Asianet Suvarna News Asianet Suvarna News

ಗುತ್ತಿಗೆ ಸ್ಟಾಫ್‌ನರ್ಸ್‌ಗೆ ತಪ್ಪದ ಸಂಕಷ್ಟ..!

* 15ಕ್ಕೂ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿ​ಸು​ತ್ತಿರುವ ಸ್ಟಾಫ್‌ ನರ್ಸ್‌​ಗಳು 
* ಕಡಿಮೆ ಸಂಬಳದಿಂದಾಗಿ ಆರ್ಥಿಕ ಸ್ಥಿತಿ ಚಿಂತಾ​ಜ​ನ​ಕ
* ಮಾರಕ ಕೊರೋನಾ ವಿರುದ್ಧ ಯುದ್ಧಸಾರಿದವರ ಸ್ಥಿತಿ ಇಂದು ಪಾತಾಳಕ್ಕೆ 
 

Contract Based Staff Nurse No Service Security in Karnataka grg
Author
Bengaluru, First Published Aug 23, 2021, 3:16 PM IST

ಜಗದೀಶ ವಿರಕ್ತಮಠ 

ಬೆಳಗಾವಿ(ಆ.23):  ಇಡಿ ವಿಶ್ವ​ವನ್ನೇ ತಲ್ಲ​ಣ​ಗೊ​ಳಿಸಿ, ಕಂಡಕಂಡಲ್ಲಿ ಹೆಣ ಬೀಳಿಸಿದ್ದ ಹೆಮ್ಮಾರಿ ಕೊರೋನಾ ವೈರಸ್‌ ಮಟ್ಟ​ಹಾ​ಕಲು ತೊಡೆ​ತಟ್ಟಿ ನಿಂತಿ​ರುವ ಪ್ರಮುಖ ಸೇನಾ​ನಿ​ಗಳಾದ ಸ್ಟಾಫ್‌ ನರ್ಸ್‌​ಗಳ (ನರ್ಸಿಂಗ್‌ ಆಫೀಸರ್‌) ಬದುಕೇ ಇಂದು ಸೇವಾ ಭದ್ರತೆ ಇಲ್ಲದೆ ಅತಂತ್ರವಾಗಿದೆ.

ಕೋವಿಡ್‌ಗೆ ಹೆದರಿದ ಎಷ್ಟೋ ಜನ ಬಚ್ಚಿಟ್ಟುಕೊಂಡರೆ ಕೊರೋನಾ ಬಂದಾಗಿನಿಂದಲೂ ಹಗಲು ರಾತ್ರಿ ಎನ್ನದೆ ತಮ್ಮ ಜೀವವನ್ನೇ ಲೆಕ್ಕಿಸದೆ ಹೋರಾ​ಡುತ್ತಿ​ರುವ ಗುತ್ತಿಗೆ ಆಧಾ​ರಿತ ಈ ಸ್ಟಾಫ್‌ನರ್ಸ್‌​ಗಳ ಬದುಕು ಚಿಂತಾಜನಕಾಗುತ್ತಿದೆ. ತಟ್ಟೆ, ತಮಟೆ, ಗಂಟೆ ಬಡಿದು ಚಪ್ಪಾಳೆ ತಟ್ಟಿದ್ದು ಬಿಟ್ಟರೆ ಇವರ ಜೀವನಕ್ಕೆ ನೆರವು ನೀಡುವಂತಹ ಕೆಲಸವನ್ನು ಯಾವುದೇ ಸರ್ಕಾರವೂ ಮಾಡಿಲ್ಲ. ಯಾವ ಜನಪ್ರತಿನಿಧಿಗಳು ಇವರ ಪರ ನಿಂತಿಲ್ಲ. ಅಷ್ಟೇ ಅಲ್ಲ ಕೆಲವರ ಸಂಬಳವನ್ನೇ

ಆರೋಗ್ಯ ಇಲಾಖೆ ನೀಡಿಲ್ಲ.!

