ಜಿ.ಡಿ. ಹೆಗಡೆ

ಕಾರವಾರ(ಮೇ.11): ನಗರದ ಕೋವಿಡ್‌-19 ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರೆಲ್ಲ ಒಂದೇ ಕುಟುಂಬ ಹಾಗೂ ಆಪ್ತರಾಗಿರುವುದರಿಂದ ಪರಸ್ಪರ ಮಾತುಕತೆಯಲ್ಲಿ ನಿರತರಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.
ಒಂದು ಬೆಡ್‌ನಿಂದ ಮತ್ತೊಂದು ಬೆಡ್‌ಗೆ 4 ರಿಂದ 5 ಮೀ. ದೂರವಿದೆ. ಕುಳಿತಲ್ಲಿಂದಲೇ ಮಾತುಕತೆ ಮಾಡಿಕೊಳ್ಳುತ್ತಿದ್ದಾರೆ. ಗುಂಪು ಸೇರಲು, ಒಟ್ಟಿಗೆ ಊಟ ಮಾಡಲು ಇತ್ಯಾದಿ ಕೆಲಸಕ್ಕೆ ಅವಕಾಶವಿಲ್ಲ. ಹೀಗಾಗಿ ದೂರದಿಂದಲೇ ಸಂವಹನ ನಡೆಸುತ್ತಿದ್ದಾರೆ.

ಕೋವಿಡ್‌-19 ಚಿಕಿತ್ಸೆಗೆಂದು ಜಿಲ್ಲಾ ಆಸ್ಪತ್ರೆಯನ್ನು ಬಳಕೆ ಮಾಡಿಕೊಳ್ಳುತ್ತಿಲ್ಲ. ಆಸ್ಪತ್ರೆಯಿಂದ 150ರಿಂದ 200 ಮೀ. ಹಿಂದೆ ಇರುವ ವೈದ್ಯಕೀಯ ಕಾಲೇಜಿನ ಅಂಡರ್‌ಗ್ರೌಂಡ್‌ ಭಾಗದಲ್ಲಿ ಪ್ರತ್ಯೇಕ ವಾರ್ಡ್‌ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಗೂ ಕೋವಿಡ್‌-19 ಚಿಕಿತ್ಸಾ ಕೊಠಡಿಗೂ ಸಂಬಂಧವೇ ಇಲ್ಲ. ಹೀಗಾಗಿ ಇತರೇ ಚಿಕಿತ್ಸೆಗೆ ಆಸ್ಪತ್ರೆಗೆ ತೆರಳುವುದಕ್ಕೆ ತೊಂದರೆ ಇಲ್ಲ.

ಭಟ್ಕಳದ 7 ಸೋಂಕಿಗೆ ಮಂಗಳೂರಿನ ಆಸ್ಪತ್ರೆ ಕಾರಣ.. ಎಚ್ಚರ..ಎಚ್ಚರ

ಕೊವಿಡ್‌-19 ಚಿಕಿತ್ಸೆಗೆ ವೈದ್ಯರ ತಂಡ ಪ್ರತ್ಯೇಕವಾಗಿದ್ದು, ಅವರಿಗೆ ಆಸ್ಪತ್ರೆಗೆ ಬರುವ ರೋಗಿಗಳನ್ನು ಪರೀಕ್ಷಿಸುವ ಜವಾಬ್ದಾರಿ ಇಲ್ಲ. ಏಳು ದಿನಗಳ ಕಾಲ ಕೋವಿಡ್‌-19 ಸೋಂಕಿತರಿಗೆ ಮಾತ್ರ ಚಿಕಿತ್ಸೆ ನೀಡುತ್ತಾರೆ. ಕರ್ತವ್ಯದ ಬಳಿಕ ತಂಡ ಬದಲಾಗುತ್ತದೆ. ಹಳೆ ತಂಡವನ್ನು ಕ್ವಾರಂಟೈನ್‌ ಮಾಡಲಾಗುತ್ತದೆ. ಕರ್ತವ್ಯದ ಅವಧಿಯಲ್ಲಿ ಸಾರ್ವಜನಿಕ ಪ್ರವೇಶ ಸಂಪೂರ್ಣವಾಗಿ ನಿಷೇಧವಿರುತ್ತದೆ.

ದಿನಕ್ಕೆ ಎರಡು ಬಾರಿ ಹೈಪೋಕ್ಲೋರೈಡ್‌ ಸೊಲ್ಯುಷನ್‌ನಿಂದ ಸ್ವಚ್ಛತೆ ಮಾಡಲಾಗುತ್ತದೆ. ಎರಡು ದ್ವಾರದಲ್ಲಿ ಕಡೆ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಇದರಿಂದ ಚಲನವಲನದ ಮೇಲೆ ನಿಗಾ ಇಡಬಹುದಾಗಿದೆ. ಕೊಠಡಿ ಸುತ್ತಮುತ್ತ ಶೀಟ್‌ನಿಂದ ಕಂಪೌಂಟ್‌ ನಿರ್ಮಾಣ ಮಾಡಲಾಗುತ್ತಿದೆ. ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅನ್ಯ ವ್ಯಕ್ತಿಗಳು ಒಳಗೆ ಪ್ರವೇಶಿಸುವಂತಿಲ್ಲ. ಕೊಠಡಿಯಲ್ಲಿದ್ದವರು ಹೊರಕ್ಕೆ ಬರುವಂತಿಲ್ಲ.

ಬಯೋಮೆಡಿಕಲ್‌ ತ್ಯಾಜ್ಯ ಸಾಗಾಣಿಕೆಗೆ ಕೂಡಾ ವೈಜ್ಞಾನಿಕ ಪದ್ಧತಿ ಅಳವಡಿಕೆ ಮಾಡಲಾಗುತ್ತಿದೆ. ಮೂರು ಹಂತದಲ್ಲಿ ಕವರ್‌ ಹಾಕಲಾಗುತ್ತದೆ. ಕೊನೆಯಲ್ಲಿ ಸೀಲ್‌ ಮಾಡಲಾಗುತ್ತದೆ. ಬಳಿಕ ಅದನ್ನು ಸುಟ್ಟು ಹಾಕಲಾಗುತ್ತದೆ. ರೋಗಿಗಳು ಬಳಸಿದ, ಚಿಕಿತ್ಸೆಗೆ ಬಳಸಿದ ಯಾವುದೇ ವಸ್ತು ಎಲ್ಲೆಂದರಲ್ಲಿ ಎಸೆಯುವುದಿಲ್ಲ.

ರೋಗಿಗಳ ಹಾಗೂ ಆಸ್ಪತ್ರೆಯ ಜವಾಬ್ದಾರಿ ಹೊತ್ತಿರುವ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ರೋಷನ್‌, ಯಾವುದೇ ರೀತಿಯಲ್ಲೂ ಸೋಂಕು ಹರಡದಂತೆ ಡಬ್ಲ್ಯೂಎಚ್‌ಒ ಮಾರ್ಗ ಸೂಚಿಯಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕಾರವಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಭರವಸೆ ನೀಡಿದ್ದಾರೆ.

ನಗರದ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ 19 ಜನರಲ್ಲಿ 18 ಜನರು ರೋಗದ ಲಕ್ಷಣರಹಿತವಾಗಿದ್ದಾರೆ. ಆರೋಗ್ಯ ಕೂಡಾ ಸ್ಥಿರವಾಗಿದೆ. ಒಬ್ಬರಿಗೆ ಮಾತ್ರ ಸಾಮಾನ್ಯ ಸುಸ್ತು, ಆಯಾಸವಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.