ಅನ್ಯ ಧರ್ಮಿಯರನ್ನು ಗೌರವಿಸಿದಾಗ ಸಂಘರ್ಷ ದೂರ: ಸಿಎಂ ಬೊಮ್ಮಾಯಿ
* ದೇಶಕ್ಕೆ ಬೇಕಿರುವುದು ಚರಿತ್ರೆಗಿಂತ ಚಾರಿತ್ರ್ಯ: ಬೊಮ್ಮಾಯಿ
* ನಿವೃತ್ತ ಮುಖ್ಯ ಎಂಜಿನಿಯರ್ ಡಾ. ಶಿವಲಿಂಗಯ್ಯಗೆ ನುಡಿ-ನಮನ
* ಇಂದು ಸಾಮಾಜದಲ್ಲಿ ಸಾಮಾಜಿಕ, ವೈಯಕ್ತಿಕ, ರಾಜಕೀಯ, ಆರ್ಥಿಕ ಮತ್ತು ಧಾರ್ಮಿಕ ಸಂಘರ್ಷ ಇದೆ
ಬೆಂಗಳೂರು(ಜು.11): ಪ್ರತಿಯೊಬ್ಬರು ಅನ್ಯ ಧರ್ಮಿಯರನ್ನು ಗೌರವಿಸಿದಾಗ ಮಾತ್ರ ಸಮಾಜದಲ್ಲಿ ಸಂಘರ್ಷ ದೂರವಾಗಿ ಸಮನ್ವಯತೆ ಮತ್ತು ಸಮಾನತೆ ಭಾವ ನೆಲೆಸಲು ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಭಾನುವಾರ ನಗರದ ಡಾ. ಬಿ.ಆರ್.ಅಂಬೇಡ್ಕರ್ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಆಯೋಜಿಸಿದ್ದ ನಿವೃತ್ತ ಮುಖ್ಯ ಎಂಜಿನಿಯರ್ ಹಾಗೂ ಸರ್ಕಾರದ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಡಾ. ಎಲ್.ಶಿವಲಿಂಗಯ್ಯ ಅವರ ‘ನುಡಿ-ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಮರನಾಥದಲ್ಲಿ ಸಿಲುಕಿರುವ ನೂರು ಕನ್ನಡಿಗರೂ ಸೇಫ್: ಸಿಎಂ ಬೊಮ್ಮಾಯಿ
ನಮ್ಮ ದೇಶಕ್ಕೆ ಸಾವಿರಾರು ವರ್ಷಗಳ ಚರಿತ್ರೆಯಿದೆ ಎನ್ನಲಾಗುತ್ತದೆ. ಆದರೆ, ದೇಶಕ್ಕೆ ಬೇಕಿರುವುದು ಚರಿತ್ರೆಗಿಂತ ಚಾರಿತ್ರ್ಯ. ಪ್ರತಿಯೊಬ್ಬರು ತಮ್ಮ ಚಾರಿತ್ರ್ಯ ಉತ್ತಮಪಡಿಸಿಕೊಂಡರೆ ದೇಶ ನಿಜವಾದ ಪ್ರಗತಿ ಕಾಣುತ್ತದೆ. ಇಂದು ಸಾಮಾಜದಲ್ಲಿ ಸಾಮಾಜಿಕ, ವೈಯಕ್ತಿಕ, ರಾಜಕೀಯ, ಆರ್ಥಿಕ ಮತ್ತು ಧಾರ್ಮಿಕ ಸಂಘರ್ಷ ಇದೆ. ಎಲ್ಲಾ ಧರ್ಮೀಯರು ಇತರೆ ಧರ್ಮದವರನ್ನು ಗೌರವಿಸಿದಾಗ ಮಾತ್ರ ಸಮನ್ವಯತೆ ಮತ್ತು ಸಮಾನತೆ ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ಸಮಾಜದಲ್ಲಿ ನೈಸರ್ಗಿಕ ಮತ್ತು ಮಾನವ ರೂಪಿತ ಎಂಬ ಎರಡು ಬಗೆಯ ಕಾನೂನುಗಳಿವೆ. ನೈಸರ್ಗಿಕ ಕಾನೂನು ಬಸವ ಹಾಗೂ ಬುದ್ಧ ಪ್ರತಿಪಾದಿಸುವ ಸತ್ಯ, ಪ್ರೀತಿ ಮತ್ತು ಧರ್ಮದ ತಳಹದಿ ಮೇಲಿ ನಿಂತಿದೆ. ಮಾನವ ನಿರ್ಮಿತ ಕಾನೂನು ಅಧರ್ಮ ಎಸಗಿದರೆ ಶಿಕ್ಷೆ ನೀಡುವುದಾಗಿ ತಿಳಿಸುತ್ತದೆ. ಈ ಎರಡೂ ಕಾನೂನುಗಳ ಅಂತರ ಕಡಿಮೆಯಾದರೆ ವಿಶ್ವ ಮತ್ತಷ್ಟುಉತ್ತಮವಾಗಿ ರೂಪಿತವಾಗುತ್ತದೆ. ದೇಶದಲ್ಲಿ ವಿಭಿನ್ನ ಧರ್ಮ, ವರ್ಗ ಮತ್ತು ಸಂಸ್ಕೃತಿಯ ಜನರಿದ್ದಾರೆ. ಎಲ್ಲಾ ವರ್ಗದವರು ಉತ್ತಮ ವೈಯಕ್ತಿಕ ಚಾರಿತ್ರ್ಯವನ್ನು ರೂಪಿಸಿಕೊಂಡರೆ ದೇಶ ಆರ್ಥಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಒಂದಾಗಿ ಬೆಳೆಯುತ್ತದೆ ಎಂದು ಕರೆ ನೀಡಿದರು.
