ಬೆಂಗಳೂರು(ಜು.26): ಸರ್ಕಾರ ಎಷ್ಟೇ ಎಚ್ಚರಿಕೆ ನೀಡುತ್ತಿದ್ದರೂ ಆಸ್ಪತ್ರೆಗಳ ನಿರ್ಲಕ್ಷ್ಯ ಮುಂದುವರೆದಿದ್ದು, ಕೊರೋನಾ ವಾರಿಯರ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕಿಯೊಬ್ಬರು ಆಕ್ಸಿಜನ್‌ ಸಿಲೆಂಡರ್‌ ಸಮೇತ ಇಡೀ ರಾತ್ರಿ ಆಟೋದಲ್ಲಿ ಆಸ್ಪತ್ರೆಗಳಿಗೆ ಅಲೆದು ಸೂಕ್ತ ಕಾಲಕ್ಕೆ ಚಿಕಿತ್ಸೆ ದೊರೆಯದೆ ಆಟೋದಲ್ಲೇ ಮೃತಪಟ್ಟದಾರುಣ ಘಟನೆ ನಗರದಲ್ಲಿ ಶನಿವಾರ ನಡೆದಿದೆ.

ಎಸ್‌.ಕೆ.ಗಾರ್ಡನ್‌ ಸರ್ಕಾರಿ ಉರ್ದು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕಿಯನ್ನು ಕೋವಿಡ್‌-19 ಸರ್ವೆ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಹೀಗೆ ಕೊರೋನಾ ವಾರಿಯರ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕಿಗೆ ಮೂರು ದಿನದ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಪರೀಕ್ಷೆ ನಡೆಸಿದಾಗ ಕೊರೋನಾ ಸೋಂಕಿರುವುದು ದೃಢಪಟ್ಟಿತ್ತು. ಪ್ರಾಥಮಿಕ ಚಿಕಿತ್ಸೆ ನಂತರ ಜ್ವರ ಕಡಿಮೆಯಾಗಿತ್ತು. ಸೋಂಕಿನ ಲಕ್ಷಣ ಹೆಚ್ಚಾಗಿ ಇರದ ಕಾರಣ ಹೋಂ ಐಸೋಲೇಷನ್‌ನಲ್ಲಿ ಇದ್ದರು.

ಕಡ್ಡಿ ಬಳಸಿ ಕಿವಿ ಕೆರೆದುಕೊಂಡ ಆನೆ: ವಿಡಿಯೋ ವೈರಲ್‌

ಆದರೆ, ಶುಕ್ರವಾರ ರಾತ್ರಿ ಉಸಿರಾಟದ ತೊಂದರೆ ಹೆಚ್ಚಾಗಿದ್ದರಿಂದ ಆ್ಯಂಬುಲೆನ್ಸ್‌ಗೆ ಹಲವರು ಬಾರಿ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಸಂದರ್ಭದಲ್ಲಿ ಕುಟುಂಬಸ್ಥರೇ ಆಕ್ಸಿಜನ್‌ ವ್ಯವಸ್ಥೆ ಮಾಡಿಕೊಂಡು, ಶಿಕ್ಷಕಿಯನ್ನು ಆಟೋದಲ್ಲಿ ಜೈನ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಅಲ್ಲಿನ ಸಿಬ್ಬಂದಿಗೆ ಹಾಸಿಗೆ ಇಲ್ಲವೆಂದು ನೆಪ ಹೇಳಿ ದಾಖಲಿಸಿಕೊಂಡಿಲ್ಲ.

ನಂತರ ಸೇಂಟ್‌ ಮಾರ್ಥಾಸ್‌, ರಾಜೀವ್‌ ಗಾಂಧಿ, ಫ್ರಂಟ್‌ ಲೈನ್‌, ಪೀಪಲ್‌ ಟ್ರೀ ಸೇರಿದಂತೆ ಹಲವು ಆಸ್ಪತ್ರೆಗೆ ಅಲೆದಾಡಿದ್ದಾರೆ. ಎಲ್ಲಾ ಕಡೆಯೂ ಹಾಸಿಗೆ ಕೊರತೆ ಇದೆಯೆಂದು ಹೇಳಿ ಚಿಕಿತ್ಸೆ ನೀಡಿಲ್ಲ. ಹೀಗೆ ಇಡೀ ರಾತ್ರಿ ಸುತ್ತಾಡಿ ಅಂತಿಮವಾಗಿ ಅವರನ್ನು ಶಿವಾಜಿನಗರದ ಬೌರಿಂಗ್‌ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ತೀವ್ರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ಬರುವಷ್ಟರಲ್ಲಿ ಶಿಕ್ಷಕಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಚಿಕಿತ್ಸೆ ಪಡೆಯಲು ನಿಲ್ಲದ ರೋಗಿಗಳ ಪರದಾಟ

