ಮಂಗಳೂರು: ಕಡಲ್ಕೊರೆತ ಶಾಶ್ವತ ಪರಿಹಾರಕ್ಕೆ ನೈಸರ್ಗಿಕ ತಂತ್ರಜ್ಞಾನಕ್ಕೆ ಮೊರೆ
ಕಳೆದ ಹಲವು ದಶಕಗಳಿಂದ ಕೋಟಿಗಟ್ಟಲೆ ಮೊತ್ತವನ್ನು ಆಪೋಶನ ತೆಗೆದುಕೊಳ್ಳುತ್ತಿದ್ದ ಕರ್ನಾಟಕ ಕರಾವಳಿಯ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈಗ ನೈಸರ್ಗಿಕ ತಂತ್ರಜ್ಞಾನಕ್ಕೆ ಮೊರೆ ಹೋಗಲಾಗಿದೆ.
ಆತ್ಮಭೂಷಣ್
ಮಂಗಳೂರು (ಜು.29) : ಕಳೆದ ಹಲವು ದಶಕಗಳಿಂದ ಕೋಟಿಗಟ್ಟಲೆ ಮೊತ್ತವನ್ನು ಆಪೋಶನ ತೆಗೆದುಕೊಳ್ಳುತ್ತಿದ್ದ ಕರ್ನಾಟಕ ಕರಾವಳಿಯ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈಗ ನೈಸರ್ಗಿಕ ತಂತ್ರಜ್ಞಾನಕ್ಕೆ ಮೊರೆ ಹೋಗಲಾಗಿದೆ. ಕಡಲತೀರದಲ್ಲಿ ಕಂಡುಬರುವ ಸ್ವಾಭಾವಿಕ ಸಸ್ಯಪ್ರಬೇಧಗಳೇ ಕಡಲ್ಕೊರೆತಕ್ಕೆ ರಕ್ಷಣಾ ಕವಚವಾಗಿ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿರುವುದನ್ನು ಅರಣ್ಯ, ಜೀವಿಶಾಸ್ತ್ರ, ಬಂದರು, ಪರಿಸರ ಇಲಾಖೆ ಅಧಿಕಾರಿಗಳು ಹಾಗೂ ತಜ್ಞರ ತಂಡ ಅಧ್ಯಯನದಲ್ಲಿ ಕಂಡುಕೊಂಡಿದೆ.
ಕಳೆದ ಎರಡು ವರ್ಷಗಳಿಂದ ಪ್ರಾಯೋಗಿಕವಾಗಿ ಕರಾವಳಿ ತೀರಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಕಡಲ್ಕೊರೆತ ತಡೆಗೆ ನೈಸರ್ಗಿಕವಾಗಿ ಶಾಶ್ವತ ಪರಿಹಾರ ಕಂಡುಕೊಂಡಿರುವುದು ದೇಶದಲ್ಲೇ ಇದು ಪ್ರಥಮ. ತಂಡದ ಅಧ್ಯಯನ ಹಾಗೂ ಪರಿಶ್ರಮಕ್ಕೆ ವಿಶ್ವಬ್ಯಾಂಕ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮ್ಮತಿಸಿದರೆ, ಸುಮಾರು 320 ಕಿ.ಮೀ. ದೂರದ ಇಡೀ ಕರಾವಳಿಯುದ್ಧಕ್ಕೂ ಕಡಲ್ಕೊರೆತ ತಡೆಯುವ ಈ ಯೋಜನೆ ಕಾರ್ಯಗತಗೊಳ್ಳಲಿದೆ.
ದಕ್ಷಿಣಕನ್ನಡದಲ್ಲಿ ಮಳೆ ಇಳಿಮುಖ, ಉಡುಪಿಯಲ್ಲಿ ಮುಂದುವರಿಕೆ
ಕಾಲ ಬುಡದಲ್ಲೇ ಪರಿಹಾರ!:
ಉಳ್ಳಾಲದ ಸೋಮೇಶ್ವರದಿಂದ ಕಾರವಾರದ ಮಜಾಲಿ ವರೆಗಿನ ಕಡಲ ತೀರದ ಸುಮಾರು ಒಂದು ಸಾವಿರಕ್ಕೂ ಅಧಿಕ ಕಡೆಗಳಲ್ಲಿ ಕಡಲ್ಕೊರೆತ ಇದೆ. ಕಳೆದ ಎರಡು ದಶಕಗಳಿಂದ ಕಡಲ್ಕೊರೆತ ವಿಪರೀತವಾಗಿದ್ದು, ಪ್ರತಿ ವರ್ಷ ಮಳೆಗಾಲದಲ್ಲಿ ದ.ಕ., ಉಡುಪಿ ಹಾಗೂ ಉತ್ತರ ಕನ್ನಡದ ಜಿಲ್ಲೆಗಳ ಕಡಲ ತೀರಗಳು ಕಡಲ್ಕೊರೆತಕ್ಕೆ ಸಿಲುಕಿ ನಲುಗುತ್ತಿವೆ. ಬ್ರೇಕ್ ವಾಟರ್, ಸೀ ರೂಫ್, ಜಿಯೋ ಟೆಕ್ಸ್‌ಟೈಲ್ ಸೇರಿದಂತೆ ವಿವಿಧ ತಾಂತ್ರಿಕತೆಗಳನ್ನು ಅಳವಡಿಸಿದರೂ ಕಡಲ್ಕೊರೆತ ನಿಯಂತ್ರಿಸಲು ಸಾಧ್ಯವಾಗಿಲ್ಲ. ಕೊನೆಗೂ ಕಾಲ ಬುಡದಲ್ಲೇ ಪರಿಹಾರ ಇರುವುದನ್ನು ಅಧಿಕಾರಿಗಳು ಹಾಗೂ ತಜ್ಞರು ಕಂಡುಕೊಂಡಿದ್ದಾರೆ.
