ಕೊಪ್ಪಳ ಜಿಲ್ಲೆಯ ಗಂಗಾವತಿ ನ್ಯಾಯಾಲಯದಲ್ಲಿ ವಿವಿಧ ಸಣ್ಣಪುಟ್ಟ ಕಾರಣಗಳಿಗಾಗಿ ನಾಲ್ಕು ಜೋಡಿಗಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಧೀಶರ ಮದ್ಯಸ್ಥಿಕೆಯಲ್ಲಿ ಪ್ರಕರಣ ಇತ್ಯರ್ಥವಾಗಿದ್ದು, ವಿಚ್ಛೇದನ ನೀಡದೆ ಆ ಜೋಡಿಗಳನ್ನು ನ್ಯಾಯಾಧೀಶರು ಒಂದು ಮಾಡಿದ್ದಾರೆ.

ವರದಿ: ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಫೆ.11): ಸಂಸಾರ ಅಂದ ಮೇಲೆ ಒಂದು ಬರುತ್ತೆ, ಒಂದು ಹೋಗುತ್ತೆ. ಆ ದಂಪತಿಗಳು ಸಣ್ಣಪುಟ್ಟ ಕಾರಣಗಳಿಗಾಗಿ ವಿಚ್ಚೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು.‌ ಕೊನೆಗೆ ನ್ಯಾಯಾಧೀಶರ ಮದ್ಯಸ್ಥಿಕೆಯಲ್ಲಿ ಇದೀಗ ಆ ಜೋಡಿಗಳು ಮತ್ತೆ ಒಂದಾಗಿದ್ದಾರೆ.‌ ಕೊಪ್ಪಳ ಜಿಲ್ಲೆಯ ಗಂಗಾವತಿ ಭತ್ತದ ನಾಡೆಂದು ಪ್ರಸಿದ್ಧಿ ಪಡೆದಿದೆ.‌ ಇಂತಹ ಭತ್ತದ ನಾಡಿನಲ್ಲೊಂದು ಇಂದು ಅಪರೂಪದ ಪ್ರಕರಣವೊಂದು ನಡೆದಿದೆ. ಅದು ಎಲ್ಲೋ ಅಲ್ಲ ಬದಲಾಗಿ ಗಂಗಾವತಿ ನ್ಯಾಯಾಲಯದಲ್ಲಿ. ಹೌದು ವಿವಿಧ ಸಣ್ಣಪುಟ್ಟ ಕಾರಣಗಳಿಗಾಗಿ ನಾಲ್ಕು ಜೋಡಿಗಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಧೀಶರ ಮದ್ಯಸ್ಥಿಕೆಯಲ್ಲಿ ಪ್ರಕರಣ ಇತ್ಯರ್ಥವಾಗಿದ್ದು, ವಿಚ್ಛೇದನ ನೀಡದೆ ಆ ಜೋಡಿಗಳನ್ನು ನ್ಯಾಯಾಧೀಶರು ಒಂದು ಮಾಡಿದ್ದಾರೆ.

ಯಾರೆಲ್ಲ‌ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದರು:
ಇನ್ನು ಗಂಗಾವತಿ ನ್ಯಾಯಾಲಯದಲ್ಲಿ ವಿಚ್ಚೇಧನ ಕೋರಿ ನಾಲ್ಕು ಜೋಡಿ ಅರ್ಜಿ ಸಲ್ಲಿಸಿದ್ದರು. ‌ಅದರಲ್ಲಿ ಗಂಗಾವತಿ, ಕನಕಗಿರಿ, ಕಾರಟಗಿ ತಾಲೂಕಿನ ವಿವಿಧ ತಾಲೂಕಗಳ ದ್ಯಾವಣ್ಣ ‌ನಾಯಕ-ಅನಸೂಯ, ವಿರೇಶ- ಜಾನಕಮ್ಮ, ಶ್ರೀನಿವಾಸ - ತುಳಸಿದೇವಿ, ನಿಂಗಪ್ಪ- ಮಮತಾ ದಂಪತಿಗಳು ಅರ್ಜಿ ಸಲ್ಲಿಸಿದ್ದರು. ಆದರೆ ಇದೀಗ ಈ ಜೋಡಿಗಳು ಮತ್ತೆ ಒಂದಾಗಿದ್ದಾರೆ.

ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ‌ ಒಂದಾದ ಜೋಡಿಗಳು:
ಇನ್ನು ನ್ಯಾಯಾಂಗ ಇಲಾಖೆ ಒಂದಿಷ್ಟು ಪ್ರಕರಣಗಳ‌ ಶೀಘ್ರ ಇತ್ಯರ್ಥಕ್ಕಾಗಿ ಲೋಕ‌ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ.‌ ಅದರಂತೆ ಇಂದು ಗಂಗಾವತಿಯ ನ್ಯಾಯಾಲಯದಲ್ಲಿಯೂ ಸಹ ಲೋಕ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ರಾಜಿ ಸಂಧಾನದ ಮೂಲಕ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಗಳನ್ನು ಒಂದು ಮಾಡಿದ್ದಾರೆ.

ದಂಪತಿಗಳಿಗೆ ಬುದ್ಧಿವಾದ ಹೇಳಿದ ನ್ಯಾಯಾಧೀಶರು:
ಇನ್ನು ಕುಟುಂಬದಲ್ಲಿನ ಸಣ್ಣ-ಪುಟ್ಟ ಜಗಳಗಳಿಗೆ ಹಾಗೂ ಹೊಂದಾಣಿಕೆ ಕೊರತೆ ಹಿನ್ನೆಲೆಯಲ್ಲಿ ನಾಲ್ಕು ಜೋಡಿಗಳು ವಿಚ್ಛೇಧನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಇದರಲ್ಲಿ ಕೆಲವು ದಂಪತಿಗಳಿಗೆ ಮಕ್ಕಳು ಸಹ ಇದ್ದರು.‌ ಹೀಗಾಗಿ ಇವರಿಗೆ ವಿಚ್ಛೇಧನ ನೀಡಿದರೆ ಮಕ್ಕಳ ಹಾಗೂ ದಂಪತಿಗಳ ಭವಿಷ್ಯ ಹಾಳಾಗುತ್ತದೆ ಎನ್ನುವುದನ್ನು ನ್ಯಾಯಾಧೀಶರು ಅರಿತುಕೊಂಡರು. ಹೀಗಾಗಿ ವಿಚ್ಚೇದನ ನೀಡದೆ ನ್ಯಾಯಾಧೀಶರು ದಂಪತಿಗಳನ್ನು ಕರೆದು ಬುದ್ಧಿವಾದ ಹೇಳುವ ಕೆಲಸ ಮಾಡಿದರು. ಇದಕ್ಕೆ ದಂಪತಿಗಳು ಸಹ ಸಾಥ್ ನೀಡಿದರುಮ ಇದರ ಫಲವಾಗಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ ದಂಪತಿಗಳು ಒಂದಾದರು.

ಧಾರವಾಡ: ಕಾನೂನಿಗೆ ಗೌರವ ಕೊಡಬೇಕು, ಹೆದರುವ ಅಗತ್ಯವಿಲ್ಲ: ನ್ಯಾ.ಕೆ.ಜಿ. ಶಾಂತಿ

ಪರಸ್ಪರ ಸಿಹಿ ಹಂಚಿಕೊಂಡ ದಂಪತಿಗಳು:
ಇನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ನಾಲ್ಕು ಜೋಡಿಗಳು ಒಂದಾದರು. ಬಳಿಕ ದಂಪತಿಗಳು ಮತ್ತೆ ಮದುವೆಯಾದವರಂತೆ ಪರಸ್ಪರ ಹಾರ ಬದಲಾಯಿಸಿಕೊಂಡರು. ಬಳಿಕ ಸಿಹಿ ಹಂಚಿಕೊಂಡು ತಿಂದು ಖುಷಿಪಟ್ಟರು.

ಕೌಟುಂಬಿಕ ದೌರ್ಜನ್ಯದ ಡಿವೋರ್ಸ್‌: ಪತ್ನಿ ಜೀವನಾಂಶ ಪಡೆಯಲು ಅರ್ಹಳೆಂದ ಬಾಂಬೆ ಹೈ

ಇನ್ನು ಸಂಸಾರದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಬರುವುದು ಸಾಮಾನ್ಯ.‌ ಆದರೆ ಅದಕ್ಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವುದುರ ಸರಿಯಲ್ಲ ಎನ್ನುವ ಕಿವಿ ಮಾತನ್ನು ನ್ಯಾಯಾಧೀಶರು ದಂಪತಿಗಳಿಗೆ ಹೇಳುವ ಕೆಲಸ ಮಾಡಿದ್ದಾರೆ. ಒಟ್ಟಿನಲ್ಲಿ ನ್ಯಾಯಾಧೀಶರ ನೀತಿಪಾಠದ ಪರಿಣಾಮ ನಾಲ್ಕು ಜೋಡಿಗಳು ಕೋರ್ಟ್ ನಲ್ಲಿ ಒಂದಾಗಿದ್ದು ವಿಶೇಷವೇ ಸರಿ.