Gangavathi News: ನಗರದ ಪಬ್ಲಿಕ್ ಕ್ಲಬ್ ನಗರಸಭೆ ಆಸ್ತಿಯಾಗಿದ್ದು, ಇದರ ಮುಂಭಾಗದಲ್ಲಿ ನಿರ್ಮಿಸಲಾಗಿರುವ 11 ಮಳಿಗೆಗಳು ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದರಿಂದ ಕೂಡಲೆ ನೋಟಿಸ್ ನೀಡಿದ 7 ದಿನಗಳ ಒಳಗಾಗಿ..
ಗಂಗಾವತಿ (ಆ.07): ನಗರದ ಪಬ್ಲಿಕ್ ಕ್ಲಬ್ ನಗರಸಭೆ ಆಸ್ತಿಯಾಗಿದ್ದು, ಇದರ ಮುಂಭಾಗದಲ್ಲಿ ನಿರ್ಮಿಸಲಾಗಿರುವ 11 ಮಳಿಗೆಗಳು ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದರಿಂದ ಕೂಡಲೆ ನೋಟಿಸ್ ನೀಡಿದ 7 ದಿನಗಳ ಒಳಗಾಗಿ ತೆರವುಗೊಳಿಸಿಕೊಳ್ಳಬೇಕೆಂದು ನಗರಸಭೆಯ ಪೌರಾಯುಕ್ತರು ಮಳಿಗೆಗಳ ಮಾಲೀಕರಿಗೆ ಸೂಚನೆ ಮೂಲಕ ಗಡುವು ನೀಡಿದ್ದಾರೆ. ಪ್ರಾದೇಶಿಕ ಆಯುಕ್ತರ ಆದೇಶದ ಮೇರೆಗೆ ಪೌರಾಯುಕ್ತರು ಕ್ಲಬ್ ನ ಆವರಣದಲ್ಲಿರುವ ಸಂಗೀತ ಶಾಲೆ, ಪ್ರಾಥಮಿಕ ಶಾಲೆ, ರಂಗ ಮಂದಿರ ಸೇರಿದಂತೆ ಕ್ರೀಡೆ ಮತ್ತು 11 ವಾಣಿಜ್ಯ ಮಳಿಗೆಗಳಿದ್ದವು.
ಈ ಜಾಗದ ಬಗ್ಗೆ ನಗರಸಭೆಯಿಂದ ಅನಧಿಕೃತವಾಗಿ ಫಾರಂ 3 ಪಡೆದಿದ್ದರು. ಈ ಪ್ರದೇಶ ನಗರಸಭೆಗೆ ಸಂಬಂಧಿಸಿದ್ದರಿಂದ ಕೂಡಲೆ ನಗರಸಭೆಯ ವ್ಯಾಪ್ತಿಗೆ ಪಡೆಯಬೇಕೆಂದು ಪ್ರಾದೇಶಿಕ ಆಯುಕ್ತರು ಆದೇಶ ನೀಡಿದ್ದರು. ಈ ಆದೇಶದ ಮೇರೆಗೆ ಕ್ಲಬ್ ಗೆ ಬೀಗ ಹಾಕಿದ ದಿನವೇ ಇದರ ವ್ಯಾಪ್ತಿಯಲ್ಲಿರುವ 11 ಮಳಿಗೆಗಳ ಮಾಲೀಕರಿಗೆ ತೆರವುಗೊಳಿಸುವಂತೆ ಪೌರಾಯುಕ್ತರು ನೋಟಿಸ್ ನೀಡಿದ್ದಾರೆ.
