ಮಂಗಳೂರಿನ ಮೀನಕಳಿಯದಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿದ್ದು, ತಾತ್ಕಾಲಿಕವಾಗಿ ಸ್ಯಾಂಡ್‌ಬ್ಯಾಗ್‌ಗಳನ್ನು ಅಳವಡಿಸಲಾಗುತ್ತಿದೆ. ಆದರೆ, ಸ್ಥಳೀಯ ಮೀನುಗಾರರು ಈ ತಾತ್ಕಾಲಿಕ ಪರಿಹಾರದ ಬದಲು ಮರವಂತೆ ಮಾದರಿಯ ಶಾಶ್ವತ ಬ್ರೇಕ್-ವಾಟರ್ ನಿರ್ಮಾಣಕ್ಕೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಮಂಗಳೂರು: ನಗರದ ಬೈಕಂಪಾಡಿ ಬಳಿಯ ಮೀನಕಳಿಯ ಸಮುದ್ರ ತೀರದಲ್ಲಿ ಉಂಟಾಗುತ್ತಿರುವ ತೀವ್ರ ಕಡಲ್ಕೊರೆತವನ್ನು ತಡೆಗಟ್ಟಲು ಶಾಸಕ ಡಾ. ಭರತ್ ಶೆಟ್ಟಿಯವರ ಅನುದಾನದಲ್ಲಿ ಸ್ಯಾಂಡ್ ಬ್ಯಾಗ್‌ಗಳನ್ನು ಅಳವಡಿಸುವ ಕಾರ್ಯ ಕೈಗೊಳ್ಳಲಾಗಿದೆ.
ಈ ಭಾಗದಲ್ಲಿ ಸುಮಾರು 300ರಷ್ಟು ಮೀನುಗಾರರ ಮನೆಗಳಿದ್ದು, 7,000 ದಷ್ಟು ಜನರು ವಾಸಿಸುತ್ತಿದ್ದಾರೆ. ಮೀನುಗಾರಿಕೆಗೆ ತೆರಳಲು ಹತ್ತಿರವಾಗುವಂತೆ ಸಮುದ್ರ ತೀರದಲ್ಲಿಯೇ ಬದುಕು ಕಟ್ಟಿಕೊಳ್ಳುವುದು ಇಲ್ಲಿನವರಿಗೆ ಅನಿವಾರ್ಯ. ಆದರೆ ಇತ್ತೀಚಿನ ವರ್ಷಗಳಲ್ಲಿ ಮಳೆಗಾಲದ ಸಂದರ್ಭ ಮೀನಕಳಿಯ ಸಮುದ್ರ ತೀರದಲ್ಲಿ ತೀವ್ರ ಕಡಲ್ಕೊರೆತ ಉಂಟಾಗುತ್ತಿದೆ. ಬೃಹತ್ ಗಾತ್ರದ ಅಲೆಗಳು ಕಡಲ ತೀರಕ್ಕೆ ಅಪ್ಪಳಿಸುತ್ತಾ ಭೂಭಾಗವನ್ನು ಆಪೋಷಣ ಪಡೆದುಕೊಳ್ಳುತ್ತಿದೆ.
ತಾತ್ಕಾಲಿಕ ತಡೆಗೋಡೆ ನಿರ್ಮಾಣ
ಪರಿಣಾಮ ಸಮುದ್ರಕ್ಕೆ ಹತ್ತಿರವಿರುವ ಮೀನುಗಾರರು ಮಳೆಗಾಲದ ಸಂದರ್ಭ ಜೀವ ಕೈಯ್ಯಲ್ಲಿ ಇಟ್ಟುಕೊಂಡು ಬದುಕುವ ಪರಿಸ್ಥಿತಿಯಿದೆ. ಆದ್ದರಿಂದ ಇಲ್ಲಿನ ಮನೆಗಳು ಹಾಗೂ ರಸ್ತೆಗಳನ್ನು ರಕ್ಷಿಸಲು ಸ್ಯಾಂಡ್ ಬ್ಯಾಗ್ ಮತ್ತು ಕಲ್ಲುಗಳನ್ನು ಅಳವಡಿಸಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗುತ್ತಿದೆ. ವರ್ಷಂಪ್ರತಿ ಮಳೆಗಾಲದ ಸಂದರ್ಭ ಜೆಸಿಬಿ ಬಳಸಿ ಈ ಕಾರ್ಯ ಮಾಡಲಾಗುತ್ತಿದೆ. ಇಲ್ಲಿನ ಸಾಂಪ್ರದಾಯಿಕ ಮೀನುಗಾರರು ಕಲ್ಲುಗಳ ದೊಡ್ಡ ಗೋಡೆ ನಿರ್ಮಿಸಲು ಒಪ್ಪುವುದಿಲ್ಲ. ಕಲ್ಲಿನ ಗೋಡೆ ಕಟ್ಟಿದರೆ ದೋಣಿಗಳನ್ನು ದಂಡೆಗೆ ತರಲು ಮತ್ತು ಲಂಗರು ಹಾಕಲು ಕಷ್ಟವಾಗುತ್ತದೆ ಎಂಬುದು ಅವರ ಅಭಿಪ್ರಾಯ.
ಇದನ್ನೂ ಓದಿ: ಕೊಡಗು, ದಕ್ಷಿಣ ಕನ್ನಡ ಗೌಡ ಸಮುದಾಯದ ವಧು-ವರರ ಸಮಾವೇಶ; ಯಾರೆಲ್ಲಾ ಬರಬಹುದು? ಇಲ್ಲಿದೆ ಮಾಹಿತಿ
ಶಾಶ್ವತ ಪರಿಹಾರಕ್ಕೆ ಮೀನುಗಾರರ ಆಗ್ರಹ
ಆದ್ದರಿಂದ ತಾತ್ಕಾಲಿಕ ರಕ್ಷಣೆಯ ಬದಲು ಶಾಶ್ವತ ಪರಿಹಾರ ಬೇಕೆನ್ನುವುದು ಇಲ್ಲಿನ ಮೀನುಗಾರರ ಬೇಡಿಕೆ. ಅದಕ್ಕಾಗಿ ಸ್ಯಾಂಡ್ ಬ್ಯಾಗ್‌ಗಳ ಬದಲಿಗೆ ಮರವಂತೆಯ '"ಟಿ" ಮಾದರಿಯ ಬ್ರೇಕ್-ವಾಟರ್ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಸರ್ಕಾರಕ್ಕೆ ಸತತವಾಗಿ ಒತ್ತಾಯಿಸುತ್ತಿದ್ದಾರೆ. ಸರ್ಕಾರ ಮೀನುಗಾರರ ಈ ಬೇಡಿಕೆಗೆ ತಕ್ಷಣ ಸ್ಪಂದಿಸಿ ಇನ್ನಷ್ಟು ಭೂಭಾಗ ಸಮುದ್ರದ ಒಡಲು ಸೇರುವುದನ್ನು ತಪ್ಪಿಸಬೇಕಾಗಿದೆ.
ಇದನ್ನೂ ಓದಿ: ಬಿಜೆಪಿ ಮುಖಂಡನ ಪುತ್ರನಿಂದ ಪುತ್ತೂರು ಯುವತಿಗೆ ವಂಚನೆ: ರಾಜೀ ಸಂಧಾನಕ್ಕೆ ಪ್ರಸ್ತಾಪ