ಕಳೆದ ಒಂದೂವರೆ ವರ್ಷದಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಹಗಲು, ರಾತ್ರಿ ಎನ್ನದೆ ತಮ್ಮ ಜೀವದ ಹಂಗು ತೊರೆದು ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ಟಾಫ್‌ನರ್ಸ್‌ ಹಾಗೂ ವೈದ್ಯರನ್ನು ಕಾಯಂಗೊಳಿಸುವ ಬಗ್ಗೆ ಮಾತ್ರ ಸರ್ಕಾರಗಳು ಇಚ್ಛಾಶಕ್ತಿ ತೋರುತ್ತಿಲ್ಲ. ಅಷ್ಟೇ ವೇತನ ಹೆಚ್ಚಿಸುವ ಕುರಿತಾಗಲಿ ಮನಸ್ಸು ಮಾಡಿಲ್ಲ. ಹಾಗೇ ಕೆಲವೆಡೆ ಕೆಲವು ಸ್ಟಾಫ್‌ ನಸ್‌Üರ್‍ಗಳ ವೇತನವನ್ನೂ ಸಹಿತ ಕಳೆದ ಮೂರು ತಿಂಗಳಿಂದ ನೀಡಿಲ್ಲ. ಇದರಿಂದಾಗಿ ಸ್ಟಾಫ್‌ನರ್ಸ್‌ ಬದುಕು ಅತಂತ್ರವಾಗಿದ್ದಲ್ಲದೆ, ಆರ್ಥಿಕ ಪೆಟ್ಟು ತಿಂದು ಬೀದಿಗೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಗುತ್ತಿಗೆ ಆಧಾ​ರಿತ ಸ್ಟಾಫ್‌ನರ್ಸ್‌ ಹಾಗೂ ವೈದ್ಯ​ರ ಸೇವೆ ಕಾಯಂಗೊ​ಳಿ​ಸಲು ತಾಂತ್ರಿಕ ತೊಡಕು ಇದೆ. ಆದರೆ ಇವರ ಸಂಬಳ ಹೆಚ್ಚಿ​ಸಲು ಅವ​ಕಾ​ಶ​ವಿದೆ. 7ನೇ ವೇತನ ಆಯೋಗ ಜಾರಿ ಕುರಿತು ಚರ್ಚಿ​ಸ​ಲಾ​ಗು​ತ್ತಿದೆ. ಇದು ಸರ್ಕಾ​ರಿ ವೈದ್ಯರು ಹಾಗೂ ನರ್ಸ್‌​ಗ​ಳಿಗೆ ಸಾಕಷ್ಟು ಖುಷಿ ಕೊಟ್ಟಿದೆ. ಆದರೆ ಇವರಷ್ಟೇ ಕೆಲಸ ಮಾಡುವ ಗುತ್ತಿಗೆ ಆಧಾ​ರಿತ ಈ ಸ್ಟಾಫ್‌ನರ್ಸ್‌​ಗ​ಳ ಸೇವೆಯನ್ನು ಕಾಯಂಗೊಳಿ​ಸುವ ಬಗ್ಗೆ​ಯಾ​ಗಲಿ ಅಥವಾ ಕನಿಷ್ಠ ಪಕ್ಷ ಸಂಬಳ ಹೆಚ್ಚಿಸುವ ಕುರಿ​ತಾ​ಗಲಿ ಮುಖ್ಯ​ಮಂತ್ರಿ​ ಸೇರಿ​ದಂತೆ ಯಾವ ಜನ​ಪ್ರ​ತಿ​ನಿ​ಧಿಯೂ ಚಕಾರ ಎತ್ತ​ಲಿಲ್ಲ. ಇದು ಇವ​ರಲ್ಲಿ ತೀವ್ರ ಅಸ​ಮಾ​ಧಾನ ಹುಟ್ಟಾ​ಕಿ​ದ್ದ​ಲ್ಲದೆ, ತಮ್ಮ ಸೇವೆ ಕುರಿತು ತಾವೇ ಜಿಗುಪ್ಸೆ ಪಡುವಂತಾ​ಗಿದೆ.

