ರಾಜ್ಯದಲ್ಲಿ ಚುನಾವಣೆ ಸಂದರ್ಭದಲ್ಲೇ ಮುಖಂಡರೋರ್ವರು ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ

ಪುತ್ತೂರು (ಅ.13):  ನಾಥ ಪರಂಪರೆ ಮತ್ತು ಜೋಗಿಗಳಿಗೆ ಅವಮಾನ ಮಾಡಿರುವುದಾಗಿ ನನ್ನ ವಿರುದ್ಧ ಬಿಜೆಪಿಗರು ಅಪಪ್ರಚಾರ ನಡೆಸುತ್ತಿದ್ದಾರೆ. ಆದರೆ ನಾನು ಎಂದಿಗೂ ನಾಥ ಪರಂಪರೆ ಮತ್ತು ಜೋಗಿಗಳನ್ನು ಗೌರವಿಸುತ್ತೇನೆ. ನನ್ನ ಬಗ್ಗೆ ಇಂತಹ ಅಪಪ್ರಚಾರ ಮಾಡಿದವರು ಅದನ್ನು ಸಾಬೀತುಪಡಿಸಿದಲ್ಲಿ ಆ ಕ್ಷಣವೇ ನಾನು ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ ಹೇಳಿದ್ದಾರೆ.

ಉತ್ತರ ಪ್ರದೇಶದ ಹತ್ರಾಸ್‌ ಎಂಬಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ, ದೌರ್ಜನ್ಯವನ್ನು ಖಂಡಿಸಿ ಪುತ್ತೂರು ಮತ್ತು ವಿಟ್ಲ-ಉಪ್ಪಿನಂಗಡಿ ಬ್ಲಾಕ್‌ ಕಾಂಗ್ರೆಸ್‌ ಎಸ್‌ಸಿ ಘಟಕದ ವತಿಯಿಂದ ಪುತ್ತೂರಿನ ಅಮರ್‌ ಜವಾನ್‌ ಜ್ಯೋತಿ ಬಳಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿಗೀಗ ಬಂದಿದೆ ಬಂಗಾರದ ಸಮಯ

ಬಿಜೆಪಿ ನನ್ನ ವಿರುದ್ಧ ಅಪಪ್ರಚಾರ ನಡೆಸಿ ನಾನು ದಲಿತರ ಪರ ನಿಲ್ಲುವುದನ್ನು ತಡೆಯುವ ಪ್ರಯತ್ನ ನಡೆಸುತ್ತಿದೆ. ಆದರೆ ಸಂತ್ರಸ್ತೆಯ ಕುಟುಂಬಕ್ಕೆ ಆಗಿರುವ ಅನ್ಯಾಯದ ವಿರುದ್ಧ ಮಾತನಾಡುತ್ತಿರುವ ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆ ಕುಟುಂಬಕ್ಕೆ ನ್ಯಾಯ ಒದಗಿಸುವ ತನಕ ಸುಮ್ಮನಿರಲಾರೆ ಎಂದು ಹೇಳಿದರು.

ಹತ್ರಾಸ್‌ನಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಪ್ರಕರಣವು ದೇಶವೇ ತಲೆ ತಗ್ಗಿಸುವ ಪ್ರಕರಣವಾಗಿದ್ದು, ಈ ನರಹಂತಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಅವರನ್ನು ಗಲ್ಲಿಗೇರಿಸಬೇಕು. ಪ್ರಕರಣದ ಹೊಣೆ ಹೊತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕೆಪಿಸಿಸಿ ಸದಸ್ಯ ಎಂ.ಎಸ್‌. ಮಹಮ್ಮದ್‌ ಮಾತನಾಡಿದರು.

ಪ್ರತಿಭಟನಾ ಸಭೆಯಲ್ಲಿ ಅಂಬೇಡ್ಕರ್‌ ತತ್ವರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಗಿರಿಧರ ನಾಯ್‌್ಕ, ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು, ವಿಟ್ಲ-ಉಪ್ಪಿನಂಗಡಿ ಕಾಂಗ್ರೆಸ್‌ ಎಸ್‌ಸಿ ಘಟಕದ ಮುಖಂಡ ಸೇಸಪ್ಪ ನೆಕ್ಕಿಲು, ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಬಡಗನ್ನೂರು, ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಕೆಪಿಸಿಸಿ ಸದಸ್ಯ ಡಾ. ರಘು, ಜಿಪಂ ಸದಸ್ಯ ಶೇಖರ್‌ ಕುಕ್ಕೆಟ್ಟಿ, ದಲಿತ ಮುಖಂಡ ಐತ್ತಪ್ಪ ಪೇರಲ್ತಡ್ಕ, ಪುತ್ತೂರು ಬ್ಲಾಕ್‌ ಉಸ್ತುವಾರಿ ಗಣೇಶ್‌ ಪೂಜಾರಿ ಮತ್ತಿತರರು ಮಾತನಾಡಿದರು.