಣದಲ್ಲಿ ಲೇಸರ್‌ ಶೋ ಮತ್ತು ನೃತ್ಯ ಸ್ಪರ್ಧೆ ನಡೆಯಲಿದ್ದು, ಚಿತ್ರ ನಿರ್ದೇಶಕ ಎ. ಪಿ. ಅರ್ಜುನ್‌, ನಟ ಪ್ರಭು ಮುಂಡ್ಕೂರ್‌ ಕಾರ್ಯಕ್ರಮ ಉದ್ಘಾಟಿಸುವರು. ಅ. 5 ರ ಸಂಜೆ 5 ಗಂಟೆಗೆ ನೆಹರೂ ಕ್ರೀಡಾಂಗಣದಲ್ಲಿ ಸರಿಗಮಪ ಖ್ಯಾತಿಯ ಸಂಜಿತ್‌ ಹೆಗಡೆ ಮತ್ತು ತಂಡದವರಿಂದ ಮ್ಯೂಸಿಕಲ್‌ ನೈಟ್‌ ಕಾರ್ಯಕ್ರಮ ನಡೆಯಲಿದೆ. ನಟ ವಿಜಯ ರಾಘವೇಂದ್ರ ಉದ್ಘಾಟನೆ ನೆರವೇರಿಸಲಿದ್ದಾರೆ. ಅ. 3 ರ ಸಂಜೆ 6 ಗಂಟೆ​ಗೆ ಅಂಬೇಡ್ಕರ್‌ ಭವನದಲ್ಲಿ ಯುವ ದಸರಾ ದೇಹದಾಢ್ರ್ಯ ಸ್ಪರ್ಧೆ ನಡೆಯಲಿದೆ ಎಂದರು.

ಸಾಂಸ್ಕೃತಿಕ ದಸರಾ-ಯಕ್ಷ ದಸರಾ

ಅ.3ರ ಸಂಜೆ 5.30 ಗಂಟೆ​ಗೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿರುವ ಯಕ್ಷ ದಸರಾ ಕಾರ್ಯಕ್ರಮವನ್ನು ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಶಿವಾನಂದ ಹೆಗಡೆ ಉದ್ಘಾಟಿಸಲಿದ್ದಾರೆ.
ಅ.4ರಂದು ಬೆಳಗ್ಗೆ 7 ಗಂಟೆಗೆ ಪರಿಸರ ದಸರಾ ಅಂಗವಾಗಿ ಪಾಲಿಕೆ ಆವರಣದಿಂದ ಸೈಕಲ್‌ ಜಾಥಾ ಏರ್ಪಡಿಸಲಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಕಾರ್ಯಕ್ರಮ ಉದ್ಘಾಟಿಸುವರು. ಬೆಳಗ್ಗೆ 10ಗಂಟೆಗೆ ಶಿವಪ್ಪನಾಯಕ ವೃತ್ತದಿಂದ ಆರಂಭವಾಗುವ ಪರಿಸರ ಜಾಥಾವನ್ನು ಶ್ರೀ ಬಸವಮರುಳಸಿದ್ದ ಶ್ರೀ ಉದ್ಘಾಟಿಸುವರು ಎಂದರು.

ರೈತ ದಸರಾ

ಅ.4ರಂದು ಬೆಳಗ್ಗೆ 10 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ನಡೆಯುವ ರೈತ ದಸರಾ ಕಾರ್ಯಕ್ರವನ್ನು ಉದ್ಯಮಿ ನಿವೇದನ್‌ ನೆಂಪೆ ಉದ್ಘಾಟಿಸಲಿದ್ದಾರೆ. ಅ. 5 ರ ಬೆಳಗ್ಗೆ 11 ಗಂಟೆಗೆ ಅರಮನೆ ಆವರಣದಲ್ಲಿ ಕಲಾ ದಸರಾ ಛಾಯಾಚಿತ್ರ ಮತ್ತು ಚಿತ್ರಕಲಾ ಪ್ರದರ್ಶನ ಆಯೋಜಿಸಿದ್ದು, ಡಿಸಿ ಕೆ. ಬಿ. ಶಿವಕುಮಾರ್‌, ಎಸ್ಪಿ ಶಾಂತರಾಜ್‌ ಉದ್ಘಾಟನೆ ನೆರವೇರಿಸುವರು. ಸಂಜೆ 6 ಗಂಟೆಗೆ ಅರಮನೆ ಆವರಣದಲ್ಲಿ ಕಲಾ ದಸರಾ ಕಾರ್ಯಕ್ರಮವನ್ನು ಗಮಕಿ ಹೊಸಹಳ್ಳಿ ಆರ್‌. ಕೇಶವಮೂರ್ತಿ ಉದ್ಘಾಟಿಸುವರು. ಅ. 5 ಮತ್ತು 6 ರಂದು ವಿವಿಧ ಕಾರ್ಯಕ್ರಮಗಳು ನಡೆಯಲಿದೆ.