7 ದಿನಗಳಲ್ಲಿ ತೆರವು
ನಗರಸಭೆಗೆ ಸಂಬಂಧಿಸಿದ ಪಬ್ಲಿಕ್ ಕ್ಲಬ್ ಸೀಜ್ ಮಾಡಿದ ದಿನವೇ ಪೌರಾಯುಕ್ತರು ಮಳಿಗೆಗಳ ಮಾಲೀಕರಿಗೆ ನೋಟಿಸ್ ನೀಡಿ 7 ದಿನಗಳಲ್ಲಿ ತೆರವುಗೊಳಿಸಬೇಕೆಂದು ಸೂಚನೆ ನೀಡಿದ್ದಾರೆ. ನಗರದ 19 ನೇ ವಾರ್ಡಿನಲ್ಲಿ ಪಬ್ಲಿಕ್ ಕ್ಲಬ್ (ವಿಸ್ತೀರ್ಣ 54411.7855 ಚದುರ ಮೀಟರ್) ಆಸ್ತಿ ಇದ್ದು, ಇದು ನಗರಸಭೆಗೆ ಸಂಬಂಧಿಸಿರುತ್ತದೆ. ಈಗಾಗಲೇ ಕಲ್ಬುರ್ಗಿ ಪ್ರಾದೇಶಿಕ ಆಯುಕ್ತರು ಆದೇಶ ನೀಡಿ ಪಬ್ಲಿಕ್ ಕ್ಲಬ್ ನವರು ಇರುವ ಆಸ್ತಿ ನಗರಸಭೆಗೆ ಸಂಬಂಧಿಸಿದ್ದು, ಕೂಡಲೆ ನಗರಸಭೆಗೆ ಸ್ವಾಧೀನಪಡಿಸಿಕೊಳ್ಳುವಂತೆ ಆದೇಶ ನೀಡಿದ್ದಾರೆ. ಈ ಆಸ್ತಿಯಲ್ಲಿ ಅಕ್ರಮವಾಗಿ ಮಳಿಗೆಗಳನ್ನು ನಿರ್ಮಿಸಿಕೊಂಡಿದ್ದೀರಿ. ಕಾರಣ ನೋಟಿಸ್ ನೀಡಿದ 7 ದಿನಗಳಲ್ಲಿ ತೆರವುಗೊಳಿಸಬೇಕು. ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೌರಾಯುಕ್ತ ವಿರೂಪಾಕ್ಷಮೂರ್ತಿ ಅವರು ನೀಡಿದ ನೋಟಿಸ್ ನಲ್ಲಿ ಪ್ರಸ್ತಾಪಿಸಿದ್ದಾರೆ.
ಮುಂಗಡ ಹಣ ಪಾವತಿಸಿದವರ ಪರದಾಟ
ಮಳಿಗೆಗಳನ್ನು ನಿರ್ಮಿಸಿಕೊಂಡು ಲಕ್ಷಾಂತರ ರುಪಾಯಿ ಮುಂಗಡ ನೀಡಿದ ಅಂಗಡಿಗಳ ಮಾಲೀಕರು ಈಗ ಪರದಾಡುತ್ತಿದ್ದಾರೆ. ಮಳಿಗೆಗಳನ್ನು ನಿರ್ಮಿಸಿಕೊಂಡವರು ಕ್ಲಬ್ ಗೆ ಮುಂಗಡ ಹಣ ಪಾವತಿಸಿದ್ದರು. ಈಗ ಮಳಿಗೆಗಳನ್ನು ಖಾಲಿ ಮಾಡಿದರೆ ನಾವು ಪಾವತಿಸಿದ ಹಣ ಯಾರ ಜವಬ್ದಾರಿ ಎಂದು ತಮ್ಮ ಅಳಲು ವ್ಯಕ್ತಪಡಿಸಿದ್ದಾರೆ. ಈ ಕುರಿತು ಪೌರಾಯುಕ್ತ ವಿರೂಪಾಕ್ಷಮೂರ್ತಿ ಪ್ರತಿಕ್ರಿಯಿಸಿ ಮುಂಗಡ ಹಣಕ್ಕೆ ನಗರಸಭೆ ಜವಾಬ್ದಾರಿ ಅಲ್ಲ. ನಾವು ನೀಡಿದ 7 ದಿನಗಳೊಳಗಾಗಿ ಮಳಿಗೆಗಳನ್ನು ಖಾಲಿ ಮಾಡಬೇಕೆಂದು ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.


