ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಆಗಸ್ಟ್ 4 ರಂದು ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
ಮಂಗಳೂರು (ಆ.3): ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ನಾಳೆ (ಆಗಸ್ಟ್ 4) ಭಾರೀ ಮಳೆಯಾಗುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ತಾಲೂಕುವಾರು ರಜೆಯನ್ನು ಹಂಚಿಕೆ ಮಾಡಲಾಗಿದ್ದು, ಮಂಗಳೂರು ಮತ್ತು ಪುತ್ತೂರು ಉಪವಿಭಾಗಗಳಿಗೆ ಪ್ರತ್ಯೇಕ ನಿಯಮಗಳು ಅನ್ವಯವಾಗಲಿವೆ.
ಎಲ್ಲೆಲ್ಲಿ ಎಷ್ಟು ರಜೆ? ಸಂಪೂರ್ಣ ವಿವರ ಇಲ್ಲಿದೆ
ಮಂಗಳೂರು ಉಪವಿಭಾಗ: ಮಂಗಳೂರು, ಉಳ್ಳಾಲ, ಮೂಡಬಿದಿರೆ, ಬಂಟ್ವಾಳ ಹಾಗೂ ಮುಲ್ಕಿ ತಾಲೂಕುಗಳಲ್ಲಿ ಅಂಗನವಾಡಿಯಿಂದ ಪ್ರೌಢಶಾಲೆ (ಹೈಸ್ಕೂಲ್) ವರೆಗೆ ಮಾತ್ರ ರಜೆ ನೀಡಲಾಗಿದೆ. (ಪದವಿಪೂರ್ವ ಕಾಲೇಜುಗಳಿಗೆ ರಜೆ ಇರುವುದಿಲ್ಲ).
ಪುತ್ತೂರು ಉಪವಿಭಾಗ: ಪುತ್ತೂರು, ಬೆಳ್ತಂಗಡಿ, ಕಡಬ ಹಾಗೂ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಮಳೆಯ ತೀವ್ರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಅಂಗನವಾಡಿಯಿಂದ ಹಿಡಿದು ಪಿಯುಸಿವರೆಗೂ ಸಂಪೂರ್ಣ ರಜೆ ಘೋಷಿಸಲಾಗಿದೆ.
ಡಿಸಿ ದರ್ಶನ್ ಎಚ್.ವಿ. ಆದೇಶ
ಜಿಲ್ಲೆಯಲ್ಲಿ ಮಳೆಯ ಆರ್ಭಟ ಹೆಚ್ಚಾಗುತ್ತಿರುವ ಕಾರಣ ವಿದ್ಯಾರ್ಥಿಗಳಿಗೆ ಯಾವುದೇ ಅಪಾಯವಾಗದಂತೆ ತಡೆಯಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಗಳು ಈ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ನದಿ, ತೊರೆ ಹಾಗೂ ತಗ್ಗು ಪ್ರದೇಶಗಳಿಗೆ ತೆರಳದಂತೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಉಡುಪಿ ಜಿಲ್ಲೆಯ ಶಾಲೆಗಳಿಗೆ ರಜೆ
ಮಂಗಳವಾರ ವ್ಯಾಪಕ ಮಳೆ ಸಾಧ್ಯತೆ ಇರುವ ಹಿನ್ನಲೆಯಲ್ಲಿ, ಉಡುಪಿ ಜಿಲ್ಲೆಯ ಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.


