ಕಲಬುರಗಿ, [ಆ.20]: ದಿಲ್ಲಿ ಬಿಜೆಪಿಗೆ ಕರ್ನಾಟಕ ಬೇಕಿಲ್ಲ, ಬೆಂಗಳೂರು ಬಿಜೆಪಿಯವರಿಗೆ ಹೈದ್ರಾಬಾದ್ ಕರ್ನಾಟಕ ಬೇಕಿಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಸಂಪುಟ ರಚನೆಯಲ್ಲಿ ಪ್ರಾದೇಶಿಕ ಅಸಮಾನತೆ ಎದ್ದು ಕಂಡಿರುವುದು, ಕಲಬುರಗಿ ಭಾಗಕ್ಕೆ ಸಚಿವ ಸ್ಥಾನ ದೊರಕದ್ದು ಹಾಗೂ ಪ್ರವಾಹ, ಮಳೆ ಹಾನಿಯನ್ನ ರಾಷ್ಟ್ರೀಯ ವಿಪತ್ತೆಂದು ಘೋಷಿಸಿ ಉದಾರ ನೆರವು ನೀಡುವಲ್ಲಿ ಕೇಂದ್ರ ತಳೆದಿರುವ ಭಿನ್ನ ನಿಲುಗಳನ್ನೆಲ್ಲ ಆಧಾರವಾಗಿಸಿಕೊಂಡು ಬಿಜೆಪಿಯ ದಿಲ್ಲಿ ಹಾಗೂ ಬೆಂಗಳೂರು ಮುಖಂಡರ ವಿರುದ್ಧ ಪ್ರಿಯಾಂಕ ಹರಿಹಾಯ್ದಿದ್ದಾರೆ.

ಬಿಎಸ್‌ವೈ ಸೇನೆ: ಯಾವ ಜಿಲ್ಲೆಗೆ ದಕ್ಕಿಲ್ಲ ಮಂತ್ರಿ ಭಾಗ್ಯ?

 ಪ್ರವಾಹ ಬಂದಾಗ, ಮಳೆಹಾನಿಯಾದಾಗ ನಾವೆಲ್ಲರೂ ಈ ಪ್ರಕೃತಿ ವಿಕೋಪವನ್ನು ರಾಷ್ಟ್ರೀಯ ವಿಪತ್ತೆಂದು ಘೋಷಿಸಲು ಕೋರಿದ್ದರೂ ಕೇಂದ್ರ ಅಸಡ್ಡೆ ಮಾಡಿದೆ. ಸಾವಿರ ಕೋಟಿ ರುಪಾಯಿ ಪರಿಹಾರ ನೀಡುವಲ್ಲಿಯೂ ತಾತ್ಸಾರ ತೋರಿದೆ. ಹೀಗಾಗಿ ಕೇಂದ್ರಕ್ಕೆ ಕರ್ನಾಟಕ ಅಂದ್ರೆ ಅಸಡ್ಡೆ, ಇನ್ನು ನಮ್ಮ ಬೆಂಗಳೂರು ಬಿಜೆಪಿಯವರಿಗೆ ಹೈದ್ರಾಬಾದ್ ಕರ್ನಾಟಕ ಅಂದ್ರೆ ಇನ್ನೂ ಅಸಡ್ಡೆ ಎಂದು ಕಿಡಿಕಾರಿದರು.

ರಾಜಭವನದಲ್ಲಿ ಪ್ರಮಾಣ ವಚನ: ಸಿಎಂ ಯಡಿಯೂರಪ್ಪ ಸಂಪುಟ ಸೇರಿದ ಸಚಿವರಿವರು!

ವಿಭಾಗೀಯ ಕೇಂದ್ರಸ್ಥಾನ ಕಲಬರಗಿಯನ್ನೇ ಸಂಪುಟ ರಚನೆಯಲ್ಲಿ ಕಡೆಗಣಿಸಿರೋದು ಈ ಭಾಗಕ್ಕಾಗಿರುವ ಬಹುದೊಡ್ಡ ಆಘಾತ ಎಂದು ಬಣ್ಣಿಸಿದರು. ಕಲಬುರಗಿ ಸದಾಕಾಲ ಒಬ್ಬಿಬ್ಬರು ಮಂತ್ರಿಗಳನ್ನು ಹೊಂದಿರುತ್ತಿದ್ದ ಜಿಲ್ಲೆಯಾಗಿತ್ತು. ವಿಭಾಗೀಯ ಕೇಂದ್ರ, ಅಭಿವೃದ್ಧಿ ಹೊಂದುತ್ತಿರುವ ಪ್ರದೇಶದ ಪ್ರಮುಖ ಸ್ಥಳಾಗಿರುವದರಿಂದ ಈ ಪ್ರಾಾತಿನಿಧ್ಯ ಎಲ್ಲಾಾ ಸರಕಾರಗಳು ಕೊಡುತ್ತಿದ್ದವು. ಆದರೀಗ ಯಡಿಯೂರಪ್ಪ ಸಂಪುಟದಲ್ಲಿ ಮಾತ್ರ ಈ ರೀತಿಯ ಅಸಡ್ಡೆ, ಅವಗಣನೆ ಕಂಡಿದೆ. ಇದರಿಂದ ಈ ಭಾಗದ ಪ್ರಗತಿಗೆ ಮರ್ಮಾಘಾತ ನೀಡಿದಂತಾಗಿದೆ ಎಂದು ದೂರಿದರು.