ಏರ್‌ಪೋರ್ಟ್‌ ನಿರಾಶ್ರಿತರನ್ನು ರಾಷ್ಟ್ರ ಸಂತ್ರಸ್ತರೆಂದು ಪರಿಗಣಿಸಿ: ರೂಪಾಲಿ ನಾಯ್ಕ

*  ಕೇಂದ್ರದ ರಕ್ಷಣಾ ಸಚಿವ ರಾಜನಾಥ ಸಿಂಗ್‌ಗೆ ಮನವಿ ಸಲ್ಲಿಸಿದ ಶಾಸಕಿ ರೂಪಾಲಿ ನಾಯ್ಕ
*  ವಿಮಾನ ನಿಲ್ದಾಣಕ್ಕೆ 93 ಎಕರೆ ಭೂಸ್ವಾಧೀನ
*  4604 ಸಂತ್ರಸ್ತರ ಪೈಕಿ 968 ಕುಟುಂಬಕ್ಕೆ ಮಾತ್ರ ಉದ್ಯೋಗ
 

Consider Airport Refugees as National Victims Says MLA Roopali Naik grg

ಕಾರವಾರ(ಮೇ.28):  ಅಂಕೋಲಾ ಬಳಿ ಉದ್ದೇಶಿತ ವಿಮಾನ ನಿಲ್ದಾಣ ನಿರಾಶ್ರಿತರಿಗೆ ಅತಿ ಹೆಚ್ಚಿನ ಪರಿಹಾರ, ಪುನರ್ವಸತಿ, ನಿರಾಶ್ರಿತರನ್ನು ರಾಷ್ಟ್ರೀಯ ಸಂತ್ರಸ್ತರೆಂದು ಪರಿಗಣಿಸುವುದು ಹಾಗೂ ನೌಕಾನೆಲೆ ನಿರಾಶ್ರಿತರಿಗೆ ಉದ್ಯೋಗ ನೀಡಿಕೆ ಹಾಗೂ ಇತರ ಸೌಲಭ್ಯ ಕಲ್ಪಿಸುವಂತೆ ಶಾಸಕಿ ರೂಪಾಲಿ ನಾಯ್ಕ ರಕ್ಷಣಾ ಸಚಿವ ರಾಜನಾಥ ಸಿಂಗ್‌ಗೆ ಒತ್ತಾಯಿಸಿದರು.

ಕಾರವಾರದ ಅರಗಾದಲ್ಲಿರುವ ಐಎನ್‌ಎಸ್‌ ಕದಂಬ ನೌಕಾನೆಲೆಗೆ ಆಗಮಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರನ್ನು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಜನತೆಯ ಪರವಾಗಿ ಸತ್ಕರಿಸಿದ ರೂಪಾಲಿ ನಾಯ್ಕ ಕ್ಷೇತ್ರದ ಹಲವು ಬೇಡಿಕೆಗಳ ಕುರಿತು ಸಚಿವರ ಗಮನ ಸೆಳೆದರು. ಶಾಸಕರು ಕ್ಷೇತ್ರದ ಸಮಸ್ಯೆಗಳನ್ನು ವಿವರಿಸುತ್ತಿದ್ದಂತೆ ಮನವಿ ಮಾಡಿದರು.

ಕಾರವಾರ: ಕದಂಬ ನೌಕಾನೆಲೆ ಸಬ್ ಮರೀನ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಪ್ರಯಾಣ

ಅಂಕೋಲಾ ಬಳಿ ನೌಕಾನೆಲೆಯಿಂದ ನಾಗರಿಕ ಬಳಕೆಗೂ ಮುಕ್ತವಾಗಲಿರುವ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಈ ವಿಮಾನ ನಿಲ್ದಾಣಕ್ಕೆ 93 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಹಲವು ಕುಟುಂಬಗಳು ನಿರಾಶ್ರಿತವಾಗಲಿವೆ. ಈ ಹಿಂದೆ ನೌಕಾನೆಲೆಯಿಂದ ನಿರಾಶ್ರಿತವಾಗಿರುವ ಕುಟುಂಬ ಮತ್ತೊಮ್ಮೆ ನಿರಾಶ್ರಿತವಾಗಲಿದೆ. ಮಾನವೀಯತೆ ಹಿನ್ನೆಲೆಯಲ್ಲಿ ಈ ಕುಟುಂಬಗಳಿಗೆ ಅತಿ ಹೆಚ್ಚಿನ ಪರಿಹಾರ, ಪುನರ್ವಸತಿ, ಉದ್ಯೋಗ ಹಾಗೂ ಇತರ ಸೌಲಭ್ಯಗಳನ್ನು ನೀಡುವಂತೆ ಅವರು ಮನವಿ ಮಾಡಿದರು.

