ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ, ಜಿಲ್ಲಾಡಳಿತವು ವಿದ್ಯಾರ್ಥಿಗಳ ಸುರಕ್ಷತೆಗಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ. ಪುತ್ತೂರು, ಬೆಳ್ತಂಗಡಿ, ಕಡಬ ಹಾಗೂ ಸುಳ್ಯ ತಾಲೂಕುಗಳ ಅಂಗನವಾಡಿ, ಶಾಲೆ ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ದಕ್ಷಿಣ ಕನ್ನಡ (ಆ.07): ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ (Dakshina Kannada) ವರುಣನ ಆರ್ಭಟ ಮುಂದುವರಿದಿದ್ದು, ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲಿ (Rural Areas) ನಾಳೆ ಭಾರಿ ಮಳೆಯಾಗುವ (Heavy Rain Forecast) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲೆಯ ಪುತ್ತೂರು ಉಪವಿಭಾಗದ ವ್ಯಾಪ್ತಿಗೆ ಒಳಪಡುವ ನಾಲ್ಕು ತಾಲೂಕುಗಳ ಶಾಲಾ-ಕಾಲೇಜುಗಳಿಗೆ ನಾಳೆ ಆಗಸ್ಟ್ 8ರ ಶನಿವಾರ ರಜೆ ಘೋಷಿಸಿ (School Holiday) ಆದೇಶ ಹೊರಡಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. (Deputy Commissioner Darshan H.V.) ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಪುತ್ತೂರು ಉಪವಿಭಾಗಕ್ಕೆ ಒಳಪಡುವ ಪುತ್ತೂರು, ಬೆಳ್ತಂಗಡಿ, ಕಡಬ ಹಾಗೂ ಸುಳ್ಯ ತಾಲೂಕುಗಳಲ್ಲಿ ಅಂಗನವಾಡಿಯಿಂದ ಹಿಡಿದು ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ (PUC Colleges) ವರೆಗೆ ನಾಳೆ ಶಾನಿವಾರ ರಜೆ ಇರಲಿದೆ.

ಯಾವೆಲ್ಲಾ ತಾಲೂಕುಗಳಿಗೆ ರಜೆ ಅನ್ವಯ?:

ಪುತ್ತೂರು (Puttur)

ಬೆಳ್ತಂಗಡಿ (Belthangady)

ಕಡಬ (Kadaba)

ಸುಳ್ಯ (Sullia)

ಈ ನಾಲ್ಕೂ ತಾಲೂಕುಗಳ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಅಂಗನವಾಡಿಗಳು, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ/ಪ್ರೌಢಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ (PU Colleges) ನಾಳೆ ರಜೆ ಅನ್ವಯವಾಗಲಿದೆ.

ಸುರಕ್ಷತೆಗೆ ಮೊದಲ ಆದ್ಯತೆ:

ಗ್ರಾಮಾಂತರ ಭಾಗಗಳಲ್ಲಿ ರಸ್ತೆಗಳು, ಹಳ್ಳ-ಕೊಳ್ಳಗಳು ತುಂಬಿ ಹರಿಯುವ ಸಾಧ್ಯತೆ ಇದ್ದು, ಸಣ್ಣ ಸಣ್ಣ ಸೇತುವೆ ಹಾಗೂ ಕಾಲುಸಂಕಗಳ ಮೇಲೆ ನೀರು ಹರಿಯುವ ಭೀತಿ ಎದುರಾಗಿದೆ. ಇದರಿಂದ ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಅಪಾಯವಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ತಳೆಯಲಾಗಿದೆ. ಜಿಲ್ಲಾಡಳಿತವು (District Administration) ನದಿ ತೀರ, ತಗ್ಗು ಪ್ರದೇಶ ಹಾಗೂ ಸಡಿಲ ಮಣ್ಣಿನ ಗುಡ್ಡ ಕುಸಿತದ ಭೀತಿ ಇರುವ ಪ್ರದೇಶಗಳ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಪೋಷಕರು ತಮ್ಮ ಮಕ್ಕಳನ್ನು ನೀರು ಹರಿಯುವ ಹಳ್ಳ, ನದಿ ಹಾಗೂ ಕಡಲತೀರಕ್ಕೆ ತೆರಳದಂತೆ ನೋಡಿಕೊಳ್ಳಬೇಕಾಗಿ ವಿನಂತಿಸಲಾಗಿದೆ.