' ಬಿಜೆಪಿಗೀಗ ಬಂದಿದೆ ಬಂಗಾರದ ಸಮಯ'

ಎಲ್ಲಾ ಚುನಾವಣೆಗಳಲ್ಲು ಗೆಲ್ಲುತ್ತಿರುವ ಬಿಜೆಪಿಗೆ ಇದು ಬಂಗಾರದ ಸಮಯ ಎಂದು ಮುಖಂಡರೋರ್ವರು ಹೇಳಿದ್ದಾರೆ

This Is The Golden Time For BJP Says BY Raghavendra snr

ಶಿವಮೊಗ್ಗ (ಅ.09):  ಗ್ರಾಪಂನಿಂದ ಹಿಡಿದು ಪ್ರತಿ ಚುನಾವಣೆಗಳಲ್ಲೂ ಗೆಲುವು ಸಾಧಿಸುತ್ತಿರುವ ಬಿಜೆಪಿಗೀಗ ಬಂಗಾರದ ಸಮಯ ಬಂದಿದೆ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದರು.

ಗುರುವಾರ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಅಪ್ಪ ಹಾಕಿದ ಆಲದ ಮರಕ್ಕೆ ನೇಣುಹಾಕಿಕೊಳ್ಳುವ ತಪ್ಪನ್ನು ನಮ್ಮ ಪಕ್ಷದ ಮುಖಂಡರು ಮಾಡುತ್ತಿಲ್ಲ. ಈ ಕಾರಣಕ್ಕಾಗಿಯೇ ಬಿಜೆಪಿ ಸಂಘಟನೆ ಪ್ರಬಲವಾಗಿದೆ ಎಂದು ಅಭಿಪ್ರಾಯಿಸಿದರು.

2017 ರಲ್ಲಿ ದಕ್ಕದ ಯುವಮೋರ್ಚಾ ಗಾದಿ, 2020 ರಲ್ಲಿ ತೇಜಸ್ವಿಗೆ ಒಲಿಯಿತು ಅದೃಷ್ಟ ...

ಬಿಜೆಪಿ ಆಡಳಿತಾವಧಿಯಲ್ಲಿ ಇಡೀ ದೇಶದಲ್ಲಿ ಅಭಿವೃದ್ಧಿಯ ಅಲೆ ಎದ್ದಿದೆ. ಕೋವಿಡ್‌ನ ಇಂಥ ಸಂದರ್ಭದಲ್ಲಿಯೂ ಪಕ್ಷದ ಸಂಘಟನೆಗೆ ಮತ್ತಷ್ಟುಶಕ್ತಿ ಬಂದಿದೆ. ಅಲ್ಲದೆ ಪಕ್ಷ ಕೂಡ ಅನೇಕ ಸಾಮಾಜಿಕ ಬದ್ದತೆ ಪ್ರದರ್ಶಿಸಿದೆ. ಜನಸಾಮಾನ್ಯರ ಪಕ್ಷವಾಗಿ ತನ್ನ ಜವಾಬ್ದಾರಿ ಹೆಚ್ಚಿಸಿಕೊಂಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ಸಾಕಷ್ಟುಕಾಮಗಾರಿಗಳು ಜಿಲ್ಲೆಯಾದ್ಯಂತ ನಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೆರವಿನಿಂದ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪಣ ತೊಡಲಾಗಿದೆ ಎಂದು ತಿಳಿಸಿದರು.

ರೈಲ್ವೆ, ವಿಮಾನ, ಪ್ರವಾಸೋದ್ಯಮ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ಸಾಮಾಜಿಕ ಬದ್ದತೆ, ಪರಿಸರ ಮುಂತಾದ ಎಲ್ಲ ವಿಭಾಗಗಳಲ್ಲಿಯೂ ಜಿಲ್ಲೆ ಅಭಿವೃದ್ಧಿ ಪಥದತ್ತ ಮುನ್ನುಗ್ಗಿದೆ. ಸುಮಾರು 5 ಸಾವಿರ ಎಕರೆ ಜಾಗದಲ್ಲಿ ಕೈಗಾರಿಕಾ ಕಾರಿಡಾರ್‌ ನಿರ್ಮಿಸಲಾಗುತ್ತದೆ. ಜಿಲ್ಲೆಯ ಹಲವು ನೀರಾವರಿ ಯೋಜನೆಗಳು ಸಾಕಾರಗೊಳ್ಳಲಿವೆ. ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಕೂಡ ವೇಗ ನೀಡಲಾಗಿದೆ. ಶೀಘ್ರವೇ ಶಿವಮೊಗ್ಗದಿಂದ ವಿಮಾನ ಹಾರಾಟ ನಡೆಸಲಿದೆ ಎಂದು ನುಡಿದರು.

ಜೋಗದಲ್ಲಿ ಸರ್ವಋುತು ಪ್ರವಾಸೋದ್ಯಮವನ್ನಾಗಿಸುವ ಚಿಂತನೆ ಸರ್ಕಾರದ ಮುಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನಪರ, ರೈತ ಹಾಗೂ ಕಾರ್ಮಿಕ ಪರ ಕಾಯ್ದೆಗಳನ್ನು ಜಾರಿಗೆ ತಂದಿದ್ದರೂ ಸಹ ವಿರೋಧಪಕ್ಷಗಳು ಅಪಪ್ರಚಾರ ನಡೆಸುತ್ತಿವೆ. ಜನರನ್ನು ದಾರಿತಪ್ಪಿಸುವ ಹೇಳಿಕೆ ನೀಡುತ್ತಿವೆ. ಬಿಜೆಪಿ ಕಾರ್ಯಕರ್ತರು ಕಾಯ್ದೆ ಕುರಿತು ಜನರಿಗೆ ಸಮರ್ಪಕ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ನಿರ್ವಹಣಾ ಕೇಂದ್ರ ಉದ್ಘಾಟಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್‌ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕುಮಾರ್‌ ಬಂಗಾರಪ್ಪ, ಆರ್ಯವೈಶ್ಯ ಅಭಿವೃದ್ಧಿ ನಿಗಮದ ರಾಜ್ಯಧ್ಯಕ್ಷ ಡಿ.ಎಸ್‌. ಅರುಣ್‌, ಪ್ರಮುಖರಾದ ಎಸ್‌. ದತ್ತಾತ್ರಿ, ಎಸ್‌.ಎಸ್‌. ಜ್ಯೋತಿಪ್ರಕಾಶ್‌, ನಟರಾಜ್‌, ಗಿರೀಶ್‌ ಪಟೇಲ್‌, ಮಧುಸೂದನ್‌ ಮೊದಲಾದವರು ಇದ್ದರು. ಪದ್ಮಿನಿ ಸ್ವಾಗತಿಸಿದರು.

Latest Videos
Follow Us:
Download App:
  • android
  • ios