ಶಿರಸಿ(ಫೆ.24): ಕಾಂಗ್ರೆಸ್‌ ಸರಕಾರ ಬಡವರಿಗಾಗಿ ಜಾರಿಗೆ ತಂದಿದ್ದ ಯೋಜನೆಗಳನ್ನು ಕೈಬಿಟ್ಟರೆ ಉಗ್ರವಾಗಿ ಹೋರಾಟ ಮಾಡುವದಾಗಿ ಡಿಸಿಸಿ ಅಧ್ಯಕ್ಷ ಭೀಮಣ್ಣ ಟಿ. ನಾಯ್ಕ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಕಾಂಗ್ರೆಸ್‌ ಸರಕಾರದ ಅನ್ನ ಭಾಗ್ಯ ಯೋಜನೆಯನ್ನು ಇಂದಿನ ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಿದೆ. ನೀಡುವ ಅಕ್ಕಿಯ ಪ್ರಮಾಣವನ್ನು ಕಡಿಮೆಗೊಳಿಸಿದೆ. ಮುಂದೆ ಅದನ್ನು ಸಂಪೂರ್ಣವಾಗಿ ತೆಗೆಯುವ ಸಾಧ್ಯತೆಯಿದೆ. ಹೀಗಾದರೆ ನಾವು ಪ್ರತಿ ಬೂತ್‌ ಮಟ್ಟದಿಂದಲೇ ಪ್ರತಿಭಟಿಸಬೇಕಾಗುತ್ತದೆ ಎಂದರು.

ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯತ ಚುನಾವಣೆ ಎದುರಿಸಲು ಕಾಂಗ್ರೆಸ್‌ ಈಗಿನಿಂದಲೇ ಸಿದ್ಧತೆ ನಡೆಸಿದೆ. ಎಲ್ಲೆಡೆ ಕಾಂಗ್ರೆಸ್‌ ಪರ ಅಲೆ ಇದೆ. ರೈತರು ಕಳೆದ ಮೂರು ತಿಂಗಳಿನಿಂದ ಚಳಿ ಮಳೆಯನ್ನು ಲೆಕ್ಕಿಸದೇ ಕೇಂದ್ರ ಸರಕಾರದ ವಿರುದ್ಧ ಹೋರಾಟ ಮಾಡುತ್ತಿದ್ದರೂ ಪ್ರಧಾನಿಗಳು ಸೌಜನ್ಯಕ್ಕಾದರೂ ರೈತರ ಬಳಿ ಹೋಗಿ ಸಾಂತ್ವನ ಹೇಳಿಲ್ಲ, ಕಾಯಿದೆ ಹಿಂದಕ್ಕೆ ಪಡೆದಿಲ್ಲ. ಇದರ ಪರಿಣಾಮವನ್ನು ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಲಿದೆ ಎಂದರು.

ಪೊಗರು ವಿರುದ್ಧ ಸಚಿವ ಶಿವರಾಮ ಹೆಬ್ಬಾರ್‌ ಕಿಡಿ

ಜಿಲ್ಲೆಯಲ್ಲಿ ಕಾಂಗ್ರೆಸ್‌ ಬಲಿಷ್ಠವಾಗಿದ್ದು ಪಕ್ಷದ ಮುಂದಿನ ನಡೆಯ ಬಗ್ಗೆ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ಚರ್ಚಿಸಲಾಗಿದೆ. ಸ್ಥಗಿತಗೊಂಡಿರುವ ಕುಮಟಾ ಶಿರಸಿ ರಸ್ತೆಯ ಕಾಮಗಾರಿ ಕೂಡಲೇ ಆರಂಭವಾಗಬೇಕು. ಘಟ್ಟದ ಮೇಲಿನ ತಾಲೂಕುಗಳ ಅಭಿವೃದ್ಧಿ ದೃಷ್ಠಿಯಿಂದ ರಸ್ತೆ ಅಭಿವೃದ್ಧಿಯಾಗಲೇ ಬೇಕು. ಇದಕ್ಕೆ ನಮ್ಮ ಬೆಂಬಲವಿದೆ ಎಂದರು.

ಶಿರಸಿ ಪ್ರತ್ಯೇಕ ಜಿಲ್ಲೆ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿಯ ಶಾಸಕರ, ಸಂಸದರ,ಚಿಂತಕರ ಸಭೆ ನಡೆಸಿ ಒಮ್ಮತದ ತಿರ್ಮಾನಕ್ಕೆ ಬರಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಎಸ್‌ ಕೆ ಭಾಗ್ವತ್‌ ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅದ್ಯಕ್ಷ ಜಗದೀಶ್‌ ಗೌಡ,ಕಾರ್ಯದರ್ಶಿ ಜ್ಯೋತಿ ಗೌಡಾ,ಜಿಲ್ಲಾ ವಕ್ತಾರರಾದ ಶಂಭು ಶೆಟ್ಟಿ, ಆರ್‍ ಪಿ ನಾಯ್ಕ, ಎಚ್‌ ಎಂ ನಾಯ್ಕ ಇತರರಿದ್ದರು.