ರಾಜ್ಯದಲ್ಲಿ ಭೂಕುಸಿತ, ಕಡಲ ಕೊರೆತ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲು ₹800 ಕೋಟಿ ಅನುದಾನಕ್ಕೆ ಶೀಘ್ರವೇ ಅನುಮೋದನೆ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಕಾರವಾರ (ಜು.23): ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಭೂಕುಸಿತ, ಕಡಲ ಕೊರೆತ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲು ₹800 ಕೋಟಿ ಅನುದಾನಕ್ಕೆ ಶೀಘ್ರವೇ ಅನುಮೋದನೆ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಮಳೆಯಿಂದ ಗುಡ್ಡ ಕುಸಿತಕ್ಕೊಳಗಾದ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಶಿರೂರು, ಕುಮಟಾ ತಾಲೂಕಿನ ದೇವಿಮನೆ ಘಟ್ಟ ಹಾಗೂ ಶಿರಸಿ ತಾಲೂಕಿನ ಬೆಣ್ಣೆಹೊಳೆ ಸೇತುವೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಈ ವೇಳೆ, ಮಾತನಾಡಿ, ರಾಜ್ಯದ 6 ಜಿಲ್ಲೆಗಳಲ್ಲಿ ಭೂಕುಸಿತ ಸಮಸ್ಯೆ ತೀವ್ರವಾಗಿದ್ದು, ಈ ಭಾಗದಲ್ಲಿ ತಡೆಗೋಡೆ ನಿರ್ಮಿಸುವ ಕಾಮಗಾರಿಗಾಗಿ ₹500 ಕೋಟಿ ಮೀಸಲಿಡಲಾಗುತ್ತಿದೆ. ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕಡಲು ಕೊರೆತ ಸಮಸ್ಯೆ ತಡೆಗೆ ಪ್ರತಿ ಜಿಲ್ಲೆಗೆ ನೂರು ಕೋಟಿಯಂತೆ ₹300 ಕೋಟಿ ಒದಗಿಸಲಾಗುವುದು ಎಂದರು. ರಾಜ್ಯದ ಸುಮಾರು 1,500 ಸ್ಥಳಗಳಲ್ಲಿ ಮಳೆ ಮಾಪನ ಕೇಂದ್ರಗಳು ದುಸ್ಥಿತಿಯಲ್ಲಿವೆ. ಅವುಗಳನ್ನು ದುರಸ್ತಿ ಮಾಡಿಸುವ ಕೆಲಸ ನಡೆಯಲಿದೆ. ಯಂತ್ರಗಳು ಸಂಪೂರ್ಣ ಹಾಳಾಗಿದ್ದರೆ ಹೊಸ ಯಂತ್ರಗಳ ಅಳವಡಿಕೆ ನಡೆಯಲಿದೆ ಎಂದರು.
ತಹಸೀಲ್ದಾರ್‌ಗಳಿಗೆ ತರಾಟೆ: ಬೆಂಗಳೂರು ನಗರ ಭಾಗದಲ್ಲಿ ಭೂ ಸುರಕ್ಷಾ ಯೋಜನೆಯಡಿ ಆಸ್ತಿ ದಾಖಲೆಗಳನ್ನು ಡಿಜಟಲೀಕರಣಕ್ಕೆ ನಿರ್ಲಕ್ಷ್ಯತೋರಿದ ಯಲಹಂಕ ಹಾಗೂ ಆನೇಕಲ್ ತಹಸೀಲ್ದಾರ್‌ಗಳಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ‘ನಿಮಗೆ ಗತಿ ಕಾಣಿಸಬೇಕಾ’ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಇಬ್ಬರೂ ತಹಸೀಲ್ದಾರ್‌ಗಳಿಗೂ ನೋಟಿಸ್ ಜಾರಿ ಮಾಡಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಕಾಸಸೌಧದಲ್ಲಿ ಭೂ ಸುರಕ್ಷಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಬೆಂಗಳೂರು ನಗರ-ಗ್ರಾಮೀಣ ಜಿಲ್ಲೆಯ ತಹಶೀಲ್ದಾರರು ಕಚೇರಿಗೆ ಹೋಗಲ್ಲ, ನಿಮಗೆ ಬೇರೆಲ್ಲಿ ಕಚೇರಿ ಇದೆ ಎಂಬುದೇ ನಮಗೆ ಗೊತ್ತಿಲ್ಲ. ಇಲ್ಲಿವರೆಗೆ ನಾವೂ ಸಹಿಸಿಕೊಂಡಿದ್ದೇನೆ. ಇನ್ನೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅಧಿಕಾರಿಗಳು ದಾರಿಗೆ ಬರದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಯಲಹಂಕ ತಹಸೀಲ್ದಾರ್ ಕಚೇರಿಯಲ್ಲಿ ಡಿಜಿಟಲೀಕರಣಕ್ಕೆ ಹಿನ್ನಡೆಡೆ ಉಂಟಾಗಿರುವ ಬಗ್ಗೆ ನೆಟ್‌ವರ್ಕ್ ಸಮಸ್ಯೆ, ಬಯೋಮೆಟ್ರಿಕ್ ಸಾಧನಗಳ ಕೊರತೆ ನೆಪ ನೀಡಿದ ತಹಸೀಲ್ದಾರ್ ಅವರಿಗೆ, ‘ನೆಪಗಳನ್ನು ಹೇಳಲು ನಿಮಗೆ ನಾಚಿಕೆ ಆಗುವುದಿಲ್ಲವೇ?
ಬೆಂಗಳೂರಿನಲ್ಲಿರುವ ನಿಮಗೆ ಮಾತ್ರ ನೆಟ್‌ವರ್ಕ್ ಸಮಸ್ಯೆ ಇದೆ. ಕಚೇರಿಯಲ್ಲಿರಲು ಹಾಗೂ ಕೆಲಸ ಮಾಡಲು ನಿಮಗೆ ಏನು ರೋಗ ಅಂತಾದ್ರೂ ಹೇಳಿ’ ಎಂದು ತರಾಟೆಗೆ ತೆಗೆದುಕೊಂಡರು. ಆನೇಕಲ್ ತಹಸೀಲ್ದಾರ್ ಶಶಿಧರ್ ಮಾಡ್ಯಾಳ್ ಅವರಿಗೆ ತರಾಟೆಗೆ ತೆಗೆದುಕೊಂಡ ಸಚಿವರು, ನನ್ನ ಕಿವಿಯಲ್ಲಿ ದೊಡ್ಡ ದಾಸವಾಳ ಹೂ ಕಾಣುತ್ತಿದೆಯೇ? ನೀವು ಇದನ್ನು ಉದ್ದೇಶಪೂರ್ಕವಾಗಿ ನಿರ್ಲಕ್ಷಿಸಿದ್ದೀರಿ. ನೀವು ಸರ್ಕಾರದ ಕೆಳಗಡೆ ಇದ್ದೀರೋ ಅಥವಾ ಸರ್ಕಾರವೇ ನಿಮ್ಮ ಕೆಳಗಡೆ ಇದೆಯೋ? ಎಂದು ಕಿಡಿ ಕಾರಿದರು.