ನಾಲ್ಕೈದು ಆಸ್ಪತ್ರೆ ಎಡತಾಕಿದ ವೃದ್ಧ

ಉಸಿರಾಟದ ಸಮಸ್ಯೆಯಿಂದಾಗಿ 69 ವರ್ಷದ ವೃದ್ಧರೊಬ್ಬರು ಹಲವು ಆಸ್ಪತ್ರೆಗಳಿಗೆ ಅಲೆದರೂ ಸರಿಯಾದ ಚಿಕಿತ್ಸೆ ಸಿಗದೆ ಪರದಾಡಿರುವ ಘಟನೆ ನಡೆದಿದೆ.

ಮೊದಲಿಗೆ ವೃದ್ಧರನ್ನು ಫ್ಯಾಮಿಲಿ ವೈದ್ಯರ ಬಳಿಗೆ ಕರೆದುಕೊಂಡು ಹೋಗಲಾಗಿದೆ. ವೈದ್ಯರು ಬಿಪಿ ಹೆಚ್ಚಿರುವುದರಿಂದ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಬಳಿಕ ಫೋರ್ಟಿಸ್‌ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಲ್ಲಿ ಕೋವಿಡ್‌ ವರದಿ ಇಲ್ಲದ ಕಾರಣ ಚಿಕಿತ್ಸೆ ನೀಡಿಲ್ಲ. ನಂತರ ಭಾರತಿ ಆಸ್ಪತ್ರೆಗೆ ಹೋಗಲಾಗಿದೆ. ಅಲ್ಲೂ ಸಹ ಚಿಕಿತ್ಸೆ ದೊರಕಿಲ್ಲ. ನಂತರ ನಾಲ್ಕೈದು ಆಸ್ಪತ್ರೆಗಳನ್ನು ಅಲೆದು ಅಂತಿಮವಾಗಿ ಕೆ.ಸಿ. ಜನರಲ್‌ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲೂ ರೋಗಿಯನ್ನು 4-5 ಗಂಟೆಗಳ ಕಾಲ ಕಾಯಿಸಿ ದಾಖಲಿಸಿಕೊಳ್ಳಲಾಗಿದೆ. ಬೆಳಗ್ಗೆ ಅಡ್ಮಿಟ್‌ ಆಗಬೇಕಿದ್ದವರನ್ನು, ಸಂಜೆ 7 ಗಂಟೆಯಾದರೂ ದಾಖಲಿಸಿಕೊಂಡಿಲ್ಲ. ಇದರಿಂದ ಹತಾಶರಾದ ವೃದ್ಧರ ಮಗ ಆಸ್ಪತ್ರೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಕ್ತ ಸುರಿಯುತ್ತಿದ್ದರೂ ಚಿಕಿತ್ಸೆ ನೀಡಲಿಲ್ಲ

ತಲೆ ಸುತ್ತು ಬಿದ್ದು ಗಾಯಗೊಂಡು ರಕ್ತ ಸುರಿಯುತ್ತಿದ್ದರೂ, ಕನಿಷ್ಠ ಪ್ರಥಮ ಚಿಕಿತ್ಸೆಯನ್ನೂ ನೀಡದೆ ವೈದ್ಯರಿಲ್ಲ ಎಂದು ಹೇಳುವ ಮೂಲಕ ನಗರದ ಖಾಸಗಿ ಆಸ್ಪತ್ರೆಯೊಂದು ಅಮಾನವೀಯವಾಗಿ ವರ್ತಿಸಿದ ಘಟನೆ ಶನಿವಾರ ನಡೆದಿದೆ.