ಕನ್ನಡ ಬಳಸಿದಷ್ಟು ಬೆಳೆಯುತ್ತೆ, ಎಲ್ಲಾ ಕ್ಷೇತ್ರದಲ್ಲೂ ಕನ್ನಡ ಭಾಷೆ ಬಳಸಬೇಕು: ಸಿಎಂ ಬೊಮ್ಮಾಯಿ
ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಎಲ್.ಶಿವಲಿಂಗಯ್ಯ ತಮ್ಮ ಸೇವಾವಧಿಯಲ್ಲಿ ರಾಜಕಾರಣಿಗಳು, ಐಐಎ-ಎಪಿಎಸ್ ಅಧಿಕಾರಿಗಳು, ರಾಜ್ಯಪಾಲರ ಮತ್ತು ಮುಖ್ಯಮಂತ್ರಿಗಳ ವಿಶ್ವಾಸ ಗಳಿಸಿದ್ದರು. ಮುಖ್ಯಮಂತ್ರಿಗಳ ಮನವೊಲಿಸಿ ರಾಜ್ಯದಲ್ಲಿ ಅನೇಕ ಸಂಸ್ಥೆ ಆರಂಭಿಸಿದರು. ಅವುಗಳ ಇಂದು ಬೃಹದಾಕಾರವಾಗಿ ಬೆಳೆದು ಲಕ್ಷಾಂತರ ಜನರಿಗೆ ನೆರವಾಗಿವೆæ. ಶಿವಲಿಂಗಯ್ಯ ನುಡಿ ನಮನ ಕಾರ್ಯಕ್ರಮ ರಾಜ್ಯಮಟ್ಟದಲ್ಲಿ ನಡೆಯಬೇಕು. ಅದರಿಂದ ಎಲ್ಲಾ ಜಿಲ್ಲೆಯವರಿಗೂ ಅವರ ಸಾಧನೆ, ಹೋರಾಟ ಮತ್ತು ಕೊಡುಗೆ ತಿಳಿಯಲಿದೆ. ಮುಂದಿನ ಪೀಳಿಗೆಯವರಿಗೆ ಸ್ಫೂರ್ತಿ ಹಾಗೂ ದಾರಿ ದೀಪವಾಗಲಿದೆ ಎಂದರು.
ಅಲ್ಲದೆ, ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಮೀಸಲು ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಡವರಿದ್ದಾರೆ. ಅವರಿಗೆ ವಸತಿ, ಕುಡಿಯುವ ನೀರು ಮತ್ತು ರಸ್ತೆ ಸೌಲಭ್ಯ ಕಲ್ಪಿಸಲು ಸರ್ಕಾರ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ರಾಮಚಂದ್ರೇಗೌಡ, ರಾಣಿ ಸತೀಶ್, ಎಲ್.ಶಿವಲಿಂಗಯ್ಯ ಅವರ ಪುತ್ರ ಡಾ. ರವಿ ಪ್ರಕಾಶ್, ದಲಿತ ಹೋರಾಟಗಾರ ಎಂ.ವೆಂಕಟಸ್ವಾಮಿ ಉಪಸ್ಥಿತರಿದ್ದರು.