ಏನಿದು ಸುಲಭ ಪರಿಹಾರ?:
ಈಗಾಗಲೇ ಕಡಲ ತೀರಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ನೈಸರ್ಗಿಕ ಸಸ್ಯ ಪ್ರಬೇಧಗಳೇ ಕಡಲ್ಕೊರೆತಕ್ಕೆ ಇರುವ ಶಾಶ್ವತ ಪರಿಹಾರ ಎಂಬುದನ್ನು ಈ ತಂಡ ಕಂಡುಕೊಂಡಿದೆ. ನಾಲ್ಕು ವರ್ಷಗಳ ಹಿಂದೆ ಇಡೀ ಕರಾವಳಿ ತೀರ ಸುತ್ತಾಡಿ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಹಾಗೂ ತಜ್ಞರನ್ನು ಒಳಗೊಂಡ ತಂಡ ಪ್ರಾಕೃತಿಕವಾಗಿಯೇ ಪ್ರಕೃತಿಯನ್ನು ರಕ್ಷಿಸಲು ಸಾಧ್ಯ ಎಂಬುದನ್ನು ಮನದಟ್ಟು ಮಾಡಿಕೊಳ್ಳುವಲ್ಲಿ ಸಫಲವಾಗಿದೆ.
ಕಡಲ ತೀರಗಳಲ್ಲಿ ಕಂಡುಬಂದಿರುವ ನೈಸರ್ಗಿಕ ಸಸ್ಯಪ್ರಬೇಧಗಳನ್ನು ಪರಿಶೀಲಿಸಿದಾಗ ಅವುಗಳೇ ಕಡಲ್ಕೊರೆತಕ್ಕೆ ತಡೆಯಾಗಿ ಭದ್ರವಾಗಿ ನೆಲೆಯೂರಿರುವುದು ಗಮನಕ್ಕೆ ಬಂದಿದೆ. ಇಂತಹ ಸಸ್ಯಗಳು ಇರುವಲ್ಲಿ ಕಡಲ್ಕೊರತೆ ಸಂಭವಿಸಿಯೇ ಇಲ್ಲ. ಈ ಬಗ್ಗೆ ಅಧ್ಯಯನ ನಡೆಸಿದಾಗ ಕಡಲ ತೀರಗಳಲ್ಲಿ ಹಲವು ಸಸ್ಯಪ್ರಬೇಧಗಳು ಕಡಲ್ಕೊರೆತಕ್ಕೆ ತಡೆಯಾಗಿ ಇರುವುದು ಪತ್ತೆಯಾಗಿದೆ. ಹೀಗಾಗಿ ಈ ಸಸ್ಯಪ್ರಬೇಧಗಳನ್ನು ಮೂರು ವಲಯಗಳಾಗಿ ವಿಂಗಡಿಸಿ, ಇವುಗಳನ್ನೇ ಎಲ್ಲ ಕಡೆಗಳಿಗೆ ಕಡಲ್ಕೊರೆತ ತಡೆಯುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಈ ತಂಡ ಪ್ರಸ್ತಾಪಿಸಿದೆ.