ಸೀಬರ್ಡ್‌ ನೌಕಾನೆಲೆ ನಿರಾಶ್ರಿತರನ್ನು ರಾಷ್ಟ್ರೀಯ ಸಂತ್ರಸ್ತರು ಎಂದು ಘೋಷಣೆ ಮಾಡಬೇಕು. ನಿರಾಶ್ರಿತ ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ನೀಡಬೇಕು. ಕಾರವಾರ ಹಾಗೂ ಅಂಕೋಲಾ ಈ ಎರಡೂ ತಾಲೂಕಿನ 4604 ಕುಟುಂಬಗಳು ನೌಕಾನೆಲೆಯಲ್ಲಿ ನಿರಾಶ್ರಿತವಾಗಿವೆ. ಈ ಕುಟುಂಬಗಳು ನಿರಾಶ್ರಿತವಾಗಿ 3 ದಶಕಗಳಾದರೂ ಸಮಾಜದಲ್ಲಿ ಗೌರವಯುತ ಬದುಕು ಕಂಡುಕೊಳ್ಳುವಲ್ಲಿ ಇದುವರೆಗೂ ಸಾಧ್ಯವಾಗಿಲ್ಲ. ಸದ್ಯ ಕೇವಲ 968 ಕುಟುಂಬಗಳಿಗೆ ಮಾತ್ರ ಉದ್ಯೋಗ ನೀಡಲಾಗಿದೆ.

Congress Politics: ಚುನಾವಣೆಯಲ್ಲಿ ಯುವಕರಿಗೆ ಶೇ.50 ಟಿಕೆಟ್‌: ಸಿದ್ದರಾಮಯ್ಯ

ನೌಕಾನೆಲೆ ನಿರಾಶ್ರಿತರು ದೇಶಕ್ಕಾಗಿ, ದೇಶದ ರಕ್ಷಣೆಗಾಗಿ ತಮ್ಮ ಮನೆ, ಭೂಮಿ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ. ಈ ಕಾರಣದಿಂದ ನಿರಾಶ್ರಿತರು ಉದ್ಯೋಗ, ಗೌರವಯುತ ಬದುಕಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನೂ ಹೊಂದಿ ಸಮಾಜದ ಮುಖ್ಯವಾಹಿನಿಯಲ್ಲಿ ಸೇರ್ಪಡೆಯಾಗುವಂತಾಗಬೇಕು. ಇದಕ್ಕಾಗಿ ನೌಕಾನೆಲೆ ನಿರಾಶ್ರಿತರನ್ನು ರಾಷ್ಟ್ರೀಯ ಸಂತ್ರಸ್ತರು ಎಂದು ಘೋಷಣೆ ಮಾಡಬೇಕು. ಎಲ್ಲ 4 ಸಾವಿರಕ್ಕೂ ಹೆಚ್ಚು ನಿರಾಶ್ರಿತ ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ಕೊಡಬೇಕು. ಅವರಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನೂ ದೊರಕಿಸಿಕೊಡುವ ಮೂಲಕ ದೇಶಕ್ಕಾಗಿ ತ್ಯಾಗ ಮಾಡಿದವರ ಬದುಕು ಹಸನಾಗುವಂತೆ ವ್ಯವಸ್ಥೆ ಕಲ್ಪಿಸಬೇಕೆಂದು ಶಾಸಕರು ಮನವಿ ಮಾಡಿದರು.

ನೌಕಾನೆಲೆಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸಬೇಕು ಎನ್ನುವ ಬೇಡಿಕೆಯನ್ನೂ ಶಾಸಕಿ ರಾಜನಾಥ ಸಿಂಗ್‌ ಅವರ ಮುಂದಿಟ್ಟರು. ಈ ಬಗ್ಗೆ ಶಾಸಕಿಯ ಮನವಿಗೆ ಕೇಂದ್ರ ಸಚಿವರು ಸ್ಪಂದಿಸಿದರು.

ಶಿಪ್‌ಯಾರ್ಡ್‌ ನಿರ್ಮಿಸಿ

ಸೀಬರ್ಡ್‌ ನೌಕಾನೆಲೆಯ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ನೌಕಾನೆಲೆಗೆ ಅಗತ್ಯ ಸಾಮಗ್ರಿಗಳ ತಯಾರಿಕೆಗೆ ಇಲ್ಲಿ ಯಾವುದೇ ಕೈಗಾರಿಕೆಗಳಿಲ್ಲ. ಸ್ಥಳೀಯ ಜನತೆಗೆ ಉದ್ಯೋಗ ಕೊಡುವ ಕೈಗಾರಿಕೆಗಳೂ ಇಲ್ಲಿಲ್ಲ. ಈ ಕಾರಣಕ್ಕಾಗಿ ಸರ್ಕಾರಿ ಸ್ವಾಮ್ಯದಲ್ಲಿ ರಕ್ಷಣಾ ಇಲಾಖೆ ನೌಕಾನೆಲೆಯಲ್ಲಿ ಶಿಪ್‌ಯಾರ್ಡ್‌ ಹಾಗೂ ಪೂರಕ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಸಕರು ರಕ್ಷಣಾ ಸಚಿವರನ್ನು ವಿನಂತಿಸಿದ್ದಾರೆ.
 

Latest Videos
Follow Us:
Download App:
  • android
  • ios