ಮಕ್ಕಳ ದಸರಾ

ಅ.7 ರಂದು ಬೆಳಗ್ಗೆ 8 ಗಂಟೆಗೆ ಶಿವಪ್ಪನಾಯಕ ವೃತ್ತದಲ್ಲಿ ಮಕ್ಕಳ ದಸರಾ ಉದ್ಘಾಟನೆ ಮತ್ತು ಮೆರವಣಿಗೆ ನಡೆಯಲಿದೆ. ಕೆ. ಎಂ. ಅನ್ವಿತಾ ಮತ್ತು ಸಮಿತ್‌ ಕುಮಾರ್‌ ಉದ್ಘಾಟಿಸುವರು. ಅಂದು ಬೆಳಿಗ್ಗೆ 10 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಯೋಗ ದಸರಾ:

ಅ.6ರಂದು ಬೆಳಗ್ಗೆ 6ಗಂಟೆಗೆ ಕುವೆಂಪು ರಂಗಮಂದಿರಲ್ಲಿ ಯೋಗ ದಸರಾ ನಡೆಯಲಿದೆ. ಬೆಳಗ್ಗೆ 7 ರಿಂದ ಕುವೆಂಪು ರಂಗಮಂದಿರದಿಂದ ಯೋಗ ನಡಿಗೆ, ಬೆಳಗ್ಗೆ 9.30ರಿಂದ ಜಿಲ್ಲಾ ಮಟ್ಟದಿಂದ ಯೋಗಾಸನ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.

ದೃಶ್ಯ ಕಾವ್ಯ ನಾಟ್ಯ ಸಂಭ್ರಮ

ಅ.6 ರ ಸಂಜೆ 5.30 ಕ್ಕೆ ನೆಹರೂ ಕ್ರೀಡಾಂಗಣದಲ್ಲಿ ದೃಶ್ಯ ಕಾವ್ಯ ನಾಟ್ಯ ಸಂಭ್ರಮ ನಡೆಯಲಿದ್ದು, ನಟಿ ಸುಧಾರಾಣಿ ಉದ್ಘಾಟಿಸುವರು. ಅ.7 ರಂದು ಸಂಜೆ 5.30ಕ್ಕೆ ನೆಹರೂ ಕ್ರೀಡಾಂಗಣದಲ್ಲಿ ಜಾನಪದ ವೈಭವ ಆಯೋಜಿಸಲಾಗಿದ್ದು, ನಟಿ ಪ್ರೇಮಾ ಕಾರ್ಯಕ್ರಮ ಉದ್ಘಾಟಿಸುವರು.

ಅಂಬಾರಿ ಮೆರವಣಿಗೆ

ಅ.8 ರಂದು ಮಧ್ಯಾಹ್ನ 2.30 ಕ್ಕೆ ಶಿವಪ್ಪನಾಯಕ ಅರಮನೆ ಆವರಣದಿಂದ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಬೆಳ್ಳಿ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ಅಂಬಾರಿ ಮೆರವಣಿಗೆ ನಡೆಯಲಿದೆ. ಹಳೆ ಜೈಲು ಮೈದಾನದಲ್ಲಿ ಸಂಜೆ 6.15 ಕ್ಕೆ ತಹಸೀಲ್ದಾರ್‌ ಬಿ.ಎನ್‌. ಗಿರೀಶ್‌ ಅಂಬು ಛೇದನ ಮಾಡಲಿದ್ದಾರೆ. ದಸರಾ ಉತ್ಸವದ ಯಶಸ್ಸಿಗೆ 14 ಸಮಿತಿಗಳನ್ನು ರಚಿಸಲಾಗಿದೆ 1.40 ಕೋಟಿ ರು. ವೆಚ್ಚದಲ್ಲಿ ದಸರಾ ಉತ್ಸವ ಆಯೋಜಿಸಲಾಗಿದೆ ಎಂದರು.