ಪ್ರಯೋಗವೂ ಯಶಸ್ವಿ:
ಕಡಲ ತೀರದಲ್ಲೇ ಇರುವ ನೈಸರ್ಗಿಕ ಸಸ್ಯಪ್ರಬೇಧಗಳನ್ನು ಮಂಗಳೂರಿನ ತಣ್ಣೀರುಬಾವಿ ಮತ್ತು ಬೆಂಗರೆ ಪ್ರದೇಶಗಳಲ್ಲಿ ನಾಟಿ ಮಾಡಿದ್ದು, ಕಳೆದ ಎರಡು ವರ್ಷಗಳಲ್ಲಿ ಇಲ್ಲಿ ಕಡಲ್ಕೊರೆತ ಕಂಡುಬಂದಿಲ್ಲ. ಕಳೆದ ಅವಧಿಯಲ್ಲಿ ರಾಜ್ಯ ಸರ್ಕಾರ ಪರಿಸರ ಪೂರಕ ಯೋಜನೆಯಡಿ 30 ಲಕ್ಷ ರು.ಗಳನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ತಲಾ ಐದು ಹೆಕ್ಟೇರ್ ಪ್ರದೇಶಗಳಲ್ಲಿ ನೈಸರ್ಗಿಕ ಸಸ್ಯಪ್ರಬೇಧÜಗಳನ್ನು ಬೆಳೆಸಿದೆ. ಇದೀಗ ಕೆಐಒಸಿಎಲ್ ಕೂಡ 3 ಕೋಟಿ ರು. ವ್ಯಯಿಸಿ ತಣ್ಣೀರು ಬಾವಿ ತೀರದಲ್ಲಿ ಇದೇ ನೈಸರ್ಗಿಕ ತಂತ್ರಜ್ಞಾನವನ್ನು ಅಳವಡಿಸುತ್ತಿದೆ.
ನಾಲ್ಕು ವಲಯಗಳಲ್ಲಿ ಬೆಳೆಸಿದರೆ ಕಡಲಿಗೆ ರಕ್ಷಣೆ
ಕಡಲ ತೀರದಲ್ಲೇ ಸಾಮಾನ್ಯವಾಗಿ ಕಂಡುಬರುತ್ತಿರುವ ಸಸ್ಯಪ್ರಬೇಧಗಳನ್ನು ನಾಲ್ಕು ವಲಯಗಳಾಗಿ ವಿಂಗಡಿಸಿ ಕಡಲ್ಕೊರೆತಕ್ಕೆ ರಕ್ಷಣಾ ಕವಚವಾಗಿ ಬೆಳೆಸಲು ಉದ್ದೇಶಿಸಲಾಗಿದೆ. ಕಡಲ ತೀರದಲ್ಲಿ ಮೊದಲ ವಲಯದಲ್ಲಿ ಐಫೋಮಿಯಾ, ಸ್ಟೈನಿಫ್ಲೆಕ್ಸ್, ನಂತರ ಸ್ಕಾ್ಯವಿಯೋಲಾ, ಪ್ರಮ್ನಾ, ಕ್ಲೀರೋ, ವೈಟೆಕ್ಸ್ ಡೆಂಡ್ರಂ, ಬಳಿಕ ನೋನಿ, ಬುಗರಿ ಮರ, ಕ್ಯಾಲೋಫಿಲ್ಲಂ, ಕೊನೆ ವಲಯದಲ್ಲಿ ಆಲ್ವೇನಿಯಾ, ಕ್ಯಾಚುರಿನ್ ಹಾಗೂ ಪೈಕಸ್ ಸಸ್ಯಪ್ರಬೇಧಗಳನ್ನು ಬೆಳೆಸಬೇಕಾಗುತ್ತದೆ. ಈ ನೈಸರ್ಗಿಕ ಸಸ್ಯಪ್ರಬೇಧವನ್ನು ಅರಣ್ಯ ಇಲಾಖೆಯೇ ತನ್ನ ನರ್ಸರಿಗಳಲ್ಲಿ ಬೆಳೆಸುತ್ತಿದೆ. ಒಮ್ಮೆ ಈ ಸಸ್ಯಪ್ರಬೇಧವನ್ನು ಬೆಳೆಸಿದರೆ, ಅದು ಕರಾವಳಿ ಕಡಲತೀರಗಳಿಗೆ ಶಾಶ್ವತ ರಕ್ಷಾಕವಚವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.
Karnataka rains: ಮಳೆಗೆ ಮತ್ತೆ 5 ಬಲಿ; ವಿವಿಧೆಡೆ ಭೂ ಕುಸಿತ
ಕಡಲ ತೀರ ರಕ್ಷಣೆಗೆ ಇದು ದೇಶದಲ್ಲೇ ಮಾದರಿಯಾದ ಯೋಜನೆ. ಕಳೆದ ಎರಡು ವರ್ಷಗಳಲ್ಲಿ ನೈಸರ್ಗಿಕ ಸಸ್ಯಪ್ರಬೇಧವನ್ನು ಕಡಲ ತೀರಗಳಲ್ಲಿ ಬೆಳೆಸಿ ಕಡಲ್ಕೊರೆತ ತಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಇದನ್ನೇ ಇಡೀ ಕರಾವಳಿ ತೀರಗಳಲ್ಲಿ ಬೆಳೆಸಿದರೆ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಸಿಗಲು ಸಾಧ್ಯವಿದೆ. ಈ ಯೋಜನೆಗೆ ‘ಪ್ರಾಕೃತಿಕ ಕರಾವಳಿ ತೀರ ರಕ್ಷಣಾ ಕವಚ’ ಎಂದು ಹೆಸರಿಸಲಾಗಿದೆ.
-ಡಾ.ದಿನೇಶ್ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು