Asianet Suvarna News Asianet Suvarna News

ಕೃಷಿಯಿಂದ ಕೋಟಿ ಗಳಿಸಿದ ಎಪ್ಪತ್ನಾಲ್ಕರ ‘ಯುವಕ’!

ಕೃಷಿಯ ಬಗ್ಗೆ ಪ್ರೀತಿ ಇದ್ದರೆ ವಯಸ್ಸು ಲೆಕ್ಕಕ್ಕೆ ಬರುವುದಿಲ್ಲ, ಕೃಷಿಕರಿಗೆ ನಿವೃತ್ತಿ ಅನ್ನುವುದಿರುವುದಿಲ್ಲ. ಉತ್ಸಾಹದಿಂದ ತೊಡಗಿಸಿಕೊಂಡರೆ ಎಪ್ಪತ್ತರ ಹರೆಯದಲ್ಲೂ ಯಶಸ್ವಿ ಕೃಷಿಕನಾಗಬಹುದು ಎಂಬುವುದಕ್ಕೆ ಬೆಳ್ತಂಗಡಿ ತಾಲೂಕು ತಣ್ಣೀರು ಪಂತ ಗ್ರಾಮದ ದುಗ್ಗಪ್ಪಗೌಡ ಸಾಕ್ಷಿಯಾಗಿದ್ದಾರೆ. ಮಿಶ್ರಕೃಷಿಯಲ್ಲಿ ಅವರು ಕೋಟಿ ರುಪಾಯಿಗಳ ವ್ಯವಹಾರ ನಡೆಸುತ್ತಿದ್ದಾರೆ.

Dakshina Kannada Belthangady farmer earns crore in Farming
Author
Bangalore, First Published Sep 17, 2019, 11:03 AM IST

 ಪ. ರಾಮಕೃಷ್ಣ ಶಾಸ್ತ್ರಿ

ಪೊಸಂದೋಡಿ ದುಗ್ಗಪ್ಪಗೌಡರಿಗೆ ಎಪ್ಪತ್ನಾಲ್ಕರ ಹರೆಯವೆಂದರೆ ನಂಬಿಕೆ ಬರುವುದು ಕಷ್ಟ. ಯಾಕೆಂದರೆ ಸ್ವತಃ ಕೃಷಿಭೂಮಿಯಲ್ಲಿ ದುಡಿದು ಅವರು ಒಂದೂವರೆ ಎಕರೆ ಭೂಮಿಯನ್ನು ಹಸಿರಿನ ನಂದನವನವನ್ನಾಗಿ ಮಾಡಿದ್ದಾರೆ. ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದಲ್ಲಿರುವ ಅವರು ಸಹಕಾರಿ ಸಂಸ್ಥೆಯಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ

ಮೂವತ್ತೇಳು ವರ್ಷಗಳ ಕಾಲ ದುಡಿಯುವಾಗಲೇ ಬಿಡುವಿನ ಪ್ರತಿಯೊಂದು ಕ್ಷಣವನ್ನೂ ಕೃಷಿಗಾಗಿ ವ್ಯಯಿಸುತ್ತಿದ್ದರು. ಈಗಲೂ ರೈತ ತೋಟಗಾರಿಕೆ ಉತ್ಪಾದಕರ ಸಂಘದ ಅಧ್ಯಕ್ಷರಾಗಿದ್ದು ಬಹು ಚೆನ್ನಾಗಿ ಅದರ ಪ್ರಗತಿಯನ್ನು ಸಾಧಿಸಿ ವಾರ್ಷಿಕ ಒಂದು ಕೋಟಿ ರೂಪಾಯಿಗಳ ವ್ಯವಹಾರದ ಗುರಿಯನ್ನು ತಲುಪಿದ್ದಾರೆ. ಅದರ ಜೊತೆಗೆ ಸಂಪನ್ನ ಕೃಷಿ ವಿಧಾನಕ್ಕೂ ಮಾದರಿಯಾಗಿದ್ದಾರೆ.

Dakshina Kannada Belthangady farmer earns crore in Farming

ಮನೆ ಬಾಗಿಲಿಗೆ ಬಂದು ಹೃದ್ರೋಗ ಚಿಕಿತ್ಸೆ ನೀಡುವ ಡಾಕ್ಟ್ರು!