ಕೋವಿಡ್ ಲಸಿಕೆ ಪಡೆಯಲು ಸ್ಟಾಫ್ ನರ್ಸ್‌ ಹಿಂದೇಟು

ಕೊರೋನಾ ವೈರಸ್‌ ಅಷ್ಟೇ ಅಲ್ಲ ಎಂತಹ ರೋಗ ಬಂದರೂ ಅದರ ವಿರುದ್ಧ ಹೋರಾಟ ನಡೆ​ಸು​ವಲ್ಲಿ ವೈದ್ಯರ ನಂತರ ಪ್ರಮುಖ ಪಾತ್ರ ವಹಿ​ಸು​ವ​ವರು ಇದೇ ಸ್ಟಾಫ್‌ ನರ್ಸ್‌​ಗಳು. ಮುಟ್ಟಿ​ದರೆ ಅಂಟಿಕೊಳ್ಳುವ ಕೊರೋನಾ ವಿರುದ್ಧ ಸಹಿತ ನೇರಾನೇರ ಯುದ್ಧ​ಕ್ಕಿ​ಳಿ​ದವರು ಇದೇ ಸ್ಟಾಫ್‌ ನರ್ಸ್‌ಗಳು. ಕ್ವಾರಂಟೈನ್‌ಗಳಲ್ಲಿ, ಕೊರೋನಾ ಸೋಂಕಿತ ಪ್ರದೇಶದಲ್ಲಿ, ಚೆಕ್‌​ಪೋ​ಸ್ಟ್‌​ಗ​ಳಲ್ಲಿ, ಕೊರೋನಾ ಪಾಸಿಟಿವ್‌ ಇರುವ ಪ್ರದೇ​ಶ​ದಲ್ಲಿ ಹೆಚ್ಚಾಗಿ ಈ ಗುತ್ತಿಗೆ ಆಧಾ​ರಿತ ಸ್ಟಾಫ್‌ ನರ್ಸ್‌​ಗಳೇ ಕಾರ್ಯ​ನಿ​ರ್ವ​ಹಿ​ಸು​ತ್ತಿ​ದ್ದಾರೆ.

2005ರಲ್ಲಿ ಆರಂಭ​ವಾದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿ​ಯಾ​ನ​ದಿಂದ ಇವರ ಸಂಕಷ್ಟ ಶುರು​ವಾ​ಗಿದೆ. ಅಂದಿ​ನಿಂದ ವಿವಿಧ ಯೋಜ​ನೆ​ಯಡಿ ಗುತ್ತಿಗೆ ಆಧಾ​ರ​ದಲ್ಲಿ ನೇಮ​ಕವಾಗಿ ಪ್ರಾಥ​ಮಿಕ ಆರೋಗ್ಯ ಕೇಂದ್ರ ಹಿಡಿದು ಜಿಲ್ಲಾ​ಸ್ಪತ್ರೆ ಸೇರಿ​ದಂತೆ ವಿವಿ​ಧೆಡೆ ಈ ಸ್ಟಾಫ್‌ ನರ್ಸ್‌​ಗಳು ಸೇವೆ ಸಲ್ಲಿ​ಸು​ತ್ತಿ​ದ್ದಾ​ರೆ. 15ಕ್ಕೂ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿ​ಸು​ತ್ತಿ​ದ್ದಾರೆ. ಆದರೆ ಪಡೆ​ಯುವ ಸಂಬಳ ಮಾತ್ರ ಕೇವಲ 10ರಿಂದ 15 ಸಾವಿರ ಮಾತ್ರ. ಅದೇ ಸರ್ಕಾರಿ ಸ್ಟಾಫ್‌ನರ್ಸ್‌ಗ​ಳು ಪಡೆ​ಯುವ ಸಂಬಳ 30 ಸಾವಿ​ರಕ್ಕೂ ಹೆಚ್ಚು. ನಾವೂ ಇವ​ರಷ್ಟೇ ಸೇವೆ ಸಲ್ಲಿ​ಸಿ​ದರೂ ಪಡೆ​ಯುವ ಸಂಬಳ ಮಾತ್ರ ತೀರಾ ಕಡಿಮೆ. ಇದು ಇಂದಿನ ತುಟ್ಟಿಕಾಲ​ದಲ್ಲಿ ಯಾತಕ್ಕೂ ಸಾಲುವುದಿಲ್ಲ. ಕಡಿಮೆ ಸಂಬಳದಿಂದಾಗಿ ಆರ್ಥಿಕ ಸ್ಥಿತಿ ಚಿಂತಾ​ಜ​ನ​ಕ​ವಾ​ಗಿದೆ. ಕುಟುಂಬದ ಸ್ಥಿತಿ ಕೇಳಮ​ಟ್ಟ​ಕ್ಕಿ​ಳಿ​ಯು​ತ್ತಿದೆ. ಜೀವ​ನ​ಮಟ್ಟಕುಸಿ​ಯು​ತ್ತಿದೆ. ಇನ್ನಾ​ದರೂ ಸರ್ಕಾರ ನಮ್ಮನ್ನು ಗುರು​ತಿಸಿ ನಮ್ಮ ಸೇವೆಯನ್ನು ಕಾಯಂಗೊಳಿ​ಸ​ಬೇಕು. ನಮ್ಮ ಈ ಗುತ್ತಿಗೆ ಪದ್ಧತಿಗೆ ಅಂತ್ಯ ಹಾಡ​ಬೇಕು ಎಂದು ಮನವಿ ಮಾಡಿ​ದ್ದಾರೆ.
 

Follow Us:
Download App:
  • android
  • ios