ಬಿಇಎಲ್‌ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸುಮಾರು 54 ವರ್ಷದ ಶಿವರಾಜು ಎಂಬುವರು ಮಧ್ಯಾಹ್ನ ಅಂಗಡಿಗೆ ಹೋಗಿ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ತಲೆ ಸುತ್ತಿ ಕೆಳಕ್ಕೆ ಬಿದ್ದ ಪರಿಣಾಮ ತಲೆ ಮತ್ತು ತುಟಿಗೆ ಪೆಟ್ಟು ಬಿದ್ದು ರಕ್ತ ಸುರಿಯುತ್ತಿತ್ತು. ತಕ್ಷಣ ಸ್ಥಳೀಯರು ಅವರನ್ನು ಹತ್ತಿರದ ವಿದ್ಯಾರಣ್ಯಪುರ ಮುಖ್ಯರಸ್ತೆಯಲ್ಲಿರುವ ಕೇಥಮ್ಸ್‌ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡುವಂತೆ ಕೋರಿಕೊಂಡಿದ್ದಾರೆ.

ರೋಗಿಯನ್ನು ಪರಿಶೀಲಿಸಿದ ಆಸ್ಪತ್ರೆಯ ನರ್ಸ್‌, ಪ್ರಸ್ತುತ ವೈದ್ಯರು ಹೊರಗಡೆ ಹೋಗಿದ್ದಾರೆ ಎಂದು ತಿಳಿಸಿ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಕನಿಷ್ಠ ಪ್ರಥಮ ಚಿಕಿತ್ಸೆ ನೀಡಿ. ಬಳಿಕ ಮತ್ತೊಂದು ಆಸ್ಪತ್ರೆಗೆ ಹೋಗಲಾಗುವುದು ಎಂದು ಸ್ಥಳದಲ್ಲಿದ್ದವರು ಬೇಡಿಕೊಂಡಿದ್ದಾರೆ. ಆದರೂ ಸಾಧ್ಯವಿಲ್ಲ ಎಂದು ಹೇಳಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿತ್ತಿರುವ ನಾಗೇಂದ್ರ ಎಂಬುವರು ಆರೋಪಿಸಿದ್ದಾರೆ.

ತಾಯಿಗೆ ಚಿಕಿತ್ಸೆ ಕೊಡಿಸಲಾಗದೆ ಕಣ್ಣೀರಿಟ್ಟಮಗ

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ತಾಯಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ಮಗ ಪರದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಹೊಸೂರು ಮೂಲದ ಸುಮಾರು 60 ವರ್ಷದ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲು ಆಕೆಯ ಮಗ ಹಲವು ಆಸ್ಪತ್ರೆಗಳಿಗೆ ಸುತ್ತಾಡುವಾಗ ವ್ಯಕ್ತಿಯೊಬ್ಬರು ರೋಗಿಯ ಮಗನನ್ನು ಮಾತನಾಡಿಸಿ, ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದಾರೆ. ಅದು ವೈರಲ್‌ ಆಗಿದೆ.

ಸತತ 4ನೇ ದಿನ ಬೆಂಗಳೂರಲ್ಲಿ 2000ಕ್ಕೂ ಹೆಚ್ಚು ಕೊರೋನಾ ಪ್ರಕರಣ

ಇಂದು ಬೆಳಗ್ಗೆ ನಮ್ಮ ತಾಯಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಹೊಸೂರಿನ ಜನರಕ್ಷಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ವೆಂಟಿಲೇಟರ್‌ ಇಲ್ಲದ ಪರಿಣಾಮ ನಾರಾಯಣ ಹೃದಯಾಲಯ ಮತ್ತು ಜಯದೇವ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ನೀಡುವಂತೆ ಬೇಡಿಕೊಂಡೆ. ಆದರೆ ಹಾಸಿಗೆ ಇಲ್ಲ ಎಂದು ಹೇಳಿ ವಾಪಸ್‌ ಕಳಿಸಿದ್ದಾರೆ. ಈಗ ವಿಕ್ಟೋರಿಯಾ ಆಸ್ಪತ್ರೆಗೆ ಹೋಗುತ್ತಿದ್ದೇನೆ ಎಂದು ರೋಗಿಯ ಮಗ ಕಣ್ಣೀರಿಟ್ಟಿದ್ದಾರೆ.