ಉಪಕೃಷಿಯೊಂದರಿಂದಲೇ ಬದುಕು ನಿರ್ವಹಣೆ

ದುಗ್ಗಪ್ಪಗೌಡರಿಗೆ ನೂರು ಅಡಿಗಳಲ್ಲೇ ಕೊಳವೆ ಬಾವಿಗೆ ಸಮೃದ್ಧ ನೀರಿನೊಸರು ದೊರಕಿದೆ. ಏಳು ವಿಧದ ಅಡಕೆ ತಳಿಗಳಿರುವ ತೋಟ ಮಾಡಿದ್ದಾರೆ. ಅದರಲ್ಲಿ ಉತ್ತಮ ಫಸಲು ಸಿಗುತ್ತಿದೆ. ಕೇವಲ ಅಡಕೆಯನ್ನೇ ನಂಬಬಾರದು, ಉಪಕೃಷಿಯೂ ಬೇಕು. ಕಾಳುಮೆಣಸು, ಕೋಕೋ, ಬಾಳೆಗಳನ್ನು ತೋಟದೊಳಗೆ ಬೆಳೆಯುತ್ತಿದ್ದಾರೆ. ಅಡಕೆಯನ್ನು ದಾಸ್ತಾನಿಟ್ಟು ಬೆಲೆ ಬಂದಾಗ ಮಾರಾಟ ಮಾಡುವುದು ಅವರ ಥಿಯರಿ. ಇದಕ್ಕಾಗಿ ತೋಟದ ಸುತ್ತಲೂ ವೈವಿಧ್ಯಮಯ ಹಣ್ಣುಗಳ ಗಿಡಗಳನ್ನು ಬೆಳೆಸಿ ವರ್ಷದುದ್ದಕ್ಕೂ ಬೇರೆ ಬೇರೆ ಋುತುಗಳಲ್ಲಿ ಬರುವ ಹಣ್ಣು ಮತ್ತು ತರಕಾರಿಗಳ ಕೃಷಿಯ ಮೂಲಕ ವರ್ಷದ ಖರ್ಚಿಗೆ ಬೇಕಾಗುವಷ್ಟುಆದಾಯವನ್ನು ಗಳಿಸುತ್ತಿದ್ದಾರೆ.

ಅಧಿಕ ಇಳುವರಿಯ ಸಪೋಟಾ

ಮೂರು ವಿಧದ ಸಪೋಟಾ ತಳಿಗಳು ಫಲಭಾರದಿಂದ ಬಾಗುತ್ತಿವೆ. ಸಪೋಟಾ ಅತ್ಯಂತ ಲಾಭಕರ ಉಪಕೃಷಿ ಎನ್ನುವ ಇವರು ಈ ಕೃಷಿಗೆ ಯಾವುದೇ ಗೊಬ್ಬರ ಬಳಸುವುದಿಲ್ಲ. ಕಡು ಬಿಸಿಲನ್ನು ಬಯಸುವ ಈ ಮರ ನೈಸರ್ಗಿಕ ಸಾರದಿಂದಲೇ ನೆಟ್ಟವನ ಕೈ ಹಿಡಿಯುತ್ತದೆ ಎನ್ನುತ್ತಾರೆ. ಒಂದೊಂದು ಮರವೂ ಕ್ವಿಂಟಾಲಿಗಿಂತ ಅಧಿಕವಾಗಿ ಹಣ್ಣು ಕೊಡುತ್ತದೆ. ಸಪೋಟಾ ಮರದಲ್ಲಿ ಹಣ್ಣಾಗುವುದಿಲ್ಲ. ಬಲಿತ ಕಾಯಿಗಳನ್ನು ಕೊಯಿದು ಒಂದು ಪಾಲಿಥಿನ್‌ ಚೀಲದಲ್ಲಿ ತುಂಬಿಸಿ ಅದರ ಜೊತೆಗೆ ಒಂದು ಬಾಳೆಹಣ್ಣು ಇರಿಸಿ, ಬಿಗಿಯಾಗಿ ಬಾಯಿ ಕಟ್ಟಿದರೆ ಸಾಕು, ಎರಡು ದಿನಗಳಲ್ಲಿ ಕ್ರಮಬದ್ಧವಾಗಿ ಹಣ್ಣಾಗುತ್ತದೆ. ‘ಒಂದು ಕಿಲೋ ಮೂವತ್ತು ರೂಪಾಯಿ ದರದಲ್ಲಿ ಮಾರುತ್ತೇನೆ. ಹೀಗೆ ಬರುವ ಆದಾಯ ರೈತನಿಗೆ ಕಡಿಮೆ ಶ್ರಮದಲ್ಲಿ ಸಿಗುವಂಥದು’ ಎಂಬ ಕಿವಿಮಾತು ಹೇಳುತ್ತಾರೆ.

