'ಮಂತ್ರಿಗಿರಿ ಸಿಕ್ಕಿಲ್ಲಂತ ಸಿಟ್ಟಾಗಿ 'ಕೈ' ಕೊಟ್ಟವರು ಈಗೇನಂತಾರೆ'?
ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಹೈದ್ರಾಬಾದ್ ಕರ್ನಾಟಕವನ್ನು ಕಡೆಗಣಿಸಲಾಗಿದೆ ಎಂದು ಮಾಜಿ ಸಚಿವರೊಬ್ಬರು ಆರೋಪ ಮಾಡಿದ್ದು, ಪರೋಕ್ಷವಾಗಿ ಹೈಕ ಭಾಗದ ಬಿಜೆಪಿ ಸಂಸದರಿಗೆ ಟಾಂಗ್ ಕೊಟ್ಟಿದ್ದಾರೆ.
ಕಲಬುರಗಿ, [ಆ.20]: ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಕಲಬುರಗಿ ಸಂಸದರಾಗಿ ಆಯ್ಕೆಯಾಗಿರುವ ಡಾ. ಉಮೇಶ್ ಜಾಧವ್ ವಿರುದ್ಧ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.
ಕಲಬುರಗಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಮಂತ್ರಿಗಿರಿ ಸಿಕ್ಕಿಲ್ಲ, ತಮ್ಮ ಕ್ಷೇತ್ರ ಪ್ರಗತಿ ಆಗೋದಿಲ್ಲ ಎಂದೆಲ್ಲ ಹೇಳುತ್ತ ಕಳೆದಾರು ತಿಂಗಳ ಹಿಂದೆಯೇ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಸಂಸದರಾಗಿ, ತಮ್ಮವರಿಗೆ ಶಾಸಕರನ್ನಾಗಿಸಿರುವವರು ಈಗೇನಂತಾರೆ. ಅವರೇ ಪ್ರತಿನಿಧಿಸುತ್ತಿರುವ ಜಿಲ್ಲೆ, ಪ್ರದೇಶದಲ್ಲಿ ಯಾರೊಬ್ಬರಿಗೂ ಸಚಿವಗಿರಿ ಕೊಡಲಿಲ್ಲ. ಈಗ ಅವರು ಇಂತಹ ಬೆಳವಣಿಗೆ ವಿರುದ್ಧ ಧ್ವನಿ ಎತ್ತಬೇಕಾಗಿತ್ತು. ಸುಮ್ಮನಾಗಿದ್ಯಾಕೆ? ಎಂದು ಪರೋಕ್ಷವಾಗಿ ಸಂಸದ ಉಮೇಶ್ ಜಾಧವ್ ಅವರಿಗೆ ಪ್ರಶ್ನಿಸಿದರು.
'ದಿಲ್ಲಿ BJPಗೆ ಕರ್ನಾಟಕ ಬೇಕಿಲ್ಲ, ಬೆಂಗ್ಳೂರು ಬಿಜೆಪಿಗೆ ಹೈದ್ರಾಬಾದ್ ಕರ್ನಾಟಕ ಬ್ಯಾಡ'
ಹಿಂದೆಂದೂ ಬೆಂಬಲಿಸದಷ್ಟು ಈ ಭಾಗದ ಜನ ಈ ಬಾರಿ ಬಿಜೆಪಿಗೆ ಬೆಂಬಲಿಸಿದ್ದಾರೆ. ಹೈ- ಕ ಬಾಗದಲ್ಲಿ 5 ಸಂಸದರನ್ನ ಇಲ್ಲಿನ ಶಾಸಕರು ಆರಿಸಿ ಕಳುಹಿಸುವಲ್ಲಿ ಕಾರಣರಾಗಿದ್ದರೂ ಅವರಲ್ಲಿ ಯಾರಿಗೂ ಮಂತ್ರಿಗಿರಿ ನೀಡಲಾಗಿಲ್ಲ ಎಂದು ಹೆಸರು ಪ್ರಸ್ತಾಪಿಸಿದೆ ಸಂಸದ ಡಾ. ಉಮೇಶ ಜಾಧವ್ ಅವರನ್ನೇ ಗುರಿಯಾಗಿಸಿಕೊಂಡು ಪ್ರಿಯಾಂಕ್ ಮಾತಿನಲ್ಲೇ ತಿರುಗೇಟು ನೀಡಿದರು.
ಓರ್ವ ಎಂಎಲ್ಸಿ ಸೇರಿದಂತೆ 5 ಶಾಸಕರು, ಸಂಸದರು ಎಲ್ಲರು ಇದ್ದರೂ ಮಂತ್ರಿ ಮಂಡಲದಿಂದ ಕಲಬುರಗಿ ದೂರ ಇಡಲ್ಪಟ್ಟಿರುವುದೇ ಬಿಜೆಪಿಗೆ ಈ ಭಾಗದ ಬಗ್ಗೆ ಇರುವ ಕಾಳಜಿಗೆ ಕನ್ನಡಿ ಹಿಡಿದಂತೆ. ನಮ್ಮ ಗೋಳು, ನೋವು ಯಾತನೆ ಬಿಜೆಪಿಯಲ್ಲಿ ಕೇಳುವವರೇ ಇಲ್ಲದಂತಾಗಿದೆ ವಾಗ್ದಾಳಿ ನಡೆಸಿದರು.
ಬಿಎಸ್‌ವೈ ಸೇನೆ: ಯಾವ ಜಿಲ್ಲೆಗೆ ದಕ್ಕಿಲ್ಲ ಮಂತ್ರಿ ಭಾಗ್ಯ?
ಉಮೇಶ್ ಜಾಧವ್ ಅವರು ಕಾಂಗ್ರೆಸ್ ನಲ್ಲಿದ್ದಾಗ 2018ರ ಚಿಂಚೊಳ್ಳಿ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದರು. ಆದ್ರೆ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕ ಸ್ಥಾನಕ ರಾಜೀನಾಮೆ ನೀಡಿದಲ್ಲದೇ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.
ನಂತದ ಲೋಕಸಭಾ ಚುನಾವಣೆಯಲ್ಲಿ ಜಾಧವ್ ಅವರು ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ ಸಂಸದರಾಗಿ ಆಯ್ಕೆಯಾಗಿದರು. ಇನ್ನು ಚಿಂಚೊಳ್ಳಿ ವಿಧಾನಸಭಾ ಉಪಚುನಾವಣೆಯಲ್ಲಿ ಉಮೇಶ್ ಜಾಧವ್ ತಮ್ಮ ಪುತ್ರ ಅವಿನಾಶ್ ಜಾಧವ್ ಅವರನ್ನು ನಿಲ್ಲಿಸಿ ಗೆಲ್ಲಿಸಿರುವುದನ್ನು ಇಲ್ಲಿ ಸ್ಮರಿಸಬಹುದು.