Dakshina Kannada Belthangady farmer earns crore in Farming

ಹಣ್ಣಿನ ಕೃಷಿ

ಕಸಿ ಮಾವು, ಮೂರು ತಳಿಯ ಹಲಸು, ದಾಳಿಂಬೆ, ಜಂಬುನೇರಳೆ, ಸೀತಾಫಲ, ಲಕ್ಷ್ಮಣ ಫಲ, ಅನಾನಾಸು, ಕಸಿ ಅಂಬಟೆ, ನೆಲ್ಲಿಕಾಯಿಗಳನ್ನು ಸಮೃದ್ಧವಾಗಿ ಬೆಳೆಯುವ ಗೌಡರು ರಂಬುಟಾನ್‌ ಮರಗಳಿಂದ ಸಾಕಷ್ಟುಹಣ್ಣುಗಳನ್ನು ಪಡೆಯುತ್ತಾರೆ. ಕಿಲೋಗೆ ಇನ್ನೂರು ರೂಪಾಯಿ ದರದಲ್ಲಿ ಮಾರುತ್ತಾರೆ. ಮೂರು ತಳಿಯ ಪಪಾಯಿ ಮರಗಳಲ್ಲಿಯೂ ವಿಪುಲವಾಗಿ ಫಸಲಿದೆ. ಇನ್ನೊಂದೆಡೆ ಔಷಧೀಯ ಗಿಡಗಳನ್ನು ನೆಟ್ಟಿದ್ದಾರೆ. ನೆಲ್ಲಿ, ನೋನಿ, ಜಾಯಿಕಾಯಿ, ಚಂದನ, ಏಕನಾಯಕನ ಬೇರು, ತುಲಸಿ, ಪುನರ್ಪುಳಿ, ಅಗಸೆ ಸೇರಿ ಹಲವು ಬಗೆಗಳಿವೆ. ಜಾಯಿಕಾಯಿ, ಲವಂಗದಂತಹ ಮಸಾಲೆ ಪದಾರ್ಥದ ಮರಗಳಿವೆ. ಕಾಫಿ ಗಿಡಗಳಿವೆ.

ತರಕಾರಿ, ಹೂ ಕೃಷಿಯಿಂದ ಲಾಭ

ಏಳು ವಿಧದ ಗೆಡ್ಡೆ ಗೆಣಸುಗಳನ್ನು ಬೆಳೆಯುವ ಗೌಡರು ಆಯಾ ಸಮಯದಲ್ಲಿ ಬೆಳೆಯುವ ಅಲಸಂಡೆ, ಬದನೆ, ಸೋರೆ, ಕುಂಬಳದಂತಹ ತರಕಾರಿಗಳನ್ನು ಬೆಳೆದು ಮಾರುಕಟ್ಟೆಗೆ ಸಾಗಿಸುತ್ತಾರೆ. ಹರಿವೆ, ಬಸಳೆಯಂತಹ ಸೊಪ್ಪು ತರಕಾರಿಗಳೂ ಇವೆ. ಸಾವಯವದಲ್ಲಿ ಬೆಳೆಯುವ ಕಾರಣ ಗ್ರಾಹಕರು ಹುಡುಕಿಕೊಂಡು ಬರುತ್ತಾರೆ. ಮಲ್ಲಿಗೆ, ಗುಲಾಬಿ, ಅಬೋಲಿನ ಇತ್ಯಾದಿ ಬಗೆಯ ಹೂಗಳಾಗುತ್ತವೆ. ಬಿದಿರು, ಸಾಗುವಾನಿ ರಬ್ಬರ್‌ ಮೊದಲಾದ ಮರಗಳೂ ಜೊತೆಗೇ ಬೆಳೆದು ನೆರಳು ಕೊಡುತ್ತಿವೆ. ಪುಟ್ಟಜಮೀನಿನಲ್ಲಿ ಏನೆಲ್ಲ ಬೆಳೆದು ಮೌಲ್ಯವರ್ಧನೆ ಮಾಡಬಹುದು ಎಂಬುದಕ್ಕೆ ಜೀವಂತ ಉದಾಹರಣೆಯಾಗಿದೆ ಅವರ ತೋಟದ ನೋಟ.

ಮೂರು ಮರಿಗಳಿಗೆ ಜನ್ಮ ನೀಡಿದ ಪಿಲಿಕುಳದ ಸೀಳುನಾಯಿ

ಆಧುನಿಕತೆ ಕೃಷಿಗೆ ಅನಿವಾರ್ಯ

Dakshina Kannada Belthangady farmer earns crore in Farming

ಎರಡು ದನ ಸಾಕಿ ಹೈನುಗಾರಿಕೆಯ ಜೊತೆಗೆ ಕೃಷಿಗೆ ಸಾವಯವ ಗೊಬ್ಬರ, ಸಾವಯವ ದ್ರವ, ಪರಿಸರ ಸ್ನೇಹಿ ಕೀಟನಾಶಕ ಮಾತ್ರ ಬಳಸುವ ಗೌಡರು ನೂರು ಮರಗಳಲ್ಲಿ ಆರು ಕ್ವಿಂಟಾಲು ಒಣ ಅಡಕೆ ಬೆಳೆಯಬಹುದೆಂಬುದನ್ನು ತೋರಿಸಿ ಕೊಡುತ್ತಾರೆ. ತೆಂಗಿನಲ್ಲಿಯೂ ಹಲವು ತಳಿಗಳಿವೆ. ಜೇನು ವ್ಯವಸಾಯವನ್ನೂ ಮಾಡಿ ಲಾಭ ಗಳಿಸುತ್ತಿದ್ದಾರೆ. ಕೂಲಿಯ ಜನಗಳನ್ನು ಅವಲಂಬಿಸುವ ಬದಲು ಯಾಂತ್ರೀಕೃತ ಕೃಷಿಗೆ ಒತ್ತು ನೀಡಿ, ಸ್ವಂತ ದುಡಿಮೆಯಿಂದ ಮಾತ್ರ ಲಾಭ ಗಳಿಸಲು ಸಾಧ್ಯ ಎಂಬುದನ್ನು ಒತ್ತಿ ಹೇಳುತ್ತಾರೆ. ಖಾಲಿ ಜಾಗದಲ್ಲಿ ರಬ್ಬರ್‌, ಅದರೊಂದಿಗೆ ಅನನಾಸಿನ ಉಪಕೃಷಿ ಸಾಧ್ಯವೆಂಬುದನ್ನು ಅವರಲ್ಲಿ ಕಾಣಬಹುದು. ಅತಿ ಕಡಿಮೆ ವೆಚ್ಚದಲ್ಲಿ ಮಳೆಗಾಲದಲ್ಲಿ ಅಡಿಕೆ, ಜಾಯಿಕಾಯಿಗಳನ್ನು ಒಣಗಿಸಲು ಸೌರಶಕ್ತಿಯ ಚಾವಣಿಯೊಂದನ್ನು ಮಾದರಿಯಾಗಿ ರೂಪಿಸಿದ್ದಾರೆ.

ಕೃಷಿಯಿಂದ ದುರ್ಭಿಕ್ಷವಿಲ್ಲ. ಆದರೆ ಒಂದೇ ಬೆಳೆಯನ್ನು ನೆಚ್ಚಿಕೊಳ್ಳದೆ ಉಪ ಬೆಳೆಗಳಿಂದ ನೈಸರ್ಗಿಕವಾಗಿ ಸಿಗುವ ಲಾಭದ ಲೆಕ್ಕಾಚಾರ ಹಾಕಿದರೆ ಮಾತ್ರ ಅದು ಕೈ ಹಿಡಿಯುತ್ತದೆ ಎನ್ನುವ ಲೆಕ್ಕಾಚಾರ ಹಾಕುವ ಗೌಡರು ಕೃಷಿಯಲ್ಲಿ ಸಲೀಸಾಗಿ ಗೆದ್ದಿದ್ದಾರೆ. ಉತ್ತಮ ಗಿಡಗಳನ್ನು ಬೇಕಾದವರಿಗೆ ತಯಾರಿಸಿ ಕೊಡುವುದು ಕೂಡ ಅವರ ಒಂದು ಹವ್ಯಾಸವಾಗಿದೆ. ಹೆಚ್ಚಿನ ಮಾಹಿತಿಗೆ ದುಗ್ಗಪ್ಪ ಗೌಡರ ಮೊಬೈಲ್‌ ಸಂಖ್ಯೆ 9880799160 ಸಂಪರ್ಕಿಸಿ.

Follow Us:
Download App:
  • android
  • ios